ಸಿನಿಮಾ ನಿರ್ದೇಶನಕ್ಕೆ ತಯಾರಾಗುತ್ತಿರುವೆ: ಪಾಪ ಪಾಂಡು ಚಿದಾನಂದ್

By Suvarna NewsFirst Published May 2, 2021, 8:08 AM IST
Highlights

ಇವರನ್ನು ಚಿದಾನಂದ್ ಎನ್ನುವುದಕ್ಕಿಂತ ಹೆಚ್ಚಾಗಿ 'ಪಾಪ ಪಾಂಡು' ಎಂದು ಗುರುತಿಸುವವರೇ ಹೆಚ್ಚು. ಧಾರಾವಾಹಿಯ ಟೈಟಲ್ ಕ್ಯಾರೆಕ್ಟರ್‌ ಮೂಲಕ ಜನಮನಸೂರೆಗೊಂಡಿದ್ದೇ ಅಂಥದೊಂದು ಜನಪ್ರಿಯತೆಗೆ ಕಾರಣ ಎನ್ನಬಹುದು. ಇದೀಗ ಚಿದಾನಂದ್ ಅವರು ಲಾಕ್ಡೌನ್‌ ಸಮಯವನ್ನು ಬಳಸಿಕೊಂಡು ಹೊಸದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಆ ಬಗ್ಗೆ ಪ್ರಥಮ ಬಾರಿಗೆ ಸುವರ್ಣ ನ್ಯೂಸ್‌.ಕಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ.
 

ಚಿದಾನಂದ್ ಇದುವರೆಗೆ ಅಭಿನಯಿಸಿರುವುದು ಒಂಬತ್ತರಿಂದ ಹತ್ತು ಧಾರಾವಾಹಿಗಳಲ್ಲಿ ಮಾತ್ರ. ಆದರೆ  ಅವುಗಳಲ್ಲಿ ಪಾಪ ಪಾಂಡು ಧಾರಾವಾಹಿಯೊಂದರಲ್ಲೇ ಸಾವಿರದ ಹದಿನಾರು ಸಂಚಿಕೆಗಳಲ್ಲಿ ನಟಿಸಿದ್ದಾರೆ. ಬೀದಿನಾಟಕಗಳ ಅಭಿನಯದಿಂದ ಆರಂಭಿಸಿ ಧಾರಾವಾಹಿ, ಸಿನಿಮಾಗಳ ತನಕ ಬೆಳೆದು ನಿಂತ ಪ್ರತಿಭೆ ಇವರು. ಇತ್ತೀಚೆಗೆ `ಗೀತಾ' ಧಾರಾವಾಹಿಯಲ್ಲಿ ಉಪನ್ಯಾಸಕರಾಗಿಯೂ ಕಾಣಿಸಿಕೊಂಡಿದ್ದರು. ಇವರ ನಟನೆಯಲ್ಲಿ ಕಡೆಯದಾಗಿ ತೆರೆಕಂಡ ಚಿತ್ರದ ಹೆಸರು `ಒಂದು ಗಂಟೆಯ ಕತೆ'. ಸಿನಿಮಾ ಹಲವಾರು ಕಾರಣಗಳಿಂದ ಹೆಚ್ಚು ಮಂದಿಯನ್ನು ತಲುಪುವಲ್ಲಿ ವಿಫಲವಾಯಿತಾದರೂ ಚಿತ್ರ ನೋಡಿದವರು ಚಿದಾನಂದ್‌ ಪಾತ್ರವನ್ನು ಮರೆಯಲಾರರು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸುವಲ್ಲಿ ಸದಾ ಶ್ರಮವಹಿಸುವ ಚಿದಾನಂದ್‌ ಈ ಬಾರಿ ಸಿನಿಮಾ ನಿರ್ದೇಶನಕ್ಕೆ ಯೋಜನೆ ಹಾಕಿದ್ದಾರೆ. 

- ಶಶಿಕರ ಪಾತೂರು

ಸದ್ಯದ ಸ್ಥಿತಿಗತಿಯ ಬಗ್ಗೆ ತಿಥಿ ಪೂಜಾ ಅವಲೋಕನ

ನಿರ್ದೇಶನ ಮಾಡಬೇಕು ಎನ್ನುವ ಕನಸು ಮೂಡಿದ್ದು ಹೇಗೆ?
ನಿರ್ದೇಶನ ನನ್ನ ಗುರಿಯಾಗಿರಲಿಲ್ಲ. ಆದರೆ ಬಣ್ಣದ ಬದುಕಿನ ಆರಂಭದಿಂದಲೇ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ನಿರ್ದೇಶಕ ಬಿ ರಾಮಮೂರ್ತಿಯವರ `ಈ ಶತಮಾನದ ಮಾದರಿ ಹೆಣ್ಣು' ಚಿತ್ರಕ್ಕೆ ಕೆಲಸ ಮಾಡಿದ್ದೆ. ಆದರೆ ಅದು ಅರ್ಧಕ್ಕೆ ನಿಂತ ಹೋಗಿತ್ತು. ಆ ಸಂದರ್ಭದಲ್ಲಿ ನಿರ್ದೇಶಕರ ಸಂಘದ ಸದಸ್ಯ ಕೂಡ ಆಗಿದ್ದೆ. ಕೂಡ್ಲು ರಾಮಕೃಷ್ಣ ಸರ್ ನಿರ್ದೇಶನದ `ಯಾರಿಗೂ ಹೇಳ್ಬೇಡಿ' ಸಿನಿಮಾಗೆ ಕ್ಲಾಪ್‌ ಬಾಯ್ ಆಗಿ ಕೆಲಸ ಮಾಡಿದ್ದೆ. ಸುಮಾರು ಧಾರಾವಾಹಿಗಳಿಗೆ, ಕಿರುಚಿತ್ರ, ಡಾಕ್ಯುಮೆಂಟರಿಗಳಿಗೆ  ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ದುಡಿದಿದ್ದೇನೆ. ಜೊತೆಗೆ ಇತ್ತೀಚೆಗೆ ನನ್ನದೇ ಯೂಟ್ಯೂಬ್ ವಾಹಿನಿಯಲ್ಲಿ ನನ್ನದೇ ಪ್ರೊಡಕ್ಷನ್‌ನ `ಪಾಂಡು ಪಂಚ್' ಕಿರುಚಿತ್ರಗಳನ್ನು ನಾನೇ ನಿರ್ದೇಶಿಸುತ್ತಿದ್ದೇನೆ.  ಅದಕ್ಕೆ ಕಾರಣ ನಮ್ಮ ತಂಡದವರು ನೀಡಿದ ಪ್ರೋತ್ಸಾಹ. ಅದೇ ತಂಡದ ಬೆಂಬಲವೇ ಈಗ ನನ್ನನ್ನು ಒಂದು ಸಿನಿಮಾ ನಿರ್ದೇಶಕನಾಗಿಸುವತ್ತ ಹೆಜ್ಜೆ ಹಾಕಿಸಿದೆ ಎನ್ನಬಹುದು.

ನಾಗಿಣಿ 2 ಧಾರಾವಾಹಿಗೆ ಗುಡ್‌ಬೈ ಹೇಳಿದ ಮೋಹನ್

ನಿಮ್ಮ ನಿರ್ದೇಶನದ ಚಿತ್ರದ ಬಗ್ಗೆ ಮತ್ತು ಅದನ್ನು ಯಶಸ್ಸುಗೊಳಿಸುವ ಪ್ರಯತ್ನಗಳ ಬಗ್ಗೆ ಹೇಳಿ
ನಿಜ ಹೇಳಬೇಕೆಂದರೆ ಕತೆಯ ಕೆಲಸವನ್ನು ಈ ಲಾಕ್ಡೌನಲ್ಲಿ ಮಾಡುತ್ತಿದ್ದೇವೆ. ಹೊಸಬರ ತಂಡದ ಜೊತೆ ಸೇರಿ ತೊಂಬತ್ತು ನಿಮಿಷಗಳ ಒಂದು ಸಿನಿಮಾ ಎನ್ನುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಸದ್ಯಕ್ಕೆ ನೀಡಲಾರೆ. ಒಟ್ಟಿನಲ್ಲಿ ಇದೊಂದು ಟೀಮ್‌ವರ್ಕ್‌. ಮಾನಸಾ, ಭಾಸ್ಕರ್, ವಿನಯ್ ಎನ್ನುವ ಮೂವರೊಂದಿಗೆ ಸೇರಿ ಒಂದು ತಂಡವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಇನ್ನು ಚಿತ್ರ ನಿರ್ದೇಶಿಸಿದೆ ಎನ್ನುವುದರ ಆಚೆಗೆ ಯಶಸ್ಸು ಕಾಣುವುದು ಕೂಡ ತುಂಬ ಮುಖ್ಯ. ರಂಗಭೂಮಿಯಾಗಲೀ ರಣಭೂಮಿಯಾಗಲೀ ಕೈಕಟ್ಟಿ ಕುಳಿತರೆ ಸಾಧನೆ ಸಾಧ್ಯವಿಲ್ಲ. "ರಣಭೂಮಿಯಲ್ಲಿ ನಿಂತಾಗ ಎದುರಾಳಿಗಳು ಬರುತ್ತಲೇ ಇರುತ್ತಲೇ ಇರುತ್ತಾರೆ. ಸಾವು ಖಚಿತ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ದೈರ್ಯವಾಗಿ ಎದುರಿಸಬೇಕು ಎನ್ನುವುದೇ ಮನುಷ್ಯನ ಗುಣ" ಈ ಮಾತನ್ನು ನನಗೆ ಹೇಳಿರುವುದು ನವಲಗುಂದ ನಾಗಲಿಂಗ ಸ್ವಾಮಿ ಮಠದ ನನ್ನ ಗುರುಗಳಾದ ವೀರಯ್ಯ ಸ್ವಾಮಿಗಳು. ಆದರೆ ಯಶಸ್ಸಿಗಾಗಿ ಸೂತ್ರಗಳನ್ನು ಅನುಸರಿಸುವ ರೀತಿ ನನ್ನದಲ್ಲ. ಅದಕ್ಕೊಂದು ಉದಾಹರಣೆಯಾಗಿ ನನ್ನ ಆರಂಭ ಕಾಲದ ನಾಟಕದ ದಿನಗಳನ್ನೇ ನೆನಪಿಸಲು ಬಯಸುತ್ತೇನೆ. ಈಗ ನನ್ನ ತಂಡದಲ್ಲಿರುವ ಭಾಸ್ಕರ್‌ ಅವರು ಆಗಲೂ ನನ್ನೊಂದಿಗೆ ಅಭಿನಯತರಂಗದಲ್ಲಿ ಜೊತೆಯಾಗಿ ತರಬೇತಿ ಪಡೆದಿದ್ದೆವು. 

ಕೊರೊನಾ ವಿರುದ್ಧ ಎಚ್ಚರಿಸಿದ ನಟಿ ನಯನಾ

ನಿಮಗೆ ರಂಗಭೂಮಿಯ ದಿನಗಳಲ್ಲಿ ಸಿಕ್ಕ ಯಶಸ್ಸು ಹೇಗಿತ್ತು?
ಅಭಿನಯತರಂಗದಲ್ಲಿ ತರಬೇತಿ ಪಡೆದ ಬಳಿಕ ಎಎಸ್ ಮೂರ್ತಿಯವರು ಕಲಿಸಿರುವ ಬೀದಿನಾಟಕವನ್ನೇ ನಾವು ಮಾದರಿಯಾಗಿಸಲು ತೀರ್ಮಾನಿಸಿದೆವು. ಆಗ ಸಿಂಗಲ್‌ ನಂಬರ್ ಲಾಟರಿಯ ಪರ್ವಕಾಲವಾಗಿತ್ತು. ಭಾಸ್ಕರ್‌ ಅವರು ಅದರ ಹಾವಳಿ ಅನುಭವಿಸಿದ ತಮ್ಮ ಪರಿಚಿತರ ಕತೆಯನ್ನು ಆಯ್ದುಕೊಂಡರು. ಅದೇ ವಿಷಯ ಇರಿಸಿಕೊಂಡು ನಾವಿಬ್ಬರೇ ನಟಿಸುವಂಥ ಎರಡು ಪಾತ್ರಗಳ ನಾಟಕ ಮಾಡಿದೆವು. ಇಪ್ಪತ್ತೈದು ನಿಮಿಷದ  ನಾಟಕವನ್ನು ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದಲ್ಲಿ  ಪ್ರಥಮ ಪ್ರದರ್ಶನ ನೀಡಿದೆವು. ಅದು ಮುಂದೆ ಜನಪ್ರಿಯತೆ ಪಡೆಯುತ್ತಾ ಹೋಯಿತು.ಅದರ ಸಬ್ಜೆಕ್ಟ್‌ ನೋಡಿದ ಜನ ನಮ್ಮ ಕುಟುಂಬದಲ್ಲೂ ಲಾಟರಿ ಹುಚ್ಚರು ಇದ್ದಾರೆ. ದಯವಿಟ್ಟು ಅವರಿಗೊಮ್ಮೆ ಬುದ್ಧಿ ಹೇಳಿ ಎಂದು ನಮ್ಮಲ್ಲಿ ಕೇಳಿಕೊಳ್ಳುತ್ತಿದ್ದರು! ಆ ನಾಟಕ ಸುಮಾರು ನೂರು ಪ್ರದರ್ಶನಗಳನ್ನು ಕಂಡಿತು. ಬನಶಂಕರಿಯಲ್ಲಿನ ಕ್ಷೇಮ ಸಮಾಚಾರ ಎನ್ನುವ ಸ್ಥಳೀಯ ಪತ್ರಿಕೆಯೊಂದು ನಮ್ಮ ಬಗ್ಗೆ ಲೇಖನ ಬರೆದರು. ಅದನ್ನು ನೋಡಿ ಆಗ ಜನಪ್ರಿಯವಾಗಿದ್ದ ಪತ್ರಿಕೆಗಳಲ್ಲಿ ಒಂದಾದ ಏಷ್ಯನ್ ಏಜ್‌ನವರು "ಸಾಮಾಜಿಕ ಕಳಕಳಿಯ ವಿಚಾರವನ್ನಿರಿಸಿಕೊಂಡು ಇಬ್ಬರೇ ಸೇರಿ ಮಾಡಿದಂಥ ಕನ್ನಡದ ಮೊದಲ ನಾಟಕ ಎನ್ನುವ ಕೀರ್ತಿ ಇವರದು" ಎಂದು ಬರೆದರು. ಅದನ್ನು ನೋಡಿ ಹಿಂದಿಯ `ಸ್ಟಾರ್ ಟಿವಿ'ಯಲ್ಲಿ ನಮ್ಮ ನಾಟಕದ ಬಗ್ಗೆ ನಾಲ್ಕೈದು ನಿಮಿಷದ ಸ್ಟೋರಿ ಕವರೇಜ್ ಮಾಡಿದರು. ಹಾಗಾಗಿ ನನಗೆ ಮಾಡುವ ವೃತ್ತಿಯಲ್ಲಿ ಶ್ರದ್ಧೆ ಇದ್ದರೆ ಸಾಕು, ಗುರಿ ತಲುಪಲು ಸುಲಭವಾಗುತ್ತದೆ ಎನ್ನುವುದು ಆರಂಭದಲ್ಲೇ ಅರಿವಾಯಿತು. 

click me!