ಪುತ್ತಿಲ ಪರಿವಾರ ಮುಖಂಡನ ಕೊಲೆ ಯತ್ನ: ಹಿಂದೂ ಸಂಘಟನೆಯ ದಿನೇಶ್‌ ಸಹಿತ 9 ಮಂದಿ ಬಂಧನ

By Kannadaprabha News  |  First Published Nov 11, 2023, 10:01 AM IST

ಪುತ್ತೂರು ಹೊರವಲಯದ ಮುಕ್ರಂಪಾಡಿಯಲ್ಲಿ ಪುತ್ತಿಲ ಪರಿವಾರದ ಮುಖಂಡನ ಕೊಲೆಗೆ ಹಿಂದೂ ಸಂಘಟನೆಯ ಮುಖಂಡರು ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಾಲಕರ ಸಹಿತ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಪುತ್ತೂರು(ನ.11): ಪುತ್ತೂರಿನಲ್ಲಿ ಕಲ್ಲೇಗ ಟೈಗರ್ಸ್‌ ರೂವಾರಿ ಅಕ್ಷಯ್‌ ಹತ್ಯೆ ಘಟನೆ ಮಾಸುವ ಮುನ್ನವೇ ಇನ್ನೊಂದು ಕೊಲೆ ಯತ್ನ ಘಟನೆ ಶುಕ್ರವಾರ ಹಾಡಹಗಲು ಸಂಭವಿಸಿದೆ.

ಪುತ್ತೂರು ಹೊರವಲಯದ ಮುಕ್ರಂಪಾಡಿಯಲ್ಲಿ ಪುತ್ತಿಲ ಪರಿವಾರದ ಮುಖಂಡನ ಕೊಲೆಗೆ ಹಿಂದೂ ಸಂಘಟನೆಯ ಮುಖಂಡರು ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಾಲಕರ ಸಹಿತ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತಿಲ ಪರಿವಾರದ ಮುಖಂಡ ಮನೀಶ್‌ ಕುಲಾಲ್‌ ಎಂಬವರ ಕೊಲೆಗೆ ಈ ಯತ್ನ ನಡೆದಿದೆ ಎನ್ನಲಾಗಿದ್ದು, ಹಿಂದೂ ಸಂಘಟನೆ ಮುಖಂಡ ದಿನೇಶ್‌ ಪಂಜಿಗ ಸೇರಿದಂತೆ ಸಹಚರರು ಪೊಲೀಸ್‌ ವಶದಲ್ಲಿದ್ದಾರೆ. ಮಧ್ಯಾಹ್ನ ವೇಳೆ ಮುಕ್ರಂಪಾಡಿಯ ಪುತ್ತಿಲ ಪರಿವಾರದ ಕಚೇರಿಗೆ ಆಗಮಿಸಿದ ಒಂಭತ್ತು ಮಂದಿಯ ತಂಡ ತಲವಾರು ತೋರಿಸಿ ಬಹಿರಂಗವಾಗಿಯೇ ಜೀವ ಬೆದರಿಕೆ ಹಾಕಿತ್ತು.

Tap to resize

Latest Videos

ಪುತ್ತಿಲ ಕಚೇರಿ ಬಳಿ 'ತಲವಾರು' ಹಿಡಿದು ಸಂಘರ್ಷ: ವಾಟ್ಸಪ್ ಪೋಸ್ಟ್ ವಿವಾದ!

ಈ ಘಟನೆಗೆ ಸಂಬಂಧಿಸಿ ಆರೋಪಿಗಳಾದ ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಪುತ್ತೂರು ಬೊಳ್ವಾರು ನಿವಾಸಿ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಪುತ್ತೂರು ಬನ್ನೂರು ಗ್ರಾಮದ ಮನೀಶ (23), ಪುತ್ತೂರು ಕಸಬಾ ಗ್ರಾಮದ ವಿನೀತ್ (19) ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಹಾಗೂ ಸುಳ್ಳು ವದಂತಿಗಳನ್ನು ಪ್ರಸಾರ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಪುತ್ತಿಲ ಪರಿವಾರದ ಕಚೇರಿಗೆ ತಲವಾರು ಸಮೇತ ನುಗ್ಗಿದ ತಂಡ ಅಲ್ಲಿ ಮನೀಶ್‌ ಕುಲಾಲ್‌ ಬಗ್ಗೆ ಪ್ರಶ್ನಿಸಿದೆ. ಮನೀಶ್ ಕುಲಾಲ್‌ ಅವರು ಕಾರ್ಯ ನಿಮಿತ್ತ ಹೊರಗೆ ತೆರಳಿದ್ದರು. ಈ ವಿಚಾರ ತಿಳಿದ ಮನೀಶ್ ಕುಲಾಲ್‌ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ತಲವಾರು ಸಮೇತ ಬಂಧಿಸಿದ್ದಾರೆ. ಈ ಕೊಲೆ ಯತ್ನ ಘಟನೆ ಹಿಂದೆ ಫೇಸ್ ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಕಾರಣ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಪುತ್ತೂರು: ‘ಕಲ್ಲೇಗ ಟೈಗರ್ಸ್’ ತಂಡ ಮುಖ್ಯಸ್ಥ ಯುವಕನ ಕಗ್ಗೊಲೆ

ಕಲ್ಲೇಗ ಟೈಗರ್ಸ್‌ ಅಕ್ಷಯ್‌ ಹತ್ಯೆಗೆ ಸಂಬಂಧಿಸಿ ಮನೀಶ್‌ ಕುಲಾಲ್‌ ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ ಬಗ್ಗೆ ಆರೋಪಿ ದಿನೇಶ್‌ ಪಂಜಿಗ ಮತ್ತಿತರರು ಆಕ್ಷೇಪಿಸಿದ್ದರು. ಆದರೆ ಮನೀಶ್‌ ಕುಲಾಲ್‌ ಇದಕ್ಕೆ ಸೊಪ್ಪು ಹಾಕಲಿಲ್ಲ ಎನ್ನಲಾಗಿದ್ದು, ಇದೇ ಸಿಟ್ಟಿನಲ್ಲಿ ದಿನೇಶ್‌ ಪಂಜಿಗ ತಂಡ ಕೊಲೆ ನಡೆಸಲು ಮುಂದಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪುತ್ತಿಲ ಕಚೇರಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರಲ್ಲಿ ಮತ್ತೆ ರೌಡಿಸಂ ಅಟ್ಟಹಾಸ: ಕಠಿಣ ಕ್ರಮಕ್ಕೆ ಪುತ್ತಿಲ ಆಗ್ರಹ

ಪುತ್ತೂರಲ್ಲಿ ಮತ್ತೆ ರೌಡಿಸಂ ಅಟ್ಟಹಾಸ ಮೀರುತ್ತಿರುವ ಸನ್ನಿವೇಶ ಕಾಣುತ್ತಿದೆ. ಇದಕ್ಕೆ ಕಡಿವಾಣ ಹಾಕಲೇ ಬೇಕು. ಈ ಬಗ್ಗೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪುತ್ತಿಲ ಪರಿವಾರ ನಾಯಕ ಅರುಣ್‌ ಕುಮಾರ್‌ ಪುತ್ತಿಲ ಆಗ್ರಹಿಸಿದ್ದಾರೆ.

ನಮ್ಮ ಪರಿವಾರ ಸಂಘಟನೆ ಕಚೇರಿಗೆ ಬಂದು ತಲವಾರು ತೋರಿಸಿ ಕಾರ್ಯಕರ್ತರ ಹತ್ಯೆಗೆ ತಪ್ಪು ಹೆಜ್ಜೆ ಇರಿಸಿದ್ದಾರೆ. ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ಅಮಾಯಕ ಕಾರ್ಯಕರ್ತರ ಹತ್ಯೆ ಮಾಡುವ ಮನಸ್ಥಿತಿ ವಿರುದ್ಧ ಕೇಸು ದಾಖಲಿಸಿ ಶಾಂತಿ, ಸೌಹಾರ್ದತೆಯನ್ನು ಜನತೆ ಬಯಸುತ್ತಿದೆಯೇ ಹೊರತು ರೌಡಿಸಂ ಚಟುವಚಿಕೆ ಅಲ್ಲ. ಘಟನೆ ಯಾಕೆ ನಡೆಯಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದೆ. ಕಚೇರಿಯ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಜಾಲತಾಣಗಳಲ ಸಂದೇಶಗಳಿಗೆ ತಲವಾರು, ಹತ್ಯೆ, ಶಾಂತಿ ಕದಡುವುದು ಉತ್ತರ ಅಲ್ಲ. ಸೀಮೆಯ ಅಧಿಪತಿ ಮಹಾಲಿಂಗೇಶ್ವರ ಹಾಗೂ ನ್ಯಾಯಾಂಗದಿಂದ ನಮಗೆ ನ್ಯಾಯ ಸಿಗುತ್ತದೆ ಎಂದು ಅರುಣ್‌ ಕುಮಾರ್ ಪುತ್ತಿಲ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

click me!