Bengaluru: ಅತ್ತೆ ಮಗಳಿಗಾಗಿ ಸ್ನೇಹಿತನನ್ನೇ ಬಡಿದು ಹತ್ಯೆ: ನಾಲ್ವರ ಬಂಧನ

By Kannadaprabha NewsFirst Published Feb 2, 2023, 10:40 AM IST
Highlights

ತಾನು ಮದುವೆ ಮಾಡಿಕೊಳ್ಳಬೇಕಿದ್ದ ಅತ್ತೆ ಮಗಳ ಜತೆ ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಸ್ನೇಹಿತನನ್ನು ಅಪಹರಿಸಿ ಹತ್ಯೆ ಮಾಡಿದ್ದ ಮೃತನ ಗೆಳತಿಯ ಸೋದರ ಸಂಬಂಧಿ ಸೇರಿದಂತೆ ನಾಲ್ವರನ್ನು ಯಶವಂತಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. 

ಬೆಂಗಳೂರು (ಫೆ.02): ತಾನು ಮದುವೆ ಮಾಡಿಕೊಳ್ಳಬೇಕಿದ್ದ ಅತ್ತೆ ಮಗಳ ಜತೆ ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಸ್ನೇಹಿತನನ್ನು ಅಪಹರಿಸಿ ಹತ್ಯೆ ಮಾಡಿದ್ದ ಮೃತನ ಗೆಳತಿಯ ಸೋದರ ಸಂಬಂಧಿ ಸೇರಿದಂತೆ ನಾಲ್ವರನ್ನು ಯಶವಂತಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಮತ್ತಿಕೆರೆ ಕಾಲೋನಿ ನಿವಾಸಿ ಗೋವಿಂದರಾಜು (19) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಮತ್ತಿಕೆರೆಯ ಅನಿಲ್‌ ಹಾಗೂ ಆತನ ಸಹಚರರಾದ ಆಂದ್ರಹಳ್ಳಿ ನಿವಾಸಿಗಳಾದ ಭರತ್‌, ಕಿಶೋರ್‌ ಮತ್ತು ಲೋಹಿತ್‌ ಬಂಧಿತರಾಗಿದ್ದಾರೆ. 

ಮಾತುಕತೆ ನೆಪದಲ್ಲಿ ಮನೆಯಿಂದ ಜ.30ರ ರಾತ್ರಿ ಗೋವಿಂದರಾಜುನನ್ನು ಕರೆತಂದು ಬಳಿಕ ಕೊಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನ ಕಾಡಿಗೆ ಮೃತದೇಹವನ್ನು ಎಸೆದು ನಗರಕ್ಕೆ ಮರಳಿದ್ದರು. ಈ ಬಗ್ಗೆ ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಸುರೇಶ್‌ ನೇತೃತ್ವದ ತಂಡವು, ಆರೋಪಿಗಳನ್ನು ತಾಂತ್ರಿಕ ಮಾಹಿತಿ ಆಧರಿಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಡಿಯೋ ಕಾಲ್‌ನಲ್ಲಿ ಸಹೋದ್ಯೋಗಿ ಆತನ ಹೆಂಡತಿ ತೋರಿಸಿಲ್ಲ ಎಂದು ಹೊಟ್ಟೆಗೆ ಇರಿತ: ಆರೋಪಿ ಬಂಧನ

‘ಆತ್ಮೀಯ’ತೆ ತಂದ ಆಪತ್ತು: ಮತ್ತಿಕೆರೆ ಕಾಲೋನಿಯಲ್ಲಿ ಮೃತ ಗೋವಿಂದರಾಜು ಹಾಗೂ ಆರೋಪಿ ಅನಿಲ್‌ ಒಂದೇ ಬೀದಿಯಲ್ಲಿ ನೆಲೆಸಿದ್ದು, ಮೊದಲಿನಿಂದಲೂ ಇಬ್ಬರಿಗೂ ಸ್ನೇಹವಿತ್ತು. ಇನ್ನು ಅನಿಲ್‌ ಕುಟುಂಬದ ಜತೆಯಲ್ಲೇ ಪಿಯುಸಿ ಓದುತ್ತಿದ್ದ ಆತನ ಸೋದರತ್ತೆ ಮಗಳು ಕೂಡಾ ನೆಲೆಸಿದ್ದಳು. ಒಂದೇ ಏರಿಯಾದಲ್ಲಿ ವಾಸವಾಗಿದ್ದರಿಂದ ಆಕೆಗೆ ಗೋವಿಂದರಾಜು ಪರಿಚಯವಾಗಿದ್ದು, ಕಾಲ ಕ್ರಮೇಣ ಇಬ್ಬರ ನಡುವೆ ಆತ್ಮೀಯ ಸಲುಗೆ ಬೆಳೆಯಿತು. ಆನಂತರ ಪರಸ್ಪರ ಮೊಬೈಲ್‌ ಸಂಖ್ಯೆಗಳು ವಿನಿಮಿಯವಾಗಿ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್‌ ಹಾಗೂ ಮಾತು ಶುರುವಾಗಿತ್ತು. 10ನೇ ತರಗತಿಗೆ ಶಾಲೆ ಬಿಟ್ಟಿದ್ದ ಗೋವಿಂದರಾಜು, ಪೆಂಟರ್‌ ವೃತ್ತಿ ಮಾಡಿಕೊಂಡು ತನ್ನ ಪೋಷಕರ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಕಾಲೇಜಿಗೆ ಹೋಗುವಾಗ ಮನೆಯಲ್ಲಿ ತನ್ನ ಮೊಬೈಲನ್ನು ಅನಿಲ್‌ ಮಾವನ ಮಗಳು ಬಿಟ್ಟು ಹೋಗಿದ್ದಳು. ಅದೇ ವೇಳೆಗೆ ಆಕೆಗೆ ಗೆಳೆಯ ಗೋವಿಂದರಾಜು ಕರೆ ಮಾಡಿದ್ದಾನೆ. ಕರೆ ಸ್ವೀಕರಿಸಿದ ಅನಿಲ್‌ ದನಿ ಕೇಳಿದ ಕೂಡಲೇ ಆತ ಕರೆ ಕಡಿತಗೊಳಿಸಿದ್ದ. ಇದರಿಂದ ಅನುಮಾನಗೊಂಡ ಅನಿಲ್‌, ಅತ್ತೆ ಮಗಳಿಗೆ ಕರೆ ಮಾಡಿದ್ದ ಬಗ್ಗೆ ವಿಚಾರಿಸಿದಾಗ ಗೋವಿಂದರಾಜು ಸ್ನೇಹ ಬಗ್ಗೆ ಗೊತ್ತಾಗಿದೆ. ತಾನು ಮದುವೆ ಮಾಡಿಕೊಳ್ಳಬೇಕಿದ್ದ ಅತ್ತೆ ಮಗಳ ಜತೆ ಗೆಳೆಯನ ಸ್ನೇಹ ವಿಷಯ ತಿಳಿದು ಮತ್ತಷ್ಟುಕೆರಳಿದ ಅನಿಲ್‌, ಅತ್ತೆ ಮಗಳಿಗೆ ಬೈದಿದ್ದಾನೆ. ಬಳಿಕ ಆಕೆಯ ವಾಟ್ಸ್‌ ಆ್ಯಪ್‌ ತೆರೆದು ನೋಡಿದಾಗ ಗೋವಿಂದರಾಜು ಜೊತೆ ‘ಖಾಸಗಿ ಚಾಟಿಂಗ್‌’ ನೋಡಿ ಅನಿಲ್‌ ರೊಚ್ಚಿಗೆದ್ದಿದ್ದಾನೆ. ಈ ಸಿಟ್ಟಿನಲ್ಲೇ ಗೋವಿಂದರಾಜು ಮೇಲೆ ಹಲ್ಲೆಗೆ ಆಂದ್ರಹಳ್ಳಿಯ ತನ್ನ ಗೆಳೆಯರನ್ನು ಆತ ಕರೆಸಿಕೊಂಡಿದ್ದಾನೆ.

ಮಾತುಕತೆ ನೆಪದಲ್ಲಿ ಕರೆದು ಕೊಲೆ: ಅಂತೆಯೇ ಸೋಮವಾರ ರಾತ್ರಿ 10 ಗಂಟೆಯಲ್ಲಿ ಗೋವಿಂದರಾಜು ಮನೆಗೆ ತೆರಳಿದ ಅನಿಲ್‌, ಏನೋ ಮಾತನಾಡಬೇಕಿದೆ ಬಾ ಎಂದು ಹೊರಗೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಹೆಗ್ಗನಹಳ್ಳಿ ಸಮೀಪದ ಆಂದ್ರಹಳ್ಳಿಯಲ್ಲಿ ಗೆಳೆಯ ಭರತ್‌ನಿಗೆ ಸೇರಿದ ಶೆಡ್‌ಗೆ ಗೋವಿಂದರಾಜುನನ್ನು ಅನಿಲ್‌ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಅತ್ತೆ ಮಗಳ ಜತೆ ಸ್ನೇಹದ ಬಗ್ಗೆ ಆತನನ್ನು ಪ್ರಶ್ನಿಸಿದ್ದಾನೆ. ಆಗ ನಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಈ ಮಾತಿಗೆ ಕೋಪಗೊಂಡ ಅನಿಲ್‌ ಹಾಗೂ ಆತನ ಗೆಳೆಯರು, ಗೋವಿಂದರಾಜು ಮೇಲೆ ಮನಬಂದಂತೆ ದೊಣ್ಣೆಯಿಂದ ಹೊಡೆದಿದ್ದಾರೆ. ಈ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಕಾರಿನ ಹಿಂಬದಿ ಸೀಟಲ್ಲಿ ಶವ ಇರಿಸಿ 290 ಕಿ.ಮೀ ಪಯಣ: ಗೋವಿಂದರಾಜುನನ್ನು ಹತ್ಯೆಗೈದ ಬಳಿಕ ಆರೋಪಿಗಳು, ಕಾರಿನ ಹಿಂಬದಿ ಸೀಟಿನ ಮಧ್ಯೆದಲ್ಲಿ ಮೃತದೇಹವನ್ನು ಕೂರಿಸಿಕೊಂಡು 292 ಕಿ.ಮೀ ಪ್ರಯಣಿಸಿದ್ದಾರೆ. ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ಗೆ ತೆರಳಿ ಅಲ್ಲಿ ಅರಣ್ಯ ಪ್ರದೇಶದಲ್ಲಿ ಮೃತದೇಹವನ್ನು ಎಸೆದಿದ್ದರು. ದಾರಿ ಮಧ್ಯೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಹಿಂಬದಿ ಸೀಟಿನಲ್ಲಿ ಇಬ್ಬರ ನಡುವೆ ಮಲಗಿರುವಂತೆ ಮೃತದೇಹವನ್ನು ಇಟ್ಟಿಕೊಂಡು ಬೆಂಗಳೂರಿನಿಂದ ಚಾರ್ಮಾಡಿಗೆ ಘಾಟ್‌ಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ: ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ರೈತರು

112ಗೆ ಕರೆ ಮಾಡಿದ ಮೃತನ ಪೋಷಕರು: ಇತ್ತ ಮನೆಯಿಂದ ಅನಿಲ್‌ ಜತೆ ಹೊರ ಹೋದ ಮಗ ಮನೆಗೆ ಮರಳದೆ ಹೋದಾಗ ಆತಂಕಗೊಂಡ ಮೃತನ ಪೋಷಕರು, ನೆರೆಹೊರೆಯಲ್ಲಿ ವಿಚಾರಿಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗದೆ ಹೋದಾಗ ಮೃತನ ಕುಟುಂಬದವರು, 112 (ಪೊಲೀಸ್‌ ನಿಯಂತ್ರಣ ಕೊಠಡಿ)ಗೆ ಕರೆ ಮಾಡಿ ಮಗನನ್ನು ಅನಿಲ್‌ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ನಿಯಂತ್ರಣ ಕೊಠಡಿ ಸಿಬ್ಬಂದಿ ಯಶವಂತಪುರ ಠಾಣೆಗೆ ರವಾನಿಸಿದ್ದರು. ಅಷ್ಟರಲ್ಲಿ ಮಗನ ನಾಪತ್ತೆ ಬಗ್ಗೆ ದೂರು ನೀಡಲು ಮೃತನ ಪೋಷಕರು ತೆರಳಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!