ಸುರಕ್ಷತಾ ಕಿಟ್ ನೀಡಲು ರಾಮುಲು ಮೀನಮೇಷ: ಚಿಕಿತ್ಸೆ, ತಪಾಸಣೆಗೆ ಬರಲು ವೈದ್ಯರ ಹಿಂದೇಟು!

By Kannadaprabha NewsFirst Published Mar 31, 2020, 7:37 AM IST
Highlights

ಸುರಕ್ಷತಾ ಕಿಟ್‌ಗಳಿದ್ದರೂ ವೈದ್ಯರಿಗೆ ನೀಡದ ಸರ್ಕಾರ?| ಕೊರೋನಾ ಚಿಕಿತ್ಸೆ ನೀಡುವವರಿಗೆ ಸಿಗದ ಪಿಪಿಇ ಪರಿಕರ| ಹೀಗಾಗಿ, ಚಿಕಿತ್ಸೆ, ತಪಾಸಣೆಗೆ ಬರಲು ವೈದ್ಯರ ಹಿಂದೇಟು|  ರಾಜ್ಯ ಆರೋಗ್ಯ ಇಲಾಖೆಯಲ್ಲಿ ಈಗಾಗಲೇ ಶೇ.30 ಸಿಬ್ಬಂದಿ ಕೊರತೆ|  ವೈಯಕ್ತಿಕ ಸುರಕ್ಷಾ ಪರಿಕರ (ಪಿಪಿಇ) ಇಲ್ಲದೆ ಇತ್ತಷ್ಟುವೈದ್ಯರ ಹಿಂಜರಿಕೆ| ವೈದ್ಯರಿಗೆ ಪಿಪಿಇ ಕಿಟ್‌ ನೀಡಿ ಮಾನಸಿಕ ಸ್ಥೈರ್ಯ ತುಂಬದಿದ್ದರೆ ಕಷ್ಟ| ವೈದ್ಯರು ಅಪಾಯಕ್ಕೆ ಸಿಲುಕಿದರೆ ಜನರನ್ನು ಪಾರು ಮಾಡೋದು ಯಾರು?| ಹೀಗಾಗಿ, ದಾಸ್ತಾನು ಇದೆ ಎನ್ನಲಾಗಿರುವ ಪಿಪಿಇ ಕಿಟ್‌ ವಿತರಣೆಗೆ ಒತ್ತಾಯ

 

ಬೆಂಗಳೂರು(ಮಾ.31): ಕೊರೋನಾ ಸೋಂಕು ನಿಯಂತ್ರಣಕ್ಕೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಈಗಾಗಲೇ ಆರೋಗ್ಯ ಇಲಾಖೆ ಪರದಾಡುತ್ತಿದೆ. ಹೀಗಿದ್ದಾಗಲೂ ಕೊರೋನಾ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ವೈಯಕ್ತಿಕ ಸುರಕ್ಷಾ ಪರಿಕರ (ಪಿಪಿಇ) ಒದಗಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕೊರೋನಾ ಸೋಂಕು ಅಪಾಯಕಾರಿಯಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ. ಹೀಗಿದ್ದರೂ ಇಂತಹ ಭಯಾನಕ ಸೋಂಕಿಗೆ ಗುರಿಯಾಗಿರುವ ಸೋಂಕಿತರ ಆರೋಗ್ಯಕ್ಕಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪ್ರಯೋಗಾಲಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೊರೋನಾ ಸೋಂಕಿತರು ಹಾಗೂ ಶಂಕಿತರನ್ನು ಉಪಚರಿಸುವ ವೈದ್ಯರಿಗೆ ಇನ್ನೂ ಪಿಪಿಇ ಕಿಟ್‌ ವಿತರಣೆ ಮಾಡಿಲ್ಲ. ಹೀಗಾಗಿ ವೈದ್ಯರು ಸೇವೆಗೆ ಹಾಜರಾಗಲು ಹೆದರುವಂತಾಗಿದೆ. ಪ್ರಸ್ತುತ ಶೇ.30ರಷ್ಟುಸಿಬ್ಬಂದಿ ಕೊರತೆಯಿರುವ ಇಲಾಖೆಯಲ್ಲಿ ವೈದ್ಯರ ನಿರ್ಲಕ್ಷ್ಯ ಮಾಡುವುದು ಸಲ್ಲದು ಎಂದು ವೈದ್ಯರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಈ ಬಗ್ಗೆ ಭಾನುವಾರ ಕೊರೋನಾ ಕುರಿತು ನಡೆದ ಸರ್ವಪಕ್ಷಗಳ ಸಭೆಯಲ್ಲೂ ವಿರೋಧಪಕ್ಷಗಳ ನಾಯಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್‌ ಒದಗಿಸಿ ಮಾನಸಿಕ ಸ್ಥೈರ್ಯ ತುಂಬದಿದ್ದರೆ ತೀವ್ರ ಸಂಕಷ್ಟಎದುರಿಸಬೇಕಾಗುತ್ತದೆ. ಈಗಾಗಲೇ ಐದು ಮಂದಿ ವೈದ್ಯರು ಸೋಂಕು ಶಂಕೆಯಿಂದ ಕ್ವಾರಂಟೈನ್‌ ಆಗಿದ್ದಾರೆ. ಒಂದು ವೇಳೆ ವೈದ್ಯರು ಅಪಾಯಕ್ಕೆ ಸಿಲುಕಿದರೆ ಮುಂದಿನ ಅಪಾಯದ ದಿನಗಳನ್ನು ಎದುರಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕೂಡಲೇ ಪಿಪಿಇ ಕಿಟ್‌ಗಳನ್ನು ಕೊರೋನಾ ಸಂಬಂಧಿತ ಸೇವೆ ನೀಡುತ್ತಿರುವ ಎಲ್ಲಾ ವೈದ್ಯಕೀಯ ಸಿಬ್ಬಂದಿಗೂ ಒದಗಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ದಾಸ್ತಾನು ಇದ್ದರೂ ನೀಡುತ್ತಿಲ್ಲ?:

ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ, ಜಯನಗರ ಜನರಲ್‌ ಆಸ್ಪತ್ರೆ ಸೇರಿದಂತೆ ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಬೆರಳೆಣಿಕೆಯ ಆಸ್ಪತ್ರೆಗಳ ವೈದ್ಯರಿಗೆ ಮಾತ್ರ ಪಿಪಿಇ ಕಿಟ್‌ ನೀಡುತ್ತಿದ್ದಾರೆ. ಉಳಿದಂತೆ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲೂ ಸೋಂಕಿತರ ಪರೀಕ್ಷೆ ನಡೆಸುವವರಿಗೆ ಪಿಪಿಇ ಕಿಟ್‌ ನೀಡಿಲ್ಲ. ಇನ್ನು ಸೋಂಕಿತರನ್ನು ಪ್ರತ್ಯೇಕಗೊಳಿಸಿರುವ ಬಹುತೇಕ ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೂ ಅಗತ್ಯ ಪ್ರಮಾಣದ ಪಿಪಿಇ ಕಿಟ್‌ ವಿತರಿಸುತ್ತಿಲ್ಲ. ಆರೋಗ್ಯ ಇಲಾಖೆ ಸಚಿವರಾದ ಬಿ.ಶ್ರೀರಾಮುಲು ಮತ್ತು ಹಿರಿಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಪಿಪಿಇ ಕಿಟ್‌ಗಳ ಲಭ್ಯತೆ ಇದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಿನ ಅನಾಹುತದ ದಿನಗಳನ್ನು ಎದುರಿಸಲು ಶೇಖರಣೆ ಮಾಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯು ವೈದ್ಯರ ಕೊರತೆಯಿಂದ ಬಳಲುತ್ತಿದ್ದು, ಸೂಕ್ತ ರಕ್ಷಣೆ ನೀಡದಿದ್ದರೆ ಹಾಲಿ ಇರುವ ವೈದ್ಯರೂ ಸೇವೆಯಿಂದ ಹಿಂಜರಿಯುವ ಅಪಾಯ ಇದೆ ಎಂದು ಹೇಳಲಾಗುತ್ತಿದೆ.

click me!