ಕುಡಿತಕ್ಕೆ ಹಣ ಕೊಡಲಿಲ್ಲವೆಂದು ಮಗಳನ್ನೇ ಕೊಲೆಗೈದ ತಂದೆ| ಕಾಲುವೆಗೆ ನೂಕಿ ಹತ್ಯೆ, ಬಳ್ಳಾರಿಯಲ್ಲಿ ನಡೆದ ಘಟನೆ| ಹತ್ಯೆಗೈದ ಬಳಿಕ ಪೊಲೀಸರಿಗೆ ಶರಣಾದ ಪಾಪಿ ತಂದೆ
ಬಳ್ಳಾರಿ[ಫೆ.18]: ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪಾಪಿ ತಂದೆಯೊಬ್ಬ ಹೆತ್ತ ಮಗಳನ್ನೇ ಕಾಲುವೆಗೆ ನೂಕಿ ಹತ್ಯೆಗೈದ ಘಟನೆ ನಗರದ ಬಂಡಿಹಟ್ಟಿಪ್ರದೇಶದಲ್ಲಿ ಸೋಮವಾರ ನಡೆದಿದೆ. ಕೊಲೆ ಮಾಡಿದ ಬಳಿಕ ಆರೋಪಿ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಆರೋಗ್ಯ ಸಚಿವ ಬಿ. ಶ್ರೀರಾಮುಲು ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಲ್ಲವಿ (22) ಕೊಲೆಯಾದ ದುರ್ದೈವಿ. ಸುರೇಶ್ ಅಲಿಯಾಸ್ ಆಟೋ ಸೂರಿ ಮಗಳನ್ನೇ ಕೊಂದ ಆರೋಪಿ. ಗಂಡನ ಕಾಟ ತಾಳಲಾರದೇ ಸುರೇಶ್‌ನ ಪತ್ನಿ ಶಾರದಾ ಅವರು ಮೂರು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಬೆಳ್ಳಂಬೆಳಗ್ಗೆ ಪೀಡಿಸಿದ ವ್ಯಕ್ತಿ:
ಕುಡಿಯಲು ಹಣ ಕೊಡುವಂತೆ ಸೂರಿ ಮಗಳನ್ನು ನಿತ್ಯ ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಭಾನುವಾರ ರಾತ್ರಿ ಕೂಡ ತಂದೆ-ಮಗಳ ನಡುವೆ ಜಗಳ ನಡೆದಿದೆ. ಸೋಮವಾರ ಬೆಳಗಾಗುತ್ತಿದ್ದಂತೆ ಸೂರಿ ಮತ್ತೆ ಜಗಳ ಆರಂಭಿಸಿದ್ದಾನೆ. ಇದರಿಂದ ತೀವ್ರವಾಗಿ ಮನ ನೊಂದ ಪಲ್ಲವಿ, ನಾನು ಬದುಕಿರುವುದಕ್ಕಿಂತ ಸಾಯುವುದೇ ಲೇಸು ಎಂದು ಮನೆ ಸಮೀಪವಿರುವ ಎಚ್‌ಎಲ್‌ಸಿ ಕಾಲುವೆ ಬಳಿ ಹೋಗಿದ್ದಾಳೆ. ಮಗಳ ಹಿಂದೆಯೇ ತೆರಳಿದ ಸೂರಿ, ಕಾಲುವೆ ಬಳಿ ನಿಂತಿದ್ದ ಆಕೆಯನ್ನು ಕಾಲುವೆಗೆ ನೂಕಿದ್ದಾನೆ. ಈಜು ಬಾರದ ಪಲ್ಲವಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.