ಸಾಹಿತ್ಯ ಸಮ್ಮೇಳನದ ತೂಗುಮಂಚದಲ್ಲಿ ಕೃಷ್ಣಕವಿ

By Kannadaprabha News  |  First Published Dec 8, 2019, 12:17 PM IST

ಈ ಬಾರಿ ಕಲಬುರ್ಗಿಯಲ್ಲಿ ನಡೆಯಲಿರುವ 85 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ 'ತೂಗುಮಂಚದ...' ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದಾರೆ. ಈ ಸಂಭ್ರಮವನ್ನು ಎಚ್‌ಎಸ್‌ವಿ ಕನ್ನಡ ಪ್ರಭದ ಜೊತೆ ಹಂಚಿಕೊಂಡಿದ್ದು ಹೀಗೆ.  


ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್ ಎಸ್ ವೆಂಕಟೇಶಮೂರ್ತಿಯವರ ಸಾಧನೆ ಎಲ್ಲಾ ಕ್ಷೇತ್ರಗಳಲ್ಲೂ ಹಬ್ಬಿದೆ. ಕವಿ, ಕತೆಗಾರ, ನಾಟಕಕಾರ, ವಿಮರ್ಶಕ, ಅನುವಾದಕ, ನಿರ್ದೇಶಕ, ಚಿತ್ರಕತೆಗಾರ -ಹೀಗೆ ಹಲವು ಪ್ರತಿಭಾ ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎಚ್‌ಎಸ್‌ವಿ ಸಮ್ಮೇಳನವನ್ನು ಚುರುಕಾಗಿಸಬಲ್ಲವರು. ಹೊಸ ಮೊನಚನ್ನು ಕೊಡಬಲ್ಲವರು. ಹೀಗಾಗಿಯೇ ಈ ಸಲದ ಸಮ್ಮೇಳನಕ್ಕೆ ವೆಂಕಟೇಶ ಪ್ರಭೆ.

 ಅಖಿಲ ಭಾರತ 85 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿಯೇರುವ ಸಂಭ್ರಮ. ಈ ಹೊತ್ತು ಹೇಳಲೇಬೇಕು ಅನಿಸುವುದು?

Tap to resize

Latest Videos

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿದ ಬಗ್ಗೆ ಖುಷಿ ಇದ್ದೇ ಇದೆ. ಹಾಗಂತ ನಾವು ಹೇಳುವ ವಿಚಾರದಲ್ಲಿ ವ್ಯತ್ಯಾಸ ಆಗುತ್ತೆ ಅಂತ ಅನಿಸಲ್ಲ. ಸಮ್ಮೇಳನದಲ್ಲಿ ಮಾತಾಡುವುದು ವಿಸ್ತಾರದ ಪ್ರಶ್ನೆ ಅಷ್ಟೇ. ಆಳದ ಪ್ರಶ್ನೆ ಅಲ್ಲ. ಮೂಲಭೂತವಾಗಿ ನಾನು ಅದನ್ನೇ ಹೇಳಬೇಕು. ಕೇಳೋರು ಜಾಸ್ತಿಯಾದಾಗ ಸಂತೋಷ ಆಗುತ್ತೆ. ಸಮ್ಮೇಳನ ಅಂತಹದ್ದೊಂದು ಅಪಾರ ಜ ಸಮುದಾಯವನ್ನು ಕಣ್ಮುಂದೆ ಕಟ್ಟುತ್ತೆ. ಅದು ದೊಡ್ಡದು. ಪ್ರಾಂತ್ಯದ ಎಲ್ಲ ಕಡೆಯಿಂದ ಬರುವ ಕನ್ನಡಿಗರನ್ನು ಅಲ್ಲಿ ನೋಡ್ತೀರಿ. ಅವರು ಅಪ್ರತ್ಯಕ್ಷ ಓದುಗರು. ನಾವು ಅವರನ್ನು ನೋಡೇ ಇರೋದಿಲ್ಲ. ಇದು ಸಾಹಿತಿ ಮತ್ತು ಸಹೃದಯರ ಮುಲಾಕಾತ್. ಕವಿಗಳನ್ನು ರಸಿಕರು ಭೇಟಿ ಮಾಡುತ್ತಾರೆ.

ರಸಿಕರನ್ನು ಕವಿಗಳು ಭೇಟಿ ಮಾಡ್ತಾರೆ. ರಸಿಕರು ಮತ್ತು ಕವಿಗಳನ್ನು ಒಂದು ಮಾಡುವ ಪುಸ್ತಕ ಪ್ರಕಾಶಕರು ಅಲ್ಲಿಗೆ ಬರುತ್ತಾರೆ. ಕನ್ನಡ ಸಮಾಜದ ಅನೇಕ ಮುಖಗಳ ಪರಿಚಯವಾಗುತ್ತೆ. ಕನ್ನಡ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗುತ್ತವೆ. ಅದನ್ನು ಕೇಳುವುದೂ ಅನುಭವ.

ಕನ್ನಡ ಆದರ್ಶ, ಇಂಗ್ಲಿಷ್‌ ವಾಸ್ತವ: ಎಚ್ಚೆಸ್ವಿ

ನಿಮ್ಮ ಅಭಿನಂದನ ಗ್ರಂಥ ಗಂಧವೃತ್ತಿ. ಅದು ನಿಮ್ಮ ಸಾನೆಟ್ಗಳಲ್ಲೊಂದು. ಎದೆಯಲ್ಲಿ ಕಿಡಿಯಿಟ್ಟು ಪರಿಮಳ ಹರಡುತ್ತಾ ನಿಧಾನ ತಾನೂ ಕರಗುವ ರೂಪಕ. ಕೆವಿ ತಿರುಮಲೇಶ್ ಅವರು ಈ ರೂಪಕವನ್ನು ತಮಗೆ ಹೋಲಿಸಿದ್ದರು. ಇಂಥ ವ್ಯಕ್ತಿಗೆ ಸಮ್ಮೇಳನಾಧ್ಯಕ್ಷ ಗೌರವ ಮೊದಲೇ ಸಿಗಬೇಕಿತ್ತಾ?

ನಾನು ಹಾಗೆ ಯೋಚನೆ ಮಾಡಲ್ಲ. ಸ್ಥಾನ ಇರೋದು ಒಂದು, ಯೋಗ್ಯತೆ ಇರುವವರು ಅನೇಕರು. ಪ್ರತೀ ಸಲ ಏಳೆಂಟು ಜನರ ಹೆಸರು ಚರ್ಚೆಗೆ ಬರುತ್ತದೆ. ಅಷ್ಟೂ ಜನ ಅರ್ಹರೇ ಇರುತ್ತಾರೆ. ತಮ್ಮ ಕ್ಷೇತ್ರದಲ್ಲಿ ಬಹಳ ಸಾಧನೆ ಮಾಡಿದವರು. ಆದರೆ ಒಂದೇ ಸಲ ಆ ಸ್ಥಾನ ಕೊಡಕ್ಕಾಗಲ್ವೇ. ಆಯ್ಕೆ ಅನ್ನುವುದು ಬರುತ್ತೆ. ನಾವು ಡೆಮಾಕ್ರೆಸಿ ಪ್ರಕಾರ ಹೋಗ್ತೀವಿ. ಈ ಗೌರವ  ನನಗೆ ಈಗ ಬಂದಿದೆ. ಐದು ವರ್ಷ ತಡೆದು ಬರಬಹುದಿತ್ತು, ಬರದೆಯೂ ಇರಬಹುದಿತ್ತು. ಹಾಗಂತ ನಾನೇನು ಲೇಖಕ ಅಲ್ವೋ.. ನನ್ನ ಕೆಲಸ ನಾನು ಮಾಡೋದು, ಜನ ನನ್ನ ಕೆಲಸವನ್ನು ನೋಡ್ತಾನೇ ಇದ್ದಾರಲ್ಲ. ಕೊನೆಗೆ ಬರುವುದು ಅದೇ, ನಾವು ಜನಕ್ಕೆ ಎಷ್ಟು ಹತ್ರ ಆಗಿದ್ದೀವಿ, ನಾವು ಜನದೊಂದಿಗೆ ಇದ್ದೀವಾ ಅನ್ನೋದು.

ಜಿಎಸ್ ಶಿವರುದ್ರಪ್ಪ ಅವರು ತಮಾಷೆಗೆ ಹೇಳ್ತಿದ್ರು. ಕರ್ನಾಟಕೇತರವಾಗಿ ಜನಪ್ರಿಯವಾಗಿರುವ ಕನ್ನಡ ಲೇಖಕ ಅಂತ. ಎಷ್ಟೋ ಜನರಿಗೆ ಹೀಗೇ ಆಗುತ್ತೆ. ಅಮೆರಿಕಾ, ಲಂಡನ್‌ನಲ್ಲಿ ಹೆಸರಿರುತ್ತೆ. ಆದರೆ ಅವರೂರಲ್ಲಿ ಅವರ ಸಾಹಿತ್ಯದ ಬಗ್ಗೆ ಗೊತ್ತಿರುವುದೇ ಇಲ್ಲ. ನನಗೆ ಕನ್ನಡದಲ್ಲಿ ಬರೆದು, ಇಲ್ಲೇ ಬದುಕುವ ಆಸೆ. ಇಂಗ್ಲೀಷ್‌ನಲ್ಲಿ ಬರೆಯುವ ಆಸಕ್ತಿ ಇಲ್ಲ. ಬೇಂದ್ರೆ ಹೇಳ್ತಿದ್ರಲ್ಲಾ, ನಿಮಗೆ ಬೇಕಾದರೆ ಇಂಗ್ಲೀಷ್‌ನಲ್ಲಿ ಮಾಡ್ಕೊಳ್ಳಿ, ನಾನು ಕನ್ನಡದಲ್ಲೇ ಬರೆಯೋದು ಅಂತ. ನಾನೂ ಕನ್ನಡದ ಕನ್ನಡಿಯಲ್ಲಿ ಕನ್ನಡಿಸುತ್ತೇವೆ.

 ಹೌದೂ, ಈ ಕನ್ನಡತನಕ್ಕೆ ಎಲ್ಲಿ ಪೆಟ್ಟು ಬೀಳ್ತಿದೆ ಅನಿಸುತ್ತೆ, ಕನ್ನಡಿಗರು ಅಭಿಮಾನ ಶೂನ್ಯರಾಗ್ತಿದ್ದಾರೆ ಅನ್ನೋದು ಕ್ಲೀಷೆ ಆದರೂ ನಿಜವೇ ಅಲ್ವಾ?

ಅಮೆರಿಕಾಕ್ಕೆ ಹೋಗಲು ಸಾಧ್ಯವಾಗುವುದು, ಐಟಿ ಬಿಟಿಗಳಲ್ಲಿ ಸಂವಹನಕ್ಕೆ ಕಾರಣವಾಗುವುದು ಇಂಗ್ಲೀಷ್. ಹಾಗಾಗಿ ಜನ ಇಂಗ್ಲೀಷ್ ಕಡೆ ಹೋಗುತ್ತಾರೆ. ಐಟಿಬಿಟಿ ಮುಖ್ಯಸ್ಥರು ಯಾವಾಗಲೂ ಇಂಗ್ಲೀಷ್ ನಿರೀಕ್ಷೆ ಮಾಡ್ತಾರೆ. ಅವರು ತಮಗೆ ಬೇಕಾದ ಸಾಮಗ್ರಿಗಳನ್ನು ಹುಡುಕುತ್ತಾ ಇರುತ್ತಾರೆ. ಹೀಗಿರುವಾಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್ ಎಸ್ ವೆಂಕಟೇಶಮೂರ್ತಿಯವರ ಸಾಧನೆ ಎಲ್ಲಾ ಕ್ಷೇತ್ರಗಳಲ್ಲೂ ಹಬ್ಬಿದೆ.

ಕಲಬುರಗಿಯಲ್ಲಿ ಕನ್ನಡ ಹಬ್ಬ : ಸಾಹಿತ್ಯ ಸಮ್ಮೇಳನಕ್ಕೆ ಡೇಟ್ ಫಿಕ್ಸ್

ಕವಿ, ಕತೆಗಾರ, ನಾಟಕಕಾರ, ವಿಮರ್ಶಕ, ಅನುವಾದಕ, ನಿರ್ದೇಶಕ, ಚಿತ್ರಕತೆಗಾರ -ಹೀಗೆ ಹಲವು ಪ್ರತಿಭಾ ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎಚ್‌ಎಸ್‌ವಿ ಸಮ್ಮೇಳನವನ್ನು ಚುರುಕಾಗಿಸಬಲ್ಲವರು. ಹೊಸ ಮೊನಚನ್ನು ಕೊಡಬಲ್ಲವರು. ಹೀಗಾಗಿಯೇ ಈ ಸಲದ ಸಮ್ಮೇಳನಕ್ಕೆ ವೆಂಕಟೇಶ ಪ್ರಭೆ. ಸಾಹಿತ್ಯ ಸಮ್ಮೇಳನದ ತೂಗುಮಂಚದಲ್ಲಿ ಕನ್ನಡಮುಖಿಗಳಾಗುವುದು ಹೇಗೆ ಅನ್ನುವುದು ಮುಖ್ಯಪ್ರಶ್ನೆ.

ನಮ್ಮ ವಚನಕಾರರು ನೀವು ಎಲ್ಲರೊಂದಿಗೂ ಕನ್ನಡದಲ್ಲಿ ಮಾತನಾಡಿ, ದೇವರೊಂದಿಗೂ ಕನ್ನಡ ಮಾತಾಡಿ ಅಂದರು. ದೇವಸ್ಥಾನ, ಗುಡಿಗಳಲ್ಲಿ ಸಂಸ್ಕೃತ ಇತ್ತಲ್ಲ, ಅದರ ಬದಲು ಕನ್ನಡದಲ್ಲೇ ಭಜಿಸೋಣ ಅಂದವರು ದಾಸರು.

ಈಗೀಗ ಕಲಾಮಾಧ್ಯಮದಲ್ಲೂ ಇಂಗ್ಲೀಷೇ ಇದೆ. ಸಂಗೀತದಲ್ಲಿ ನೌ ಐ ಪ್ರೆಸೆಂಟ್ ಅಂತಾರಲ್ಲ, ಅದು ಯಾಕೆ? ನಮ್ಮ ನೆಲದ ಸಂಗೀತ, ಡ್ಯಾನ್ಸ್‌ಗೆ ಯಾಕೆ ಇಂಗ್ಲೀಷ್ ಲೇಪ?

ನಾವು ನಮ್ಮ ಕನ್ನಡದ ಆಟಗಾರರು ಅಂತ ಹೆಮ್ಮೆಯಿಂದ ಹೇಳ್ಕೊಳ್ತೀವಿ. ಕ್ರಿಕೆಟ್‌ನಲ್ಲಿ ಮ್ಯಾಚ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಕನ್ನಡದಲ್ಲಿ ಕೂಗಿದ್ದು ಕೇಳಿದರೆ ರೋಮಾಂಚನ. ಅವರ‌್ಯಾಕೆ ಕನ್ನಡದಲ್ಲೇ ಹೆಚ್ಚೆಚ್ಚು ಮಾತನಾಡಿ ಕನ್ನಡವನ್ನು ಜನಪ್ರಿಯ ಮಾಡಬಾರದು. ಅವರಿಗೆ ಲಕ್ಷಾಂತರ ಫಾಲೋವರ್ಸ್ ಇರ‌್ತಾರೆ. ಅವರು ಮಾತಾಡಿದ್ರೆ ಜನರೂ ಕನ್ನಡ ಮಾತಾಡ್ತಾರೆ. ಅದು ಕೇಂದ್ರದಿಂದ ಅಂಚಿನವರೆಗೂ ತಲುಪುತ್ತದೆ. ಈಗ ನೋಡಿ ಕನ್ನಡದಲ್ಲಿ ವಿಜಯ ಭಾರದ್ವಾಜ್ ಎಷ್ಟು ಚೆನ್ನಾಗಿ ಕಮೆಂಟರಿ ಕೊಡ್ತಾರೆ.

ಕಣವಿ ಅವರ ಮಗ ಅದ್ಭುತ ಕ್ರಿಕಿಟ್ ಕಮೆಂಟರ್. ಸಿನಿಮಾ ನಟ, ನಟಿಯರ ಮಾತುಗಳೂ ಈಗೀಗ ಇಂಗ್ಲೀಷ್‌ನಲ್ಲಿ ಇರುತ್ತವೆ. ಅವರು ಕನ್ನಡದಲ್ಲಿ ಮಾತಾಡಿದ್ರೆ ಕನ್ನಡ ಮಾತಾಡುವವರು ಹೆಚ್ಚುತ್ತಾರೆ. ರಾಜ್ ಕುಮಾರ್ ಮಾಡಿದ್ದೂ ಅದನ್ನೇ ಅಲ್ವಾ.. ಕನ್ನಡದಲ್ಲಿ ಮುಟ್ಟಿ, ಕನ್ನಡದಲ್ಲಿ ಮೂಸಿ, ಕನ್ನಡ ಸರ್ವೇಂದ್ರಿಯ ಭಾಷೆ ಆಗ್ಬೇಕು. ಇದನ್ನು ಮಾಡಲಿಕ್ಕೆ ಯಾವ ಸರ್ಕಾರ, ಯಾವ ಕಾನೂನೂ ಅಡ್ಡಿ ಬರಲ್ಲ. ಕ್ಲಾಸ್‌ರೂಮ್‌ನಲ್ಲಿ ಕನ್ನಡ ಮಾತಾಡ್ತೀರ, ಕಾರಿಡಾರ್ ನಲ್ಲಿ ಯಾಕೆ ಇಂಗ್ಲೀಷು? ಹುಡುಗರು ಕನ್ನಡ ಮಾತಾಡುವಂಥಾ ವಾತಾವರಣವನ್ನು ನಾನು ನನ್ನ ಕಾಲೇಜ್‌ನಲ್ಲಿ ಮಾಡಿದ್ದೆ.

ನಾವಾಗ ಕನ್ನಡ ಸಂಘ ಕಟ್ಟಿದ್ವಿ. ಹುಡುಗರಿಗೆ ಕನ್ನಡ ಭಾವಗೀತೆ ಕೇಳಿಸಿದ್ವಿ. ಕನ್ನಡ ಕವಿಗಳನ್ನು ತೋರಿಸಿದ್ವಿ, ಅವರಿಗೂ ಅಭಿಮಾನ ಬಂತು. ಆ ಥರ ಕೆಲಸ ಆಗ್ಬೇಕು ಕನ್ನಡ ನಿತ್ಯೋತ್ಸವ ಆಗಬೇಕು. ಈ ನಿತ್ಯೋತ್ಸವ ಅಂತ ಮೊದಲು ಹೇಳಿದ್ದು ಪಂಪ. ಆಮೇಲೆ ನಿಸಾರ್ ಸೊಗಸಾದ ಕವನ ಬರೆದರು. ಕನ್ನಡ ನಿತ್ಯೋತ್ಸವ ಆಗಬೇಕಾದರೆ ಕನ್ನಡವನ್ನು ದೈನಿಕದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಬಳಸಬೇಕು. ಇದು ಅನ್ನದ ಭಾಷೆ ಆಗ್ಬೇಕು. ಸರ್ಕಾರಕ್ಕೆ ಹೀಗೆ ಮಾಡಲು ಶಕ್ತಿ ಇದೆ. ನೀವು ಅಭಿವೃದ್ಧಿ ಹೆಸರಲ್ಲಿ ಸುರಿಯುವ ಹಣದಲ್ಲಿ ಸ್ವಲ್ಪ ಭಾಗ ಕನ್ನಡಕ್ಕೂ ನೀಡಿ. ಅದನ್ನು ಕನ್ನಡ ಸಂಸ್ಕೃತಿಗೆ , ಭಾಷೆಗೆ ವಿನಿಯೋಗ ಮಾಡಿದರೆ ಅದು ಸದುಪಯೋಗ ಆಗುತ್ತೆ.

 ಇದನ್ನು ನಿರ್ಣಯದಲ್ಲಿ ಮಂಡಿಸುತ್ತೀರಾ?

ಅದೊಂದು ಬೇರೆ ವ್ಯವಸ್ಥೆ. ಅದನ್ನು ಪರಿಷತ್‌ನ ಕಾರ್ಯಕಾರಿ ಮಂಡಳಿಯವ್ರ ನಿರ್ಧರಿಸುತ್ತಾರೆ. ನನ್ನ ಭಾಷಣಕ್ಕೂ ಅದಕ್ಕೂ ಸಂಬಂಧ ಇರಲ್ಲ. ನನ್ನ ಭಾಷಣದಿಂದ ಕೆಲವು ಅಂಶಗಳನ್ನು ಅವರು ಪಡೆಯಬಹುದು ಅಷ್ಟೇ.

ಸಮ್ಮೇಳನಾಧ್ಯಕ್ಷರ ಭಾಷಣ ಅಂದರೆ ಅದಕ್ಕಿರುವ ಮಹತ್ವವೇ ಬೇರೆ. ತಾವು ಈ ಬಾರಿ ಮಾತನಾಡಬೇಕು ಅಂದುಕೊಂಡಿರುವುದು?

ಮುಖ್ಯವಾಗಿ ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಮಾಜ ಇವುಗಳನ್ನಿಟ್ಟು ಮಾತಾಡಬೇಕು. ಭಾಷೆಯ ಹಂಗಿಲ್ಲದ ಕನ್ನಡದ ಬಗ್ಗೆ ಮಾತಾಡಬೇಕು ಅಂತಿದೆ. ಸಾಹಿತ್ಯ, ಕಾವ್ಯ, ನಾಟಕ ಭಾಷೆಯ ಹಂಗಿನಲ್ಲೇ ಇದೆ. ಆದರೆ ಶಿಲ್ಪ ಅಂತೀವಲ್ಲ, ಅದೇನು, ಅದರಲ್ಲಿ ಭಾಷೆ ಎಲ್ಲಿದೆ.. ಹೊಯ್ಸಳ ಶಿಲ್ಪ ಅಂತೀವಿ, ಕದಂಬ ಶಿಲ್ಪ ಅಂತೀವಿ. ವಾಸ್ತುಶಿಲ್ಪ ಬಗ್ಗೆ ಮಾತಾಡುವಾಗ ಅಲ್ಲಿ ಬಳಸುವ ಭಾಷೆ ಯಾವುದು.. ಅಂದರೆ ‘ಕನ್ನಡ’ ಎಂಬುದು ಭಾಷೆಯನ್ನು ಒಳಗೊಂಡಿದೆ. ಭಾಷಾತೀತವಾಗಿಯೂ ಇದೆ. ಅದನ್ನು ನಾವು ಚಿಂತಿಸಬೇಕಿದೆ. ಎಲ್ಲಿ ಭಾಷಾತೀತವಾಗಿ ನಾವು ಬದುಕಿದ್ದೀವಿ ಅಂತ. ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು..’ ಅಂತಾರೆ ಕುವೆಂಪು.

ಇದರರ್ಥ ಕನ್ನಡಿಗನಾಗಿರು ಅಂತ. ಕನ್ನಡ ಅಂದರೆ ಭಾಷೆಯ ಜೊತೆಗೆ ಅದು ಲೈಫ್‌ಸ್ಟೈಲ್. ಇದನ್ನು ಗಮನಿಸಬೇಕು. ಕನ್ನಡ ಅನ್ನುವುದು ವಿಸ್ತಾರವಾದದ್ದು. ಅದರ ನಡುವೆ ಭಾಷೆ ಅನ್ನುವುದು ಇದೆ. ಭಾಷೆ ಹೃದಯ. ಆದರೆ ಸುತ್ತ ಭಾಷಾತೀತವಾದ ಅನೇಕ ಸಂಗತಿಗಳು ಕನ್ನಡದಲ್ಲಿ ನಡೀತಾ ಇವೆ. ನಮ್ಮ ಆತಿಥ್ಯ, ಅಡುಗೆ, ಉಡುಗೆ, ಆಚರಣೆ ನಡಾವಳಿ ಎಲ್ಲದರಲ್ಲೂ ಅದಿದೆ. ಕನ್ನಡ ಅನ್ನುವುದು ಜನಪದ. ಕನ್ನಡ ಅಂದರೆ ಜನವೂ ಹೌದು.

ಕಳೆದ ಮೂರು ದಶಕಗಳಿಂದ ಸಾಹಿತ್ಯ ಸಮ್ಮೇಳನ ವಾರದ ಕೊನೆಯಲ್ಲೇ ಬರುವುದು ರೂಢಿ. ಅದು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಪ್ರಕಾಶಕರಿಗೂ ಅನುಕೂಲ. ಆದರೆ ಈ ಬಾರಿ ವಾರದ ಮಧ್ಯದಲ್ಲಿ ಬಂದಿದೆ. ಸಮ್ಮೇಳನಕ್ಕೆ ಬರುವ ಯುವಜನರಿಗೆ ಸಮಸ್ಯೆಯಾಗಿದೆ. ಇದು ನಿಮ್ಮ ಗಮನಕ್ಕೆ ಬಂದಿಲ್ವಾ?

ಖಂಡಿತಾ ಇಲ್ಲ. ಈ ಬಗ್ಗೆ ಸಾಹಿತ್ಯ ಪರಿಷತ್‌ನಲ್ಲಿ ಮಾತಾಡುತ್ತೇನೆ. ಅವರು ಯಾಕೆ ಹೀಗೆ ಮಾಡಿದರು ಅನ್ನೋದು ನನಗೂ ಗೊತ್ತಿಲ್ಲ.

- ಪ್ರಿಯಾ ಕೇರ್ವಾಶೆ 

click me!