ಯಾವ ಚಾಕುವಿನಿಂದ ಹಲ್ಲೆ ಮಾಡಿದ್ದಾನೋ ಅದೇ ಚಾಕು ತೆಗೆದುಕೊಂಡು ಮನಬಂದಂತೆ ಐದು- ಆರು ಜನರು ನರಸಿಂಹಲುಗೆ ಗಾಯಗೊಳಿಸಿದ್ದಾರೆ. ಅಲ್ಲದೇ ನಾಲ್ಕು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಲೈಟ್ ಕಂಬಕ್ಕೆ ತಲೆ ಜಜ್ಜಿ ಮನಬಂದಂತೆ ಎಳೆದಾಡಿ ನರಸಿಂಹಲುನನ್ನ ನಡುರಸ್ತೆಯಲ್ಲಿ ಹತ್ಯೆಗೈದಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು(ನ.01): ದೀಪಾವಳಿ ಬೆಳಕಿನ ಹಬ್ಬ ನಾಡಿನ ತುಂಬಾ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬವೆಂದರೆ ಎಲ್ಲರೂ ಪಟಾಕಿ ಹೊಡೆದು ಸಂಭ್ರಮಿಸುವುದು ಕಾಮನ್. ಅದೇ ರೀತಿಯಲ್ಲಿ ರಾಯಚೂರು ನಗರದ ರಾಗಿಮನಗಡ್ಡ ಬಡಾವಣೆ ಯುವಕರ ತಂಡವೊಂದು ಪಟಾಕಿ ಹೊಡೆಯಲು ಶುರು ಮಾಡಿತ್ತು. ಅದೇ ಬಡಾವಣೆಯ ನರಸಿಂಹಲು(38) ಎಂಬಾತ ಬಂದು ನಮ್ಮ ಮನೆ ಬಳಿ ಪಟಾಕಿ ಹೊಡೆಯಬೇಡಿವೆಂದು ಎಚ್ಚರಿಕೆ ನೀಡಿದ್ದನು.
undefined
ಈ ವೇಳೆ ಕೆಲ ಯುವಕರಿಗೂ ನರಸಿಂಹಲು ನಡುವೆ ಮಾತಿನ ಚಕಮಕಿ ಆಗಿದೆ. ಅಷ್ಟೇ ಅಲ್ಲದೇ ಕೋಪಗೊಂಡ ನರಸಿಂಹಲು ಕೂಡಲೇ ಮನೆಯಲ್ಲಿ ಇದ್ದ ಚಾಕು ತೆಗೆದುಕೊಂಡು ಬಂದು ಯುವಕರಿಗೆ ಬೆದರಿಸಲು ಹೋಗಿದ್ದನು. ಈ ವೇಳೆ ಯುವಕ ನರೇಶ್(22) ಮತ್ತು ಪ್ರವೀಣ್ ನರಸಿಂಹಲು ಜೊತೆಗೆ ಮಾತಿಗೆ ಇಳಿದಿದ್ದಾರೆ. ಆಗ ಮೊದಲೇ ಕೋಪಗೊಂಡಿದ್ದ ನರಸಿಂಹಲು ನರೇಶ್ ಕಾಲಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಕೂಡಲೇ ನರೇಶ್ ಇಲ್ಲಿಂದ ಓಡಿ ಹೋಗಿದ್ದಾನೆ. ಇತ್ತ ಪ್ರವೀಣ್ ಕೈ ಬೆರಳಿಗೆ ಚಾಕು ಹಾಕಿದ್ದಾನೆ. ಕಾಲಿಗೂ ಬಲವಾಗಿ ಚಾಕು ಹಾಕಿದರಿಂದ ಪ್ರವೀಣ್ ಕುಸಿದು ನೆಲಕ್ಕೆ ಬಿದ್ದಿದ್ದಾನೆ.
ಯುವಕರ ಗ್ಯಾಂಗ್ ಕರೆದುಕೊಂಡು ಬಂದ ನರೇಶ್:
ನರಸಿಂಹಲು ಮಾಡಿದ ಹಲ್ಲೆಯಿಂದ ಆಕ್ರೋಶಗೊಂಡ ನರೇಶ್ ಕೂಡಲೇ ತನ್ನ ಸ್ನೇಹಿತರ ಗ್ಯಾಂಗ್ ಕರೆದುಕೊಂಡು ಬಂದಿದ್ದಾನೆ. ಮನೆಯಲ್ಲಿ ಇದ್ದ ನರಸಿಂಹಲುನನ್ನ ರಸ್ತೆಗೆ ಎಳೆದು ತಂದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಯಾವ ಚಾಕುವಿನಿಂದ ಹಲ್ಲೆ ಮಾಡಿದ್ದಾನೋ ಅದೇ ಚಾಕು ತೆಗೆದುಕೊಂಡು ಮನಬಂದಂತೆ ಐದು- ಆರು ಜನರು ನರಸಿಂಹಲುಗೆ ಗಾಯಗೊಳಿಸಿದ್ದಾರೆ. ಅಲ್ಲದೇ ನಾಲ್ಕು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಲೈಟ್ ಕಂಬಕ್ಕೆ ತಲೆ ಜಜ್ಜಿ ಮನಬಂದಂತೆ ಎಳೆದಾಡಿ ನರಸಿಂಹಲುನನ್ನ ನಡುರಸ್ತೆಯಲ್ಲಿ ಹತ್ಯೆಗೈದಿದ್ದಾರೆ.
ಇಷ್ಟು ಗಲಾಟೆ ನಡೆದರೂ ಯಾರೊಬ್ಬರು ಸಹ ಗಲಾಟೆ ಬಿಡಿಸಲು ಮುಂದಾಗಲಿಲ್ಲ. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪಶ್ಚಿಮ ಠಾಣೆಯ ಪಿಎಸ್ ಐ ಮಂಜುನಾಥ ಗಾಯಗೊಂಡ ನರೇಶ್ ಮತ್ತು ಪ್ರವೀಣ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಕಡೆ ಮೃತದೇಹ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗಲಾಟೆಗೆ ಸಂಬಂಧಿಸಿದಂತೆ ಆರು ಜನರನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.