ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಬಳಿ ನಡೆದ ಘಟನೆ. ಹತ್ಯೆಗೈದ ಪಾಗಲ್ ಪ್ರೇಮಿಯನ್ನು ಬಂಧಿಸಿದ ಪೊಲೀಸರು.
ಮಂಗಳೂರು(ಜ.17): ಮನೆಯಲ್ಲಿ ಒಂಟಿಯಾಗಿದ್ದ ವೇಳೆ ದಲಿತ ಯುವತಿಯೊಬ್ಬಳ ಮನೆಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಬಳಿ ಇಂದು(ಮಂಗಳವಾರ) ನಡೆದಿದ್ದು, ಹತ್ಯೆಗೈದ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನುಗ್ಗಿದ ಯುವಕನೊಬ್ಬ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದಾನೆ. ಕೊಲೆಯಾದ ಯುವತಿಯನ್ನು 23 ವರ್ಷದ ಜಯಶ್ರೀ ಎಂದು ಗುರುತಿಸಲಾಗಿದೆ. 2 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಈಕೆ ತಾಯಿಯೊಂದಿಗೆ ಈ ಮನೆಯಲ್ಲಿ ವಾಸವಿದ್ದಳು. ಸಹೋದರ ಮಂಗಳೂರಿನಲ್ಲಿ ವ್ಯಾಸಂಗ ಮಾಡ್ತಿದ್ದ. ತಾಯಿ ತೋಟದ ಕೆಲಸಕ್ಕೆ ತೆರಳುತ್ತಿದ್ದಂತೆಯೇ ಮನೆಗೆ ನುಗ್ಗಿದ ದುಷ್ಕರ್ಮಿ ಚಾಕುವಿನಿಂದ ಮೂರು ಬಾರಿ ಇರಿದಿದ್ದಾನೆ.
Chitradurga: ಪೋಟೋ ಸ್ಟುಡಿಯೋ ಮಾಲೀಕ ಬಸವರಾಜ್ ಕೊಲೆಗೆ ಕಾರಣವೇ ಸ್ವಂತ ಅಕ್ಕ!
ಚೂರಿಯನ್ನು ಆಕೆಯ ಹೊಟ್ಟೆಯಲ್ಲಿಯೇ ಬಿಟ್ಟು ಆರೋಪಿ ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಮಲಗಿದ್ದ ಯುವತಿಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯ್ತಾದಾರೂ ಆಕೆ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ. ಘಟನೆ ಬಗ್ಗೆ ಮಾಹಿತಿ ತಿಳೀತಾ ಇದ್ದಂತೆ ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಸಾಕ್ಷ್ಯ ಕಲೆ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣಕನ್ನಡ ಎಸ್.ಪಿ ಋಷಿಕೇಶ್ ಸೋನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾಗಲ್ ಪ್ರೇಮಿ ಅರೆಸ್ಟ್!
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಳ್ಯದ ಕನಕಮಜಲು ನಿವಾಸಿ ಉಮೇಶ್ ಕೊಲೆ ಆರೋಪಿಯಾಗಿದ್ದಾನೆ. ಯುವತಿಯ ತಾಯಿ ಗಿರಿಜಾ ನೀಡಿದ ದೂರಿನ ಆಧಾರದಲ್ಲಿ ಉಮೇಶ್ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ಸಮಯದಿಂದ ಜಯಶ್ರೀಯನ್ನು ಪ್ರೀತಿಸುತ್ತಿದ್ದ ಉಮೇಶ್, ಆಗಾಗ್ಗೆ ಜಯಶ್ರೀ ಮನೆಗೂ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಇತ್ತಿಚೇಗೆ ಜಯಶ್ರೀಗೆ ಉಮೇಶ್ ನಡವಳಿಕೆ ಇಷ್ಟವಾಗದೇ ಇದ್ದು, ಕಳೆದ ವರ್ಷ ನವೆಂಬರ್ ನಿಂದ ಉಮೇಶ್ ನನ್ನ ದೂರ ಮಾಡಿದ್ದಳು. ಈ ಬಗ್ಗೆ ಅಸಮಾಧಾನಗೊಂಡಿದ್ದ ಉಮೇಶ್ ಕೃತ್ಯವೆಸಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜಯಶ್ರೀ ತಾಯಿ ದೂರು ನೀಡಿದ್ದರು. ಸದ್ಯ ಉಮೇಶ್‌ನ ವಶಕ್ಕೆ ಪಡೆದಿರುವ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.