ಮೊಬೈಲ್ ವಿಚಾರವಾಗಿ ನಡೆದ ಸಣ್ಣ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಸಾಗರದಲ್ಲಿ ನಡೆದಿದೆ. ಇದೀಗ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಮೇ.30): ಪಟ್ಟಣಕ್ಕೆ ಸಮೀಪದ ಅರಳಿಕೊಪ್ಪ ಗ್ರಾಮದ ಆಟದ ಮೈದಾನದ ಹತ್ತಿರದ ಮಾವಿನಮರವೊಂದರ ಬಳಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ. ಪಟ್ಟಣದ ನೆಹರೂನಗರದ ನಿವಾಸಿ ಸಾಜಿಲ್ (23) ಹತ್ಯೆಯಾದ ಯುವಕ. ಮೊಬೈಲ್ ಕಳೆದುಹೋದ ಘಟನೆಗೆ ಸಂಬಂಧಪಟ್ಟಂತೆ ಆರಂಭವಾದ ಘಟನೆ ಕೊಲೆಯಲ್ಲಿ ಕೊನೆಗೊಂಡಿದೆ ಎನ್ನಲಾಗಿದೆ.
ಸಾಜಿಲ್ ಬಳಿ ಸುಮಾರು 75 ಸಾವಿರ ರೂ. ಬೆಲೆಬಾಳುವ ಮೊಬೈಲ್ ಇತ್ತು. ಅದು ಎರಡು ತಿಂಗಳ ಹಿಂದೆ ಕಳೆದು ಹೋಗಿತ್ತು ಎನ್ನಲಾಗಿದೆ. ಸಾಜಿಲ್‌ನ ಕಳೆದು ಹೋದ ಮೊಬೈಲ್ ಜನ್ನತ್‌ನಗರ ನಿವಾಸಿ ಸುಕ್ಕಾ ಯಾನೆ ಸುಫೇಲ್ ಹತ್ತಿರ ಇರುವ ಬಗ್ಗೆ ಮಾಹಿತಿ ಬಂದಿದೆ. ಮೇ 27 ಬುಧವಾರ ರಾತ್ರಿ ಮೊಬೈಲ್ ವಿಷಯವಾಗಿ ಸುಫೇಲ್ ಮನೆಗೆ ಹೋಗಿ ವಿಚಾರಿಸಿದ್ದಾನೆ. ಈ ಸಂದರ್ಭದಲ್ಲಿ ಸಾಜೀಲ್ ಹಾಗೂ ಸುಫೇಲ್ ನಡುವೆ ಜಗಳ ನಡೆದಿದೆ.
ಗುರುವಾರ ಸಂಜೆ ಸಾಜಿಲ್ ಅರಳಿಕೊಪ್ಪದ ಹತ್ತಿರ ಇದ್ದಾಗ ಸುಕ್ಕಾ ಯಾನೆ ಸುಫೇಲ್, ಸಹೋದರ ಶೊಹೇಬ್ ಇತರರು ಕತ್ತಿಯಿಂದ ತಲೆ ಹಾಗೂ ಬಲಗೈ ಕೊಚ್ಚಿ ಹಾಕಿದ್ದಾರೆ. ಹತ್ತಿರದ ಆಟದ ಮೈದಾನದಲ್ಲಿ ಆಟವಾಡುತ್ತಿದ್ದ ಸಾಜಿಲ್ ಸಹೋದರ ಶಹಬಾಜ್ ಹಾಗೂ ಸ್ನೇಹಿತರಿಗೆ ಗಲಾಟೆ ನಡೆಯುತ್ತಿರುವುದು ತಿಳಿದು, ಸ್ಥಳಕ್ಕೆ ಹೋಗಿ ನೋಡಿದಾಗ ಸಾಜಿಲ್ ರಕ್ತದ ಮಡುವಿನಲ್ಲಿ ನರಳುತ್ತಾ ಬಿದ್ದಿದ್ದನು.
ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತ ಮೂವರು ಗುಣಮುಖ
ತಕ್ಷಣ ಆತನನ್ನು ಸಾಗರ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಯಿತಾದರೂ, ಮಾರ್ಗಮಧ್ಯೆ ಸಾಜಿಲ್ ಮೃತಪಟ್ಟಿದ್ದಾನೆ. ಈ ಸಂಬಂಧ ಸಾಜಿಲ್ ಸಹೋದರ ಶಹಬಾಜ್ ಗ್ರಾಮಾಂತರ ಠಾಣೆಗೆ ಸುಕ್ಕಾ ಯಾನೆ ಸುಫೇಲ್, ಶೊಹೇಬ್ ಇನ್ನಿತರರು ವಿರುದ್ದ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.