ವಿವಾಹವಾಗಲು ನಿರಾಕರಿಸಿದ ದೋಸೆ ತವಾದಲ್ಲಿ ಹೊಡೆದು ಪ್ರೇಯಸಿಯ ಹತ್ಯೆ ಮಾಡಿದ!| ಯುವಕನ ಕ್ಯಾಬ್‌ನಲ್ಲಿ ಪರಸ್ಪರ ಪರಿಚಯ, ಸ್ನೇಹ, ಪ್ರೀತಿ| ಕೊಂದು ಠಾಣೆಗೆ ಬಂದ| ಮುನೇಕೋಳಾಲದಲ್ಲಿ ಘಟನೆ
ಬೆಂಗಳೂರು(ಮೇ.22): ವಿವಾಹವಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪ್ರಿಯತಮ ತನ್ನ ಪ್ರೇಯಸಿಯನ್ನೇ ಹತ್ಯೆ ಮಾಡಿರುವ ಘಟನೆ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ತರಿಕೆರೆ ಮೂಲದ ನಯನಾ (25) ಕೊಲೆಯಾದ ಯುವತಿ. ಈ ಸಂಬಂಧ ಪ್ರಿಯತಮ ತಿಪ್ಪೇಸ್ವಾಮಿ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಿಪ್ಪೇಸ್ವಾಮಿ ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲೂಕಿನವನಾಗಿದ್ದು, ಕಾರು ಚಾಲಕನಾಗಿದ್ದ. ನಯನಾ ದಿನಸಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಳು. 8 ತಿಂಗಳ ಹಿಂದೆ ಯುವತಿ ತಿಪ್ಪೇಸ್ವಾಮಿ ಕಾರು ಹತ್ತಿದ್ದಾಗ ಆತನ ಪರಿಚಯವಾಗಿತ್ತು. ಕ್ರಮೇಣ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.
ಒಡತಿಗೆ ಮದ್ಯ ಕುಡಿಸಿ ನೌಕರನಿಂದಲೇ ರೇಪ್!
ಬಳಿಕ ಇಬ್ಬರು ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರು 4 ತಿಂಗಳಿಂದ ಮುನೇಕೋಳಾಲದಲ್ಲಿನ ಬಾಡಿಗೆ ಮನೆಯಲ್ಲಿ ಒಟ್ಟಿಗೆ ಸಹ ಜೀವನ ಸಾಗಿಸುತ್ತಿದ್ದರು. ಈ ನಡುವೆ ಯುವತಿ ತಿಪ್ಪೇಸ್ವಾಮಿಯನ್ನು ಬಿಟ್ಟು, ಬೇರೊಬ್ಬ ವ್ಯಕ್ತಿ ಜತೆ ಹೆಚ್ಚು ಸಂಭಾಷಣೆಯಲ್ಲಿ ತೊಡಗಿದ್ದಳು ಎನ್ನಲಾಗಿದೆ. ಇದರಿಂದ ತಿಪ್ಪೇಸ್ವಾಮಿ ಆಕ್ರೋಶಗೊಂಡಿದ್ದ.
ಮೇ 19 ರಾತ್ರಿ ತಿಪ್ಪೇಸ್ವಾಮಿ ಮದುವೆಯಾಗೋಣ ಎಂದು ಯುವತಿಯನ್ನು ಕೇಳಿದ್ದ. ಈ ವೇಳೆ ಆಕೆ ತಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಳು. ಇದೇ ವಿಚಾರಕ್ಕೆ ಇಬ್ಬರು ನಡುವೆ ರಾತ್ರಿ ತೀವ್ರ ಜಗಳ ನಡೆದು ನಿದ್ರೆಗೆ ಜಾರಿದ್ದರು. ಮರುದಿನ ಬೆಳಗ್ಗೆ 6ರ ಸುಮಾರಿಗೆ ಇಬ್ಬರು ನಡುವೆ ಮತ್ತೊಮ್ಮೆ ಜಗಳ ನಡೆದಿದೆ. ಸಿಟ್ಟುಗೊಂಡ ನಯನಾ ಚಾಕುವಿನಿಂದ ತಿಪ್ಪೇಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು, ಆತನ ಕೈ ಬೆರಳಿಗೆ ಗಾಯವಾಗಿತ್ತು. ಕೂಡಲೇ ಚಾಕು ಕಸಿದುಕೊಂಡಿದ್ದ. ಬಳಿಕ ಯುವತಿ ದೋಸೆ ತವಾದಿಂದ ಹಲ್ಲೆ ನಡೆಸಿದ್ದಳು.
ಅಮೆರಿಕ: ಗರ್ಭಿಣಿ ಪತ್ನಿ ಕೊಂದು ಆತ್ಮಹತ್ಯೆಗೆ ಶರಣಾದ ಭಾರತೀಯ!
ಇದಕ್ಕೆ ಆಕ್ರೋಶಗೊಂಡ ತಿಪ್ಪೇಸ್ವಾಮಿ, ಅದೇ ತವಾ ಕಸಿದುಕೊಂಡು ಮೂರ್ನಾಲ್ಕು ಬಾರಿ ನಯನಾಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗಾಯಗೊಂಡು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೃತ್ಯದ ಬಳಿಕ ತಿಪ್ಪೇಸ್ವಾಮಿ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಲಾಗಿದೆ. ಈ ಕುರಿತು ಮನೆ ಮಾಲಿಕರಿಂದ ದೂರು ಪಡೆದು ಪ್ರಕರಣ ದಾಖಲಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.