ಬೆಳೆದ ಬೆಳೆಗಿಲ್ಲ ಮಾರುಕಟ್ಟೆ: ತೀವ್ರ ಸಂಕಷ್ಟದಲ್ಲಿ ಸಿಲುಕಿದ ಜಿಲ್ಲೆಯ ರೈತರು| ಭಾರತ ಲಾಕ್‌ಡೌನ್‌ನಿಂದ ತತ್ತರಿಸಿದ ಕೃಷಿ ವಲಯ| ಸರ್ಕಾರವೇ ಮಧ್ಯೆಸ್ಥಿಕೆ ವಹಿಸಿ ರೈತರ ಉತ್ಪನ್ನಗಳನ್ನು ಖರೀದಿ ಮಾಡಿ, ಮಾರಾಟ ಮಾಡುವ ವ್ಯವಸ್ಥೆಯನ್ನು ರೂಪಿಸಬೇಕು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಏ.02): ಭಾರತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೃಷಿ ವಲಯ ತತ್ತರಿಸಿದ್ದು, ಕೃಷಿ ಉತ್ಪನ್ನಗಳನ್ನು ಸಾಗಿಸಲಾಗದೇ ಮತ್ತು ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಟಾವಿಗೆ ಬಂದ ಬಾಳೆಯನ್ನು ಯಾರೂ ಕೇಳುತ್ತಿಲ್ಲ. ನುಗ್ಗೆ, ಬದನೆ, ಟೊಮೆಟೊ, ಈರುಳ್ಳಿ ಸೇರಿದಂತೆ ರೈತರ ಉತ್ಪನ್ನಗಳನ್ನು ಕೇಳುವವರೇ ಇಲ್ಲ. ಇನ್ನು ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಧಾನ್ಯಗಳ ದರ ಅರ್ಧಕರ್ಧ ಕುಸಿದಿದೆ. ಸರ್ಕಾರ ಕೃಷಿ ಉತ್ಪನ್ನಗಳನ್ನು ಸಾಗಿಸಲು ಅನುಮತಿ ನೀಡಿದ್ದರೂ ಲಾರಿಯವರು ಸಾಗಿಸಲು ಮುಂದೆ ಬರುತ್ತಿಲ್ಲ. ಹೇಗೋ ತೆಗೆದುಕೊಂಡ ಹೋದರು ಅಲ್ಲಿ ಮಾರುಕಟ್ಟೆ ಇಲ್ಲ. ಹೀಗಾಗಿ ರೈತ ಸಮುದಾಯ ತತ್ತರಿಸಿ ಹೋಗಿದೆ.
ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದ್ದೇವೆ ಆದರೆ, ಮಾರುಕಟ್ಟೆಯೇ ಬಂದ್ ಆಗಿರುವುದನ್ನು ನಾವು ನೋಡಿಯೇ ಇಲ್ಲ. ತಂದಿರುವ ಉತ್ಪನ್ನವನ್ನು ಮಾರುಕಟ್ಟೆಯಲ್ಲಿಯೇ ಕೇಳುವವರೇ ಇಲ್ಲ ಎಂದರೇ ರೈತರು ಬಚಾವ್ ಆಗುವುದು ಹೇಗೆ? ಎನ್ನುತ್ತಾನೆ ರೈತ ಸಿದ್ದಪ್ಪ ಯಡ್ರಮ್ಮನಳ್ಳಿ.
ಪರ್ಯಾಯ ಮಾರ್ಗ:
ಕೊರೋನಾದಿಂದ ಪಾರಾಗಲು ರೈತರು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ತಮ್ಮ ಹೊಲದಲ್ಲಿ ಬೆಳೆದಿರುವ ತರಕಾರಿ, ಹಣ್ಣ ಸೇರಿದಂತೆ ಮೊದಲಾದವುಗಳ ಮಾಹಿತಿಯನ್ನು ವಾಟ್ಸಪ್ ಮೂಲಕ ಶೇರ್ ಮಾಡುತ್ತಾರೆ. ಬೇಕಾದರೇ ನಿಮ್ಮ ಮನೆಗೇ ಪೂರೈಕೆ ಮಾಡುತ್ತೇವೆ ಎಂದು ಅದಕ್ಕೆ ದರ ನಿಗದಿ ಮಾಡುತ್ತಾರೆ. ಈ ಮೂಲಕ ಬಂದಿರುವ ಸಂಕಷ್ಟದಿಂದ ಪಾರಾಗಲು ರೈತರು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದು ನಿರೀಕ್ಷಿತ ಪ್ರಮಾಣದಲ್ಲಿ ವರ್ಕೌಟ್ ಆಗುತ್ತಿಲ್ಲ. ಅಲ್ವಸ್ವಲ್ಪ ಬೆಳೆದ ರೈತರು ಈ ರೀತಿ ಮಾರಾಟ ಮಾಡಬಹುದಾದರೂ ಹೊಲದಲ್ಲಿ ಬೆಳೆದಿದ್ದೆಲ್ಲವನ್ನು ಮಾರಾಟ ಮಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ.
ಕಟಾವು ಮುಂದೂಡಿಕೆ:
ಈ ನಡುವೆ ರೈತರು ಕಟಾವು ಮಾಡುವುದನ್ನೇ ಮುಂದೂಡುತ್ತಿದ್ದಾರೆ. ಇದು ವಾರಕಾಲ ನಡೆಯಬಹುದು, ಆದರೆ, ಬಹಳ ದಿನಗಳ ಕಾಲ ಆದರೆ ಸಮಸ್ಯೆಯಾಗುತ್ತದೆ. ಕಟಾವು ಮುಂದೂಡುವುದು ಒಂದು ತಂತ್ರವಾದರೂ ಇದಕ್ಕೊಂದು ಸಮಯ ಅಂತ ಇರುವುದರಿಂದ ಅಲ್ಪಸ್ವಲ್ಪ ಅನುಕೂಲವಾಗುತ್ತದೆ ಎನ್ನುತ್ತಾರೆ.
ಲಾಕ್‌ಡೌನ್: ಪುಟ್ಟ ಮಕ್ಕಳನ್ನ ನೋಡಲು 400 ಕಿ.ಮೀ. ಕಾಲ್ನಡಿಗೆಯಲ್ಲಿ ಹೊರಟ ದಂಪತಿ
ಈಗಾಗಲೇ ರೈತರು ತಮ್ಮ ಬೆಳೆಯನ್ನು ಮಾರುಕಟ್ಟೆಇಲ್ಲದಿರುವುದಕ್ಕೆ ಹರಗುತ್ತಿದ್ದಾರೆ. ಕುದರಿಮೋತಿ ಗ್ರಾಮದ ರೈತರು ಅನೇಕರು ಈಗಗಾಲೇ ಬದನೇ ಬೆಳೆ, ಚವಳಿ ಕಾಯಿ ಸೇರಿದಂತೆ ಮೊದಲಾದ ತರಕಾರಿಯನ್ನು ಹರಗಿಬಿಟ್ಟಿದ್ದಾರೆ.
ಸರ್ಕಾರ ಮಧ್ಯೆ ಪ್ರವೇಶಿಸಲಿ
ಸರ್ಕಾರವೇ ಮಧ್ಯೆಸ್ಥಿಕೆ ವಹಿಸಿ ರೈತರ ಉತ್ಪನ್ನಗಳನ್ನು ಖರೀದಿ ಮಾಡಿ, ಮಾರಾಟ ಮಾಡುವ ವ್ಯವಸ್ಥೆಯನ್ನು ರೂಪಿಸಬೇಕು. ಮಾರುಕಟ್ಟೆಯ ದರವನ್ನೇ ರೈತರಿಗೆ ನೀಡಿದರೂ ಆಗುತ್ತದೆ. ಇಲ್ಲವೇ ಮಾರುಕಟ್ಟೆಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಸರ್ಕಾರವೇ ಮಾಡಬೇಕು. ಅಲ್ಲಿ ರೈತರು ಮಾರಾಟ ಮಾಡಿಕೊಂಡು ಹೋಗುವುದಕ್ಕಾದರೂ ವ್ಯವಸ್ಥೆ ಮಾಡಬೇಕು ಎನ್ನುವ ಆಗ್ರವೂ ಕೇಳಿ ಬರುತ್ತದೆ.