* ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಬೇಧಿಸಿದ ಪೊಲೀಸರು
* ಓರ್ವ ಬಾಲಾಪರಾಧಿ ಸೇರಿ ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
* ತಮಿಳುನಾಡು ಮೂಲದ ಆರೋಪಿಗಳು, ಓರ್ವ ಎಸ್ಕೇಪ್
ಬೆಂಗಳೂರು(ಆ.28): ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಐವರಲ್ಲಿ ಓರ್ವ ಬಾಲಾಪರಾಧಿಯಾಗಿದ್ದು, ಇವರ ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಡಿಜಿ ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆಗಸ್ಟ್ 24 ರಂದು ನಡೆದಿದ್ದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಿಲ್ಲ ಎಂದು ಇಡೀ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು, ಆದರೀಗ ಪ್ರಕರಣ ನಡೆದ ನಾಲ್ಕು ದಿನಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಡಿಜಿ ಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
undefined
ನನ್ನ ಸ್ನೇಹಿತೆಯನ್ನು 6 ಮಂದಿ ಪೊದೆಗೆ ಎಳೆದೊಯ್ದರು: ಮೈಸೂರು ರೇಪ್ ಘಟನೆ ಬಿಚ್ಚಿಟ್ಟ ಯುವಕ!
ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶಗಳು
* ರಾಜ್ಯಾದ್ಯಂತ ಸದ್ದು ಮಾಡಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
* ಟೆಕ್ನಿಕಲ್ ಮಾಹಿತಿ ಆಧರಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಐವರು ಆರೋಪಿಗಳಲ್ಲಿ ಓರ್ವ 17 ವರ್ಷದ ಬಾಲಾಪರಾಧಿ.
* ಐವರು ಆರೋಪಿಗಳು ತಮಿಳುನಾಡು ಮೂಲದ ತಿರ್ಪುರದವರಾಗಿದ್ದು, ಮೈಸೂರಿಗೆ ಆಗಾಗ ಕೆಲಸ, ಪಾರ್ಟಿಗೆಂದು ಆಗಮಿಸುತ್ತಿದ್ದರು.
* ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು, 7, 8ನೇ ತರಗತಿವರೆಗೆ ಓದಿದ್ದಾರೆ.
* ತಮಿಳುನಾಡಿನಲ್ಲಿ ಸದ್ದು ಮಾಡಿದ ಪ್ರಕರಣಗಳಲ್ಲಿ ಆರೋಪಿಗಳ ಭಾಗಿಯಾಗಿದ್ದು, ಕೆಲವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ.
* ಅತ್ಯಾಚಾರ ನಡೆದ ದಿನ ಐವರು ಮೂರು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಹಣ ಸಿಗದಾಗ ಅತ್ಯಾಚಾರ ನಡೆಸಿ ಎಸ್ಕೇಪ್ ಆಗಿದ್ದಾರೆ.
* ಕೆಲಸ ಮುಗಿಸಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಆರೋಪಿಗಳು.
* ಏಳು ತಂಡಗಳಲ್ಲಿ ಪೊಲೀಸರು ಕಾರ್ಯ ನಿರ್ವಹಿಸಿ ಪ್ರಕರಣ ಬೇಧಿಸಿದ್ದಾರೆ.
* ಐವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ.
* ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಿದ ಪೊಲೀಸರಿಗೆ ಐದು ಲಕ್ಷ ಘೋಷಣೆ
ಏನಿದು ಪ್ರಕರಣ?
ಮಂಗಳವಾರದಂದು ನಗರದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಮುಂಬೈ ಮೂಲದ ವಿದ್ಯಾರ್ಥಿನಿ ಮೇಲೆ ಲಲಿತಾದ್ರಿಪುರ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದೆ. ರಾತ್ರಿ 8 ಗಂಟೆ ಸುಮಾರಿನಲ್ಲಿ ಸ್ನೇಹಿತನ ಜತೆಗೆ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದ ಮೋರಿಯೊಂದರ ಮೇಲೆ ಕುಳಿತು ಮಾತನಾಡುತ್ತಿದ್ದಾಗ ಗುಡ್ಡದ ಕುರುಚಲು ಗಿಡಗಳ ಹಿಂಬದಿಯಿಂದ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಯುವತಿ ಮೇಲೆರಗಿ ಈ ದುಷ್ಕೃತ್ಯ ಎಸಗಿದ್ದಾರೆ. ಈ ವೇಳೆ ಆಕೆಯ ಸ್ನೇಹಿತ ಪ್ರತಿರೋಧ ತೋರಿಸಿದಾಗ ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ಯುವಕ ಹೇಳಿದ್ದೇನು?
‘ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ಪ್ರದೇಶ ನಾನು ವಾಕಿಂಗ್ ಮಾಡುವ ಸ್ಥಳ. ಆ.24ರಂದು ಸಂಜೆ ತರಗತಿಗಳು ಮುಗಿದ ಬಳಿಕ ಬೈಕ್‌ನಲ್ಲಿ ಸ್ನೇಹಿತೆ ಜತೆ ಹೋಗಿ ಅಲ್ಲಿ ಕುಳಿತಿದ್ದೆ. ಏಕಾಏಕಿ 6 ಜನ ಅಲ್ಲಿಗೆ ಬಂದು ದೊಣ್ಣೆಗಳಿಂದ ಹಲ್ಲೆ ಮಾಡಿದರು. ನನ್ನ ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ಗುಂಪಿನಲ್ಲಿದ್ದ ಒಬ್ಬ ಕಲ್ಲಿನಿಂದ ನನ್ನ ತಲೆಗೆ ಹೊಡೆದಿದ್ದರಿಂದ ನಾನು ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದೆ. ಪ್ರಜ್ಞೆ ಬಂದಾಗ ಅವರು ಪಕ್ಕದಲ್ಲಿ ನಿಂತಿದ್ದರು. ನನ್ನ ತಂದೆಗೆ ಕರೆ ಮಾಡಿ .3 ಲಕ್ಷ ಹಣ ತರಿಸುವಂತೆ ಒತ್ತಾಯಿಸಿದರು. ನಾನು ನನ್ನ ಸ್ನೇಹಿತೆಯ ಬಗ್ಗೆ ಕೇಳಿದೆ. ಆಗ ಪಕ್ಕದ ಪೊದೆಯಿಂದ ಆಕೆಯನ್ನು ಕರೆದುಕೊಂಡು ಬಂದರು. ಆಕೆಯನ್ನು ನನ್ನ ಪಕ್ಕದಲ್ಲಿ ಕೂರಿಸಿದರು. ಆಕೆಗೂ ಗಾಯಗಳಾಗಿತ್ತು’ ಎಂದು ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ, ಈ ಅಂಶವು ಎಷ್ಟುಸತ್ಯ ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ಸಾಬೀತಾಗಬೇಕಿದೆ.