ಸರ್ಕಾರಿ ಬಾಂಡ್ಗಳಲ್ಲಿ ಹೂಡಿಕೆ ಮಾಡೋದು ಸುರಕ್ಷಿತ ಮಾತ್ರವಲ್ಲ,ನಿರೀಕ್ಷಿತ ರಿಟರ್ನ್ಸ್ ಕೂಡ ನಿಮ್ಮ ಕೈಸೇರೋದು ಖಚಿತ. ಆದ್ರೆ ಸರ್ಕಾರಿ ಬಾಂಡ್ಗಳನ್ನು ಖರೀದಿಸೋ ಮುನ್ನ ಒಂದಿಷ್ಟು ಮಾಹಿತಿ ಹೊಂದಿರೋದು ಉತ್ತಮ.
ಸರ್ಕಾರಿ ಬಾಂಡ್‌ಗಳನ್ನು ಸರ್ಕಾರಿ ಸೆಕ್ಯುರಿಟಿಸ್ ಅಥವಾ ಜಿ-ಸೆಕ್ ಎಂದು ಕೂಡ ಕರೆಯಲಾಗುತ್ತದೆ. ಇದೊಂದು ರೀತಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಸಾರ್ವಜನಿಕರಿಂದ ಸಾಲ ಪಡೆಯಲು ಬಳಸೋ ಸಾಧನ. ಈ ರೀತಿ ಬಾಂಡ್ಗಳ ಮೂಲಕ ಸಂಗ್ರಹಿಸಿದ ಹಣವನ್ನು ಮೂಲಸೌಕರ್ಯ ಅಭಿವೃದ್ಧಿ, ರಸ್ತೆಗಳು ಹಾಗೂ ಶಾಲೆಗಳ ನಿರ್ಮಾಣ ಮುಂತಾದ ಹೊಸ ಯೋಜನೆಗಳ ವೆಚ್ಚಕ್ಕೆ ಬಳಸಲಾಗುತ್ತದೆ. ಸರ್ಕಾರಿ ಬಾಂಡ್ಗಳಲ್ಲಿ ಹಣ ಹೂಡೋದು ಸುರಕ್ಷಿತವಾಗಿದ್ದು, ನಿರ್ದಿಷ್ಟ ಅವಧಿ ಅಂದ್ರೆ ಮೆಚ್ಯುರಿಟಿ ಬಳಿಕ, ಬಡ್ಡಿ ಸಹಿತ ನೀವು ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿಸಲಾಗುತ್ತದೆ. ಹೀಗಾಗಿ ಬಾಂಡ್‌ಗಳಲ್ಲಿ ತೊಡಗಿಸಿದ ಹಣವನ್ನು ಸ್ಥಿರ ಆದಾಯ ಹೂಡಿಕೆಗಳೆಂದು ಕರೆಯಲಾಗುತ್ತದೆ.
ಮಕ್ಕಳ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಬೆಸ್ಟ್?
undefined
ಎಷ್ಟು ವಿಧಗಳಿವೆ?
ಸರ್ಕಾರಿ ಬಾಂಡ್ಗಳಲ್ಲಿ ಕೂಡ ಅನೇಕ ವಿಧಗಳಿದ್ದು, ಅವುಗಳ ಮಾಹಿತಿ ಇಲ್ಲಿದೆ.
ಟ್ರೆಷರ್ ಬಿಲ್ಸ್
ಇವು ಕಡಿಮೆ ಅವಧಿಯ ಸರ್ಕಾರಿ ಬಾಂಡ್ಗಳಾಗಿದ್ದು, ಒಂದು ವರ್ಷಕ್ಕಿಂತಲೂ ಕಡಿಮೆ ಕಾಲಾವಧಿಯನ್ನು ಹೊಂದಿರುತ್ತವೆ. 91, 182 ಹಾಗೂ 364 ದಿನಗಳ ಅವಧಿಯ ಟ್ರೆಷರ್ ಬಿಲ್ಗಳಿದ್ದು, ಇದ್ರಲ್ಲಿ ಹೂಡಿಕೆ ಮಾಡಿದವರಿಗೆ ಬಡ್ಡಿ ಸಿಗೋದಿಲ್ಲ. ಬಾಂಡ್ನ ಮುಖ ಬೆಲೆ ಹಾಗೂ ಡಿಸ್ಕೌಂಟ್ನಲ್ಲಿ ಖರೀದಿಸಿದ್ರೆ ಅದ್ರಿಂದ ಸಿಕ್ಕ ಹಣವಷ್ಟೇ ಲಾಭ. ಉದಾಹರಣೆಗೆ 91 ದಿನಗಳ ಅವಧಿಯ 200 ರೂ. ಮುಖ ಬೆಲೆಯ ಟಿ-ಬಿಲ್ ಅನ್ನು 196 ರೂ.ಗೆ ನೀಡಿದ್ರೆ ನಿಮಗೆ 4ರೂ. ಡಿಸ್ಕೌಂಟ್ ಸಿಕ್ಕಂತಾಗುತ್ತದೆ. ಮೆಚ್ಯುರಿಟಿ ಸಮಯದಲ್ಲಿಇದರ ಮುಖಬೆಲೆ 200 ರೂ. ಎಂದೇ ಪರಿಗಣಿಸಿದ್ರೆ ನಿಮಗೆ ಇಲ್ಲಿ ಲಾಭ ಸಿಗುತ್ತೆ. ಕೇಂದ್ರ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ವಾರ ಹರಾಜಿನ ಮೂಲಕ ಟ್ರೆಷರಿ ಬಿಲ್ಗಳನ್ನು ಮಾರಾಟ ಮಾಡುತ್ತದೆ.
ಕ್ಯಾಶ್ ಮ್ಯಾನೇಜ್ಮೆಂಟ್ ಬಿಲ್ಸ್
ಕೇಂದ್ರ ಸರ್ಕಾರಕ್ಕೆ ಹಣದ ಅವಶ್ಯಕತೆಯಿರೋ ಸಂದರ್ಭದಲ್ಲಿ ಈ ಬಿಲ್ಗಳನ್ನು ಮಾರಾಟ ಮಾಡುತ್ತದೆ. ಇದು ಟ್ರೆಷರಿ ಬಿಲ್ ಮಾದರಿಯಲ್ಲೇ ಇದ್ದರೂ, ಅದಕ್ಕೆ ಹೋಲಿಸಿದ್ರೆ ಇದ್ರ ಅವಧಿ ಕಡಿಮೆ. ಕ್ಯಾಶ್ ಮ್ಯಾನೇಜ್ಮೆಂಟ್ ಬಿಲ್ಗಳನ್ನು 90 ದಿನಗಳಿಗಿಂತಲೂ ಕಡಿಮೆ ಅವಧಿಗೆ ಮಾರಾಟ ಮಾಡಲಾಗುತ್ತದೆ.
ಅಂಚೆ ಇಲಾಖೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಹಣ!
ಡೇಟೆಡ್ ಗವರ್ನ್ಮೆಂಟ್ ಸೆಕ್ಯುರಿಟಿಸ್
ಇವು ವಿಶಿಷ್ಟ ಮಾದರಿಯ ಸೆಕ್ಯುರಿಟಿಗಳಾಗಿದ್ದು, ಸ್ಥಿರ ಅಥವಾ ಫ್ಲೋಟಿಂಗ್ ಬಡ್ಡಿದರವನ್ನು ಹೊಂದಿರುತ್ತವೆ. ಇದನ್ನುಕೂಪನ್ ರೇಟ್ ಎಂದು ಕೂಡ ಕರೆಯಲಾಗುತ್ತದೆ. ಇವು ದೀರ್ಘಾವಧಿಯ ಸೆಕ್ಯುರಿಟಿಗಳಾಗಿದ್ದು, 5 ವರ್ಷಗಳಿಂದ ಹಿಡಿದು 40 ವರ್ಷಗಳ ಕಾಲಾವಧಿಯನ್ನು ಹೊಂದಿರುತ್ತವೆ. ಇವುಗಳಲ್ಲಿ ಕೂಡ ಅನೇಕ ವಿಧಗಳಿವೆ. ಕ್ಯಾಪಿಟಲ್ ಇಂಡೆಕ್ಸ್ ಬಾಂಡ್, ಸ್ಪೆಷಲ್ ಸೆಕ್ಯುರಿಟಿಸ್, 75% ಕ್ಯಾಪಿಟಲ್ ಸೇವಿಂಗ್ಸ್ ಬಾಂಡ್, ಫ್ಲೋಟಿಂಗ್ ರೇಟ್ ಬಾಂಡ್, ಫಿಕ್ಸೆಡ್ ರೇಟ್ ಬಾಂಡ್ ಇತ್ಯಾದಿ.
ಸ್ಟೇಟ್ ಡೆವಲಪ್ಮೆಂಟ್ ಲೋನ್ಸ್ (ಎಸ್ಡಿಎಲ್)
ಇದು ರಾಜ್ಯ ಸರ್ಕಾರ ತನ್ನ ಬಜೆಟ್ ಅಗತ್ಯಗಳಿಗಾಗಿ ಮಾರಾಟ ಮಾಡೋ ಡೇಟೆಡ್ ಗವರ್ನ್ಮೆಂಟ್ ಸೆಕ್ಯುರಿಟಿಗಳಾಗಿವೆ. ಪ್ರತಿ ಎರಡು ವಾರಕ್ಕೊಮ್ಮೆ ಇದರ ಹರಾಜು ಪ್ರಕ್ರಿಯೆ ನಡೆಯುತ್ತದೆ.
ಫಿಕ್ಸಡ್ ರೇಟ್ ಬಾಂಡ್ಸ್
ಇವು ಸ್ಥಿರ ಬಡ್ಡಿದರವನ್ನು ಹೊಂದಿರುತ್ತವೆ. ಮಾರ್ಕೆಟ್ ದರದಲ್ಲಿ ಏನೇ ಬದಲಾವಣೆಯಾದ್ರೂ ಬಾಂಡ್ ಅವಧಿಯುದ್ದಕ್ಕೂ ಬಡ್ಡಿ ಸ್ಥಿರವಾಗಿರುತ್ತದೆ.
ಫ್ಲೋಟಿಂಗ್ ರೇಟ್ ಬಾಂಡ್ಸ್ (ಎಫ್ಆರ್ಬಿಎಸ್)
ಈ ಬಾಂಡ್ನಲ್ಲಿ ಹೂಡಿಕೆ ಮಾಡಿದ್ರೆ ರಿಟರ್ನ್ಸ್ನಲ್ಲಿ ನಿರಂತರ ಬದಲಾವಣೆಯಾಗುತ್ತಲೇ ಇರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಇದರ ಬಡ್ಡಿದರದಲ್ಲಿ ಬದಲಾವಣೆಯಾಗುತ್ತದೆ.
ಸಾವರಿನ್ ಗೋಲ್ಡ್ ಬಾಂಡ್ಸ್ (ಎಸ್ಜಿಬಿಎಸ್)
ಕೇಂದ್ರ ಸರ್ಕಾರ ಈ ಬಾಂಡ್ಗಳನ್ನು ಮಾರಾಟ ಮಾಡುತ್ತದೆ. ಇಂಥ ಬಾಂಡ್ಗಳ ಮೇಲೆ ವಿಧಿಸೋ ಬಡ್ಡಿಗೆ ಯಾವುದೇ ತೆರಿಗೆ ವಿಧಿಸಲಾಗೋದಿಲ್ಲ. ಈ ಬಾಂಡ್ಗಳ ದರ ಬಂಗಾರದ ದರವನ್ನು ಅವಲಂಭಿಸಿರುತ್ತದೆ. ಆದ್ರೆ ಒಬ್ಬ ವ್ಯಕ್ತಿ ಅಥವಾ ಕುಟುಂಬ ಎಷ್ಟು ಎಸ್ಜಿಬಿಎಸ್ ಹೊಂದಬಹುದು ಎಂಬುದಕ್ಕೆ ಸಂಬಂಧಿಸಿ ಆರ್ಬಿಐ ನಿಯಮಗಳನ್ನು ರೂಪಿಸಿದೆ. ಅದರ ಅನ್ವಯ ಒಂದು ವಿತ್ತೀಯ ವರ್ಷದಲ್ಲಿ ವ್ಯಕ್ತಿ ಹಾಗೂ ಅವಿಭಕ್ತ ಕುಟುಂಬ 4 ಕೆಜಿ ಸಾವರಿನ್ ಗೋಲ್ಡ್ ಬಾಂಡ್ಗಳನ್ನು ಹೊಂದಲು ಅವಕಾಶವಿದೆ. ಟ್ರಸ್ಟ್ಗಳು ಅಥವಾ ಇತರ ಸಂಸ್ಥೆಗಳು 20 ಕೆಜಿ ಎಸ್ಜಿಬಿಎಸ್ ಹೊಂದಲು ಅವಕಾಶವಿದೆ. ಈ ಬಾಂಡ್ಗಳ ಮೆಚ್ಯುರಿಟಿ ಅವಧಿ 8 ವರ್ಷಗಳಾಗಿವೆ. ಅಲ್ಲದೆ, ಈ ಬಾಂಡ್ಗಳ ಮೇಲಿನ ಬಡ್ಡಿ ಹಣಕ್ಕೆ ಯಾವುದೇ ತೆರಿಗೆ ವಿಧಿಸಲಾಗೋದಿಲ್ಲ.
ವಿಶೇಷತೆಗಳೇನು?
ಕಡಿಮೆ ಅಪಾಯ, ಹೆಚ್ಚು ಸುರಕ್ಷಿತ
ಸರ್ಕಾರವೇ ಬಾಂಡ್ಗಳನ್ನು ಮಾರಾಟ ಮಾಡೋ ಕಾರಣ ಇದ್ರಲ್ಲಿ ಹೂಡಿಕೆ ಮಾಡೋದು ಸುರಕ್ಷಿತ. ನೀವು ಇದ್ರಲ್ಲಿ ತೊಡಗಿಸಿದ ಹಣಕ್ಕೆ ನಿಗದಿತ ಅವಧಿಯಲ್ಲಿ ನಿರೀಕ್ಷಿತ ರಿಟರ್ನ್ಸ್ ದೊರೆಯೋದ್ರಲ್ಲಿ ಅನುಮಾನವಿಲ್ಲ.
ಇ-ಹರಾಜು
ಸರ್ಕಾರಿ ಬಾಂಡ್ಗಳನ್ನು ಇ-ಹರಾಜು ಹಾಕೋ ಕಾರಣ ನೀವು ನೇರವಾಗಿ ಅದ್ರಲ್ಲಿ ಪಾಲ್ಗೊಳ್ಳಬಹುದು. ಭಾರತೀಯ ರಿಸರ್ವ್ ಬ್ಯಾಂಕ್ನ ಇ-ಕುಬೇರ ಪ್ಲ್ಯಾಟ್ಫಾರ್ಮ್ ಮೂಲಕ ಬಾಂಡ್ಗಳ ಹರಾಜು ಪ್ರಕ್ರಿಯೆ ನಡೆಯುತ್ತದೆ.
ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ
ರಿಟೆಲ್ ಹೂಡಿಕೆದಾರರು ಸರ್ಕಾರಿ ಬಾಂಡ್ಗಳಲ್ಲಿ ಹೂಡಿಕೆ ಮಾಡಲಿರೋ ಸಾಮಾನ್ಯ ಮಾರ್ಗವೆಂದ್ರೆ ಸರ್ಕಾರಿ ಸೆಕ್ಯುರಿಟಿಸ್ (ಗಿಲ್ಟ್) ಮ್ಯೂಚುವಲ್ ಫಂಡ್ಸ್. ಮ್ಯೂಚುವಲ್ ಫಂಡ್ಗಳ ಮೂಲಕ ಸಾಮಾನ್ಯವಾಗಿ ಬಾಂಡ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.