ರಣಜಿ ಟ್ರೋಫಿ: ಸೆಮೀಸ್‌, ಫೈನಲ್‌ಗೆ ಡಿಆರ್‌ಎಸ್‌ ಬಳಕೆ!

By Kannadaprabha NewsFirst Published Feb 26, 2020, 10:18 AM IST
Highlights

ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಡಿಆರ್‌ಎಸ್‌ ಬಳಸಲು ಬಿಸಿಸಿಐ ಅನುಮತಿ ನೀಡಿದೆ. ಕಳೆದ ಆವೃತ್ತಿಯಲ್ಲಾದ ಎಡವಟ್ಟುಗಳಿಂದ ಬಿಸಿಸಿಐ ಪಾಠ ಕಲಿತಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ರಾಜ್‌ಕೋಟ್‌(ಫೆ.26): ನೂರಾರು ಪಂದ್ಯಗಳ ಫಲಿತಾಂಶವೇ ಬುಡಮೇಲಾಗುವಂತೆ ಮಾಡಿದ ಡಿಆರ್‌ಎಸ್‌ ಪದ್ಧತಿಯನ್ನು ಕಡೆಗೂ ರಣಜಿ ಪಂದ್ಯಗಳಿಗೆ ಅಳವಡಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ದಾಕ್ಷಿಣ್ಯದ ನಿರ್ಧಾರ ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ರಣಜಿ ಪಂದ್ಯದಲ್ಲಿ ಡಿಆರ್‌ಎಸ್‌ ಪದ್ಧತಿ ಬಳಕೆ ಮಾಡಲಾಗುತ್ತಿದ್ದು, ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳಲ್ಲಿ ಡಿಆರ್‌ಎಸ್‌ ಬಳಕೆಗೆ ಬಿಸಿಸಿಐ ಗ್ರೀನ್‌ಸಿಗ್ನಲ್‌ ನೀಡಿದೆ.

Limited DRS to be introduced in the semifinals with (only) slow-mo cam, spin vision and pitch map. Each team will be offered four opportunities per innings to refer a decision. https://t.co/ceLsBdoFw6

— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka)

ಶನಿವಾರ ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ಕರ್ನಾಟಕ ಮತ್ತು ಪಶ್ವಿಮ ಬಂಗಾಳ ನಡುವಿನ ರಣಜಿ ಸೆಮಿಫೈನಲ್‌ ಹಾಗೂ ರಾಜ್‌ಕೋಟ್‌ನ ಖಂಡೇರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸೌರಾಷ್ಟ್ರ ಮತ್ತು ಗುಜರಾತ್‌ ನಡುವಿನ ಸೆಮಿಫೈನಲ್‌ ಪಂದ್ಯಗಳಲ್ಲಿ ಡಿಆರ್‌ಎಸ್‌ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಕುರಿತು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ರಣಜಿ ಟ್ರೋಫಿ: ಸೆಮೀಸ್ ಕಾದಾಟಕ್ಕೆ ಕೆ.ಎಲ್ ರಾಹುಲ್ ಬಲ

ಕಳೆದ ವಾರವಷ್ಟೇ ಡಿಆರ್‌ಎಸ್‌ ಅಳವಡಿಕೆ ಬಗ್ಗೆ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಸಬಾ ಕರೀಮ್‌ ಅವರು ಸುಳಿವು ನೀಡಿದ್ದರು. ನಾಕೌಟ್‌ ಹಂತದ ಪಂದ್ಯಗಳನ್ನು ಹೊರತು ಪಡಿಸಿ ಉಳಿದ ಪಂದ್ಯಗಳಿಗೆ ಅಳವಡಿಸುವ ಬಗ್ಗೆ ಚರ್ಚೆಯ ಹಂತದಲ್ಲಿದ್ದು, ಇನ್ನಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದಿದ್ದರು. ಕಡೆಗೂ ಬಿಸಿಸಿಐ ಡಿಆರ್‌ಎಸ್‌ ಅಳವಡಿಕೆಗೆ ಗ್ರೀನ್‌ಸಿಗ್ನಲ್‌ ನೀಡಿದೆ. ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಜಯದೇವ್‌ ಶಾ ಅವರು ಬಿಸಿಸಿಐನ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಏನಿದು ಡಿಆರ್‌ಎಸ್‌? ಅಳವಡಿಕೆ ಹೇಗೆ?

ಕ್ರಿಕೆಟ್‌ ಪಂದ್ಯದಲ್ಲಿ ಅಂಪೈರ್‌ ನೀಡಿದ ಯಾವುದೇ ನಿರ್ಧಾರದ ಬಗ್ಗೆ ಅನುಮಾನ ಇದ್ದಲ್ಲಿ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಪದ್ಧತಿಯೇ ಡಿಆರ್‌ಎಸ್‌. ಸೂಕ್ತ ತಂತ್ರಜ್ಞಾನದ ಸಹಾಯದಿಂದ ಅಂಪೈರ್‌ ನಿರ್ಣಯವನ್ನು ಮರು ಪರಿಶೀಲನೆಗೊಳಪಡಿಸಿ ಥರ್ಡ್‌ ಅಂಪೈರ್‌ ಮತ್ತೊಮ್ಮೆ ಫಲಿತಾಂಶ ಪ್ರಕಟಿಸುತ್ತಾರೆ. ಈ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ಗೆ ಮಹತ್ವದ್ದಾಗುತ್ತಿರುವ ಕಾರಣ ರಣಜಿಗೂ ಅಳವಡಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಂತಿದೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಳಕೆ ಮಾಡಿಕೊಳ್ಳುವ ರೀತಿಯಲ್ಲೇ ರಣಜಿ ಪಂದ್ಯದಲ್ಲೂ ಇದನ್ನು ಅಳವಡಿಸಿಕೊಳ್ಳಲಾಗುತ್ತದೆ. ಇನಿಂಗ್ಸ್‌ವೊಂದರಲ್ಲಿ ಒಂದು ತಂಡ ಗರಿಷ್ಠ 4 ಬಾರಿ ಈ ಪದ್ಧತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅದಕ್ಕಿಂತ ಹೆಚ್ಚು ಬಾರಿ ಬಳಕೆಗೆ ಅವಕಾಶ ಇರುವುದಿಲ್ಲ.

ಡಿಆರ್‌ಎಸ್‌ ಬಳಕೆ ಚರ್ಚೆಗೆ ನಾಂದಿಯಾಗಿದ್ದ ಸೌರಾಷ್ಟ್ರ- ಕರ್ನಾಟಕ ಸೆಮಿಫೈನಲ್‌!

2019ನೇ ಸಾಲಿನ ರಣಜಿ ಸೆಮಿಫೈನಲ್‌ ಪಂದ್ಯದ ವೇಳೆ ಡಿಆರ್‌ಎಸ್‌ ಬಳಕೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಕರ್ನಾಟಕ ಮತ್ತು ಸೌರಾಷ್ಟ್ರ ನಡುವೆ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಪಂದ್ಯವನ್ನು ಅಂಪೈರ್‌ ತಪ್ಪು ನಿರ್ಣಯದಿಂದಾಗಿ ಕರ್ನಾಟಕ ಅಂತಿಮ ಹಂತದಲ್ಲಿ ಕೈಚೆಲ್ಲಬೇಕಾಯಿತು. ವಿನಯ್‌ಕುಮಾರ್‌ ನೇತೃತ್ವದ ಕರ್ನಾಟಕ ತಂಡದ ಸೋಲಿಗೆ ಈ ತಪ್ಪು ನಿರ್ಣಯ ಪ್ರಮುಖ ಕಾರಣವೆನಿಸಿತು. ಸೌರಾಷ್ಟ್ರ ಪರ 2ನೇ ಇನಿಂಗ್ಸ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರ್‌ ಅವರು ಔಟಾಗಿದ್ದರೂ ಅಂಪೈರ್‌ ಔಟ್‌ ಕೊಡದೇ ಇರುವುದು ಪಂದ್ಯದ ದಿಕ್ಕನ್ನೇ ಬದಲಾಯಿಸಿತ್ತು. ಪೂಜಾರ ಶತಕ ಸೌರಾಷ್ಟ್ರ ಫೈನಲ್‌ ಪ್ರವೇಶಿಸುವಂತೆ ಮಾಡಿತು. ಆಗ ಡಿಆರ್‌ಎಸ್‌ ಬಳಕೆ ಕುರಿತಾದ ಚರ್ಚೆ ಮುನ್ನಲೆಗೆ ಬಂದಿತ್ತು. ಅದರ ಪರಿಣಾಮ ಇಂದು ಪ್ರಥಮದರ್ಜೆ ಕ್ರಿಕೆಟ್‌ಗೂ ಡಿಆರ್‌ಎಸ್‌ ಅಳವಡಿಕೆ ಸಾಧ್ಯವಾಗುತ್ತಿದೆ.
 

click me!
Last Updated Feb 26, 2020, 10:18 AM IST
click me!