ಬಿಜೆಪಿ ಯುವ ಮೋರ್ಚಾ ಮುಖಂಡನ ಭೀಕರ ಹತ್ಯೆ, ಪುತ್ತೂರಿನಲ್ಲಿ ಪರಿಸ್ಥಿತಿ ಉದ್ವಿಘ್ನ!

By Suvarna News  |  First Published Jul 26, 2022, 10:35 PM IST

ಬಿಜೆಪಿ ಯುವಮೋರ್ಚಾ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತನಾಗಿದ್ದ ಯುವಕನನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಕೊಚ್ಚಿ ಕೊಲೆ ಗೈದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ನಡೆದಿದೆ.


ಮಂಗಳೂರು: ಬಿಜೆಪಿ ಯುವ ಮುಖಂಡನೊಬ್ಬನನ್ನು ಮಾರಕಾಸ್ತ್ರದಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ಜಿಲ್ಲೆ ಉದ್ವಿಗ್ನಗೊಂಡಿದೆ. ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಚಿಕನ್‌ ಅಂಗಡಿ ನಡೆಸುತ್ತಿದ್ದ, ಬಿಜೆಪಿ ಯುವ ಮೋರ್ಚಾ ಮುಖಂಡನೂ ಆಗಿರುವ ಪ್ರವೀಣ್‌ ನೆಟ್ಟಾರು ಮೃತಪಟ್ಟವರು. ಕೆಲ ದಿನಗಳ ಹಿಂದಷ್ಟೇ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟಯುವಕನೊಬ್ಬನ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು ಆಮಾಯಕನ ಕೊಲೆಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

Tap to resize

Latest Videos

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವ ಮೊದಲು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು. ಪ್ರವೀಣ್‌ ನೆಟ್ಟಾರು ಮೃತದೇಹ ಇರಿಸಲಾಗಿದ್ದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದ.ಕ. ಎಸ್ಪಿ ಋುಷಿಕೇಶ್‌ ಸೋನಾವಣೆ ಮಂಗಳವಾರ ರಾತ್ರಿ ಭೇಟಿ ನೀಡಿದರು. ದುರ್ಘಟನೆ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ ಮತ್ತು ಕೇರಳ ಗಡಿ ಭಾಗಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ. ಈ ಪರಿಸರದಲ್ಲಿ ನಾಕಾಬಂದಿ ಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆ ವಿವರ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ಪ್ರವೀಣ್‌ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವರ ಅಂಗಡಿ ಬಳಿ ಬೈಕ್‌ನಲ್ಲಿ ಬಂದ ಮೂವರು ಹಿಂದಿನಿಂದ ದಾಳಿ ನಡೆಸಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇಲ್ಲಿಗೆ ಸಮೀಪದ ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿದ್ದ ಮಸೂದ್‌ ಎಂಬ ಯುವಕ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳು ಬಂಧಿಸಲ್ಪಟ್ಟಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ಬೆನ್ನಿಗೇ ಈ ಘಟನೆ ನಡೆದಿರುವುದರಿಂದ ಪ್ರತೀಕಾರ ಎಂಬ ಶಂಕೆ ಮೂಡಿದೆ.
ಅಣ್ಣ, ತಮ್ಮ ಮತ್ತು ಅವಳು, ಶ್ರೀರಾಮಸೇನೆ ಮುಖಂಡನ ಕೊಲೆಗೆ ಅಸಲಿ ಕಾರಣ!

ಪ್ರವೀಣ್‌ ನೆಟ್ಟಾರು ಪ್ರಾಣಿ ಪ್ರೀತಿ!

ಸುಳ್ಯ: ಮಂಗಳವಾರ ರಾತ್ರಿ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು ಅವರ ಪ್ರಾಣಿಪೀತಿ ಕುರಿತು ಕೆಲ ದಿನಗಳ ಹಿಂದೆ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಬರಹವೊಂದು ಇದೀಗ ಗಮನ ಸೆಳೆದಿದೆ. ಕಳೆದ ಜು.4ರಂದು ಅವರು ರಸ್ತೆ ಬದಿಯಲ್ಲಿ ಅಸಹಾಯಕವಾಗಿ ಮಳೆಯಲ್ಲಿ ಸಿಲುಕಿದ್ದ ನಾಯಿ ಮರಿಗಳನ್ನು ರಕ್ಷಿಸಿದ ಕುರಿತು ಬರಹವೊಂದನ್ನು ಹಂಚಿಕೊಂಡಿದ್ದರು. ಜು.3ರಂದು ರಾತ್ರಿ ಅವರು ಬೆಳ್ಳಾರೆಯಿಂದ ಕೋಟೆಮುಂಡುಗಾರು ಕಡೆಗೆ ಹೋಗುತ್ತಿದ್ದ ಜೋರು ಮಳೆ ನಡುವೆ ಕಳಂಜ ಕ್ರಾಸ್‌ ರಸ್ತೆ ಬದಿಯಲ್ಲಿ ಅಸಹಾಯಕವಾಗಿ ಸಿಲುಕಿದ್ದ ಪುಟ್ಟನಾಯಿ ಮರಿಗಳನ್ನು ಕಂಡಿದ್ದರು. ಅವನ್ನು ರಕ್ಷಿಸಿದ ಕುರಿತು ಫೇಸ್‌ಬುಕ್‌ನಲ್ಲಿ ಬರೆದಿದ್ದ ಅವರು, ಇದೀಗ ಆ ಪುಟ್ಟಮರಿಗಳು ತನ್ನ ಮಿತ್ರನ ಮನೆಯಲ್ಲಿ ಸುರಕ್ಷಿತವಾಗಿ ಬದುಕಿವೆ ಎಂದು ಹೇಳಿಕೊಂಡಿದ್ದು, ನಾಯಿ ಮರಿಗಳ ಫೋಟೋಗಳನ್ನೂ ಹಂಚಿಕೊಂಡಿದ್ದರು. ಕೇವಲ 2 ತಿಂಗಳ ಹಿಂದಷ್ಟೇ ಅವರ ವಿವಾಹವಾಗಿತ್ತು ಎನ್ನಲಾಗಿದೆ.

click me!