Ankola: ಉದ್ಯಮಿ ನಾಯ್ಕ ಹತ್ಯೆ ಕೇಸ್‌: ಬನ್ನಂಜೆ ಸೇರಿ 9 ಜನ ದೋಷಿ

By Girish Goudar  |  First Published Mar 31, 2022, 8:34 AM IST

*  ಕೋಕಾ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣದ ತೀರ್ಪು
*  ಏ.4ರಂದು ಶಿಕ್ಷೆಯ ಪ್ರಮಾಣ ಪ್ರಕಟ
*  7 ವರ್ಷ ಸುದೀ​ರ್ಘ ವಿಚಾ​ರ​ಣೆ 
 


ಬೆಳಗಾವಿ(ಮಾ.31):  ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ದಾಖಲಾದ ರಾಜ್ಯದ(Karnataka) ಮೊದಲ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ಉತ್ತರ ಕನ್ನಡ (Karwar) ಜಿಲ್ಲೆಯ ಅಂಕೋಲಾದ ಉದ್ಯಮಿ ಆರ್‌.ಎನ್‌. ನಾಯಕ ಹತ್ಯೆ(RN Naik Murder) ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿ ಕೋಕಾ ನ್ಯಾಯಾಲಯವು ಒಟ್ಟು 16 ಮಂದಿ ಆರೋಪಿಗಳ ಪೈಕಿ ಭೂಗತಪಾತಕಿ ಬನ್ನಂಜೆ ರಾಜಾ(Bannanje Raja) ಸೇರಿದಂತೆ ಒಂಬತ್ತು ಮಂದಿ ದೋಷಿಗಳೆಂದು ಹೇಳಿದೆ. ಮಾತ್ರವಲ್ಲ, ಏ.4ರಂದು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿ ಬುಧವಾರ ಆದೇಶ ಹೊರಡಿಸಿದೆ.

ಅಂಕೋಲಾದ(Ankola) ಉದ್ಯಮಿ ಆರ್‌.ಎನ್‌.ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 16 ಜನ ಆರೋಪಿಗಳ(Accused) ವಿರುದ್ಧ ಪೊಲೀಸರು(Police) ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಒಬ್ಬ ಮೃತಪಟ್ಟಿದ್ದು, ಒಂಬತ್ತು ಮಂದಿ ದೋಷಿಗಳಾಗಿದ್ದಾರೆ. ಅಲ್ಲದೆ, ಮೂವರು ನಿರ್ದೋಷಿಗಳೆಂದು ತೀರ್ಪು ನೀಡಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Latest Videos

undefined

ಅಂಕೋಲಾ ಉದ್ಯಮಿ ನಾಯಕ್ ಹತ್ಯೆ ಪ್ರಕರಣ: ಬನ್ನಂಜೆ ರಾಜಾ ಸೇರಿ 13 ಆರೋಪಿಗಳ ಭವಿಷ್ಯ ಇಂದು ನಿರ್ಧಾರ

ಯಾರ‍್ಯಾರು ದೋಷಿಗಳು?:

ಮೊದಲನೇ ಆರೋಪಿ ಆಕಾಶ ಉರ್ಫ್‌ ವಿವೇಕ ಉಪಾಧ್ಯಾಯ ಘಟನಾ ಸ್ಥಳದಲ್ಲಿ ನಡೆದ ಶೂಟೌಟ್‌ನಲ್ಲಿ ಮೃತಪಟ್ಟಿದ್ದಾನೆ. 2ನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ ಉರ್ಫ್‌ ಸತೀಶಕುಮಾರ ಕತ್ವಾರ್‌ ಪಟೇಲ್‌, 3ನೇ ಆರೋಪಿ ಬೆಂಗಳೂರಿನ ಅಭಿ ಉರ್ಫ್‌ ಅಂಭಾಜಿ ಭಂಡಗಾರ, 4ನೇ ಆರೋಪಿ ಉಡುಪಿಯ ಗಣೇಶ ಉರ್ಫ್‌ ಮಂಜುನಾಥ ಭಜಂತ್ರಿ, 5ನೇ ಆರೋಪಿ ಕೇರಳದ ಕೆ.ಎಂ ಇಸ್ಮಾಯಿಲ್‌, 7ನೇ ಆರೋಪಿ ಹಾಸನದ ಮಹೇಶ ಉಫ್‌ರ್‍ ಅಚ್ಚಂಗಿ ಬಸವೇಗೌಡ, 8ನೇ ಆರೋಪಿ ಕೇರಳದ ಸಂತೋಷ ಎಂ.ಬಿ. ಉರ್ಫ್‌ ಸುಳ್ಯ ಸಂತೋಷ ಬಾಳನಗೌಡ, 9ನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ ಉರ್ಫ್‌ ರಾಜೇಂದ್ರಕುಮಾರ, 10ನೇ ಆರೋಪಿ ಬೆಂಗಳೂರಿನ ಜಗದೀಶ ಚಂದ್ರರಾಜ್‌ ಅರಸ್‌ ಹಾಗೂ 12ನೇ ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ ಕಶ್ಯಪ್‌ ದೋಷಿ ಎಂದು ನ್ಯಾಯಾ​ಲ​ಯ(Court) ತೀರ್ಪು(Verdict) ನೀಡಿದೆ.

ಇನ್ನುಳಿದಂತೆ 6ನೇ ಆರೋಪಿ ಕೇರಳದ ರಬ್ದಿನ್‌ ಫಿಚೈ, 11ನೇ ಆರೋಪಿ ಬೆಂಗಳೂರಿನ ಮಹ್ಮದ್‌ ರಶದ್‌ ಶಾಬಂದ್ರಿ ಉಫ್‌ರ್‍ ಬಾಬು ಹಾಗೂ 16ನೇ ಆರೋಪಿ ಉತ್ತರ ಕನ್ನಡದ ಆನಂದ ರಮೇಶ ನಾಯಕ ದೋಷಮುಕ್ತ ಎಂದು ತಿಳಿಸಿದೆ. ಅದೇ ರೀತಿ 13ನೇ ಆರೋಪಿ ಉತ್ತರ ಕನ್ನಡ ಭಟ್ಕಳದ ನಜೀಮ್‌ ನೀಲವರ ಉರ್ಫ್‌ ಮೊಹ್ಮದ ನೀಲವರ, 14ನೇ ಆರೋಪಿ ಮಂಗಳೂರಿನ ಹಾಜಿ ಅಮಿನ್‌ ಬಾಶಾ ಉರ್ಫ್‌ ಪಾಷಾ, 15ನೇ ಆರೋಪಿ ಹಾಸನದ ಸುಲೆಮಾನ ಉಫ್‌ರ್‍ ಸಲ್ಲು ತಲೆಮರೆಸಿಕೊಂಡಿದ್ದಾರೆ.

ಏನಿದು ಪ್ರಕರಣ?:

ಉದ್ಯಮಿ ಆರ್‌.ಎನ್‌. ನಾಯಕ ಅವರನ್ನು 2013ರ ಡಿಸೆಂಬರ 21ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು 2000ರಲ್ಲಿ ರಚಿಸಿದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿ ಪಶ್ವಿಮ ವಲಯ ಪೊಲೀಸರು ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. .3 ಕೊಟಿ ಹಫ್ತಾ ನೀಡದ ಹಿನ್ನೆಲೆಯಲ್ಲಿ 2013ರ ಡಿ.21ರಂದು ಸುಪಾರಿ ನೀಡಿ ಉದ್ಯಮಿ ಆರ್‌.ಎನ್‌.ನಾಯಕ ಅವರನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೇ ನಕಲಿ ಪಾಸ್‌ಪೋರ್ಟ್‌(Duplicate Passport) ಹೊಂದಿದ ಆರೋಪದಡಿ 2015ರ ಫೆ.12ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜಾನನ್ನು ಪೊಲೀಸರು ಬಂಧಿಸಿದ್ದರು. ಬಳಿಕ 2015 ಆ.14 ರಂದು ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಭಾರತಕ್ಕೆ(India) ಕರೆತರಲಾಗಿತ್ತು. ಉದ್ಯಮಿ ನಾಯಕ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಬನ್ನಂಜೆ ರಾಜಾನನ್ನು ವಶಕ್ಕೆ ಪಡೆದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ ಪೊಲೀಸರು ಒಟ್ಟು 16 ಜನರ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಬಾರ್ ಎದುರು ರಕ್ತದ ಮಡುವಿನಲ್ಲಿ ಬಿದ್ದಿದ್ದ.. ವಿಜಯನಗರದಲ್ಲಿ ಇದೆಂಥಾ ಕೊಲೆ!

7 ವರ್ಷ ಸುದೀ​ರ್ಘ ವಿಚಾ​ರ​ಣೆ:

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಕಾ ನ್ಯಾಯಾಲಯ 7 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದೆ. ಈ ಪ್ರಕರಣ ನಡೆದ ಅವಧಿಯಲ್ಲಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಅಣ್ಣಾಮಲೈ ಹಾಗೂ ಪಶ್ಚಿಮ ವಲಯ ಐಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರತಾಪ್‌ ರೆಡ್ಡಿ (ಹಾಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ) ಅವ​ರು ಉದ್ಯಮಿ ನಾಯಕ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ 2021 ಡಿಸೆಂಬರ್‌ 28 ಮತ್ತು 29 ರಂದು ಖುದ್ದು ಹಾಜರಾಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಬೆಳಗಾವಿ(Belagavi) ಕೋಕಾ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬನ್ನಂಜೆ ರಾಜಾ ಹಾಗೂ ಆತನ ಸಹಚ​ರರ ವಿರುದ್ಧ ಆರೋಪಗಳ ಕುರಿತು ಸಾಕ್ಷ್ಯಗಳನ್ನು ಗಮನಿಸಿದ ಬೆಳಗಾವಿ ಕೋಕಾ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ ಜೋಶಿ ಅವರು 16 ಜನರ ಆರೋಪಿಗಳ ಪೈಕಿ 9 ಜನರ ವಿರುದ್ಧ ಆರೋಪಿಗಳು ಸಾಬೀತಾಗಿದ್ದು, ಅವರನ್ನು ಅಪರಾಧಿ ಎಂದು ತಿಳಿಸಿ, ಶಿಕ್ಷೆ ಪ್ರಮಾಣವನ್ನು ಏ.4ಕ್ಕೆ ಕಾಯ್ದಿರಿಸಿ ಆದೇಶ ಹೊರಡಿಸಿದರು.

ಸರ್ಕಾರದ ಪರ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ, ಹೆಚ್ಚುವರಿ ಅಭಿಯೋಜಕ ಶಿವಪ್ರಸಾದ್‌ ಆಳ್ವಾ ವಕಾಲತ್ತು ವಹಿಸಿದ್ದರು. ಬನ್ನಂಜೆ ರಾಜಾ ಪರ ವಕೀಲ ಎಂ.ಶಾಂತಾರಾಮ ಶೆಟ್ಟಿ ವಾದ ಮಂಡಿಸಿದ್ದರು.
 

click me!