* ಹೋಟೆಲ್‌ಗಳಲ್ಲಿ ಮೆಟಲ್ ಡಿಟೆಕ್ಟರ್ ಕಡ್ಡಾಯಗೊಳಿಸಲು ಪರಿಶೀಲನೆ
* ಪ್ರತಿಷ್ಠಿತ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಹಾಡಹಗಲೇ ನಡೆದ ಚಂದ್ರಶೇಖರ ಗುರೂಜಿ ಹತ್ಯೆ
* ಸಿಸಿ ಕ್ಯಾಮೆರಾ, ಮೆಟಲ್ ಡಿಟೆಕ್ಟರ್, ಬೌನ್ಸರ್ ಸ್ಟಾರ್ ಹೋಟೆಲ್‌ಗಳಲ್ಲಿ ಅಳವಡಿಸುವುದು ಕಡ್ಡಾಯ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜು.08): ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ನಗರದ ಹೋಟೆಲ್‌ಗಳಲ್ಲಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಇಲ್ಲಿನ ಪ್ರತಿಷ್ಠಿತ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಚಂದ್ರಶೇಖರ ಗುರೂಜಿ ಹತ್ಯೆ ಹಾಡಹಗಲೇ ನಡೆದಿದೆ. ಯಾವುದೇ ಭಯವಿಲ್ಲದೇ, ಹೋಟೆಲ್‌ನೊಳಗೆ ಚಾಕು, ಚೂರಿ ಒಯ್ದು ಚುಚ್ಚಿ ಅತ್ಯಂತ ಭೀಬತ್ಸವಾಗಿ ನಡೆದ ಈ ಕೊಲೆ ಇಡೀ ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯವನ್ನೇ ತಲ್ಲಣಗೊಳಿಸಿದೆ.
ಹುಬ್ಬಳ್ಳಿ ಎಂದರೆ ವಾಣಿಜ್ಯನಗರಿ. ರಾಜ್ಯದ ಎರಡನೆಯ ದೊಡ್ಡ ನಗರ. ಇಲ್ಲಿ ಹತ್ತಾರು ಪ್ರತಿಷ್ಠಿತ ಹೋಟೆಲ್‌ಗಳಿವೆ. ಸ್ಟಾರ್ ಕೆಟಗೇರಿಯ ಹೋಟೆಲ್‌ಗಳ ಸಂಖ್ಯೆಯೂ ಹೆಚ್ಚಿದೆ. ಇಂಥ ಹೋಟೆಲ್‌ಗಳಿಗೆ ಪ್ರತಿನಿತ್ಯ ಗಣ್ಯಾತಿಗಣ್ಯರ ಆಗಮನ, ನಿರ್ಗಮನ ಸಹಜವಾಗಿರುತ್ತದೆ. ಆದರೆ ಗುರೂಜಿ ಹತ್ಯೆ ಹೋಟೆಲ್‌ಗಳಲ್ಲಿನ ಭದ್ರತೆಯನ್ನು ಪ್ರಶ್ನಿಸುವಂತಾಗಿದೆ. ಮೊನ್ನೆ ಹತ್ಯೆಯಾಗಿರುವುದು ಸ್ಟಾರ್ ಕೆಟಗೇರಿಯ ಹೋಟೆಲ್‌ನಲ್ಲಿ. ಇಂಥ ಹೋಟೆಲ್‌ನಲ್ಲೇ ಯಾರೋ ಒಂದಿಬ್ಬರು ಬರುತ್ತಾರೆ. ಏಕಾಏಕಿ ಚೂರಿಯಿಂದ ಚುಚ್ಚಿ ಕೊಲೆ ಮಾಡಿ ಅಲ್ಲಿಂದ ಓಡಿ ಹೋಗುತ್ತಾರೆ ಎಂದರೆ ಆ ಹೋಟೆಲ್‌ನ ಭದ್ರತೆಯ ಪ್ರಶ್ನೆ ಎದುರಾಗುತ್ತದೆ. ಇದೊಂದೇ ಹೋಟೆಲ್ ಅಲ್ಲ. ಎಲ್ಲ ಸ್ಟಾರ್ ಹೋಟೆಲ್‌ಗಳಲ್ಲಿ ಭದ್ರತೆ ಯಾವ ರೀತಿ ಇದೆ. ಯಾವ ರೀತಿ ಮ್ಯಾನೇಜ್ ಮಾಡಲಾಗುತ್ತಿದೆ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮಬದ್ಧವಾಗಿ ಭದ್ರತೆ ಇದೆಯೋ? ಇಲ್ಲವೋ ಎಂಬ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ.
ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಕೊಲೆಗೆ ಹೋಟೆಲ್ ಭದ್ರತಾ ವೈಫಲ್ಯ ಕಾರಣವೇ?
ಸಿಸಿ ಕ್ಯಾಮೆರಾ, ಮೆಟಲ್ ಡಿಟೆಕ್ಟರ್, ಬೌನ್ಸರ್‌ಗಳನ್ನು ಸ್ಟಾರ್ ಹೋಟೆಲ್‌ಗಳಲ್ಲಿ ಅಳವಡಿಸುವುದು ಕಡ್ಡಾಯ. ಆದರೆ ಇತ್ತೀಚಿಗೆ ಬರೀ ಸಿಸಿ ಕ್ಯಾಮೆರಾಗಳನ್ನು ಮಾತ್ರ ಅಳವಡಿಸಿರುವುದು ಎಲ್ಲೆಡೆ ಕಂಡು ಬರುತ್ತದೆ. ಬಹುತೇಕ ಹೋಟೆಲ್‌ಗಳಲ್ಲಿ ಮೆಟಲ್ ಡಿಟೆಕ್ಟರ್‌ಗಳಾಗಲಿ, ಸದೃಢ ಭದ್ರತಾ ಸಿಬ್ಬಂದಿ (ಬೌನ್ಸರ್) ನೇಮಕವೇ ಇರುವುದಿಲ್ಲ. ಭದ್ರತಾ ಸಿಬ್ಬಂದಿ ಇರುತ್ತಾರೆ. ಆದರೆ ಅವರ ಬಳಿ ಸರಿಯಾದ ಆಯುಧಗಳು ಇರುವುದಿಲ್ಲ. ಇದ್ದರೂ ಬರೀ ಬಡಿಗೆಗೆ ಸೀಮಿತ. ಅವರು ಬರೀ ವಾಹನಗಳನ್ನು ಪಾರ್ಕಿಂಗ್ ಮಾಡಿಸಲು ಮಾತ್ರ ಸೀಮಿತವಾಗಿರುತ್ತಾರೆ. ಬದಲಿಗೆ ಹೋಟೆಲ್‌ನಲ್ಲಿ ಏನಾದರೂ ಗಲಾಟೆ, ಹೊಡೆದಾಟವಾದರೆ ಅದನ್ನು ತಡೆಯುವ ಪ್ರಯತ್ನಕ್ಕೆ ಇವರು ಕೈಹಾಕುವುದಿಲ್ಲ.
ಎಲ್ಲ ಹೋಟೆಲ್‌ಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ. ಇದರೊಂದಿಗೆ ಸ್ಟಾರ್ ಕೆಟಗೇರಿ ಹೋಟೆಲ್‌ಗಳಲ್ಲಿ ಮೆಟಲ್ ಡಿಟೆಕ್ಟರ್, ಬೌನ್ಸರ್ ನೇಮಿಸುವುದು ಕಡ್ಡಾಯ. ಇದನ್ನು ಎಲ್ಲ ಹೋಟೆಲ್ ಮಾಲೀಕರು ಕ್ರಮ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಹೋಟೆಲ್ ಮಾಲೀಕರಿಗೆ ನೀಡಲಾಗುತ್ತಿದೆ. ಭದ್ರತೆ ವಿಷಯವಾಗಿ ಹೋಟೆಲ್‌ಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸಲು ಕಮಿಷನರ್ ನಿರ್ಧರಿಸಿದ್ದಾರೆ. ಇದೇ ವಿಷಯವಾಗಿಯೇ ಎಡಿಜಿಪಿ ಅಲೋಕ ಕುಮಾರ ಕೂಡ ಗುರುವಾರ ನಗರಕ್ಕೆ ಭೇಟಿ ನೀಡಿದಾಗ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿರುವುದುಂಟು ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಚಂದ್ರಶೇಖರ ಗುರೂಜಿ ಹತ್ಯೆ ಬಳಿಕ ಹೋಟೆಲ್‌ಗಳಲ್ಲಿ ಭದ್ರತೆ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿರುವುದಂತೂ ಸತ್ಯ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!