ಬೆಂಗಳೂರು ಕೆಎಎಸ್ ಅಧಿಕಾರಿ ಪ್ರತಿಮಾ ಅವರನ್ನು ದಂಡುಪಾಳ್ಯ ಗ್ಯಾಂಗ್ ಮಾದರಿ ಬಾಗಿಲು ತೆರೆದಾಕ್ಷಣ ಪ್ರಜ್ಞೆ ತಪ್ಪಿಸಿ ಕತ್ತು ಸೀಳಿ ಕೊಲೆ ಮಾಡಲಾಗಿದೆ.
ಬೆಂಗಳೂರು (ನ.05): ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪ್ರತಿಮಾ ಕೊಲೆಯಾದ ಬಗ್ಗೆ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ಇಂಚಿಂಚು ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಕೊಲೆಯಾದ ಘಟನೆಯ ಬಗ್ಗೆ ನೋಡಿದರೆ ಕೊಲೆ ಆರೋಪಿ ಯಾರೆನ್ನುವುದು ತಿಳಿಯದಿದ್ದರೂ, ಒಬ್ಬಂಟಿ ಮಹಿಳೆ ಪ್ರತ್ಯೇಕವಾಗಿ ವಾಸವಿರುವುದು ಎಷ್ಟು ಅಪಾಯಕಾರಿ ಎನ್ನುವುದು ಇಲ್ಲಿ ತಿಳಿಯುತ್ತದೆ. ಜೊತೆಗೆ ದಂಡುಪಾಳ್ಯ ಗ್ಯಾಂಗ್‌ನ ಮಾದರಿಯಲ್ಲಿ ಮನೆಯೊಳಗೆ ನುಗ್ಗಿ ಬಾಗಿಲು ಮುಚ್ಚಿ ಕತ್ತು ಹಿಸುಕಿ ಪ್ರಜ್ಞೆ ತಪ್ಪಿದ ನಂತರ ಅವರ ಕತ್ತನ್ನು ಚಾಕುವಿನಿಂದ ಕೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಕೆಎಎಸ್ ಅಧಿಕಾರಿಯಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದರೂ ಬೆಂಗಳೂರು ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ಮಾಡುತ್ತಿರುವುದನ್ನೇ ಗಮನಿಸಿ ಕಿಡಿಗೇಡಿಗಳು ಕೊಲೆ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.
ಶಿವಮೊಗ್ಗದ ಡೈನಾಮಿಕ್ ಲೇಡಿ ಕೆಎಎಸ್ ಆಫೀಸರ್ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿಗಳು!
ಕಛೇರಿಯಿಂದ ಬಂದ ಪ್ರತಿಮಾ ಕೊಲೆ ವೇಳೆ ನಡೆದ್ದದ್ದೇನು.?
ಸರ್ಕಾರಿ ಅಧಿಕಾರಿ ಪ್ರತಿಮಾಳನ್ನು ಕೊಲೆ ಮಾಡುವುದಕ್ಕೆ ಹಂತಕ ಮನೆಯ ಬಳಿಯೇ ಕಾದುಕುಳಿತಿದ್ದನು. ನಿನ್ನೆ ಸಂಜೆ 7:45ಕ್ಕೆ ಪ್ರತಿಮಾ ಮನೆಗೆ ಬಂದಿದ್ದಾರೆ. ಕಾರಿನ ಚಾಲಕ ಪ್ರತಿಮಾರನ್ನ ಮನೆಗೆ ಬಿಟ್ಟು, ಅಲ್ಲಿಂದ ಬೈಕ್‌ನಲ್ಲಿ ಮನೆಗೆ ಹೋಗಲು ಮುಂದಾಗಿದ್ದಾನೆ. ಈ ವೇಳೆ ಕಾರು ಚಾಲಕನಿಗೆ ಮಳೆ ಬರ್ತಿದೆ ಹೇಗೆ ಹೋಗ್ತೀಯಾ? ಎಂದು ಪ್ರತಿಮಾ ಅವರು ಕೇಳಿದ್ದಾರೆ. ನಾನು ರೈನ್ ಕೋಟ್ ತಂದಿದ್ದೇನೆ, ಹೀಗಾಗಿ ಮಳೆ ಬಂದರೂ ಪರವಾಗಿಲ್ಲ ಮನೆಗೆ ಹೋಗ್ತೇನೆ ಮೇಡಂ ಎಂದು ಅಲ್ಲಿಂದ ಬೈಕ್‌ನಲ್ಲಿ ತೆರಳಿದ್ದಾನೆ.
ಬಾಗಿಲು ತೆರೆದಾಕ್ಷಣ ಕುತ್ತಿಗೆಗೆ ಹಗ್ಗವನ್ನು ಬಿಗಿದ ಆರೋಪಿ: ಕಾರಿನ ಚಾಲಕ ಮನೆಯ ಕಡೆಗೆ ಹೋದ ನಂತರ ಮೊದಲನೆ ಮಹಡಿಯಲ್ಲಿದ್ದ ತಮ್ಮ ಮನೆಗೆ ತೆರಳಿದ ಪ್ರತಿಮಾ ಅವರು ಬಾಗಿಲೆಗೆ ಹಾಕಿದ್ದ ಬೀಗವನ್ನು ತೆರಯಲು ಮುಂದಾಗಿದ್ದಾರೆ. ಮನೆಯ ಭದ್ರತೆಗಾಗಿ ಮುಖ್ಯ ಬಾಗಿಲ ಜೊತೆಗೆ ಅದರ ಮುಂಭಾಗ ಕಬ್ಬಿಣದ ಬಾಗಿಲನ್ನೂ ಅಳವಡಿಕೆ ಮಾಡಲಾಗಿತ್ತು. ಹೀಗಾಗಿ, ಕಬ್ಬಿಣದ ಬಾಗಿಲು ತೆರೆದು, ನಂತರ ಮುಖ್ಯ ಬಾಗಿಲನ್ನು ತೆರೆದು ಮನೆಯೊಳಗೆ ಕಾಲಿಟ್ಟಿದ್ದಾರೆ. ಪ್ರತಿಮಾ ಅವರು ಮನೆಯೊಳಗೆ ಒಂದು ಕಾಲಿಡುತ್ತಿದ್ದಂತೆಯೇ ಹಿಂದಿನಿಂದ ಬಂದ ಆಗಂತುಕ, ತತಕ್ಷಣ ಪ್ರತಿಮಾ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದಿದ್ದಾನೆ. ಜೊತೆಗೆ, ಒಂದು ಕೈಯಲ್ಲಿ ಚೀರಾಡಲು ಆಗದಂತೆ ಬಾಯಿಯನ್ನೂ ಮುಚ್ಚಿದ್ದಾನೆ.
ಬೆಂಗಳೂರಿನಲ್ಲಿ ಸರ್ಕಾರಿ ಮಹಿಳಾ ಅಧಿಕಾರಿ ಭೀಕರ ಹತ್ಯೆ!
ದಂಡುಪಾಳ್ಯ ಮಾದರಿಯಲ್ಲಿ ಕುತ್ತಿಗೆ ಕತ್ತರಿಸಿದ ದುಷ್ಕರ್ಮಿ: ಪ್ರತಿಮಾ ಅವರ ಕುತ್ತಿಗೆಗೆ ಹಗ್ಗವನ್ನು ಸುತ್ತಿ ಬಿಗಿಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಅವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಬಂದಿದ್ದ ಆರೋಪಿ ದಂಡುಪಾಳ್ಯ ಸಿನಿಮಾ ಮಾದರಿಯಲ್ಲಿ ಪ್ರತಿಮಾ ಅವರ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ವಿಕೃತಿ ಮೆರೆದಿದ್ದಾನೆ. ಇನ್ನು ಪ್ರತಿಮಾ ಅವರು ಕಚೇರಿಗೆ ತೆಗೆದುಕೊಂಡು ಹೋಗಿ ವಾಪಸ್ ಬಂದಿದ್ದ ಊಟದ ಬ್ಯಾಗ್ ಹಾಗೂ ಅವರು ಬಳಸುತ್ತಿದ್ದ ಕನ್ನಡಕ (ಸ್ಪೆಕ್ಟ್ಸ್) ಕೂಡ ಬಾಗಿಲ ಬಳಿಯೇ ಬಿದ್ದಿತ್ತು.
ಸರ್ಕಾರಿ ಅಧಿಕಾರಿ ಪ್ರತಿಮಾಳ ಕೊಲೆಯನ್ನು ನೋಡಿದರೆ ವೈಯಕ್ತಿಕ ದ್ವೇಷದಿಂದಲೇ ಕೊಲೆ ಮಾಡಿದ್ದಾರೆ ಎಂಬಂತೆ ಶಂಕೆ ವ್ಯಕ್ತವಾಗುತ್ತಿದೆ. ಆದರೆ, ಕೊಲೆಗಾರ ಯಾರು ಎಂಬುದರ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಪೊಲೀಸರು ವಿವಿಧ ಆಯಾಮಗಳ ಮೊರೆ ಹೋಗಿದ್ದಾರೆ. ಜೊತೆಗೆ, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನೂ ರಚಿಸಲಾಗಿದೆ. ಈಗ ಪ್ರತಿಮಾ ಅವರ ಫೋನ್ ಸ್ವಿಚ್ ಆಫ್ ಆಗಿದ್ದು ಅವರ ಮೊಬೈಲ್ ರಿಟ್ರಿವ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇನ್ನು ಸ್ಥಳದಲ್ಲಿ ಟವರ್ ಲೋಕೆಷನ್ ಮೊಬೈಲ್ ಕಾರ್ಯನಿರ್ವಹಿಸಿದ ಸಂಖ್ಯೆಗಳು ಹಾಗೂ ಸಿಸಿಟಿವಿಗೆ ಆಧರಿಸಿ ಕೊಲೆ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.