ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿ ಸಿಕ್ಕಿದ್ದಾರೆ. ನಟ, ನಿರ್ಮಾಪಕ ಸುನೀಲ್ ಪುರಾಣಿಕ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಅಕಾಡೆಮಿ ಮುಂದಿನ ಕೆಲಸಗಳ ಬಗ್ಗೆ ಅವರದ್ದೇ ಯೋಜನೆ, ಆಲೋಚನೆ ಹೊಂದಿದ್ದಾರೆ. ಆ ಕುರಿತು ಸುನೀಲ್ ಪುರಾಣಿಕ್ ಜತೆಗೆ ಮಾತುಕತೆ.
ದೇಶಾದ್ರಿ ಹೊಸ್ಮನೆ
ಅಕಾಡೆಮಿ ಅಧ್ಯಕ್ಷರ ಆಯ್ಕೆ ನಿಮಗೆ ಖುಷಿ ತಂದಿದೆಯಾ?
ಖಂಡಿತಾ ಹೌದು. ಇದಕ್ಕೆ ಅರ್ಹ ಎನ್ನುವುದು ನನ್ನ ಭಾವನೆ. ಚಿತ್ರರಂಗದಲ್ಲಿ ನಟನೆ, ನಿರ್ದೇಶನ, ನಿರ್ಮಾಣ ಅಂತೆಲ್ಲ ಕೆಲಸ ಮಾಡಿದ್ದೇನೆ. ಹಾಗೆಯೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಚಲನ ಚಿತ್ರೋತ್ಸವಗಳಿಗೆ ತೀರ್ಪುಗಾರನಾಗಿದ್ದೇನೆ. ಬಿಜೆಪಿ ಪಕ್ಷದ ಸಂಘಟನೆಯಲ್ಲೂ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಇವೆಲ್ಲವನ್ನು ಪರಿಗಣಿಸಿಯೇ ಸರ್ಕಾರ
ನನ್ನನ್ನು ನೇಮಕ ಮಾಡಿದೆ. ಚಿತ್ರರಂಗದ ಋಣ ತೀರಿಸಲು ಇದೊಂದು ಒಳ್ಳೆಯ ಅವಕಾಶ.
ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ನಟ ಸುನೀಲ್ ಪುರಾಣಿಕ್!
ಆದ್ರೆ, ನಿಮ್ಮ ಆಯ್ಕೆ ಬಗ್ಗೆಯೇ ಚಿತ್ರರಂಗದ ಕೆಲವರು ಆಕ್ಷೇಪ ಎತ್ತಿದ್ದಾರಲ್ಲಾ?
ಇದು ಇರಬೇಕು. ಹಾಗಿದ್ದಾಗಲೇ ಇಂತಹ ಸ್ಥಾನದಲ್ಲಿ ಸಮರ್ಥವಾಗಿ, ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ಇಂತಹ ಟೀಕೆಗಳನ್ನು, ವಿರೋಧಗಳನ್ನು ಆ ದೃಷ್ಟಿಯಿಂದಲೇ ಸ್ವೀಕರಿಸುತ್ತೇನೆ. ಗುರುವಾರ ನಾನು ಅಧಿಕಾರ ಸ್ವೀಕರಿಸಿದೆ. ಆ ಕ್ಷಣದಲ್ಲಿ ಚಿತ್ರರಂಗದ ಯಾರೆಲ್ಲ ಬಂದು ನನಗೆ ಹಾರೈಸಿದರು, ಜತೆಗಿರುತ್ತೇವೆ ಕೆಲಸ ಮಾಡಿ ಅಂತ ಬೆಂಬಲ ಸೂಚಿಸಿದರು ಅಂತ ಆಕ್ಷೇಪ ಎತ್ತಿದವರು ಒಮ್ಮೆ ನೋಡಿದ್ದರೆ, ಅವರಿಗೆ ನಾನೇನು ಅನ್ನೋದು ಅರ್ಥವಾದೀತು.
ಚಿತ್ರರಂಗದಲ್ಲಿನ ನಿಮ್ಮ ಅನುಭವದ ಬಗ್ಗೆ ಅವರಿಗೆ ಅನುಮಾನವೇ?
ಗೊತ್ತಿಲ್ಲ, ಆದರೆ ಅಧ್ಯಕ್ಷನಾಗಲು ನಾನು ಅರ್ಹ ಎನ್ನುವ ಹೆಮ್ಮೆ ನಂಗಿದೆ. ಚಿತ್ರರಂಗಕ್ಕೆ ಬಂದು ೩೨ ವರ್ಷ ಆಗಿದೆ. ೨೫ ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿ ಆಗಿದ್ದೇನೆ. ನಿರ್ಮಾಣದ ಅನುಭವವೂ ಇದೆ. ಹಿರಿಯರಾದ ಜಿ.ವಿ.ಅಯ್ಯರ್, ಸೋಮಶೇಖರ್, ದಿನೇಶ್ ಬಾಬು, ಪಣಿರಾಮಚಂದ್ರ, ಗಿರೀಶ್ ಕಾಸರವಳ್ಳಿ ಅವರ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅದರ ಜತೆಗೆ ಮೂರು ಸಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ತೀರ್ಪುಗಾರನಾಗಿದ್ದೇನೆ. ಪನೋರಮಾ ಚಿತ್ರೋತ್ಸವಕ್ಕೆ ಜ್ಯೂರಿ ಆಗಿದ್ದೇನೆ. ಇದೆಲ್ಲ ಚಿತ್ರರಂಗದ ಅನುಭವ ಅಲ್ಲವೇ?
ಒಳ್ಳೆಯ ಅವಕಾಶ ಸಿಕ್ಕಿದೆ, ಚೆನ್ನಾಗಿ ನಿಭಾಯಿಸುವೆ: ಸುನೀಲ್ ಪುರಾಣಿಕ್
ಅಂತಾರಾಷ್ಟ್ರೀಯ ಚಲನಚಿತ್ರೊತ್ಸವ ದಿನ ಇನ್ನೇನು ಸನಿಹದಲ್ಲಿದೆ, ಆ ಬಗ್ಗೆ ಹೇಳಿ?
ಬಹು ಮುಖ್ಯವಾಗಿ ಈ ಚಿತ್ರೋತ್ಸವಕ್ಕೆ ನಿರ್ದಿಷ್ಟ ದಿನಾಂಕ ನಿಗದಿ ಆಗಬೇಕು. ಆಗ ಇದರ ಮಹತ್ವ ಜಾಗತಿಕವಾಗಿ ಹೆಚ್ಚುತ್ತದೆ. ಇನ್ನು ದೇಶದ ವಿವಿಧ ಚಿತ್ರೋತ್ಸವಗಳಿಗೆ ಹೋಲಿಕೆ ಮಾಡಿದರೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತನ್ನದೇಯಾದ ಮಹತ್ವ ಹೊಂದಿದೆ. ಗುಣಮಟ್ಟದ ಸಿನಿಮಾಗಳು ಬರುತ್ತವೆ. ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತದೆ. ಅದೆಲ್ಲ ಹಿಂದಿನ ಅಧ್ಯಕ್ಷರ ಕೊಡುಗೆ. ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ.
ಚಿತ್ರರಂಗಕ್ಕೆ ಏನೆಲ್ಲ ಕೊಡಬಹುದೆಂದು ಆಲೋಚಿಸಿದ್ದೀರಿ?
ಹತ್ತು ಹಲವು ಯೋಚನೆಗಳಿವೆ. ಮೊದಲಿಗೆ ಚಿತ್ರರಂಗದ ಹಿರಿಯರಿಗೆ ಆರೋಗ್ಯ ಸೇವೆ ಸಿಗಬೇಕು. ಅದಕ್ಕೆ ಪೂರಕವಾಗಿ ಏನು ಮಾಡಬಹುದು ಅಂತ ಯೋಚಿಸುತ್ತಿದ್ದೇನೆ. ಚಿತ್ರೋತ್ಸವಗಳಿಗೆ ನಮ್ಮದೇ ಕಾಂಪ್ಲೆಕ್ಸ್ ಇದ್ದರೆ ಹೆಚ್ಚು ಅನುಕೂಲ ಆಗಲಿದೆ. ಅದಕ್ಕೆ ಜಮೀನಿದೆ, ಅಗತ್ಯ ಹಣವೂ ಸಿಗಬಹುದು. ಅದನ್ನು ಕಟ್ಟುವ ನಿಟ್ಟಿನಲ್ಲಿ ನೀಲನಕ್ಷೆ ಸಿದ್ದವಾಗಬೇಕಿದೆ. ಹಳೆಯ ಸಿನಿಮಾಗಳ ನೆಗೆಟಿವ್ ಹಾಳಾಗುತ್ತಿರುವ ಬಗ್ಗೆ ಕೇಳಿದ್ದೇನೆ. ಅದನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ. ನಮ್ಮದೇ ಒಂದು ಗ್ರಂಥಾಲಯ ಬೇಕು. ಚಿತ್ರರಂಗಕ್ಕೆ ಕೊಡುಗೆ ಕೊಟ್ಟವರನ್ನು ಪರಿಚಯಿಸುವಂತಹ ಪುಸ್ತಕ, ಡಾಕ್ಯುಮೆಂಟರಿಗಳು ಅಲ್ಲಿ ಸಿಗಬೇಕು. ಇನ್ನು ಚಿತ್ರೋತ್ಸವ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಅಕಾಡೆಮಿ ಕೆಲಸಗಳು ವಿಸ್ತರವಾಗಬೇಕು. ಕತೆಗಾರರ ಹಕ್ಕುಗಳ ರಕ್ಷಣೆಗೂ ಯೋಜನೆ ರೂಪಿಸಬೇಕೆನ್ನುವ ಆಲೋಚನೆ ಇದೆ.
ಸರ್ಕಾರದಿಂದ ನಿಮಗೆ ಒಳ್ಳೆಯ ಸಹಕಾರ ಸಿಗಬಹುದೇ ?
ಖಂಡಿತವಾಗಿಯೂ ಇದೆ. ಸಿನಿಮಾರಂಗದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತುಂಬಾ ಕಾಳಜಿ, ಕಳಕಳಿ ಇದೆ. ಅವರಿಂದಲೇ ಚಿತ್ರರಂಗಕ್ಕೆ ಅನೇಕ ಕೆಲಸಗಳು ಆಗಿವೆ.