ಉಡುಪಿ ಜಿಲ್ಲೆಯೇ ಹೋಂ ಕ್ವಾರಂಟೈನ್‌ ತೆಕ್ಕೆ​ಗೆ!

By Kannadaprabha NewsFirst Published Mar 25, 2020, 9:46 AM IST
Highlights

ಉಡುಪಿ ಜಿಲ್ಲೆ ಮಂಗಳವಾರ ಬಹುತೇಕ ಹೋಮ್‌ ಕ್ವಾರಂಟೈನ್‌ ಆಗಿತ್ತು. ಅಲ್ಲಲ್ಲಿ ಕೆಲವು ಘಟನೆಗಳನ್ನು ಬಿಟ್ಟರೆ, ಜಿಲ್ಲೆಯ ಜನರೆಲ್ಲರೂ ಮನೆಯಲ್ಲಿಯೇ ಇದ್ದರು. ಕೆಲವು ಕಡೆಗಳಲ್ಲಿ ಹೊರಗೆ ಓಡಾಡುತ್ತಿದ್ದವರನ್ನು ಪೊಲೀಸರು ಲಾಠಿ ತೋರಿಸಿ ಮನೆಗೆ ಕಳುಹಿಸಿದರು, ಲಾಭದಾಸೆಗೆ ಅಂಗಡಿ ತೆರೆದು ಕೂತಿದ್ದವರನ್ನು ಜಿಲ್ಲಾಧಿಕಾರಿ ಕೇಸು ಹಾಕುವುದಾಗಿ ಬೆದರಿಸಿ ಮುಚ್ಚಿದರು.

ಉಡು​ಪಿ(ಮಾ.25): ಉಡುಪಿ ಜಿಲ್ಲೆ ಮಂಗಳವಾರ ಬಹುತೇಕ ಹೋಮ್‌ ಕ್ವಾರಂಟೈನ್‌ ಆಗಿತ್ತು. ಅಲ್ಲಲ್ಲಿ ಕೆಲವು ಘಟನೆಗಳನ್ನು ಬಿಟ್ಟರೆ, ಜಿಲ್ಲೆಯ ಜನರೆಲ್ಲರೂ ಮನೆಯಲ್ಲಿಯೇ ಇದ್ದರು. ಕೆಲವು ಕಡೆಗಳಲ್ಲಿ ಹೊರಗೆ ಓಡಾಡುತ್ತಿದ್ದವರನ್ನು ಪೊಲೀಸರು ಲಾಠಿ ತೋರಿಸಿ ಮನೆಗೆ ಕಳುಹಿಸಿದರು, ಲಾಭದಾಸೆಗೆ ಅಂಗಡಿ ತೆರೆದು ಕೂತಿದ್ದವರನ್ನು ಜಿಲ್ಲಾಧಿಕಾರಿ ಕೇಸು ಹಾಕುವುದಾಗಿ ಬೆದರಿಸಿ ಮುಚ್ಚಿದರು.

ಖಾಸಗಿ-ಸರ್ಕಾರಿ ಬಸ್‌ಗಳನ್ನಂತೂ ಸಂಪೂರ್ಣ ಲಾಕ್‌ ಮಾಡಿ ನಿಲ್ಲಿಸಲಾಗಿತ್ತು. ಟ್ಯಾಕ್ಸಿಗಳೂ ಕೂಡ ರಸ್ತೆಗಿಳಿಯಲಿಲ್ಲ. ಆದರೆ ನಮಗೆ ಕೊರೋನ ಬರುವುದಿಲ್ಲ ಎಂಬ ಭಂಡ ಧೈರ್ಯ​ದಿಂದ ಕೆಲವು ಆಟೋಗಳು ಓಡಾಡುತ್ತಿದ್ದವು, ಅವುಗಳನ್ನು ಪೊಲೀಸರು ಹಿಂದಕ್ಕೆ ಕಳುಹಿಸುತ್ತಿದ್ದರು.

ಮಾರು​ಕ​ಟ್ಟೆ​ಯಲ್ಲಿ ದಟ್ಟ​ಣೆ:

ಉಡುಪಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ಬೆಳಗ್ಗೆ ಜನಸಂದಣಿ ಇತ್ತು. ಬಹುತೇಕ ಜನರು ಒಂದು ವಾರ, ತಿಂಗಳಿಗಾಗುವಷ್ಟುತರಕಾರಿಗಳನ್ನು ತಂತಮ್ಮ ವಾಹನಗಳಲ್ಲಿ ಸಾಗಿಸುತ್ತಿದ್ದರು. ಕೊರೋನಾ ನೆಪದಲ್ಲಿ ವ್ಯಾಪಾರಿಗಳು ತರಕಾರಿ ಹಣ್ಣುಗಳ ಬೆಲೆ ಏರಿಸಿ ಒಂದಷ್ಟುಲಾಭವನ್ನೂ ಮಾಡಲೆತ್ನಿಸಿದರು. ಜಿಲ್ಲಾಧಿಕಾರಿ ಅಲ್ಲಿಗೂ ರೈಡ್‌ ಮಾಡಿ ಅಂಗಡಿಗಳನ್ನು ಮುಚ್ಚಿಸಿದರು.

ಸೋಮವಾರ ನಿಷೇಧಾಜ್ಞ್ಯೆನ್ನೂ ಲೆಕ್ಕಿ​ಸದೆ ತೆರೆದಿದ್ದ ಚಪ್ಪಲಿ ಅಂಗಡಿ, ಮೊಬೈಲ್‌ ಶಾಪ್‌, ಬೇಕರಿಗಳು ಮಂಗಳವಾರ ಕೇಸಿಗೆ ಹೆದರಿ ಮುಚ್ಚಿದ್ದವು. ಚಿನ್ನಾಭರಣ ಮಳಿಗೆ, ಬಟ್ಟೆಯಂಗಡಿಗಳು, ಫ್ಯಾಮಿಲಿ ಬಜಾರ್‌ಗಳು ಕೂಡಾ ಮುಚ್ಚಿದ್ದವು.

ಜನರಿಗೆ ಅತಿ ಅಗತ್ಯವಾದ ಆಹಾರ-ಊಟದ ಹೊಟೇಲುಗಳನ್ನು ತೆರೆದು ಪಾರ್ಸೆಲುಗಳನ್ನಷ್ಟೇ ನೀಡಬಹುದು ಎಂಬ ರಿಯಾಯತಿ ಇದ್ದರೂ ಬಹುತೇಕ ಹೊಟೇಲುಗಳನ್ನು ಬಾಗಿಲು ತೆರೆಯುವ ದೈರ್ಯವನ್ನು ಮಾಡಿರಲಿಲ್ಲ.

ಆಸ್ಪ​ತ್ರೆ​ಗ​ಳಿಗೂ ಬೀಗ:

ಖಾಸಗಿ ಕ್ಲಿನಿಕ್‌ಗಳನ್ನು ತೆರೆದು ಜನರಿಗೆ ಅಗತ್ಯ ವೈದ್ಯಕೀಯ ಸೇವೆ ನೀಡಬೇಕು ಎಂದು ಆದೇಶಿಸಿದ್ದರೂ, ಬಹುತೇಕ ವೈದ್ಯರು ಕ್ಲಿನಿಕ್‌ಗಳಿಗೆ ಲಾಕ್‌ ಮಾಡಿ ಮನೆಯಲ್ಲಿಯೇ ಉಳಿದಿದ್ದರು. ಆದರೂ ಮೊದಲ ದಿನ ಇದರಿಂದ ಯಾವುದೇ ರೋಗಿಗಳಿಗೆ ತೊಂದರೆಗಳಾದ ವರದಿಗಳಿಲ್ಲ.

ಒಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ ಡೌನ್‌ನ ಮೊದಲ ದಿನ ಮಂಗಳವಾರ ಯಾವುದೇ ಅಹಿತಕರ ಘಟನೆಗಳಲ್ಲಿ ಪರಿಸ್ಥಿತಿ ಶಾಂತಿಯುತವಾಗಿತ್ತು. ಬಹಳಷ್ಟುಜನರು ಕೊರೋನಾಕ್ಕೆ ಹೆದರಿ ಮನೆಯಲ್ಲಿದ್ದರೆ, ಡೊಂಟ್‌ ಕೇರ್‌ ಎಂಬಂತಿರುವವರು ಲಾಕ್‌ ಡೌನ್‌ ಉಲ್ಲಂಘಿಸಿದರೆ ಬೀಳಬಹುದಾದ ಕೇಸಿಗಾದರೂ ಹೆದರಿ ಮನೆಯಲ್ಲಿದ್ದಾರೆ.

ಲಾಕ್‌ ಡೌನ್‌ನಿಂದ ಹಳ್ಳಿಗರಿಗೆ ಆತಂಕ

ನಗರ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳಾದ ಅಕ್ಕಿಬೇಳೆ, ತರಕಾರಿ, ಹಾಲು, ಔಷಧಿ ಇತ್ಯಾದಿಗಳ ಅಂಗಡಿಗಳು ತೆರೆದಿದ್ದು, ಅವುಗಳನ್ನು ಖರೀದಿಸುವುದಕ್ಕೆ ಜನರಿಗೆ ಹೊರಗೆ ಬರುವುದಕ್ಕೆ ಅವಕಾಶ ಇದೆ.

ಆದ​ರೆ, ಪರ್ಕಳ, ಆತ್ರಾಡಿ, ಹಿರಿಯಡ್ಕ, ಮೂಡುಬೆಳ್ಳೆ, ಶಿರ್ವದಂತಹ ಗ್ರಾಮೀಣ ಪ್ರದೇಶದಲ್ಲಿ ಎಲ್ಲವೂ ಒಂದೇ ದಿನಸಿ ಅಂಗಡಿಗಳಲ್ಲಿ ಮಾರುವ ವ್ಯವಸ್ಥೆ ಇದೆ. ಆದರೆ ಅಂತಹ ಅಂಗಡಿಗಳು ಮಂಗಳವಾರ ಮುಚ್ಚಿದ್ದವು. ಇದರಿಂದ ವಾರಕ್ಕಾಗುವಷ್ಟಾದರೂ ಅಗತ್ಯ ಸಾಮಾನುಗಳನ್ನು ತಂದಿಟ್ಟುಕೊಳ್ಳುವುದೂ ಸಾಧ್ಯವಾಗಿಲ್ಲ. ಇದರಿಂದ ಮುಂದೇನಾಗುತ್ತದೆ, ಈ ಲಾಕ್‌ ಡೌನ್‌ ಎಷ್ಟುದಿನ ಎಂಬ ಕಳವಳ ಹಳ್ಳಿಯ ಜನರಲ್ಲಿ ವ್ಯಕ್ತವಾಗಿದೆ.

click me!