ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಗ್ಯಾಂಗ್ ರೇಪ್| ಕಹಿ ಘಟನೆಗೆ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಯೋಗಿ ರಾಜ್ಯದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ| ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದ ಯುವತಿ
ಲಕ್ನೋ(ಅ.01): ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಗ್ಯಾಂಗ್ ರೇಪ್‌ಗೊಳಗಾಗಿದ್ದ 19 ವರ್ಷದ ದಲಿತ ಯುವತಿ ಎರಡು ದಿನದ ಹಿಂದಷ್ಟೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಪ್ರಕರಣ ಸಂಬಂಧ ದೇಶಾದ್ಯಂತ ತೀವ್ರ ಆಕ್ರೊಶ ವ್ಯಕ್ತವಾಗುತ್ತಿದೆ. ಆದರೀಗ ಈ ಕಹಿ ಘಟನೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾಋ ಪ್ರಕರಣ ವರದಿಯಾಗಿದೆ.
ಹೌದು ಹತ್ರಾಸ್‌ನಿಂದ 500 ಕಿಲೋ ಮೀಟರ್ ದೂರದಲ್ಲಿರುವ ಬಲರಾಮ್‌ಪುರ ಗ್ರಾಮದಲ್ಲಿ ಮಂಗಳವಾರ ಸಂಜೆ 22 ವರ್ಷದ ದಲಿತ ಯುವತಿ ಮೇಲೆ ಕಾಮುಕರು ಹಲ್ಲೆ ನಡೆಸಿ ಗ್ಯಾಗ್ ರೇಪ್ ನಡೆಸಿದ್ದಾರೆ. ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಲಕ್ನೋನ ಆಸ್ಪತ್ರೆಗೆ ಕೊಂಡೊಯ್ಯುವಾಗ ಹಾದಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾದರೂ ಮರಣೋತ್ತರ ಪರೀಕ್ಷೆಯಲ್ಲಿ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಿಡ್ನಾಪ್ ಮಾಡಲಾಗಿತ್ತು. ಕಲಸಕ್ಕೆ ತೆರಳಿದ್ದ ಯುವತಿ ಮನೆಗೆ ಬಾರದಾಗ ಫೋನ್ ಮಾಡಿದ್ದಾರೆ. ಕರೆ ಸ್ವೀಕರಿಸದಾಗ ಕುಟುಂಬದವರು ಹುಡುಕಾಟ ಆರಂಭಿಸಿದ್ದಾರೆ. ಚಿಂತೆಗೀಡಾದ ಕುಟುಂಬ ಮಂದಿ ಪೊಲೀಸರಿಗೆ ದೂರು ನೀಡಬೇಕೆಂದು ಹೊರಡುವಷ್ಟರಲ್ಲಿ ಸಂಜೆ 7 ಗಂಟೆ ಸುಮಾರಿಗೆ ರಿಕ್ಷಾದಲ್ಲಿ ಆಕೆ ಮನೆ ತಲುಪಿದ್ದಾಳೆ. ಆದರೆ ಆಕೆ ಕೈ ಕಾಲುಗಳಿಗೆ ತೀವ್ರವಾದ ಗಾಯಗಳಾಗಿದ್ದವು.
ಆಕೆ ನಿಲ್ಲಲೂ ಆಗದಷ್ಟು ನಿತ್ರಾಣಳಾಗಿದ್ದಳು. ಆಕೆಯ ಕೈಗೆ ಗ್ಲೂಕೋಸ್ ಡ್ರಿಪ್ ಹಾಕಿದ್ದ ಇಂಜೆಕ್ಷನ್ ಹಾಕಲಾಗಿತ್ತು. ಆಕೆಯ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಆಕೆ ಪ್ರಾಣ ಬಿಟ್ಟಳು ಎಂದು ಯುವತಿಯ ಮನೆಯವರು ದೂರು ನೀಡಿದ್ದಾರೆ. ಆಕೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ಮೃತದೇಹವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ ಬಳಿಕ ಬುಧವಾರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ಪ್ರಕರಣ ಸಂಬಂಧ ಯೋಗಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದಾಳಿ ನಡೆಸಿದ್ದು, ಕ್ಷಿಪ್ರಗತಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮೃತಳ ತಾಯಿ ನೀಡಿರುವ ದೂರಿನಲ್ಲಿ, ನನ್ನ ಮಗಳ ಮೇಲೆ ಅತ್ಯಾಚಾರ ನಡೆಸುವ ಮೊದಲು ಆಕೆಗೆ ಇಂಜೆಕ್ಷನ್ ಕೊಡಲಾಗಿದೆ. ಆಕೆ ಮನೆಗೆ ಬರುವಾಗ ಆಕೆಯ ಬೆನ್ನಿನ ಮೂಳೆ ಮತ್ತು ಕಾಲುಗಳು ಮುರಿದಿದ್ದವು. ಆಕೆಯ ಮೇಲೆ ಇನ್ನಿಲ್ಲದ ರೀತಿ ದೌರ್ಜನ್ಯ ನಡೆಸಿ, ಆಟೋ ರಿಕ್ಷಾದಲ್ಲಿ ಮನೆಗೆ ಕಳುಹಿಸಿದ್ದರು. ನನ್ನ ಮಗಳು ಸಾಯುವಾಗ 'ನನಗೆ ಸಹಿಸಲಾರದಷ್ಟು ನೋವಾಗ್ತಿದೆ ಅಮ್ಮ, ನಾನಿನ್ನು ಬದುಕಲ್ಲ' ಎಂದು ಹೇಳುತ್ತಲೇ ಪ್ರಾಣ ಬಿಟ್ಟಳು ಎಂದು ಘಟನೆಯನ್ನು ವಿವರಿಸಿದ್ದಾರೆ.