ಉಚಿತ ಆ್ಯಂಬುಲೆನ್ಸ್ ಸೇವೆ ನೀಡುತ್ತಿರುವ ಏಕೈಕ ನಟ ಅರ್ಜುನ್ ಗೌಡ ಸಂದರ್ಶನ!

By Kannadaprabha News  |  First Published May 14, 2021, 2:47 PM IST

ಇವರು ಹೆಸರು ಅರ್ಜುನ್ ಗೌಡ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. 'ಯುವರತ್ನ' ಚಿತ್ರದಲ್ಲಿ ಇವರನ್ನು ನೋಡಿರುತ್ತೀರಿ. ಈಗ ಇವರು ಕೊರೋನಾ ಸಂಕಷ್ಟದಲ್ಲಿ ಉಚಿತ ಆ್ಯಂಬುಲೆನ್‌ಸ್ ಸೇವೆ ನೀಡುತ್ತಿದ್ದಾರೆ. ಒಬ್ಬ ಸಿನಿಮಾ ನಟ ಕೊರೋನಾದಿಂದ ಸತ್ತವರ ದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುವ ಕೆಲಸ ಮಾಡುತ್ತಿರುವುದು ಭಾರತದಲ್ಲೇ ಮೊದಲು. ಅಪರೂಪದ ಸೇವೆ ಮಾಡುತ್ತಿರುವ ಅರ್ಜುನ್ ಗೌಡ ಮಾತಿಗೆ ಸಿಕ್ಕಾಗ...


ಆರ್. ಕೇಶವಮೂರ್ತಿ

ಸಾರ್, ನಮಸ್ತೆ ಹೇಗಿದ್ದೀರಿ?

Tap to resize

Latest Videos

undefined

ನಾನು ಚೆನ್ನಾಗಿದ್ದೇನೆ ಸರ್. ಈಗಷ್ಟೆ ಒಬ್ಬರ ಅಂತ್ಯಕ್ರಿಯೆ ಮುಗಿಸಿಕೊಂಡು ಬಂದು ಊಟಕ್ಕೆ ಕೂತಿದ್ದೇನೆ.

ಆಮೇಲೆ ಕಾಲ್ ಮಾಡಲಾ?

ಬೇಡ ಸಾರ್. ಊಟ ಮಾಡುತ್ತಲೇ ಮಾತನಾಡುತ್ತೇನೆ. ಆಮೇಲೆ ಅಂದರೆ ಪಾಪ ಯಾರಾದರೂ ಆ್ಯಂಬುಲೆನ್‌ಸ್ ಬೇಕು ಅಂತ ಫೋನ್ ಮಾಡುತ್ತಿರುತ್ತಾರೆ.

ಸರಿ, ಯಾಕೆ ನಿಮಗೆ ಆ್ಯಂಬುಲೆನ್‌ಸ್ ಡ್ರೈವರ್ ಆಗಬೇಕು ಅನಿಸಿದ್ದು?

ಈಗ ತುಂಬಾ ಅಗತ್ಯ ಇರುವ ಸೇವೆ. ಈಗಲೂ ನೀವು ಯಾವುದಾದರೂ ಸಹಾಯವಾಣಿಗೆ ಕಾಲ್ ಮಾಡಿ ಆ್ಯಂಬುಲೆನ್‌ಸ್ ಕೇಳಿ ಸಿಗಲ್ಲ. ಒಂದು ವೇಳೆ ಸಿಕ್ಕರೆ 30 ರಿಂದ 50 ಸಾವಿರ ತನಕ ಹಣ ಕೇಳುತ್ತಾರೆ. ಈ ಸಂಕಷ್ಟದಲ್ಲಿ ಅಷ್ಟು ದುಡ್ಡು ಕೊಡುವ ಶಕ್ತಿ ನಮ್ಮ ಜನಕ್ಕೆ ಇಲ್ಲ. ಬದುಕಿದ್ದಾಗ ಒಂದು ರೀತಿಯಲ್ಲಿ ಸುಲಿಗೆ, ಸತ್ತ ಮೇಲೆ ಸುಲಿಗೆ. ಕೊನೆ ಪಕ್ಷ ಸತ್ತವರನ್ನಾದರೂ ಯಾವ ಸುಲಿಗೆಯೂ ಮಾಡದೆ ಅವರ ಅಂತ್ಯಕ್ರಿಯೆ ಮಾಡೋಣ ಅಂತ ಆ್ಯಂಬುಲೆನ್‌ಸ್ ಡ್ರೈವರ್ ಆದೆ.

"

ಮನೆಯಲ್ಲಿ ನಿಮ್ಮ ಈ ಕೆಲಸಕ್ಕೆ ಏನಂದರು?

ಮೊದಲು ಬೈದರು. ಯಾಕೆಂದರೆ ಇದು ಪ್ರಾಣ ಮತ್ತು ಆರೋಗ್ಯದ ಜತೆಗಿನ ಯುದ್ಧ. ನಾನು ಕೂಡ ನಮ್ಮ ಮನೆಗೆ ಮಗನೇ ಅಲ್ಲವೇ? ಹೀಗಾಗಿ ಅವರು ಆತಂಕ ತೋಡಿಕೊಂಡರು. ಅದರಲ್ಲಿ ತಪ್ಪಿಲ್ಲ. ಈಗ ನನ್ನ ಕೆಲಸ ನೋಡಿ ಅವರೂ ಖುಷಿ ಪಡುತ್ತಿದ್ದಾರೆ. ಆ ಮೇಲೆ ನಾನು ಈ ಕೆಲಸಕ್ಕಾಗಿಯೇ ಮನೆ ಬಿಟ್ಟು ಸ್ನೇಹಿತನ ರೂಮಿನಲ್ಲಿದ್ದೇನೆ.

ನೀವು ಡ್ರೈವರ್ ಆಗಲು ಪ್ರೇರಣೆ ಆಗಿದ್ದು ಏನು?

ನಮ್ಮ ಮನೆಗೆ ಅಜ್ಜಿಯೊಬ್ಬರು ದಿನಾ ಹಾಲು ಹಾಕುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಹಾಲು ಹಾಕಲು ಬರಲಿಲ್ಲ. ಯಾಕೆ ಅಂತ ಕೇಳಿದರೆ ಅವರಿಗೆ ಕೊರೋನಾ ಬಂದಿದೆ ಅಂದರು. ಕೆಲ ದಿನಗಳ ನಂತರ ಅವರ ಮೊಮ್ಮಗ ಫೋನ್ ಮಾಡಿ ಅಣ್ಣ ನಮ್ಮ ಅಜ್ಜಿ ತೀರಿಕೊಂಡರು. ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಹಣ ಬೇಕಿತ್ತು ಅಂದ. ನಾನು ಎರಡು ಸಾವಿರ ಹಾಕಿದೆ. ಅಣ್ಣ ಇನ್ನೂ ಬೇಕು ಅಂದ. ಆ್ಯಂಬುಲೆನ್‌ಸ್ಗೆ ಯಾಕೋ ಅಷ್ಟು ಅಂದೆ. ಇಲ್ಲಾ ಅಣ್ಣ 15 ಸಾವಿರ ಕೇಳುತ್ತಿದ್ದಾರೆ ಅಂದ. ನನಗೆ ತುಂಬಾ ಸಂಕಟ ಆಯಿತು. ಆ ಕುಟುಂಬದ ಬಗ್ಗೆ ಗೊತ್ತು. ಸತ್ತ ಅಜ್ಜಿಯ ದೇಹವನ್ನು ಸಾಗಿಸಲು ಆ್ಯಂಬುಲೆನ್‌ಸ್ಗೆ ದುಡ್ಡಿಲ್ಲದೆ ಪರದಾಡುತ್ತಿರುವ ಆ ಹುಡುಗನ ಸ್ಥಿತಿ ನೋಡಿ, ನಾನು ಉಚಿತವಾಗಿ ಆ್ಯಂಬುಲೆನ್‌ಸ್ ಸೇವೆ ಮಾಡಬೇಕು ಎಂದು ನಿರ್ಧರಿಸಿದೆ.

Ambulance ಡ್ರೈವರ್ ಆದ ನಟ ಅರ್ಜುನ್ ಗೌಡ; ಕನ್ನಡಿಗರಿಂದ ಸಲಾಂ! 

ಆ್ಯಂಬುಲೆನ್‌ಸ್ ಡ್ರೈವರ್ ಆಗಿ ಎಷ್ಟು ದಿನ ಆಯಿತು?

ಒಂದು ತಿಂಗಳ ಮೇಲಾಯಿತು. ಮನೆಗೂ ಹೋಗಿಲ್ಲ. ದಿನದ ಇಪ್ಪತ್ತು ನಾಲ್ಕು ಗಂಟೆಯೂ ಅದೇ ಕೆಲಸ. ದಿನಕ್ಕೆ ಒಂದು ಸಾವಿರ ಫೋನ್ ಕಾಲ್ ಬರುತ್ತವೆ. ಇಲ್ಲಿಯವರೆಗೂ 90ಕ್ಕೂ ಹೆಚ್ಚು ಹೆಣಗಳನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ಅಂತ್ಯಕ್ರಿಯೆ ಮಾಡಿದ್ದೇನೆ.

ಸತ್ತವರ ಸಂಬಂಧಿಕರೇ ಹತ್ತಿರ ಬರುತ್ತಿರಲಿಲ್ಲ. ಆದರೆ, ನೀವು ಹತ್ತಿರ ಇದ್ರಿ. ಕೊರೋನಾ ಬಾರದಂತೆ ನೀವು ಏನೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ರಿ?

ನನ್ನ ವಿಲ್ ಪವರ್ ನನ್ನ ಮುನ್ನೆಚ್ಚರಿಕೆ. 14 ವರ್ಷಗಳಿಂದ ಫಿಟ್‌ನೆಸ್ ಮಾಡಿಕೊಂಡು ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಂಡಿದ್ದವನು. ಒಂದಿಷ್ಟು ಒಳ್ಳೆಯ ಕೆಲಸ ಮಾಡೋಣ ಅಂತ ತೀರಾ ಮೊಂಡು ಬಿದ್ದು ಈ ಕೆಲಸಕ್ಕೆ ಬಂದೆ. ನನ್ನ ಈ ಮೊಂಡುತನವೇ ರಕ್ಷಣೆ ಮಾಡುತ್ತಿದೆ ಅನಿಸುತ್ತದೆ. ಆದರೂ ಪಿಪಿಇ ಕಿಟ್, ಮಾಸ್‌ಕ್ ಹಾಕಿದ್ದೇನೆ. ಇಲ್ಲಿಯವರೆಗೂ 20ಕ್ಕೂ ಹೆಚ್ಚು ಬಾರಿ ಕೊರೋನಾ ಟೆಸ್‌ಟ್ ಮಾಡಿಸಿಕೊಂಡಿದ್ದೇನೆ. ಪ್ರತಿ ಬಾರಿಯೂ ನೆಗೆಟಿವ್ ವರದಿ ಬಂದಿದೆ.

ಈ ಹಾದಿಯಲ್ಲಿ ನೀವು ಕಂಡ ತುಂಬಾ ದುಃಖದ ಸಂಗತಿಗಳು ಯಾವುವು?

ತುಂಬಾ ಇದೆ. ಕಳೆದ ವಾರ ಒಂದೇ ದಿನ 9 ಮಂದಿ ಅಂತ್ಯಕ್ರಿಯೆ ಮಾಡಿದ್ದೇನೆ. ಒಂದು ಮನೆಯಲ್ಲಿ ಮೂವರ ಅಂತ್ಯಕ್ರಿಯೆ ಮಾಡಿದ್ದು, ಆ ತಾಯಿ ಹಾಗೂ ಅವರ ಇಬ್ಬರು ಹೆಣ್ಣುಗಳನ್ನು ಅಂತ್ಯಕ್ರಿಯೆ ಮಾಡಿದ್ದು ಈಗಲೂ ನನ್ನ ಕಾಡುತ್ತಿದೆ. ಯಾಕೆಂದರೆ ಆ ತಾಯಿಗೆ ನಾನೇ ಕೊಳ್ಳಿ ಇಟ್ಟೆ. ನಾನು ಯಾರದ್ದೇ ಮನೆಯಲ್ಲಿ ಸತ್ತವರನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ಮಾಡಿ ಅದರ ಬೂದಿ ಅವರ ಸಂಬಂಧಿಕರಿಗೆ ಕೊಟ್ಟು ಬರುವಾಗ ‘ಇನ್ನು ಮುಂದೆ ನೀವು ನನಗೆ ಕಾಲ್ ಮಾಡುವ ಪರಿಸ್ಥಿತಿ ಬಾರದಿರಲಿ’ ಎಂದು ಕೈ ಮುಗಿದು ಹೇಳಿ ಬರುತ್ತಿದ್ದೆ. ಯಾಕೆಂದರೆ ನನಗೆ ಕಾಲ್ ಮಾಡುತ್ತಿದ್ದಾರೆ ಅಂದರೆ ಅವರ ಮನೆಯಲ್ಲಿ ಸಾವು ಆಗಿದೆ ಎಂದರ್ಥ.

ಈ ಕೆಲಸದಲ್ಲಿ ನೀವು ಕಂಡ ಖುಷಿ ಸಂದರ್ಭ ಅಥವಾ ಘಟನೆಗಳು ಯಾವುವು?

ಸತ್ತವರ ಸಂಬಂಧಿಕರಿಗೆ ಚಿತಾಭಸ್ಮ ಕೊಟ್ಟು ಬರುವಾಗ ಅವರು ಆಶೀರ್ವಾದ ಮಾಡುವುದು, ಯಾರೋ ದಾರಿಯಲ್ಲಿ ಗುರುತಿಸಿ ನೀವು ನಿಜವಾದ ಹೀರೋ ಎನ್ನುವುದು, ಜಿಂದಾಲ್ ಅಧ್ಯಕ್ಷರು, ಐಎಎಸ್ ಅಧಿಕಾರಿ, ವಿದೇಶದಲ್ಲಿರುವ ನಟಿ ಸುಮನ್ ನಗರ್‌ಕರ್ ದಂಪತಿ... ಹೀಗೆ ಹಲವರು ಫೋನ್ ಮಾಡಿ, ‘ಒಳ್ಳೆಯ ಕೆಲಸ ಮಾಡುತ್ತಿದ್ದೀರಿ’ ಎಂದು ಹರಸಿದ್ದು, ಹೆಣ ಸುಡಲು ಸ್ಮಶಾನದ ಬಳಿ ಕಾಯುವಾಗ ಯಾರೋ ಇದ್ದಕ್ಕಿದ್ದಂತೆ ಊಟ ತಂದು ಕೊಟ್ಟಿದ್ದು... ಇದೆಲ್ಲವೂ ಖುಷಿ ಸಂಗತಿಗಳೇ. ಎಲ್ಲಕ್ಕಿಂತ ಮುಖ್ಯವಾಗಿ ಆರಂಭದಲ್ಲಿ ಆ್ಯಂಬುಲೆನ್‌ಸ್ ಸೇವೆಯೇ ಇಲ್ಲ ಅನ್ನುವ ವಾತಾವರಣ ಕೊಂಚ ಮಟ್ಟಿಗೆ ಬದಲಾಗಿರುವುದು. ಸದ್ಯಕ್ಕೆ ಈಗ ಸಾವಿನ ಸಂಖ್ಯೆ ಕಡಿಮೆ ಆಗಿರುವುದು.

ಸಂಕಷ್ಟದಲ್ಲಿ ಈ ಹೊಸ ದಾರಿ ನಿಮಗೆ ಕೊಟ್ಟ ಅನುಭವ ಏನು?

ಸಾವು ಮತ್ತು ಬದುಕು ಎರಡನ್ನೂ ತುಂಬಾ ಹತ್ತಿರದಿಂದ ನೋಡಿಬಿಟ್ಟೆ. ನಾನು ಆಗಾಗ ಕಾಶಿಯಲ್ಲಿರುವ ಮಣಿಕರ್ಣಿಕಾ ಘಾಟ್‌ಗೆ ಹೋಗಿ ಬರುತ್ತಿದ್ದೆ. ಕೊರೋನಾ ನಮ್ಮ ಬೆಂಗಳೂರನ್ನು ಮಣಿಕರ್ಣಿಕಾ ಘಾಟ್ ಮಾಡಿಬಿಟ್ಟಿದೆ. ಇನ್ನು ಮೇಲೆ ನನಗೆ ಯಾವುದೇ ಕಷ್ಟ ಬಂದರೂ ಅದು ಕಷ್ಟ ಅಂತಲೂ, ಯಾವುದೇ ಸುಖ ಎದುರಾದರೂ ಅದು ಸುಖ ಅಂತಲೂ ಅನಿಸಲ್ಲ. ಯಾಕೆಂದರೆ ಈ ಒಂದು ತಿಂಗಳಲ್ಲಿ ನಾನು ಜೀವನ ಅಂದರೆ ಇಷ್ಟೇ ಅನ್ನುವಷ್ಟು ಕಲಿತುಬಿಟ್ಟಿದ್ದೇನೆ. ಈಗ ನನಗೆ ಸಾವು ಹೆದರಿಕೆ ಹುಟ್ಟಿಸುತ್ತಿಲ್ಲ. ಇನ್ನು ನನ್ನ ಜೀವ ಇರೋತನಕ ನನ್ನ ಬಳಿ ಒಂದು ಆ್ಯಂಬುಲೆನ್‌ಸ್ ಇರುತ್ತದೆ. ಅದು ಉಚಿತ ಸೇವೆಗೆ ಮಾತ್ರ.

ನಿಜ ಜೀವನದಲ್ಲೂ ಹೀರೋ ಅನ್ನುವವರಿಗೆ ನೀವು ಏನು ಹೇಳುತ್ತೀರಿ?

ಕೈ ಮುಗಿದು ಕೃತಜ್ಞತೆ ತೋರಿಸುತ್ತೇನೆ ಅಷ್ಟೆ. ಒಂದು ಸಣ್ಣ ನೆರವು ಕೊಟ್ಟರೆ ಸಾಮಾನ್ಯ ಜನ ದೇವರಂತೆ ನೋಡುತ್ತಾರೆ. ಅದು ನಮ್ಮ ನೆಲದ ಗುಣ ಕೂಡ. ಅದನ್ನು ನಾನು ಈಗ ನೇರವಾಗಿ ನೋಡುತ್ತಿದ್ದೇನೆ. ಸಾರ್... ಸಾರಿ ಆಗಿನಿಂದಲೂ ಯಾರೋ ಕಾಲ್ ಮಾಡುತ್ತಲೇ ಇದ್ದಾರೆ, ಆ್ಯಂಬುಲೆನ್‌ಸ್ಗೆ ಅನಿಸುತ್ತದೆ. ಬಾಯ್... ಮತ್ತೆ ಮಾತಾಡೋಣ.

click me!