ಬಜೆಟ್‌ನಿಂದ ಯಾರಿಗೆ ಏನು ಬೇಕು? ವಿತ್ತ ಮಂತ್ರಿಯಿಂದ ಜಾದೂ ನಿರೀಕ್ಷೆ!

By Suvarna News  |  First Published Jan 29, 2020, 1:36 PM IST

ದೇಶದ ಜಿಡಿಪಿ ಬೆಳವಣಿಗೆ ದರ ಕುಸಿಯುತ್ತಿದೆ. ಕೈಗಾರಿಕೆ, ಆಟೋಮೊಬೈಲ್‌, ಮೂಲಸೌಕರ್ಯ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಬೆಳವಣಿಗೆ ಧನಾತ್ಮಕವಾಗಿಲ್ಲ. ಪ್ರಾಕೃತಿಕ ವಿಕೋಪಗಳೂ ಅರ್ಥ ವ್ಯವಸ್ಥೆಗೆ ಪೆಟ್ಟು ನೀಡಿವೆ. ಹೀಗಾಗಿ ದೇಶದ ಆರ್ಥಿಕತೆಗೆ ಈ ಬಾರಿಯ ಬಜೆಟ್‌ ಮೇಲೆ ಸಾಕಷ್ಟುನಿರೀಕ್ಷೆಯಿದೆ. 


ಇದೇ ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2020-21ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಸದ್ಯ ಭಾರತದ ಜಿಡಿಪಿ ಬೆಳವಣಿಗೆ ದರ ಸಾರ್ವಕಾಲಿಕ ಕುಸಿತ ಕಂಡಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಆರ್ಥಿಕತೆ ಹಿಂಜರಿಕೆಯಲ್ಲಿರುವುದರಿಂದ ದೇಶದ ಎಲ್ಲಾ ಕ್ಷೇತ್ರಗಳೂ ಹಿಂಜರಿಕೆ ಅನುಭವಿಸುತ್ತಿವೆ. ಈ ಸಂದರ್ಭದಲ್ಲಿ ಮಂಡನೆಯಾಗುತ್ತಿರುವ ಬಜೆಟ್‌ ಸವಾಲಿನ ಬಜೆಟ್‌ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ಬಜೆಟ್‌ನಿಂದ ಯಾರು ಏನೇನು ನಿರೀಕ್ಷೆ ಹೊಂದಿದ್ದಾರೆ ಎಂಬ ಚಿತ್ರಣ ಇಲ್ಲಿದೆ. ಇವೆಲ್ಲವೂ ಈಡೇರಲಿವೆಯೇ; ಮೂರು ದಿನ ಕಾದು ನೋಡಬೇಕು.

Latest Videos

undefined

ದೇಶದ ನಿರೀಕ್ಷೆ ಜಿಡಿಪಿ ಬೆಳವಣಿಗೆ ದರಕ್ಕೆ ವೇಗ

ದೇಶದ ಜಿಡಿಪಿ ಬೆಳವಣಿಗೆ ದರ ಕುಸಿಯುತ್ತಿದೆ. ಕೈಗಾರಿಕೆ, ಆಟೋಮೊಬೈಲ್‌, ಮೂಲಸೌಕರ್ಯ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಬೆಳವಣಿಗೆ ಧನಾತ್ಮಕವಾಗಿಲ್ಲ. ಪ್ರಾಕೃತಿಕ ವಿಕೋಪಗಳೂ ಅರ್ಥ ವ್ಯವಸ್ಥೆಗೆ ಪೆಟ್ಟು ನೀಡಿವೆ. ಹೀಗಾಗಿ ದೇಶದ ಆರ್ಥಿಕತೆಗೆ ಈ ಬಾರಿಯ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

2020 ಕೇಂದ್ರ ಬಜೆಟ್: ಆಟೋಮೊಬೈಲ್ ಕ್ಷೇತ್ರದ ನಿರೀಕ್ಷೆಗಳೇನು?

ಸಾರ್ವಕಾಲಿಕ ದಾಖಲೆ ಎಂಬಂತೆ ಕುಸಿಯುತ್ತಿರುವ ಆರ್ಥಿಕತೆಯ ಚೇತರಿಕೆಗೆ ಮತ್ತು ಉದ್ಯೋಗ ಸೃಷ್ಟಿಗೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದು ಎಲ್ಲ ಭಾರತೀಯರ ನಿರೀಕ್ಷೆ. ಹಾಗಾಗಿ ತೆರಿಗೆ ನೀತಿ ಸುಧಾರಣೆ, ಬಂಡವಾಳ ಆಕರ್ಷಣೆಗೆ ತ್ವರಿತ ಕ್ರಮ, ಬ್ಯಾಂಕಿಂಗ್‌ ವಲಯದ ಸಮಸ್ಯೆಗಳಿಗೆ ಪರಿಹಾರ ಸೇರಿ ಹಲವು ಉಪಕ್ರಮಗಳನ್ನು ಎದುರುನೋಡಲಾಗುತ್ತಿದೆ.

ರೈತರ ನಿರೀಕ್ಷೆ

ಸರ್ಕಾರದಿಂದಲೇ ಕೃಷ್ಯುತ್ಪನ್ನ ಖರೀದಿ

ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ರೈತರ ಬದುಕನ್ನು ಮೇಲೆತ್ತಲು ಸರ್ಕಾರ ಇದುವರೆಗೆ ಕೈಗೊಂಡ ಯಾವ ಕ್ರಮಗಳೂ ನಿರೀಕ್ಷಿತ ಫಲ ನೀಡಿಲ್ಲ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಎನ್ನಬಹುದಾದಂತಹ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಪ್ರಮುಖ ಯೋಜನೆಗಳಿರಲಿವೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿ 2022ಕ್ಕೆ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಮೂರು ವರ್ಷದ ಹಿಂದೆ ಹೇಳಿದ್ದರು. ಅದನ್ನು ಸಾಕಾರಗೊಳಿಸಲು ವಿವಿಧ ಕಾರ್ಯಕ್ರಮಗಳು, ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ, ವ್ಯವಸಾಯ ವಲಯದ ಸಮಗ್ರ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಗೆ ಉತ್ತೇಜನ, ಕೃಷಿಕರ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿಸುವ ವ್ಯವಸ್ಥೆಯನ್ನು ರೈತರು ಈ ಬಜೆಟ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ.

ಮಹಿಳೆಯರ ನಿರೀಕ್ಷೆ

ದೇಶಾದ್ಯಂತ ಸುರಕ್ಷಿತ ವಾತಾವರಣ

ಕಳೆದ ವರ್ಷದ ಬಜೆಟ್‌ನಲ್ಲಿ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯಾ ನಿಧಿಗೆ 891 ಕೋಟಿ ರು. ಮೀಸಲಿಡಲಾಗಿತ್ತು. ಆದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಗೆ ಬಜೆಟ್‌ನಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಪ್ರಮುಖ ನಿರೀಕ್ಷೆಗಳಲ್ಲಿ ಒಂದು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ, ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶ, ದೆಹಲಿಯಲ್ಲಿ ಜಾರಿಯಲ್ಲಿರುವ ಮಹಿಳೆಯರಿಗಾಗಿಯೇ ಕ್ಯಾಬ್‌ ವ್ಯವಸ್ಥೆ, ಪಿಂಕ್‌ ಆಟೋ ಮತ್ತು ಪಿಂಕ್‌ ಬಸ್‌ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿ ಮಾಡಬಹುದೆಂಬ ನಿರೀಕ್ಷೆ ಇದೆ. ಏಕಾಂಗಿಯಾಗಿ ಪ್ರವಾಸ ಕೈಗೊಳ್ಳುವ ಮಹಿಳೆಯರ ರಕ್ಷಣೆಗೂ ಸರ್ಕಾರ ಭದ್ರತೆಗೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಬಜೆಟ್ ಮೂಲಕ ಚೀನಾಗೆ ಗುದ್ದು: ಮೋದಿ ಪ್ಲ್ಯಾನ್ ಮಾಡ್ತಿದೆ ಸದ್ದು!

ಯುವಜನರ ನಿರೀಕ್ಷೆ

ಉದ್ಯೋಗ, ಸುಲಭ ಶೈಕ್ಷಣಿಕ ಸಾಲ

ಸದ್ಯ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಬಾರೀ ಏರಿಕೆಯಾಗುತ್ತಿದೆ. ಆರ್ಥಿಕ ಹಿಂಜರಿಕೆಯಿಂದಾಗಿ ನೌಕರರನ್ನು ಕೆಲಸದಿಂದ ತೆಗೆಯುವುದು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯುವ ಜನರ ಮೊದಲ ಬೇಡಿಕೆ ಉದ್ಯೋಗ. ಇನ್ನು ಶೈಕ್ಷಣಿಕ ಸಾಲದ ನಿಯಮಗಳ ಪುನರ್‌ ಪರಿಶೀಲನೆ ಹಾಗೂ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಕೂಡ ಯುವಜನರು ನಿರೀಕ್ಷಿಸುತ್ತಿದ್ದಾರೆ. ಹಾಗೆಯೇ ಗ್ರಾಹಕ ಉತ್ಪನ್ನಗಳ ಮೇಲಿನ ಜಿಎಸ್ಟಿವಿನಾಯ್ತಿ, ವೈಯಕ್ತಿಕ ನೈರ್ಮಲ್ಯ ಕಾಪಾಡುವ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ, ಪೆಟ್ರೋಲ್‌- ಡೀಸೆಲ್‌ ದರ ಕಡಿತ ಮತ್ತು ಸುಲಭ ಸಾರಿಗೆ ವ್ಯವಸ್ಥೆ ಭಾರತದ ಭವಿಷ್ಯದ ಪ್ರಜೆಗಳ ನಿರೀಕ್ಷೆಗಳು.

ಮಧ್ಯಮ ವರ್ಗದ ನಿರೀಕ್ಷೆ

ಆದಾಯ ತೆರಿಗೆ ವಿನಾಯ್ತಿ ಏರಿಕೆ

ಕೇಂದ್ರ ಸರ್ಕಾರ ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಕೆಲ ಷರತ್ತಿಗೆ ಒಳಪಟ್ಟು 5 ಲಕ್ಷ ರು.ವರೆಗೆ ಹೆಚ್ಚಳ ಮಾಡಿದೆ. ಈ ಬಾರಿ ಆದಾಯ ತೆರಿಗೆ ವಿನಾಯ್ತಿಯ ಸ್ಲಾ್ಯಬ್‌ ಅನ್ನು ಇನ್ನಷ್ಟುಏರಿಸುವ ನಿರೀಕ್ಷೆಯನ್ನು ಮಧ್ಯಮ ವರ್ಗದವರು ಹೊಂದಿದ್ದಾರೆ. ಆದಾಯ ತೆರಿಗೆ ವಿನಾಯ್ತಿ ಮಿತಿ ಈಗಿರುವ 5 ಲಕ್ಷ ರು.ನಿಂದ 7 ಲಕ್ಷ ರು.ಗೆ ಏರಿಕೆಯಾದರೆ ಜನಸಾಮಾನ್ಯ ತೆರಿಗೆ ಪಾವತಿದಾರರಿಗೆ ಸಾಕಷ್ಟುಉಳಿತಾಯವಾಗಲಿದೆ. ಈಗಿರುವ ತೆರಿಗೆ ಸ್ಲಾಬ್ ಬದಲಿಸಿ, 7 ಲಕ್ಷ ರು.ಗಳಿಂದ 10 ಲಕ್ಷ ರು.ತನಕದ ಆದಾಯಕ್ಕೆ ಶೇ.10 ಹಾಗೂ 10 ಲಕ್ಷ ರು.ಗಳಿಂದ 20 ಲಕ್ಷ ರು. ಆದಾಯಕ್ಕೆ ಶೇ.20ರಷ್ಟುತೆರಿಗೆ ವಿಧಿಸುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. 20 ಲಕ್ಷ ರು.ಗಳಿಂದ 10 ಕೋಟಿ ರು.ವರೆಗೆ ಶೇ.30 ಮತ್ತು 10 ಕೋಟಿ ರು.ಗೂ ಹೆಚ್ಚಿನ ಆದಾಯಕ್ಕೆ ಶೇ.35 ತೆರಿಗೆ ವಿಧಿಸುವ ಸಾಧ್ಯತೆ ಇದೆ.

ಜನಸಾಮಾನ್ಯರ ನಿರೀಕ್ಷೆ

ಸೆಕ್ಷನ್‌ 80ಸಿ ತೆರಿಗೆ ಕಡಿತ ಮಿತಿ ಹೆಚ್ಚಳ

ಪ್ರಸ್ತುತ ಸೆಕ್ಷನ್‌ 80ಸಿ ಅಡಿ ವಿಮೆ, ಪಿಎಫ್‌, ಗೃಹ ಸಾಲ ಇತ್ಯಾದಿಗಳಿಗೆæ 1.5 ಲಕ್ಷ ರು.ವರೆಗೆ ತೆರಿಗೆ ಕಡಿತ ಮಿತಿ ಇದೆ. ಇದನ್ನು 2 ಲಕ್ಷ ರು.ಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ತೆರಿಗೆದಾರರ ಹಲವಾರು ರೀತಿಯ ಪಾವತಿಗಳಾದ (ಉದಾ: ಮಕ್ಕಳ ಟ್ಯೂಶನ್‌ ಫೀ), ಗೃಹಸಾಲ ಮತ್ತು ನಿವೃತ್ತಿ ಜೀವನದ ಹೂಡಿಕೆಗಳು ಹೀಗೆ ಹಲವಾರು ಪಾವತಿಗಳಿಗೆ 80ಸಿ ಅಡಿ ವಿನಾಯ್ತಿ ಸಿಗುತ್ತದೆ. ಆದರೆ ಇಷ್ಟೊಂದು ರೀತಿಯ ಪಾವತಿಗಳಿಗೆ ಕೇವಲ 1.5 ಲಕ್ಷ ರು.ವರೆಗೆ ತೆರಿಗೆ ವಿನಾಯಿತಿ ನೀಡಿದ್ದು ಸಾಲುತ್ತಿಲ್ಲ ಎಂಬ ಬೇಡಿಕೆ ಇದೆ. ಹಾಗಾಗಿ 80ಸಿ ಅಡಿಯಲ್ಲಿ ಮಾಡಲಾಗುವ ಹೂಡಿಕೆಯ ಮೇಲೆ ಸರ್ಕಾರ ತೆರಿಗೆ ವಿನಾಯ್ತಿಯ ಮಿತಿಯನ್ನು 2.5 ಲಕ್ಷ ರು.ವರೆಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಜೊತೆಗೆ ಎನ್‌ಎಸ್‌ಸಿಯಲ್ಲಿ 50 ಸಾವಿರ ರು.ಗಳ ವರೆಗಿನ ಹೂಡಿಕೆಗೆ ತೆರಿಗೆ ವಿನಾಯ್ತಿ ಘೋಷಿಸುವ ನಿರೀಕ್ಷೆಯಿದೆ.

ಮನೆ ಖರೀದಿದಾರರ ನಿರೀಕ್ಷೆ

ಗೃಹಸಾಲ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ

2019ರ ಮಾಚ್‌ರ್‍ 31ರ ಒಳಗೆ ಪಡೆದ ಗೃಹ ಸಾಲದ ಪೈಕಿ 3.5 ಲಕ್ಷ ರು.ಗಳಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆಯಬಹುದು ಎಂದು ಕಳೆದ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದರು. ಅದು ಜಾರಿಯಲ್ಲಿದೆ. ಒಟ್ಟು 45 ಲಕ್ಷ ರು.ವರೆಗಿನ ಸಾಲಕ್ಕೆ ಮಾತ್ರ ಈ ತೆರಿಗೆ ವಿನಾಯಿತಿ ಸಿಗುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಈ ವಿನಾಯಿತಿಯನ್ನು ಇನ್ನೂ ಹೆಚ್ಚಿಸಬೇಕು ಎಂಬುದು ಮನೆ ಖರೀದಿದಾರರ ನಿರೀಕ್ಷೆ.

ಮತ್ತೆ ಸೇಲ್‌ಗಿದೆ ಏರ್‌ ಇಂಡಿಯಾ: 100% ಷೇರು ಮಾರಲು ಕೇಂದ್ರ ಸಜ್ಜು!

ಪಿಂಚಣಿದಾರರ ನಿರೀಕ್ಷೆ

ಎನ್‌ಪಿಎಸ್‌ ಹಿಂಪಡೆತಕ್ಕೆ ತೆರಿಗೆ ವಿನಾಯ್ತಿ

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಣ ಹಿಂಪಡೆಯುವಾಗ ಅದಕ್ಕೆ ಭಾಗಶಃ ತೆರಿಗೆ ಪಾವತಿಸಬೇಕಾಗುತ್ತದೆ. ಈ ಪಿಂಚಣಿ ಯೋಜನೆಯಲ್ಲಿ ಹೂಡಲಾಗುವ ಮೊತ್ತ ಹಾಗೂ ಇತರ ಸಂಚಿತ ಮೊತ್ತಕ್ಕೆ ಒಂದು ಹಂತದವರೆಗೆ ತೆರಿಗೆ ವಿನಾಯಿತಿ ಇದ್ದರೂ, ಮೊತ್ತ ಹಿಂಪಡೆತಗಳಿಗೆ ಮಾತ್ರ ಚಾಲ್ತಿಯಲ್ಲಿರುವ ನಿಯಮಗಳಂತೆ ತೆರಿಗೆ ಪಾವತಿಸಬೇಕಿದೆ. ಎನ್‌ಪಿಎಸ್‌ ಸದಸ್ಯರು ತಮಗೆ 60 ವರ್ಷ ವಯಸ್ಸಾದ ನಂತರ ಎನ್‌ಪಿಎಸ್‌ ಖಾತೆಯಲ್ಲಿ ಜಮೆಯಾಗಿರುವ ಶೇ.60ರಷ್ಟುಮೊತ್ತವನ್ನು ಹಿಂಪಡೆಯಬಹುದು. ಇದರಲ್ಲಿ ಶೇ.40 ಮೊತ್ತಕ್ಕೆ ತೆರಿಗೆ ವಿನಾಯಿತಿ ಇದ್ದು, ಶೇ.20ಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಇನ್ನುಳಿದ ಶೇ.40ರಷ್ಟುಮೊತ್ತವನ್ನು ಮಾಸಿಕ ಪಿಂಚಣಿ ಪಡೆಯುವ ಸಲುವಾಗಿ ಖಾತೆಯಲ್ಲಿ ಹಾಗೆಯೇ ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ಹಿಂಪಡೆಯಬಹುದಾದ ಸಂಪೂರ್ಣ ಶೇ.60ರಷ್ಟುಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

ನೌಕರರ ನಿರೀಕ್ಷೆ

ಸ್ಟಾಂಡರ್ಡ್‌ ಡಿಡಕ್ಷನ್‌ ಹೆಚ್ಚಳ

2019ರ ಬಜೆಟ್‌ನಲ್ಲಿ ಸಂಬಳದಾರರ ಸ್ಟಾಂಡರ್ಡ್‌ ಡಿಡಕ್ಷನ್‌ ಅನ್ನು 40 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಬಾರಿ ಇದನ್ನು 75000ಕ್ಕೆ ಏರಿಸಬಹುದೆಂದು ವೇತನದಾರರು ನಿರೀಕ್ಷಿಸಿದ್ದಾರೆ. ವ್ಯಕ್ತಿಯೊಬ್ಬನು ಮಾಡಿದ ಹೂಡಿಕೆ ಅಥವಾ ವೆಚ್ಚಗಳನ್ನು ಪರಿಗಣಿಸದೆ ಆದಾಯ ತೆರಿಗೆ ವಿಧಿಸುವ ಮೊತ್ತದಲ್ಲಿ ಮಾಡಲಾಗುವ ಕಡಿತವನ್ನು ಸ್ಟಾಂಡರ್ಡ್‌ ಡಿಡಕ್ಷನ್‌ ಎನ್ನಲಾಗುತ್ತದೆ. ಇದಕ್ಕಾಗಿ ಯಾವುದೇ ಹೂಡಿಕೆ ಸಾಕ್ಷ್ಯಗಳು ಅಥವಾ ವೆಚ್ಚದ ರಸೀದಿಗಳನ್ನು ಸಲ್ಲಿಸಬೇಕಿರುವುದಿಲ್ಲ.

ಹೂಡಿಕೆದಾರರ ನಿರೀಕ್ಷೆ

ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ರದ್ದು

2018-19ರ ಬಜೆಟ್‌ನಲ್ಲಿ ಅರುಣ್‌ ಜೇಟ್ಲಿ ಕೆಲ ವರ್ಷಗಳಿಂದ ವಿನಾಯ್ತಿ ನೀಡಿದ್ದ ದೀರ್ಘಾವಧಿ ಕ್ಯಾಪಿಟಲ್‌ ಗೇನ್ಸ್‌ ತೆರಿಗೆಯನ್ನು ಮತ್ತೆ ಜಾರಿಗೆ ತಂದಿದ್ದರು. ಆದಾಯ ತೆರಿಗೆ ಕಾನೂನಿನ ಪ್ರಕಾರ ಕ್ಯಾಪಿಟಲ್‌ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್‌ ಫ್‌ಂಡ್‌, ಬಾಂಡ್‌ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ 1 ಲಕ್ಷಕ್ಕಿಂತ ಹೆಚ್ಚು ಲಾಭ ಬಂದರೆ ಅದಕ್ಕೆ 10% ತೆರಿಗೆ ವಿಧಿಸಲಾಗುತ್ತದೆ. ಈ ಕ್ಯಾಪಿಟಲ್‌ ಗೇನ್ಸ್‌ ತೆರಿಗೆಯನ್ನು ತೆಗೆದುಹಾಕಬೇಕು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿದೆ. ಮುಂದುವರೆಸಿದರೂ ತೆರಿಗೆ ವಿನಾಯ್ತಿ ಮಿತಿಯನ್ನು 1 ಲಕ್ಷಕ್ಕಿಂತ ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ.

"

click me!