21ನೇ ವಯಸ್ಸಿಗೆ ಸ್ಟಾಕ್‌ ಬ್ರೋಕರ್‌ ಆಗಿ ಜೀವನ ಆರಂಭಿಸಿ ಉತ್ತುಂಗಕ್ಕೇರಿದ್ದ ಸಿದ್ಧಾರ್ಥ!

By Kannadaprabha News  |  First Published Jul 31, 2019, 2:24 PM IST

ಮೂಡಿಗೆರೆಯ ಹುಡುಗ ‘ಕಾಫಿ ಕಿಂಗ್‌’| ಆಗರ್ಭ ಶ್ರೀಮಂತನಾಗಿದ್ದರೂ ಉದ್ಯಮ ಸಾಹಸಕ್ಕಿಳಿದು ಸಾಮ್ರಾಜ್ಯ ಕಟ್ಟಿದ ಸಿದ್ಧಾರ್ಥ| ಸ್ಟಾಕ್‌ ಬ್ರೋಕರ್‌ ಆಗಿ ಜೀವನ ಆರಂಭಿಸಿ ಉತ್ತುಂಗಕ್ಕೇರಿದ್ದ ಎಸ್‌.ಎಂ. ಕೃಷ್ಣ ಅಳಿಯ| 7.5 ಲಕ್ಷ ಕೈಗಿಟ್ಟು ನಷ್ಟವಾದರೆ ಊರಿಗೆ ಬಾ ಎಂದಿದ್ದರು ತಂದೆ| ಷೇರುಪೇಟೆಯಿಂದ ಗಳಿಸಿದ ಹಣದಲ್ಲಿ ಕಾಫಿ ತೋಟ ಖರೀದಿ| 


ಚಿಕ್ಕಮಗಳೂರು[ಜು.31]: ನೂರಾರು ಎಕರೆ ಕಾಫಿ ತೋಟ ಹೊಂದಿದ್ದ ಆಗರ್ಭ ಶ್ರೀಮಂತರ ಕುಟುಂಬವದು. ಕೂತು ಉಂಡರೂ ಕರಗದಷ್ಟುಸಂಪತ್ತು ಇದ್ದಾಗ್ಯೂ ಉದ್ಯಮ ನಡೆಸುವ ಸಾಹಸಕ್ಕಿಳಿದು, ದೇಶದ ‘ಕಾಫಿ ಕಿಂಗ್‌’ ಪಟ್ಟಕ್ಕೇರಿದವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿ.ಜಿ. ಸಿದ್ಧಾರ್ಥ. ದಕ್ಷಿಣ ಭಾರತದಲ್ಲಷ್ಟೇ ಹೆಚ್ಚಾಗಿ ಜನಪ್ರಿಯವಾಗಿದ್ದ ಕಾಫಿಯ ರುಚಿಯನ್ನು ದೇಶದ ಉದ್ದಗಲದ ಜನರ ನಾಲಿಗೆಗೂ ಮುಟ್ಟಿಸಿದ ಕೀರ್ತಿ ಅವರದ್ದು. ಅವರ ಜೀವನವೇ ಒಂದು ಯಶೋಗಾಥೆ. ಮಂಗಳೂರಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಮುಗಿಸಿ, 21ನೇ ವಯಸ್ಸಿಗೇ ಮುಂಬೈಗೆ ಹೋಗಿ ಸ್ಟಾಕ್‌ ಬ್ರೋಕರ್‌ ಆಗಿದ್ದವರು ಬೆಂಗಳೂರಿಗೆ ಬಂದು ಉದ್ಯಮ ಸಾಮ್ರಾಜ್ಯ ಕಟ್ಟಿದ್ದರ ಹಿಂದೆ ದಶಕಗಳ ಶ್ರಮವಿದೆ. ಅದೆಲ್ಲದರ ಫಲವಾಗಿ ಸುಮಾರು 1 ಲಕ್ಷ ಮಂದಿ ಸಿದ್ಧಾರ್ಥ ಅವರಿಂದಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜೀವನ ಕಂಡುಕೊಂಡಿದ್ದಾರೆ.

21ನೇ ವಯಸ್ಸಿಗೇ ಸ್ಟಾಕ್‌ ಬ್ರೋಕರ್‌

Latest Videos

ಮಂಗಳೂರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ಸಿದ್ಧಾರ್ಥ ಅವರಿಗೆ ಷೇರು ಪೇಟೆಯ ಬಗ್ಗೆ ಹೆಚ್ಚಿನ ಮಾಹಿತಿ ಗ್ರಹಿಸಬೇಕು ಎಂಬ ಅತೀವ ಆಸಕ್ತಿ ಮೂಡಿತ್ತು. 1983ರಲ್ಲಿ 21ನೇ ವಯಸ್ಸಿನಲ್ಲಿ ಸೀದಾ ಬೆಳಗಾವಿಗೆ ಬಸ್‌ ಹತ್ತಿದ ಅವರು ಅಲ್ಲಿಂದ ಮುಂಬೈ ತಲುಪಿದರು. ಅಪರಿಚಿತ ಊರು. ಯಾರೂ ಗೊತ್ತಿಲ್ಲ. ಹೂಡಿಕೆ ನಿಯತಕಾಲಿಕೆಯೊಂದರಲ್ಲಿ ಮಹೇಂದ್ರ ಕಂಪಾನಿ (ಬಾಂಬೆ ಷೇರುಪೇಟೆ ಮಾಜಿ ಅಧ್ಯಕ್ಷ) ಅವರ ಬಗ್ಗೆ ಲೇಖನ ಬಂದಿತ್ತು. ಅದನ್ನು ಓದಿ ಅವರನ್ನು ಭೇಟಿ ಮಾಡಲೇಬೇಕು ಎಂಬ ತುಡಿತದೊಂದಿಗೆ ಸಿದ್ಧಾರ್ಥ ಮುಂಬೈಗೆ ತೆರಳಿದ್ದರು.

ನಾರಿಮನ್‌ ಪಾಯಿಂಟ್‌ನಲ್ಲಿ ಮಹೇಂದ್ರ ಕಂಪಾನಿ ಹೊಂದಿದ್ದ ಜೆ.ಎಂ. ಫೈನಾನ್ಷಿಯಲ್‌ ಕಚೇರಿಗೆ ತಲುಪಿದ ಸಿದ್ಧಾರ್ಥ ಅವರಿಗೆ ಅಲ್ಲಿದ್ದ ಲಿಫ್ಟ್‌ ಕಂಡು ಗಾಬರಿಯಾಯಿತು. ಜೀವನದಲ್ಲಿ ಎಂದೂ ನೋಡಿರದ ಎಲಿವೇಟರ್‌ ಸಹವಾಸವೇ ಬೇಡ ಎಂದು ಆರು ಮಹಡಿ ಏರಿ, ಸುಸ್ತಾಗಿ ಕಂಪಾನಿ ಅವರ ಕಚೇರಿಗೆ ತಲುಪಿದರು. ಅಲ್ಲಿದ್ದ ಕಂಪಾನಿ ಅವರ ಸೆಕ್ರೆಟರಿ ತಮಿಳು ಭಾಷಿಕ. ಆದರೆ ಬೆಂಗಳೂರಿಗ. ಈ ಸಣ್ಣ ಲಿಂಕ್‌ ಹಿಡಿದು ಕಂಪಾನಿ ಕಚೇರಿಯೊಳಕ್ಕೆ ನೇರ ಹೊಕ್ಕರು. ಕಂಪನಿ ಸಿದ್ಧಾರ್ಥ ಅವರನ್ನು ಸೂಕ್ಷ್ಮವಾಗಿ ಗಮನಿಸಿ, 1 ಲೋಟ ನೀರು ಕುಡಿಯಲು ಕೊಟ್ಟು, ಅವರ ತುಡಿತ ಅರಿತರು. ಜೆ.ಎಂ. ಫೈನಾನ್ಷಿಯಲ್‌ನಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರು. ಆ ಕಂಪನಿಯ ಮೂಲಕ ಸಿದ್ಧಾರ್ಥ ಸ್ಟಾಕ್‌ ಬ್ರೋಕರ್‌ ಜೀವನ ಆರಂಭಿಸಿದರು.

undefined

ಫೈಲ್‌, ಊಟದ ಡಬ್ಬಿ ತಂದುಕೊಡುವ ಕೆಲಸ

ಗುಜರಾತ್‌ ಮೂಲದವರಾದ ಮಹೇಂದ್ರ ಕಂಪಾನಿ ಅವರಿಗೆ ಸಿದ್ಧಾರ್ಥ ಅತ್ಯಂತ ಆತ್ಮೀಯರಾಗಿಬಿಟ್ಟರು. ಅದಕ್ಕೆ ಕಾರಣವೂ ಇತ್ತು. ಸಿದ್ಧಾರ್ಥ ಬೆಳಗ್ಗೆ 7ಕ್ಕೆಲ್ಲಾ ಕಚೇರಿಗೆ ಹಾಜರಾಗುತ್ತಿದ್ದರು. ಮಹೇಂದ್ರ ಕಂಪಾನಿ ಅವರು ಕಚೇರಿಯಿಂದ ಮನೆಗೆ ಹೋಗುವುದು ರಾತ್ರಿ 9 ಗಂಟೆಯಾಗುತ್ತಿತ್ತು. ಅಲ್ಲಿವರೆಗೂ ಅವರ ಜತೆಯೇ ಇರುತ್ತಿದ್ದರು. ಅವರ ಕಾರಿನವರೆಗೆ ಫೈಲ್‌ಗಳು ಹಾಗೂ ಊಟದ ಡಬ್ಬಿ ತಂದುಕೊಡುವ ಕೆಲಸವನ್ನೂ ಮಾಡಿದ್ದರು. ಚಿಕ್ಕಮಗಳೂರಿನ ಕಾಫಿ ತೋಟದ ಒಡೆಯ ಎಂಬ ಹಮ್ಮು-ಬಿಮ್ಮು ಬಿಟ್ಟು ಅವರು ಮಾಡಿದ ಕೆಲಸ ಕಂಪಾನಿ ಅವರ ವಿಶ್ವಾಸ ವಲಯಕ್ಕೆ ತಂದುಬಿಟ್ಟಿತು. ಷೇರುಪೇಟೆಯ ಪ್ರತಿಯೊಂದು ವ್ಯವಹಾರ, ಹೂಡಿಕೆ ಮಾಡುವಾಗ ವಹಿಸಬೇಕಾದ ಎಚ್ಚರ ಸೇರಿದಂತೆ ತಮಗೆ ಗೊತ್ತಿದ್ದ ಎಲ್ಲ ವಿಷಯಗಳನ್ನೂ ಕಂಪಾನಿ ಅವರು ಸಿದ್ಧಾರ್ಥಕ್ಕೆ ಸೂಕ್ಷ್ಮವಾಗಿ ಅರ್ಥ ಮಾಡಿಸಿಕೊಟ್ಟರು. 2 ವರ್ಷ ಅಲ್ಲಿದ್ದು ಕಂಪಾನಿ ಅವರಿಗೆ ಹೇಳಿ ಸಿದ್ಧಾರ್ಥ ಬೆಂಗಳೂರಿಗೆ ಬಂದರು.

7.5 ಲಕ್ಷ ಕೈಗಿಟ್ಟು ನಷ್ಟವಾದರೆ ಊರಿಗೆ ಬಾ ಎಂದಿದ್ದರು ತಂದೆ

1985ರಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದ ಸಿದ್ಧಾರ್ಥ ಸ್ವಂತ ಉದ್ಯಮ ಆರಂಭಿಸಲು ನಿರ್ಧರಿಸಿದರು. ಅದಕ್ಕೆ ಬೇಕಾದ ಬಂಡವಾಳಕ್ಕಾಗಿ ತಂದೆ ಮುಂದೆ ನಿಂತರು. 7.5 ಲಕ್ಷ ರು.ಗಳನ್ನು ಕೈಗಿತ್ತ ಸಿದ್ಧಾರ್ಥ ಅವರ ತಂದೆ, ಇದನ್ನು ಕಳೆದುಕೊಂಡಾಗ ನೀನು ಮನೆಗೆ ವಾಪಸ್‌ ಬರಬಹುದು. ಹೇಗಿದ್ದರೂ ಕುಟುಂಬದ ಕಾಫಿ ಉದ್ಯಮವಿದೆ ಎಂದು ಹೇಳಿದ್ದರು. ಆದರೆ ಸಿದ್ಧಾರ್ಥ ಆ ಹಣವನ್ನು ಕಳೆದುಕೊಳ್ಳಲಿಲ್ಲ. ಬದಲಿಗೆ ಬೆಳೆಸಿದರು.

ಹೂಡಿಕೆಗೆ ಕೊಟ್ಟಹಣದಲ್ಲಿ ನಿವೇಶನ ಖರೀದಿಸಿದ್ದ ಸಿದ್ಧಾರ್ಥ

ಹಣದ ಮೌಲ್ಯ ಅರಿತಿದ್ದ ಸಿದ್ಧಾರ್ಥ ಅವರು ತಂದೆಯಿಂದ ಸಿಕ್ಕ 7.5 ಲಕ್ಷ ರು. ಬಂಡವಾಳವನ್ನೆಲ್ಲಾ ಉದ್ಯಮಕ್ಕೆ ವಿನಿಯೋಗಿಸಲಿಲ್ಲ. ಬದಲಿಗೆ ಆ ಪೈಕಿ 5 ಲಕ್ಷ ರು. ವೆಚ್ಚದ ನಿವೇಶನವೊಂದನ್ನು ಬೆಂಗಳೂರಿನಲ್ಲಿ ಖರೀದಿಸಿದರು. 2.5 ಲಕ್ಷ ರು. ಇಟ್ಟುಕೊಂಡು ಸ್ಟಾಕ್‌ ಬ್ರೋಕಿಂಗ್‌ ವ್ಯವಹಾರಕ್ಕೆ ಇಳಿದರು. ಮುಂದಿನ 5 ವರ್ಷ 2.5 ಲಕ್ಷ ರು.ನಲ್ಲಿ ಷೇರು ವ್ಯವಹಾರ ಮಾಡುವುದು. ಎಲ್ಲವನ್ನೂ ಕಳೆದುಕೊಂಡರೆ, ಅದಾಗಲೇ ಖರೀದಿಸಿರುವ ನಿವೇಶನ 5 ವರ್ಷಗಳಲ್ಲಿ 7.5 ಲಕ್ಷ ರು.ನಷ್ಟಾದರೂ ಬೆಳೆದಿರುತ್ತದೆ. ಬಂಡವಾಳ ಕೈಬಿಡುವುದಿಲ್ಲ. ಆ ಹಣವನ್ನು ತಂದೆಗೆ ಮರಳಿಸಿದರಾಯಿತು ಎಂಬ ಆಲೋಚನೆ ಅವರದ್ದಾಗಿತ್ತು. ಆದರೆ ಆನಂತರ ಅವರು ತಿರುಗಿ ನೋಡಲಿಲ್ಲ. ಶಿವನ್‌ ಸೆಕ್ಯುರಿಟೀಸ್‌ ಎಂಬ ಷೇರು ವ್ಯವಹಾರ ಕಂಪನಿಯನ್ನು ಖರೀದಿಸಿದರು. 2000ನೇ ಇಸ್ವಿಯಲ್ಲಿ ಅದಕ್ಕೆ ‘ವೇ ಟು ವೆಲ್ತ್‌’ ಎಂದು ಮರುನಾಮಕರಣ ಮಾಡಿದರು.

ಷೇರುಪೇಟೆಯಿಂದ ಗಳಿಸಿದ ಹಣದಲ್ಲಿ ಕಾಫಿ ತೋಟ ಖರೀದಿ

ಮಹೇಂದ್ರ ಕಂಪಾನಿ ಅವರು 2 ವರ್ಷ ಮುಂಬೈನಲ್ಲಿ ಕಲಿಸಿದ್ದ ವಿದ್ಯೆ ಸಿದ್ಧಾರ್ಥ ಅವರ ಕೈ ಹಿಡಿಯಿತು. ಷೇರುಪೇಟೆಯಿಂದ ಅಪಾರ ಹಣ ಗಳಿಸಲು ಸಿದ್ಧಾರ್ಥ ಆರಂಭಿಸಿದರು. ಷೇರುಪೇಟೆಯಿಂದ ಗಳಿಸಿದ ಹಣವನ್ನು ಬೇರೆಡೆ ವಿನಿಯೋಗಿಸಬೇಕು ಎಂಬ ಪ್ರಮುಖ ಪಾಠವನ್ನು ಮಹೇಂದ್ರ ಕಂಪಾನಿ ಅವರಿಂದ ಕಲಿತಿದ್ದ ಸಿದ್ಧಾರ್ಥ, ಅದನ್ನು ಚಾಚೂತಪ್ಪದೇ ಪಾಲಿಸಿದರು. ಲಾಭದ ಹಣವನ್ನು ಚಿಕ್ಕಮಗಳೂರಿನಲ್ಲಿ ಕಾಫಿ ತೋಟ ಖರೀದಿಗೆ ವಿನಿಯೋಗಿಸಿದರು. ತಮ್ಮ ಕಾಫಿ ತೋಟವನ್ನು ಹತ್ತಾರು ಸಹಸ್ರ ಎಕರೆಗಳಿಗೆ ವಿಸ್ತರಿಸಿದರು.

ರೋಗಗ್ರಸ್ತ ಕಾಫಿ ಕಾರ್ಖಾನೆ ಖರೀದಿಸಿ ಲಾಭದತ್ತ ತಿರುಗಿಸಿದ ಕೃಷ್ಣ ಅಳಿಯ

ಹಿಂದೆಲ್ಲಾ ಕಾಫಿ ಬೆಳೆಗಾರರು ತಾವು ಬೆಳೆದ ಬಹುತೇಕ ಉತ್ಪನ್ನವನ್ನು ಕಾಫಿ ಮಂಡಳಿಗೇ ಮಾರಬೇಕಿತ್ತು. 1993ರ ಉದಾರೀಕರಣದ ಫಲವಾಗಿ ಆ ನಿರ್ಬಂಧ ರದ್ದಾಯಿತು. ಅದರಿಂದ ಮೊದಲು ಪ್ರತಿಫಲ ಪಡೆದವರು ಸಿದ್ಧಾರ್ಥ. ತಡಮಾಡದೇ ಅಮಾಲ್ಗಮೇಟೆಡ್‌ ಬೀನ್‌ ಕಾಫಿ (ಎಬಿಸಿ) ಎಂಬ ಕಂಪನಿ ಹುಟ್ಟು ಹಾಕಿದರು. ಆ ಕಾಲಕ್ಕೆ ಕಂಪನಿಯ ವಾರ್ಷಿಕ ಆದಾಯ 6 ಕೋಟಿ ರು. ಇತ್ತು. ಹಾಸನದ ಕಾಫಿ ಕ್ಯೂರಿಂಗ್‌ ಘಟಕವೊಂದು ಭಾರಿ ನಷ್ಟದಲ್ಲಿತ್ತು. 4 ಕೋಟಿ ರು.ಗೆ ಅದನ್ನು ಖರೀದಿಸಿದ ಸಿದ್ಧಾರ್ಥ ಅದನ್ನು ಲಾಭದ ಹಳಿಗೆ ತಂದರು. ಬಳಿಕ ದೇಶದ ಅತಿದೊಡ್ಡ ಕಾಫಿ ಕ್ಯೂರಿಂಗ್‌ ಕೇಂದ್ರವಾಗಿ ಪರಿವರ್ತಿಸಿದರು. ಸಿದ್ಧಾರ್ಥ ಅವರ ಬಳಿ ಈ 12000 ಎಕರೆಗಿಂತಲೂ ಅಧಿಕ ಕಾಫಿ ತೋಟವಿದೆ.

ಬ್ರಿಗೇಡ್‌ ರೋಡ್‌ನಲ್ಲಿ ಮೊದಲ ಕಾಫಿ ಡೇ

ಕಾಫಿ ಎಂಬುದು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿತ್ತು. ಉತ್ತರ ಭಾರತೀಯರು ಚಹಾಪ್ರಿಯರಾಗಿದ್ದರು. ದೇಶದಲ್ಲಿ ಕಾಫಿ ಚೈನ್‌ ಎಂಬ ಯಾವುದೇ ಉದ್ಯಮ ಇರಲಿಲ್ಲ. ಅಮೆರಿಕದಲ್ಲಿ ಸ್ಟಾರ್‌ ಬಕ್ಸ್‌ ಎಂಬ ಸರಣಿ ಕಾಫಿ ಮಳಿಗೆ ಜನಪ್ರಿಯವಾಗಿತ್ತು. ಅದೇ ಮಾದರಿಯಲ್ಲಿ ಸಿದ್ಧಾರ್ಥ ಅವರು ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಮೊದಲ ಕಾಫಿ ಡೇ ಮಳಿಗೆ ತೆರೆದರು. 100 ರು. ಕೊಟ್ಟರೆ ಕಾಫಿ ಹೀರುತ್ತಾ, ಇಂಟರ್ನೆಟ್‌ ಬ್ರೌಸ್‌ ಮಾಡುವ ಕೇಂದ್ರ ಅದಾಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಪಾದಾರ್ಪಣೆ ಮಾಡಿದ ಸಂದರ್ಭವದು. ನೋಡನೋಡುತ್ತಿದ್ದಂತೆ ಕಾಫಿ ಡೇ ಸೂಪರ್‌ ಹಿಟ್‌ ಆಯಿತು. ಅದನ್ನು ಸಿದ್ಧಾರ್ಥ ವಿಸ್ತರಿಸುತ್ತಾ ಹೋದರು.

ದೇಶದಲ್ಲೀಗ 1750 ಕಾಫಿ ಡೇ

ದಕ್ಷಿಣ ಭಾರತೀಯರಿಗಷ್ಟೇ ಪ್ರಿಯವಾಗಿದ್ದ ಕಾಫಿ ರುಚಿಯನ್ನು ದೇಶಕ್ಕೆ ವಿಸ್ತರಿಸಿ ಕಾಫಿ ಕಿಂಗ್‌ ಆದವರು ಸಿದ್ಧಾರ್ಥ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತಿನಿಂದ ಮೇಘಾಲಯವರೆಗೆ ಸಿದ್ಧಾರ್ಥ ಒಡೆತನದ ಕೆಫೆ ಕಾಫಿ ಡೇಯ 1750 ಮಳಿಗೆಗಳು ಇವೆ. ಆಸ್ಪತ್ರೆ, ಕಚೇರಿ, ಏರ್‌ಪೋರ್ಟ್‌ಗಳಲ್ಲಿ ಕಾಫಿ ಮಷಿನ್‌ಗಳಿವೆ. ವಿಯೆನ್ನಾ, ಚೆಕ್‌ ಗಣರಾಜ್ಯ, ಮಲೇಷ್ಯಾ, ನೇಪಾಳ, ಈಜಿಪ್ಟ್‌ನಲ್ಲಿ ಕಾಫಿ ಡೇ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ 4200 ಕೋಟಿ ರು. ವಹಿವಾಟು ನಡೆಸುತ್ತಿದೆ.

ಮನೆ ಬಿಟ್ಟ ಕಾಫಿ ಡೇ ಸಿದ್ಧಾರ್ಥ: ಕೋಟ್ಯಧಿಪತಿಯ ಸಮಗ್ರ ವ್ಯಕ್ತಿ ಪರಿಚಯ

ಸಾಫ್ಟ್‌ವೇರ್‌ ಕಂಪನಿಯನ್ನೂ ಸ್ಥಾಪಿಸಿದ್ದರು

ಸ್ಟಾಕ್‌ ಬ್ರೋಕರ್‌ ಆಗಿದ್ದ ವಿ.ಜಿ. ಸಿದ್ಧಾರ್ಥ ಅವರು ಅಶೋಕ್‌ ಸೂಟಾ ಮತ್ತಿತರರ ಜತೆಗೂಡಿ 1999ರಲ್ಲಿ ಮೈಂಡ್‌ ಟ್ರೀ ಎಂಬ ಕಂಪನಿಯನ್ನು ಹುಟ್ಟುಹಾಕಿದರು. 340 ಕೋಟಿ ರು.ಗಳನ್ನು ಹೂಡಿಕೆ ಮಾಡಿದ್ದ ಸಿದ್ಧಾರ್ಥ ಮೊನ್ನೆ ಎಲ್‌ ಆ್ಯಂಡ್‌ ಟಿಗೆ ಆ ಕಂಪನಿಯನ್ನು ಮಾರಿ 3000 ಕೋಟಿ ರು. ಗಳಿಸಿದ್ದರು.

ಸಿದ್ಧಾರ್ಥ ಅವರ ಉದ್ಯಮಗಳು

ಸಿದ್ಧಾರ್ಥ ಅವರು ಕಾಫಿ, ಸ್ಟಾಕ್‌ ಬ್ರೋಕಿಂಗ್‌, ಸಾಫ್ಟ್‌ವೇರ್‌ ಉದ್ಯಮಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಹಲವು ಉದ್ಯಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ರೆಸಾರ್ಟ್‌

ಚಿಕ್ಕಮಗಳೂರು, ಕಬಿನಿ ಹಾಗೂ ಬಂಡೀಪುರದಲ್ಲಿ ಸೆರಾಯ್‌ ಎಂಬ ಐಷಾರಾಮಿ ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ. ಅಂಡಮಾನ್‌ ದ್ವೀಪದಲ್ಲೂ ಅವರ ಒಂದು ರೆಸಾರ್ಟ್‌ ಇದೆ.

ಫರ್ನಿಚರ್‌

ಡಾಫ್‌ಕೋ (ಡಾರ್ಕ್ ಫಾರೆಸ್ಟ್‌ ಕಂಪನಿ) ಫರ್ನಿಚರ್‌ ಎಂಬ ಪೀಠೋಪಕರಣ ಕಂಪನಿಯನ್ನೂ ಅವರು ಹೊಂದಿದ್ದಾರೆ. ಈ ಕಂಪನಿಗೆ ಬೇಕಾದ ಮರಗಳನ್ನು ಹೊಂದಿಸಲು ದಕ್ಷಿಣ ಅಮೆರಿಕದ ಗಯಾನಾ ರಿಪಬ್ಲಿಕ್‌ನಲ್ಲಿ 30 ವರ್ಷಗಳ ಕಾಲ ಅಮೆಜಾನ್‌ ಕಾಡು ಗುತ್ತಿಗೆ ಪಡೆದಿದ್ದಾರೆ.

ಇದಲ್ಲದೆ ಹಲವು ಕಂಪನಿಗಳ ನಿರ್ದೇಶಕ ಮಂಡಳಿಗಳಲ್ಲಿ ಸ್ಥಾನ ಪಡೆದಿರುವ ಅವರು ವಿವಿಧ ಸಾಫ್ಟ್‌ವೇರ್‌ ಪಾರ್ಕ್ಗಳ ನಿರ್ಮಾತೃ ಕೂಡ ಆಗಿದ್ದಾರೆ.

ಕೋಕಾ ಕೋಲಾಗೆ ಕಾಫಿ ಡೇ ಮಾರಲು ಯತ್ನಿಸಿದ್ದ ಸಿದ್ಧಾರ್ಥ

ತಮಗಿರುವ ಸಾಲದ ಹೊರೆ ತಗ್ಗಿಸುವ ಉದ್ದೇಶದಿಂದ ಕೆಫೆ ಕಾಫಿ ಡೇ ಕಂಪನಿಯ ಒಂದಷ್ಟುಷೇರುಗಳನ್ನು ಕೋಕಾ ಕೋಲಾಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಸಿದ್ಧಾರ್ಥ ಪ್ರಯತ್ನ ಆರಂಭಿಸಿದ್ದರು. ಈ ಕುರಿತು ಮಾತುಕತೆಯೂ ಆರಂಭವಾಗಿತ್ತು. 8ರಿಂದ 10 ಸಾವಿರ ಕೋಟಿ ರು. ಗಳಿಸುವ ಚಿಂತನೆಯಲ್ಲಿ ಕಾಫಿ ಡೇ ಇತ್ತು ಎನ್ನಲಾಗಿದೆ.

2 ವರ್ಷದ ಹಿಂದೆ ತೆರಿಗೆ ದಾಳಿ ಆಗಿತ್ತು

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2 ವರ್ಷಗಳ ಹಿಂದೆ ಅಂದರೆ 2017ರಲ್ಲಿ ತೆರಿಗೆ ವಂಚನೆ ಆರೋಪದ ಮೇರೆಗೆ ಸಿದ್ಧಾರ್ಥ ಅವರ ಮೇಲೆ ದಾಳಿ ನಡೆಸಿದ್ದರು. ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಚಿಕ್ಕಮಗಳೂರಿನ 20 ಕಡೆಗಳಲ್ಲಿ ಅಧಿಕಾರಿಗಳು ಜಾಲಾಡಿದ್ದರು. 650 ಕೋಟಿ ರು. ಆದಾಯವನ್ನು ಕಾಫಿ ಡೇ ಮುಚ್ಚಿಟ್ಟಿರುವ ಸಂಗತಿ ಆ ವೇಳೆ ಬೆಳಕಿಗೆ ಬಂದಿತ್ತು ಎಂದು ಮೂಲಗಳು ಹೇಳಿವೆ.

click me!