Bengaluru: ಸದಾ ಮಡಿ, ಮೈಲಿಗೆ ಎನ್ನುತ್ತಿದ್ದ ತಾಯಿಯ ಹತ್ಯೆ: ಮಗಳು, ಮೊಮ್ಮಗ ಅರೆಸ್ಟ್‌

By Govindaraj S  |  First Published Oct 8, 2022, 9:49 AM IST

ಮಡಿ ಮೈಲಿಗೆ ಎಂದು ಕಾಟಕೊಡುತ್ತಿದ್ದಳು ಎಂಬ ಕಾರಣಕ್ಕೆ ಐದು ವರ್ಷಗಳ ಹಿಂದೆ ತಾಯಿಯನ್ನು ಕೊಂದು ಮನೆಯ ವಾರ್ಡ್‌ ರೋಬ್‌ನಲ್ಲಿ ಮೃತದೇಹವನ್ನು ಮುಚ್ಚಿಟ್ಟು ಪರಾರಿಯಾಗಿದ್ದ ಮೃತಳ ಮಗಳು ಹಾಗೂ ಮೊಮ್ಮಗನನ್ನು ಬ್ಯಾಂಕ್‌ ಖಾತೆ ಮಾಹಿತಿ ಆಧರಿಸಿ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಅ.08): ಮಡಿ ಮೈಲಿಗೆ ಎಂದು ಕಾಟಕೊಡುತ್ತಿದ್ದಳು ಎಂಬ ಕಾರಣಕ್ಕೆ ಐದು ವರ್ಷಗಳ ಹಿಂದೆ ತಾಯಿಯನ್ನು ಕೊಂದು ಮನೆಯ ವಾರ್ಡ್‌ ರೋಬ್‌ನಲ್ಲಿ ಮೃತದೇಹವನ್ನು ಮುಚ್ಚಿಟ್ಟು ಪರಾರಿಯಾಗಿದ್ದ ಮೃತಳ ಮಗಳು ಹಾಗೂ ಮೊಮ್ಮಗನನ್ನು ಬ್ಯಾಂಕ್‌ ಖಾತೆ ಮಾಹಿತಿ ಆಧರಿಸಿ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ರಾಧಾ ವಾಸುದೇವ್‌ ರಾವ್‌ ಅಲಿಯಾಸ್‌ ಶಶಿಕಲಾ ಹಾಗೂ ಆಕೆಯ ಪುತ್ರ ಸಂಜಯ್‌ ಶ್ರೀವಾಸುದೇವ್‌ ರಾವ್‌ ಬಂಧಿತರಾಗಿದ್ದು, ಈ ಇಬ್ಬರನ್ನು ಕೊಲ್ಲಾಪುರದ ಸಿಟಿ ಬಸ್‌ ನಿಲ್ದಾಣ ಬಳಿ ಬಂಧಿಸಿ ನಗರಕ್ಕೆ ಪೊಲೀಸರು ಕರೆ ತಂದಿದ್ದಾರೆ. 2017ರಲ್ಲಿ ರಾಧಾ ತಾಯಿ ಶಾಂತಕುಮಾರಿ (70) ಅವರ ಹತ್ಯೆಯಾಗಿತ್ತು.

ಬೆಂಗಳೂರು ಟು ಕೊಲ್ಲಾಪುರ: ಕಳೆದ ಎರಡೂವರೆ ದಶಕಗಳಿಂದ ಕೆಂಗೇರಿ ಉಪನಗರದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ರಾಧಾ ವಾಸುದೇವ್‌ ರಾವ್‌ ನೆಲೆಸಿದ್ದರು. ಪತಿ ನಿಧನರಾದ ಬಳಿಕ ರಾಧಾ ಅವರು, ತಮ್ಮ ತಾಯಿ ಶಾಂತಕುಮಾರಿ ಹಾಗೂ ಪುತ್ರ ಸಂಜಯ್‌ ಜತೆ ಇದ್ದರು. ಪೈಲೆಟ್‌ ಆಗುವ ಕನಸು ಕಂಡಿದ್ದ ಸಂಜಯ್‌, ಏರೋನಾಟಿಕ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೋಟೆಲ್‌ಗಳಿಂದ ಆಹಾರ ತಂದರೆ ತಿನ್ನದೆ ಅಜ್ಜಿ ಆಕ್ಷೇಪಿಸುತ್ತಿದ್ದಳು. ಸದಾ ಕಾಲ ಮಡಿ ಮೈಲಿಗೆ ಎಂದು ಹೇಳಿ ತಾಯಿ ಗಲಾಟೆ ಮಾಡುತ್ತಾಳೆ ಎಂದು ಮಗಳಿಗೆ ಕೋಪವಿತ್ತು. 2017ರಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ ಜತೆ ರಾಧಾಗೆ ಜಗಳವಾದಾಗ ತಲೆ ಹಾಗೂ ಹಣೆಗೆ ಲಟ್ಟಣಿಗೆಯಿಂದ ಹೊಡೆದಿದ್ದರು. 

Tap to resize

Latest Videos

Chikkaballapur: ಮತ್ತೆ ಹೆಚ್ಚಿದ ಅಕ್ರಮ ಮದ್ಯದ ಹೊಳೆ: 123 ಆರೋಪಿಗಳ ದಸ್ತಗಿರಿ

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಅರೆ ಪ್ರಜ್ಞಾಹೀನಳಾಗಿದ್ದ ಅಜ್ಜಿ ಮೂರು ದಿನಗಳ ಬಳಿಕ ಕೊನೆಯುಸಿರೆಳೆದಿದ್ದಳು. ಈ ಹತ್ಯೆ ಕೃತ್ಯ ಬಯಲಾದರೆ ಜೈಲು ಸೇರಬೇಕಾಗುತ್ತದೆ ಎಂದು ಹೆದರಿದ ತಾಯಿ-ಮಗ, ಮೃತದೇಹವನ್ನು ಕೋಣೆಯ ವಾರ್ಡ್‌ರೋಬ್‌ ಕೆಳಭಾಗದ ಸ್ಟೆಪ್‌ನಲ್ಲಿ ಮುಚ್ಚಿಟ್ಟರು. ಬಳಿಕ ಕೊಳೆತ ವಾಸನೆ ಬಾರದಂತೆ ಇದ್ದಿಲು, ಉಪ್ಪು ಹಾಗೂ ಮಣ್ಣು ಸುರಿದು ಸಿಮೆಂಟ್‌ನಿಂದ ವಾರ್ಡ್‌ರೋಬ್‌ ಪ್ಲಾಸ್ಟರ್‌ ಮಾಡಿದ್ದರು. ಇದಾದ 4 ತಿಂಗಳು ಅದೇ ಮನೆಯಲ್ಲಿ ತಾಯಿ-ಮಗ ನೆಲೆಸಿದ್ದರು. ಆದರೆ ಮತ್ತೆ ಮೃತದೇಹ ವಾಸನೆ ಬರಲು ಶುರು ಮಾಡಿದ ಪರಿಣಾಮ, ಊರಲ್ಲಿ ತಾತನ ಆರೋಗ್ಯ ಸರಿಯಿಲ್ಲವೆಂದು ಹೇಳಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದಾದ ಎರಡು ತಿಂಗಳ ಬಳಿಕ ಮನೆ ಮಾಲೀಕ ಬೀಗ ತೆರೆದು ಕೋಣೆ ಪರಿಶೀಲಿಸಿದಾಗ ವಾರ್ಡ್‌ರೋಬ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಕೂಡಲೇ ಕೆಂಗೇರಿ ಠಾಣೆಗೆ ಅವರು ದೂರು ಕೊಟ್ಟಿದ್ದರು. ಆದರೆ ಅಷ್ಟರಲ್ಲಿ ನಗರ ತೊರೆದು ತಾಯಿ-ಮಗ ಮಹಾರಾಷ್ಟ್ರ ಕೊಲ್ಲಾಪುರ ಸೇರಿದ್ದರು. ಅಂದು ಮೃತದೇಹವನ್ನು ಬಚ್ಚಿಡಲು ತಾಯಿ-ಮಗನಿಗೆ ಸಹಕರಿಸಿದ್ದ ಆರೋಪದ ಮೇರೆಗೆ ಸಂಜಯ್‌ ಸಹಪಾಠಿ ನಂದೀಶ್‌ ಬಂಧನವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್‌ ಖಾತೆ ನೀಡಿದ ಸುಳಿವು: ಅಜ್ಜಿ ಕೊಂದ ಬಳಿಕ ಬೆಂಗಳೂರು ತೊರೆದ ತಾಯಿ-ಮಗ, ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಎಲ್ಲರ ಸಂಪರ್ಕವನ್ನು ಕಡಿದುಕೊಂಡು ಅಜ್ಞಾತವಾಸಿಗಳಾದರು. ಕೊಲ್ಲಾಪುರದಲ್ಲಿ ಹೋಟೆಲ್‌ನಲ್ಲಿ ಸಂಜಯ್‌ ಸಪ್ಲೈಯರ್‌ ಆಗಿದ್ದರೆ, ರಾಧಾ ಅಡುಗೆ ಸಹಾಯಕಿಯಾಗಿದ್ದಳು. ಹಳೇ ಪ್ರಕರಣದ ತನಿಖೆಗೆ ಡಿಸಿಪಿ ಸೂಚನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್‌ ವಸಂತ್‌ ಮತ್ತವರ ತಂಡ ಸಂಜಯ್‌ ಸಂಪರ್ಕ ಜಾಲವನ್ನು ಶೋಧಿಸಿತು. ಎಂಜಿನಿಯರಿಂಗ್‌ ಓದಿರುವ ಆತ ಬ್ಯಾಂಕ್‌ ಅಥವಾ ಮೊಬೈಲ್‌ ಬಳಕೆ ಮಾಡಿರಬಹುದು ಎಂದು ಅಂದಾಜಿಸಿದ ತನಿಖಾ ತಂಡವು, ಸಂಜಯ್‌ ಹೆಸರಿನ ಬ್ಯಾಂಕ್‌ ಖಾತೆದಾರರ ವಿವರ ನೀಡುವಂತೆ 10ಕ್ಕೂ ಹೆಚ್ಚಿನ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದರು. 

Belagavi: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

5 ವರ್ಷಗಳ ಹಿಂದೆ ಕೃತ್ಯ ನಡೆದಾಗ ಆತನ ವಯಸ್ಸು 22 ವರ್ಷವಾಗಿದ್ದು, ಈಗ ಆತನಿಗೆ 27 ವಯಸ್ಸಿನವನಾಗಿದ್ದಾನೆ. ಹೀಗಾಗಿ 27 ರಿಂದ 30 ವರ್ಷ ವಯೋಮಾನದವರ ಬ್ಯಾಂಕ್‌ ಖಾತೆದಾರರನ್ನು ಪೊಲೀಸರು ಕೆದಕಿದರು. ಹೀಗೆ 10 ಸಾವಿರಕ್ಕೂ ಹೆಚ್ಚಿನ ಖಾತೆಗಳನ್ನು ಪರಿಶೀಲಿಸಿದಾಗ ಕೊನೆಗೆ ಆರೋಪಿ ಸುಳಿವು ಸಿಕ್ಕಿತು. 2020ರಲ್ಲಿ ಕೊಲ್ಲಾಪುರದ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಸಂಜಯ್‌ ಖಾತೆ ತೆರೆದಿದ್ದ. ಅದಕ್ಕೆ ಆಧಾರ್‌ ಸಹ ಲಿಂಕ್‌ ಆಗಿತ್ತು. ಈ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!