ಅಮೆರಿಕಾ ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಎರಡು ದೇಶಗಳ ಜೊತೆಗೆ ವ್ಯವಹಾರ ಮುಂದುವರಿಸಿದಲ್ಲಿ ದಿಗ್ಭಂದನ ವಾರ್ನಿಂಗ್ ನೀಡಿದೆ.
ವಾಷಿಂಗ್ಟನ್: ಭಾರತ ಎಸ್-400 ಯುದ್ಧ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಿದ್ದೇ ಆದಲ್ಲಿ ಇದು ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಮಾತುಕತೆಯ ಮೇಲೆ ಬಲವಾದ ಪರಿಣಾಮ ಬೀರಲಿದ್ದು, ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಎಸ್-400 ರಷ್ಯಾದ ಭಾರೀ ಸಾಮರ್ಥ್ಯದ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದೆ. ಆಕಾಶದೆತ್ತರದಲ್ಲಿ ವೈರಿ ಪಡೆಯ ಯುದ್ಧ ವಿಮಾನಗಳು ನುಸುಳುವ ಸಂದರ್ಭದಲ್ಲಿ ಭೂಮಿಯಿಂದಲೇ ಕ್ಷಿಪಣಿ ಸಿಡಿಸಿ ಹೊಡೆದುರುಳಿಸಬಲ್ಲ ಸಾಧನವಾಗಿದೆ. 2014ರಲ್ಲಿ ಚೀನಾ, ರಷ್ಯಾದಿಂದ ಎಸ್-400 ಖರೀದಿಸಿದ ಮೊದಲ ರಾಷ್ಟ್ರವಾಗಿದೆ. ಭಾರತವೂ ಕಳೆದ ಅಕ್ಟೋಬರ್‌ನಲ್ಲೇ ಎಸ್-400 ಸಾಧನವನ್ನು ಖರೀದಿಸಲೆಂದು ಅಂದಾಜು 35,000 ಸಾವಿರ ಕೋಟಿ ರು. ಒಪ್ಪಂದಕ್ಕೆ ಸಹಿ ಮಾಡಿದೆ.
ಗುರುವಾರ ಈ ಸಂಬಂಧ ಅಮೆರಿಕ ಗೃಹ ಇಲಾಖೆ ಹಿರಿಯ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಭಾರತ ರಷ್ಯಾದಿಂದ ಎಸ್-400 ಖರೀದಿಸಿದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ನಡುವಿನ ಅತ್ಯಾಧುನಿಕ ಕೆಲ ಅಂಶಗಳ ವಿನಿಮಯ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಲಿದೆ ಎಂದಿದ್ದಾರೆ.
ತೈಲ ಖರೀದಿಸಿದರೆ ದಿಗ್ಬಂಧನ
ವಿಶ್ವದ ಪ್ರಮುಖ ತೈಲ ಪೂರೈಕೆ ರಾಷ್ಟ್ರವಾದ ಇರಾನ್‌ನಿಂದ ಮತ್ತೆ ತೈಲ ಆಮದಿಗೆ ಭಾರತ ಮತ್ತು ಚೀನಾ ಯತ್ನಿಸುತ್ತಿವೆ ಎಂಬ ವರದಿಗಳ ಬೆನ್ನಲ್ಲೇ, ತನ್ನ ಆದೇಶವನ್ನು ಮೀರಿ ಇರಾನ್‌ನಿಂದ ತೈಲ ಖರೀದಿಸಿದರೆ ಅಂಥ ರಾಷ್ಟ್ರಗಳು ದಿಗ್ಭಂಧನ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಇರಾನ್ ರಾಷ್ಟ್ರದ ತೈಲ ರಫ್ತನ್ನು ಶೂನ್ಯಕ್ಕೆ ಇಳಿಸುವ ಯತ್ನವಾಗಿ ಇರಾನ್‌ನಿಂದ ಯಾವುದೇ ರಾಷ್ಟ್ರಗಳು ತೈಲ ಖರೀದಿಸದಂತೆ ಅಮೆರಿಕ ನಿರ್ಬಂಧ ಹೇರಿದೆ. ಆದಾಗ್ಯೂ, ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಮಾತ್ರವೇ ಮೇ ತಿಂಗಳವರೆಗೂ ವಿನಾಯ್ತಿ ನೀಡಿದ್ದು, ಈ ಅವಧಿ ಈಗಾಗಲೇ ಮುಕ್ತಾಯವಾಗಿದೆ. ಈ ಪ್ರಕಾರ ಭಾರತ ಮೇ 2ರಿಂದಲೇ ಇರಾನ್ ತೈಲ ಆಮದನ್ನು ಸ್ಥಗಿತಗೊಳಿಸಿದೆ. ಒಂದು ವೇಳೆ ಇರಾನ್‌ನಿಂದ ಮತ್ತೆ ತೈಲ ಆಮದಿಗೆ ಕೋರಿಕೊಂಡ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ಹೇಳಿದೆ.
ಅಮೆರಿಕದ ನಿರ್ಬಂಧದ ಹೊರತಾಗಿಯೂ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ಭಾರತ ಚಿಂತಿಸುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮೆರಿಕ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಯಾವುದೇ ರಾಷ್ಟ್ರಗಳಿಗೆ ಮತ್ತೆ ವಿನಾಯ್ತಿ ನೀಡುವುದಿಲ್ಲ. ಒಂದು ವೇಳೆ ಇಂಥ ಪ್ರಯತ್ನ ನಡೆಸಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದೆ.