ದೇಶದ ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ ಎಂಬ ಯುವತಿಯನ್ನು ಆಕೆಯ ಪ್ರಿಯಕರ ತುಂಡು ತುಂಡಾಗಿ ಕತ್ತರಿಸಿದ್ದ ಘಟನೆಯ ಮಾದರಿಯಲ್ಲೇ ಬೆಂಗಳೂರು ನಗರ ಜಿಲ್ಲೆಯಲ್ಲೂ ಹತ್ಯೆಯೊಂದು ನಡೆದಿದೆ.
ಆನೇಕಲ್ (ಜೂ.12): ದೇಶದ ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ ಎಂಬ ಯುವತಿಯನ್ನು ಆಕೆಯ ಪ್ರಿಯಕರ ತುಂಡು ತುಂಡಾಗಿ ಕತ್ತರಿಸಿದ್ದ ಘಟನೆಯ ಮಾದರಿಯಲ್ಲೇ ಬೆಂಗಳೂರು ನಗರ ಜಿಲ್ಲೆಯಲ್ಲೂ ಹತ್ಯೆಯೊಂದು ನಡೆದಿದೆ. ಮನೆಯ ಮಾಲಕಿಯನ್ನೇ ಬಾಡಿಗೆದಾರ ಸ್ನೇಹಿತರೊಂದಿಗೆ ಸೇರಿ ಕೊಂದು ದೇಹವನ್ನು ತುಂಡರಿಸಿ ಬಳಿಕ ವಿವಿಧೆಡೆ ಎಸೆದು ಹೋಗಿದ್ದ ಹೇಯಕೃತ್ಯವನ್ನು ಬನ್ನೇರುಘಟ್ಟ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟಸಮೀಪದ ಜನತಾ ಕಾಲೋನಿ ನಿವಾಸಿ ಗೀತಮ್ಮ(54) ದಾರುಣವಾಗಿ ಹತ್ಯೆ ಆದವರು. ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವನನ್ನು ಪೊಲೀಸರು ಬಿಹಾರದಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ. ಕೃತ್ಯದ ಮುಖ್ಯ ಹಂತಕ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇತರರನ್ನು ಬಂಧಿಸುವ ಕಾರ್ಯ ತರವ ತ್ವರಿತವಾಗಿ ಮುನ್ನಡೆಯುತ್ತಿದೆ ಎಂದು ಗ್ರಾಮಾಂತರ ಎಸ್ಪಿ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಂಡಗಡ ಡ್ಯಾಮ್‌ನಲ್ಲಿ ಬಿದ್ದು ಬೆಳಗಾವಿ ಸಹೋದರರ ಸಾವು
ಘಟನೆಯ ವಿವರ: ಗೀತಮ್ಮ ಅವರು ಕಾಲೋನಿಯಲ್ಲಿ 4 ಮನೆಗಳನ್ನು ಹೊಂದಿದ್ದಾರೆ. ಒಂದರಲ್ಲಿ ತಾವು ವಾಸವಾಗಿದ್ದು, ಉಳಿದ 3 ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಈ ಮನೆಯಲ್ಲಿ 7 ವರ್ಷಗಳಿಂದ ಬಿಹಾರ್ ಮೂಲದ ಪಂಕಜ್, ಇಂದರ್ ಕುಮಾರ್ ಇತರರು ಬಾಡಿಗೆಗೆ ಇದ್ದರು. ಪಂಕಜ್ ತಾನು ವಾಸವಾಗಿದ್ದ ಮನೆಯನ್ನು ತನ್ನ ಹೆಸರಿಗೆ ಬರೆಯುವಂತೆ ಗೀತಮ್ಮ ಅವರನ್ನು ಒತ್ತಾಯಿಸಿದ್ದಾನೆ. ಇದಕ್ಕೆ ಈಕೆ ಒಪ್ಪದಿದ್ದಾಗ ತನ್ನ ಊರಿನವರೊಂದಿಗೆ ಸೇರಿ ಗೀತಮ್ಮ ಅವರನ್ನು ವೈರ್‌ನಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಗರಗಸದಿಂದ ಕೈ, ಕಾಲು, ರುಂಡ ಹಾಗೂ ಮುಂಡವನ್ನು ಕತ್ತರಿಸಿದ್ದಾರೆ. ಬಳಿಕ ದೇಹದ ಬಿಡಿ ಭಾಗಗಳನ್ನು ವಿವಿಧೆಡೆ ಎಸೆದು ಬಿಹಾರಕ್ಕೆ ಪರಾರಿ ಆಗಿದ್ದಾರೆ.
ಘಟನೆ ಪತ್ತೆಯಾಗಿದ್ದು ಹೀಗೆ: ಕೆಲ ದಿನಗಳ ಹಿಂದೆ ಮಹಿಳೆಯ ದೇಹವೊಂದು ಜನತಾ ಕಾಲೋನಿಯ ಪೊದೆ ಬಳಿ ಪತ್ತೆಯಾಗಿತ್ತು. ಇದನ್ನು ಕಂಡ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೇವಲ ದೇಹ ಮಾತ್ರ ಕಂಡ ಪೊಲೀಸರು ಇತರ ಭಾಗಗಳು ಸಮೀಪದಲ್ಲಿ ಇರಬಹುದೆಂದು ಹುಡುಕಿದರೂ ಸಿಕ್ಕಿರಲಿಲ್ಲ. ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ನೆಟ್‌ವರ್ಕ್ ಸೇರಿದಂತೆ ವಿವಿಧ ಮೂಲಗಳನ್ನು ಹುಡುಕಿದ್ದರು. ಈ ನಡುವೆ ಮನೆಯಲ್ಲಿ ಬಾಡಿಗೆಗೆ ಇದ್ದವರು ನಾಪತ್ತೆಯಾಗಿದ್ದರಿಂದ ಅವರ ಮೂಲವನ್ನೂ ಹುಡುಕಲು ಆರಂಭಿಸಿದರು.
ಸಾಲ ವಾಪಾಸ್ ಕೇಳಿದ್ದಕ್ಕೆ ತಮ್ಮನಿಂದಲೇ ನಿರ್ದೇಶಕನಿಗೆ ಕೊಲೆ ಬೆದರಿಕೆ: ಎಫ್‌ಐಆರ್ ದಾಖಲು
ಆಗ ಬಿಹಾರದಲ್ಲಿದ್ದ ಹಂತಕರ ಸುಳಿವು ಸಿಕ್ಕಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಿಹಾರದಲ್ಲಿ ಹುಡುಕಾಟ ಶುರು ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಹೋದ ಇನ್‌ಸ್ಪೆಕ್ಟರ್ ಉಮಾಮಹೇಶ್ ತಂಡದ ಮೇಲೆ ಹಂತಕರು ಕಲ್ಲು ತೂರಿ ಪರಾರಿ ಆಗಿದ್ದಾರೆ. ಕೊನೆಗೂ ಹರಸಾಹಸಪಟ್ಟ ಪೊಲೀಸರು ಕೊಲೆಯಲ್ಲಿ ಭಾಗಿಯಾಗಿದ್ದ ಇಂದರ್ ಕುಮಾರನನ್ನು ಬಂಧಿಸಿ ಕರೆತಂದಿದ್ದಾರೆ. ಆತ ಕೈ ಕಾಲುಗಳನ್ನು ಎಸೆದಿದ್ದ ಸ್ಥಳವನ್ನು ತೋರಿಸಿದ್ದಾನೆ. ದೇಹ ಕೊಳೆಯಲು ಆರಂಭಿಸಿದ್ದರಿಂದ ಅದನ್ನು ಪೊದೆ ಬಳಿ ಎಸೆದು ಪರಾರಿ ಆಗಿದ್ದೇವು ಎಂದು ಆತನ ಮಾಹಿತಿ ನೀಡಿದ್ದಾನೆ. ಜೀವದ ಹಂಗು ತೊರೆದು ಆರೋಪಿಗಳನ್ನು ಬಂಧಿಸಿ ಕರೆತಂದ ಇನ್‌ಸ್ಪೆಕ್ಟರ್ ಉಮಾಮಹೇಶ್ ತಂಡದವರನ್ನು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರಶಂಸಿಸಿದ್ದಾರೆ.