ಮಳೆರಾಯನ ಆರ್ಭಟಕ್ಕೆ ರೈತರ ಬದುಕು ಮೂರಾಬಟ್ಟೆ

By Kannadaprabha News  |  First Published Oct 25, 2019, 2:29 PM IST

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆ ರೈತರ ಬದುಕನ್ನು ಮೂರಾಬಟ್ಟೆ ಮಾಡಿದೆ. ಬೆಳೆದ ಬೆಳೆಗಳೆಲ್ಲಾ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.  


ಆರ್‌. ತಾರಾನಾಥ್‌

ಚಿಕ್ಕಮಗಳೂರು [ಅ.25]:  ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮಲೆನಾಡಿನಲ್ಲಿ ಕಾಫಿ, ಮೆಣಸು, ಅಡಕೆ, ಭತ್ತ, ಬಯಲುಸೀಮೆಯಲ್ಲಿ ಆಲೂಗೆಡ್ಡೆ, ಈರುಳ್ಳಿ, ಮೆಕ್ಕೆಜೋಳ ಮಣ್ಣು ಪಾಲಾಗಿದೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ.

Latest Videos

undefined

ಹಿಂದಿನ ವರ್ಷಗಳಲ್ಲಿ ಮಳೆ ಇಲ್ಲದೆ ರೈತರು ಮುಂಗಾರಿನಲ್ಲಿ ಬಿತ್ತನೆ ಮಾಡುತ್ತಿರಲಿಲ್ಲ. ಆದರೆ, ಈ ಬಾರಿ ಸಕಾಲದಲ್ಲಿ ಮಳೆ ಬಂದಿತು. ಬಿತ್ತನೆಯೂ ಆಯಿತು. ಫಸಲು ಕೈ ಸೇರುವ ಹೊತ್ತಿಗೆ ಬಂದ ಭಾರೀ ಮಳೆ, ರೈತರ ಬದುಕನ್ನು ಮೂರಾಬಟ್ಟೆಮಾಡಿದೆ.

ಕಳೆದ ಆಗಸ್ಟ್‌ 3 ರಂದು ಜಿಲ್ಲೆಯಲ್ಲಿ ಪ್ರವೇಶ ಮಾಡಿದ ಮಳೆ ಇಂದಿಗೂ ತನ್ನ ರೌದ್ರ ನರ್ತನವನ್ನು ಮುಂದುವರೆಸಿದೆ. ಆಗಸ್ಟ್‌ ಮೊದಲ ವಾರದಲ್ಲಿ ಸುರಿದ ಮಳೆಗೆ ಚಿಕ್ಕಮಗಳೂರು, ಮೂಡಿಗೆರೆ, ಎನ್‌.ಆರ್‌.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳು ನಲುಗಿ ಹೋಗಿವೆ. ಕಾಫಿ, ಮೆಣಸು, ಅಡಕೆ ತೋಟಗಳು ರೋಗ ಬಾಧೆಗೆ ತುತ್ತಾಗಿವೆ.

ಅ.20ರಂದು ರಾತ್ರಿ ಬಯಲುಸೀಮೆಯ ಕಡೂರು, ತರೀಕೆರೆ ತಾಲೂಕುಗಳಲ್ಲಿ ಭಾರೀ ಮಳೆ ಸುರಿದಿದ್ದು, ಹೊಲದಲ್ಲಿ ಬೆಳೆದು ನಿಂತಿದ್ದ ಈರುಳ್ಳಿ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ತೆನೆ ಕಟ್ಟಿದ್ದ ರಾಗಿ ನೆಲ ಕಚ್ಚಿದೆ. ಮುಸುಕಿನ ಜೋಳ ಕೊಳೆತು ಹೋಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಣಕ್ಕೆ ತೊಂದರೆ: ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆಯಲ್ಲಿ ಮುಸುಕಿನ ಜೋಳ ಕಟಾವು ಮಾಡಿ ಕಣದಲ್ಲಿ ಒಣಗಿಸಲು ತಂದು ಹಾಕಲಾಗಿದೆ. ಆದರೆ, ಅದನ್ನು ತೆನೆಯಿಂದ ಬಿಡಿಸಿಕೊಳ್ಳಲು ಮಳೆ ಅಡ್ಡಿ ಪಡಿಸಿದೆ. ಅದುದರಿಂದ ಕಣದಲ್ಲಿ ಮುಸುಕಿನ ಜೋಳ ರಾಶಿ ಮಾಡಿ ಮುಚ್ಚಲಾಗಿದೆ. ಗಾಳಿಯಾಡಲು ಬಿಡದೆ ಹೋದರೆ ಮೊಳಕೆ ಬರುವ ಸಾಧ್ಯತೆ ಹೆಚ್ಚಿದೆ. ಈ ಭಯ ರೈತರಿಗೆ ಕಾಣುತ್ತಿದೆ.

ತರೀಕೆರೆ ತಾಲೂಕಿನ ಶಿವನಿ ಹಾಗೂ ಅಜ್ಜಂಪುರ ಸುತ್ತಮುತ್ತ ಈರುಳ್ಳಿ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನೆಯ ಮುಂಭಾಗದಲ್ಲಿ ಒಣಗಿಸಲು ಹಾಕಿದ್ದ ಅಡಕೆ ನೀರು ಪಾಲಾಗಿದೆ. ಆಲೂಗೆಡ್ಡೆ ಕೊಳತು ಹೋಗಿವೆ.

ಜಿಲ್ಲೆಯ ಮಲೆನಾಡಿನ ಐದು ತಾಲೂಕುಗಳನ್ನು ಈಗಾಗಲೇ ಅತಿವೃಷ್ಟಿಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಈಗ ಬಯಲುಸೀಮೆಯ ತರೀಕೆರೆ, ಕಡೂರು ತಾಲೂಕುಗಳು ಮಹಾಮಳೆಗೆ ತುತ್ತಾಗಿವೆ.

ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಈ ಎರಡು ತಾಲೂಕುಗಳಲ್ಲಿ ಮಳೆ ಬಂದಿದ್ದರಿಂದ ಕೆರೆಗಳು ತುಂಬಿ, ಹಳ್ಳಗಳಲ್ಲಿ ನೀರು ಹರಿಯುತ್ತಿದೆ. ತೋಟಗಳಲ್ಲಿ ನೀರು ನಿಂತಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟವೃದ್ಧಿಯಾಗಲಿದೆ. ಬತ್ತಿರುವ ಬೋರ್‌ವೆಲ್‌ಗಳಲ್ಲಿ ನೀರು ಸಿಗಲಿದೆ. ಭವಿಷ್ಯದಲ್ಲಿ ರೈತರಿಗೆ ಈ ಮಳೆ ವರವಾಗಿದ್ದರೂ ತಕ್ಷಣಕ್ಕೆ ಭಾರಿ ನಷ್ಟವುಂಟು ಮಾಡಿದೆ. ವರುಣನ ಕೆಂಗಣ್ಣಿಗೆ ರೈತರು ಈ ಬಾರಿ ಬಲಿಯಾಗಿದ್ದಾರೆ.

ಕಳೆದ ವರ್ಷ ಮುಸುಕಿನ ಜೋಳ ಒಂದು ಕ್ವಿಂಟಾಲ್‌ಗೆ . 1400 ಇತ್ತು. ಈ ವರ್ಷ . 2100 ಇದೆ. ಒಳ್ಳೆ ಫಸಲು ಬಂದಿದೆ. ಆದ್ರೆ ಒಕ್ಕಲು ಮಾಡಲು ಮಳೆ ಬಿಡುತ್ತಿಲ್ಲ. ಟಾರ್ಪಲ್‌ ಹಾಕಿ ಮುಚ್ಚಿದ್ದೇವೆ. ಒಳೊಳಗೆ ಜೋಳ ಕರಗಿ ಹೋಗುತ್ತಿದೆ. ಕೆಲವು ಮೊಳಕೆ ಬಂದಿವೆ

- ಮರುಳಪ್ಪ, ಬ್ಯಾಲದಾಳ್‌ ಗ್ರಾಮ

ತರೀಕೆರೆ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸುಮಾರು 2000 ಹೆಕ್ಟೇರ್‌ನಷ್ಟುತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಪ್ರಮುಖವಾಗಿ ಈರುಳ್ಳಿ ಬೆಳೆಗೆ ಹೆಚ್ಚಿನ ನಷ್ಟವಾಗಿದೆ.

-ಯತಿರಾಜ್‌, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ತರೀಕೆರೆ

ಮಳೆಯ ವಿವರ

ಜೂನ್‌ 302 186

ಜುಲೈ 537 364

ಆಗಸ್ಟ್‌ 355 768

ಸೆಪ್ಟಂಬರ್‌ 155 321

ಅ.22 120 271

click me!