Breaking ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಇನ್ನಿಬ್ಬರು ಆರೋಪಿಗಳ ಬಂಧನ

By Suvarna News  |  First Published Aug 7, 2022, 9:37 PM IST

ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಬೆಳ್ಳಾರೆ ಪ್ರವೀಣ್ ಕೊಲೆ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ದಕ್ಷಿಣ ಕನ್ನಡ, (ಆಗಸ್ಟ್. 07): ಮಂಗಳೂರಿನ ಬೆಳ್ಳಾರೆ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ಬಂಧನವಾಗಿದೆ.

ಸುಳ್ಯದ ನಾವೂರು ನಿವಾಸಿ ಅಬೀದ್(22) ಮತ್ತು ಬೆಳ್ಳಾರೆ ನಿವಾಸಿ ನೌಫಲ್(28) ಬಂಧಿತ ಆರೋಪಿಗಳು.  ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಅಬೀದ್ ಮತ್ತು ಬೆಳ್ಳಾರೆ ನಿವಾಸಿ ನೌಫಲ್ ಎನ್ನುವವರನ್ನು ಬೆಳ್ಳಾರೆ ಪೊಲೀಸರು ಇಂದು(ಭಾನುವಾರ) ಅರೆಸ್ಟ್ ಮಾಡಿದ್ದಾರೆ.

Tap to resize

Latest Videos

 ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ತನಿಖೆ ಕೈಗೆತ್ತಿಕೊಳ್ಳಲು NIAಗೆ ಕೇಂದ್ರ ಗೃಹ ಇಲಾಖೆ ಆದೇಶ

ಈಗಾಗಲೇ ಶಫೀಕ್, ಝಾಕೀರ್, ಸದ್ದಾಂ ಮತ್ತು ಹ್ಯಾರಿಸ್ ಎನ್ನುವರನ್ನು ಬಂಧಿಸಲಾಗಿದೆ. ಈವರೆಗೆ ಪ್ರವೀಣ್ ಹತ್ಯೆ ಕೇಸ್ ನಲ್ಲಿ ಒಟ್ಟು ಆರು ಜನರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದು, ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಪ್ರವೀಣ ಹತ್ಯೆ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲ ಎಂದು ಸಿಡಿದೆದ್ದಿದ್ದು, ಕೆಲವರು ಬಿಜೆಪಿ ಯುವ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಈ ಪ್ರಕರಣ ರಾಜಕೀಯವಾಗಿ ಬಿಜೆಪಿ ಮೇಲೆ ಭಾರೀ ಪರಿಣಾಮ ಬೀರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರುತ್ತಿದ್ದಾರೆ.

ಪ್ರವೀಣ್ ಕೊಲೆ ಕೇಸ್ ಎನ್‌ಐಎಗೆ
ಪ್ರವೀಣ್ ಹತ್ಯೆ ಕೇಸ್‌ ಅನ್ನು ತನಿಖೆಗಾಗಿ ಸರ್ಕಾರ ಈಗಾಗಲೇ ಎನ್‌ಐಎಗೆ ವಹಿಸಿದೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಸಹ ತನಿಖೆ ಕೈಗೊಳ್ಳುವಂತೆ ಎನ್‌ಐಎ ಗೆ ಸೂಚನೆ ಕೊಟ್ಟಿದೆ. ಅಲ್ಲದೇ ಈ ಬಗ್ಗೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕರಣದ ವರದಿ ತರಿಸಿಕೊಂಡಿದ್ದು, ಕಠಿಣ ಕ್ರಮಕ್ಕೆ ಸೂಚನೆ ಕೊಟ್ಟಿದ್ದಾರೆ.

ಏನಿದು ಪ್ರಕರಣ?
ಪ್ರವೀಣ್ ನೆಟ್ಟಾರ್ ಅವರು ಬೆಳ್ಳಾರೆಯಲ್ಲಿ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಎಂಬ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ಜು 26 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರವೀಣ್ ತನ್ನ ಬೈಕ್ ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್ ವೊಂದರಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಮೇಲೆ ದಾಳಿ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬದುಕಿ ಉಳಿಯಲಿಲ್ಲ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರವೀಣ್ ಅವರ ಅಂಗಡಿಯಲ್ಲಿ ಕೋಳಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧು ಕುಮಾರ್ ರಾಯನ್ ಎಂಬವರು ದೂರು ನೀಡಿದ್ದರು.

 

click me!