ಜಿಎಸ್‌ಟಿಗೂ ಮುಂಚಿನ ಕೆಲಸಗಳಿಗೆ ವ್ಯಾಟ್‌ ಮಾತ್ರ: ಹೈಕೋರ್ಟ್‌

By Kannadaprabha News  |  First Published Jun 1, 2023, 12:09 PM IST

ಜಿಎಸ್‌ಟಿ ಜಾರಿ ಆದ ನಂತರದ ಕಾಮಗಾರಿಗೆ ಜಿಎಸ್‌ಟಿ ಅನ್ವಯ, ಸರ್ಕಾರಿ ಗುತ್ತಿಗೆಗಳ ತೆರಿಗೆ ಗೊಂದಲ ಬಗೆಹರಿಸಿ ಹೈಕೋರ್ಟ್‌ ಆದೇಶ, ಭಾರಿ ಮೊತ್ತದ ತೆರಿಗೆ ಬಾಕಿ ಹೊಂದಿದ್ದ ಗುತ್ತಿಗೆದಾರರು ನಿರಾಳ. 


ಬೆಂಗಳೂರು(ಜೂ.01): ಸರಕು ಮತ್ತು ಸೇವೆಗಳ ತೆರಿಗೆ ಕಾಯ್ದೆ (ಜಿಎಸ್‌ಟಿ) ಜಾರಿಯಾಗುವ ಮುನ್ನ ಸರ್ಕಾರಿ ಗುತ್ತಿಗೆ ಕಾಮಗಾರಿಗಳ ಟೆಂಡರ್‌ ಪಡೆದು, ಜಿಎಸ್‌ಟಿ ಜಾರಿಯಾದ ನಂತರ ಕಾಮಗಾರಿ ಪೂರ್ಣಗೊಳಿಸಿದ ಪ್ರಕರಣಗಳ ಸಂಬಂಧ ತೆರಿಗೆ ಪಾವತಿಸುವ ವಿಚಾರದಲ್ಲಿ ಉದ್ಭವಿಸಿದ್ದ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಹಲವು ನಿರ್ದೇಶನ ನೀಡಿದೆ.

ಜಿಎಸ್‌ಟಿ ಜಾರಿಗೂ ಮುನ್ನ ಕರ್ನಾಟಕ ಮೌಲ್ಯವರ್ಧಿತ ತೆರಿಗೆ (ಕೆವ್ಯಾಟ್‌) ವ್ಯವಸ್ಥೆ ಇದ್ದಾಗ ನಡೆದಿರುವ ಸರ್ಕಾರಿ ಗುತ್ತಿಗೆ ಕೆಲಸಗಳು ಮತ್ತು ಗುತ್ತಿಗೆದಾರರು ಪಡೆದಿರುವ ಹಣವನ್ನು ಲೆಕ್ಕ ಹಾಕಬೇಕು. ಜಿಎಸ್‌ಟಿ ಜಾರಿಯಾಗುವ (2017ರ ಜು.1ರ ಪೂರ್ವ) ಮುನ್ನ ಪಡೆದಿರುವ ಹಣವನ್ನು ಕೆವ್ಯಾಟ್‌ ವ್ಯವಸ್ಥೆ ಅಡಿ ವಿಶ್ಲೇಷಿಸಬೇಕು ಎಂಬುದು ಸೇರಿದಂತೆ ಹಲವು ನಿರ್ದೇಶನಗಳನ್ನು ಹೈಕೋರ್ಟ್‌ ನೀಡಿದೆ.

Tap to resize

Latest Videos

ಏಪ್ರಿಲ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 1.87 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

ಈ ಕುರಿತಂತೆ ಸಿ.ಚಂದ್ರಶೇಖರಯ್ಯ ಮತ್ತು ನಂದೀಶ್‌ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಕಾಮಗಾರಿ ನಡೆಸಿದ ಹಲವು ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪನಿಗಳು ಸಲ್ಲಿಸಿದ್ದ 15ಕ್ಕೂ ಅಧಿಕ ತಕರಾರು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರ ಪೀಠ ಈ ಆದೇಶ ಮಾಡಿದೆ.

ಜಿಎಸ್‌ಟಿ ಜಾರಿಗೂ ಮುನ್ನ ವ್ಯಾಟ್‌ ವ್ಯವಸ್ಥೆ ಇದ್ದಾಗ ಸರ್ಕಾರಿ ಗುತ್ತಿಗೆದಾರರು ನಡೆಸಿರುವ ಕೆಲಸಗಳು ಮತ್ತು ಅದಕ್ಕಾಗಿ ಅವರು ಪಡೆದಿರುವ ಹಣವನ್ನು ಲೆಕ್ಕ ಹಾಕಬೇಕು. 2017ರ ಜು.1ಕ್ಕೂ ಮುನ್ನ ಪಡೆದಿರುವ ಹಣವನ್ನು ವ್ಯಾಟ್‌ ವ್ಯವಸ್ಥೆ ಅಡಿ ವಿಶ್ಲೇಷಿಸಬೇಕು. ಮೂಲ ಗುತ್ತಿಗೆಯ ಪ್ರಕಾರ ಬಾಕಿಯಿರುವ ಕೆಲಸವನ್ನು 2017ರ ಜು.1ರ ನಂತರ ನಡೆಸಿದ್ದರೆ, ಆ ಬಗ್ಗೆ ಲೆಕ್ಕ ಹಾಕಬೇಕು. ಕಾಮಗಾರಿಗೆ ಬಳಸಿದ ಸಾಮಗ್ರಿಗಳ ದರವನ್ನು ಪ್ರತ್ಯೇಕಿಸಬೇಕು ಎಂದು ಹೈಕೋರ್ಚ್‌ ಆದೇಶಿಸಿದೆ.

2017ರ ಜುಲೈ 1ರ ಬಳಿಕ ಬಾಕಿಯಿರುವ ಕೆಲಸಗಳ ಮೇಲಿನ ತೆರಿಗೆ ವ್ಯತ್ಯಾಸವನ್ನು ಲೆಕ್ಕಹಾಕಬೇಕು. ಗುತ್ತಿಗೆ ಮೌಲ್ಯದ ಮೇಲಿನ ತೆರಿಗೆ ವ್ಯತ್ಯಾಸವನ್ನು ಲೆಕ್ಕಹಾಕಿದ ಬಳಿಕ ಸಂಬಂಧಿತ ಇಲಾಖೆಯು ಗುತ್ತಿಗೆ ಬದಲಾಯಿಸಬೇಕೇ ಎಂಬುದನ್ನು ತೀರ್ಮಾನಿಸಬೇಕು. ಒಂದು ವೇಳೆ ಜಿಎಸ್‌ಟಿ ಮುನ್ನ ಪೂರ್ಣಗೊಳಿಸಿರುವ ಅದಕ್ಕೆ ಜೆಎಸ್‌ಟಿ ಜಾರಿ ನಂತರ ಹಣ ಪಾವತಿಸಿದ್ದರೆ, ವ್ಯಾತ್ಯಾಸವಾದ ತೆರಿಗೆ ಹಣವನ್ನು ಅರ್ಜಿದಾರರಿಗೆ ಸಂಬಂಧಪಟ್ಟಸರ್ಕಾರಿ ಪ್ರಾಧಿಕಾರಿಗಳು ಹಿಂದಿರುಗಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಅಲ್ಲದೆ, ಜಿಎಸ್‌ಟಿ ಪೂರ್ವ ಅಥವಾ ಜಿಎಸ್‌ಟಿ ನಂತರ ಕಾಮಗಾರಿ ಪೂರ್ಣಗೊಳಿಸಲಾಗಿದೆಯೇ? ಜಿಎಸ್‌ಟಿ ನಂತರ ಸ್ವೀಕರಿಸಿದ ಹಣ ಮತ್ತು ಸ್ವೀಕರಿಸಬೇಕಾದ ಹಣವನ್ನು ಲೆಕ್ಕಸದೇ ತಮ್ಮ ಕುಂದುಕೊರತೆಗಳ ಬಗ್ಗೆ ಹೈಕೋರ್ಚ್‌ ಆದೇಶ ಪ್ರತಿ ದೊರೆತ ನಾಲ್ಕು ವಾರಗಳ ಒಳಗೆ ಅರ್ಜಿದಾರರು ಸಂಬಂಧಪಟ್ಟ ಸರ್ಕಾರದ ಪ್ರಾಧಿಕಾರಕ್ಕೆ ಸಮಗ್ರ ಮನವಿಯನ್ನು ಸಲ್ಲಿಸಬೇಕು. ಈ ಆದೇಶದಲ್ಲಿ ನ್ಯಾಯಾಲಯ ಸೂಚಿಸಿರುವ ಮಾರ್ಗಸೂಚಿಗಳ ಅನ್ವಯ ಎರಡು ತಿಂಗಳಲ್ಲಿ ಸರ್ಕಾರಿ ಪ್ರಾಧಿಕಾರಗಳು ಇತ್ಯರ್ಥಪಡಿಸಬೇಕು. ಆರು ತಿಂಗಳವರೆಗೆ ಅರ್ಜಿದಾರರ ವಿರುದ್ಧ ಜಿಎಸ್‌ಟಿ ಪ್ರಾಧಿಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಹಾಗೆಯೇ, ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರ/ಆದೇಶವನ್ನು ಪ್ರಶ್ನಿಸಿ ಪರಿಹಾರ ಪಡೆಯುವ ಸ್ವಾತಂತ್ರ್ಯವನ್ನು ಅರ್ಜಿದಾರರು ಹೊಂದಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಭಾರಿ ಮೊತ್ತದ ತೆರಿಗೆ ಭಾರವನ್ನು ಹೊತ್ತಿದ್ದ ಗುತ್ತಿಗೆದಾರರಿಗೆ ಈ ಆದೇಶವು ನೆಮ್ಮದಿ ತಂದಿದೆ.

ಪ್ರಕರಣವೇನು?:

ಅರ್ಜಿದಾರ ರಾಜ್ಯ ಸರ್ಕಾರ ಪ್ರಾಧಿಕಾರಿಗಳ ಗುತ್ತಿಗೆ ಕಾಮಗಾರಿಗಳನ್ನು ನಡೆಸುವ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ. ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ-2003 (ಕೆವ್ಯಾಟ್‌) ಜಾರಿಯಲ್ಲಿದ್ದ (ಜಿಎಸ್‌ಟಿ ಜಾರಿಗೊಳ್ಳುವ ಮುನ್ನ) ಸರ್ಕಾರಿ ಪ್ರಾಧಿಕಾರಗಳ ಗುತ್ತಿಗೆ ಕಾಮಗಾರಿಗಳ ನಿರ್ವಹಣೆ ಕುರಿತು ಒಪ್ಪಂದ ಮಾಡಿಕೊಂಡಿದ್ದರು. ಕೆವ್ಯಾಟ್‌ ಕಾಯ್ದೆಯಡಿ ನೋಂದಾಯಿಸಿಕೊಂಡು ಟಿಐಎನ್‌ ನಂಬರ್‌ ಪಡೆದುಕೊಂಡಿದ್ದರು. 2017ರ ಜು.1ರಿಂದ ಜಿಎಸ್‌ಟಿ ಜಾರಿಯಾದ ಕಾರಣ, ಜಿಎಸ್‌ಟಿ ನಂಬರ್‌ ಪಡೆದುಕೊಂಡಿದ್ದಾರೆ. ಬಹುತೇಕ ಅರ್ಜಿದಾರರು ಕೆವ್ಯಾಟ್‌ ಸೆಕ್ಷನ್‌ 15ರ ಅಡಿಗೆ ಬರುತ್ತಾರೆ. ಕೆಲವು ಅರ್ಜಿದಾರರು ಸಾಮಾನ್ಯ ವ್ಯಾಟ್‌ ಮೌಲ್ಯಮಾಪನದ ಅಡಿಗೆ ಬರುತ್ತಾರೆ.

ಗಾಳಿಗೂ ಬಿಜೆಪಿ ಜಿಸ್‌ಟಿ ಹಾಕಬಹುದು: ಮಲ್ಲಿಕಾರ್ಜುನ ಖರ್ಗೆ

ಕೆವ್ಯಾಟ್‌ ವ್ಯಾಪ್ತಿಯ ಗುತ್ತಿಗೆದಾರರು ಗುತ್ತಿಗೆ ಮೌಲ್ಯಕ್ಕೆ ಶೇ.4ರಷ್ಟು ತೆರಿಗೆ ಪಾವತಿಮಾಡುತ್ತಿದ್ದರು. ಸಾಮಾನ್ಯ ವ್ಯಾಟ್‌ ಮೌಲ್ಯಮಾಪನದ ವ್ಯಾಪ್ತಿಗೆ ಬರುವಂತಹವರು ಶೇ.5 ಅಥವಾ ಶೇ.12ರಷ್ಟು ತೆರಿಗೆ ಪಾವತಿಸುತ್ತಿದ್ದರು. ಸರ್ಕಾರಿಗೆ ಗುತ್ತಿಗೆಗಳಿಗೆ ಸೇವಾ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಲಾಗುತ್ತಿತ್ತು. ಆದರೆ, 2017ರ ಜು.1ರಿಂದ ಜಿಎಸ್‌ಟಿ ಜಾರಿಯಾದ ಮೇಲೆ 2107ರ ಜು.1ರಿಂದ ಆ.21ರವರೆಗೆ ಶೇ.18ರಷ್ಟು ಮತ್ತು 2017ರ ಆ.22ರಿಂದ ಶೇ.12ರಷ್ಟುತೆರಿಗೆ (ಜಿಎಸ್‌ಟಿ) ಪಾವತಿ ಮಾಡಲು ಸರ್ಕಾರಿ ಪ್ರಾಧಿಕಾರಗಳು ಆದೇಶಿಸಿದ್ದವು.

ಈ ಆದೇಶ ಪ್ರಶ್ನಿಸಿದ್ದ ಗುತ್ತಿಗೆದಾರರು, ಸರ್ಕಾರಿ ಪ್ರಾಧಿಕಾರಗಳ ಆದೇಶದಿಂದ ತಮ್ಮ ಮೇಲೆ ದೊಡ್ಡ ಮೊತ್ತದ ತೆರಿಗೆ ಭಾರ ಬೀಳಲಿದೆ. ಜಿಎಸ್‌ಟಿ ಜಾರಿಗೂ ಮುನ್ನ ಕಾಮಗಾರಿ ಪೂರ್ಣಗೊಳಿಸಿದ ಹಲವು ಪ್ರಕರಣಗಳಿವೆ. ಆದರೆ, ಸರ್ಕಾರಿ ಪ್ರಾಧಿಕಾರಗಳು ಕಾಮಗಾರಿ ಪರಿಶೀಲನೆ ನಡೆಸಿ ಬಿಲ್‌ ನೀಡುವುದು ಬಾಕಿಯಿತ್ತು. ತಾವು ಗುತ್ತಿಗೆ ಹಣ ಪಡೆಯುವುದು ಬಾಕಿಯಿತ್ತು. ಇನ್ನೂ ಕೆಲ ಗುತ್ತಿಗೆದಾರರು ಕೆವ್ಯಾಟ್‌ ಜಾರಿಯಲ್ಲಿದ್ದ ಅವಧಿಯಲ್ಲಿ ಗುತ್ತಿಗೆ ಪಡೆದು, ಜಿಎಸ್‌ಟಿ ಜಾರಿಯಾದ ನಂತರ ಕಾಮಗಾರಿ ಮುಂದುವರಿಸಿದ್ದಾರೆ. ಹಾಗಾಗಿ, ಕೆವ್ಯಾಟ್‌ ಅಡಿಯಲ್ಲಿ ತೆರಿಗೆ ಪಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

click me!