ಮೈತ್ರಿ ಬಜೆಟ್: ಇಲ್ಲಿವೆ ನಿಮ್ಮ ನಿರೀಕ್ಷೆ, ಕುಮಾರಣ್ಣ ಪಾಸಾಗಲಿದ್ದಾರಾ ಪರೀಕ್ಷೆ?

By Web DeskFirst Published Feb 7, 2019, 5:21 PM IST
Highlights

ಕುಮಾರಣ್ಣ ಮಂಡಿಸಲಿದ್ದಾರೆ ಮೆತ್ರಿ ಸರ್ಕಾರದ ಎರಡನೇ ಬಜೆಟ್| ಜನಪ್ರಿಯ ಬಜೆಟ್ ಮಂಡಿಸಲಿದ್ದಾರಾ ಸಿಎಂ ಕುಮಾರಸ್ವಾಮಿ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪರ, ರೈತ ಪರ ಬಜೆಟ್ ಖಚಿತ| ರೈತರು, ಮಧ್ಯಮ ವರ್ಗದವರ ಮನಗೆಲ್ಲಲು ಮೈತ್ರಿ ಸರ್ಕಾರದ ಬಜೆಟ್ ಪ್ಲಾನ್| ಜನಪ್ರಿಯ ಘೋಷಣೆಗಳ ಮೂಲಕ ಮತಬ್ಯಾಂಕ್ ಗಟ್ಟಿಗೊಳಿಸುವ ಕಸರತ್ತು| 

ಬೆಂಗಳೂರು(ಫೆ.07): ನಾಳೆ(08-02-2019)ಸಿಎಂ ಕುಮಾರಸ್ವಾಮಿ ಮೈತ್ರಿ ಸರ್ಕಾರದ 2ನೇ ಬಜೆಟ್ ಮಂಡಿಸಲಿದ್ದಾರೆ. ಕಳೆದ ಬಾರಿ 5 ಜುಲೈ 2018ರಂದು ಮೊದಲ ಬಜೆಟ್ ಮಂಡಿಸಿದ್ದ ಸಿಎಂ, ಈ ಬಾರಿ ಅತೃಪ್ತರು, ಆಪರೇಷನ್​ ಭೀತಿ ನಡುವೆಯೇ ಬಜೆಟ್ ಮಂಡನೆಗೆ ಸಿದ್ದತೆ ನಡೆಸಿದ್ದಾರೆ.
 
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಜನಪರ ಮತ್ತು ರೈತ ಪರ ಬಜೆಟ್ ಮಂಡನೆ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಲೋಕಸಭೆ ಚುನಾವಣೆ ಗೆಲ್ಲಲು ಮತದಾರರ ಮನವೊಲಿಸಲು ಮುಂದಾಗಲಿರುವ ಮೈತ್ರಿ ಸರ್ಕಾರ, ರೈತರು ಮತ್ತು ಮಧ್ಯಮ ವರ್ಗದವರ ಮನಗೆಲ್ಲಲು ಬಜೆಟ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ಈ ಮಧ್ಯೆ ಜನಪ್ರಿಯ ಬಜೆಟ್ ಮಂಡಿಸುವುದೋ ಅಥವಾ ಸಮತೋಲನದ ಬಜೆಟ್ ಮಂಡಿಸುವುದೋ ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರ ಇದ್ದಂತೆ ಕಾಣುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ಅವರ ಆರ್ಥಿಕ ಸಲಹೆ ಪಡೆದು ಬಜೆಟ್ ರಚನೆ ಮಾಡಿರುವುದು ವಿಶೇಷ.

ಏನಿವೆ ರಾಜ್ಯದ ಅನ್ನದಾತನ ನಿರೀಕ್ಷೆಗಳು?:

ರಾಜ್ಯದ ಅನ್ನದಾತನಿಗೆ ರಾಜ್ಯ ಸರ್ಕಾರ ಬಂಪರ್ ಆಫರ್ ನೀಡುವ ಸಾಧ್ಯತೆ ದಟ್ಟವಾಗಿದ್ದು, ಪ್ರಮುಖವಾಗಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಮಾರುಕಟ್ಟೆ ಖಾತರಿ ಯೋಜನೆ, ವಾಣಿಜ್ಯ, ಸಿರಿಧಾನ್ಯ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ, ಕೃಷಿ ಉತ್ಪನ್ನಗಳ ಜೊತೆ ವಾಣಿಜ್ಯ ಬೆಳೆಗಳಿಗೂ ಮಾರುಕಟ್ಟೆ ಖಾತರಿ ಸೇರಿದಂತೆ ಹಲವು ನಿರೀಕ್ಷೆಗಳನ್ನು ಅನ್ನದಾತ ಹೊಂದಿದ್ದಾನೆ. ಅಲ್ಲದೇ ಬೆಂಬಲ ಬೆಲೆಗಾಗಿ 500 ರಿಂದ 1000 ಕೋಟಿ ರೂ. ಒದಗಿಸುವ ಸಾಧ್ಯತೆಯೂ ಇದೆ.

ಪ್ರತಿ ವರ್ಷ ಉತ್ಪತ್ತಿಯಾಗುವ ಕೃಷಿ ಉತ್ಮನ್ನದ ಮೌಲ್ಯ ಒಟ್ಟು 26 ಸಾವಿರ ಕೋಟಿ ರೂ. ರೈತರಿಂದ ಬೆಳೆಗಳನ್ನು ವ್ಯಾಪಾರಿಗಳು ಖರೀದಿಸುವ ಮೌಲ್ಯ 36 ಸಾವಿರ ಕೋಟಿ ರೂ. ವ್ಯಾಪಾರಿಗಳು ಈ ಬೆಳೆಗಳನ್ನು ಮಾರುವ ಮೊತ್ತ ಸುಮಾರು 48 ಸಾವಿರ ಕೋಟಿ ರೂ. ಅಂದರೆ ವ್ಯಾಪಾರಿಗಳಿಗೆ ಒಟ್ಟು 12 ಸಾವಿರ ಕೋಟಿ ರೂ. ಲಾಭ ದೊರೆಯುತ್ತದೆ.

ಇದನ್ನು ತಪ್ಪಿಸಿ ಲಾಭವನ್ನು ನೇರವಾಗಿ ರೈತನಿಗೆ ತಲುಪುಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ಬಜೆಟ್ ಅದನ್ನು ಪೂರೈಸಲಿದೆ ಎಂಬ ನಿರೀಕ್ಷೆ ಇದೆ. ಅದರಂತೆ ಗೋಡಂಬಿ, ಕಾಳುಮೆಣಸು, ಶೇಂಗಾ, ಸಜ್ಜೆ, ಏಲಕ್ಕಿ, ಹೆಸರು, ತೊಗರಿ, ಹತ್ತಿ, ಕೆಂಪು ಮೆಣಸಿನಕಾಯಿ, ಜೋಳ ಹಾಗೂ ರಾಗಿ ಬೆಳೆಗಳನ್ನು ಮಾರುಕಟ್ಟೆ ಖಾತರಿ ವ್ಯಾಪ್ತಿಗೆ ತರಲಾಗುತ್ತಿದೆ. ಅಲ್ಲದೇ ಮಹಿಳಾ ರೈತರಿಗೆ ಈ ಬಾರಿಯ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್ ಪ್ರಕಟಿಸುವ ಸಾಧ್ಯತೆಯೂ ಇದೆ.

ಸಾಲಮನ್ನಾದಿಂದ ಆರ್ಥಿಕ ಸಂಕಷ್ಟ?: 
ಇನ್ನು ಕಳೆದ ಬಜೆಟ್​ನಲ್ಲಿ 2 ಲಕ್ಷ ಕೋಟಿಗೂ ಅಧಿಕ ಬಜೆಟ್​ ಮಂಡಿಸಿದ್ದ ಸಿಎಂ, ಕಳೆದ ಬಜೆಟ್​ನಲ್ಲಿ ಸಾಲಮನ್ನಾ ಘೋಷಿಸಿ ಆರ್ಥಿಕ ನಷ್ಟಕ್ಕೆ ಸಿಲುಕಿದೆ ಎನ್ನಲಾಗುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರದ ಜಿಎಸ್​ಟಿಯಿಂದ ರಾಜ್ಯದಲ್ಲಿ ಸರಿಯಾಗಿ ತೆರಿಗೆ ಸಂಗ್ರಹವಾಗಿಲ್ಲ ಎಂಬ ವಾದವೂ ಇದೆ. ಸರ್ಕಾರದ ಬೊಕ್ಕಸಕ್ಕೆ ಶಕ್ತಿ ತುಂಬುವ ಅಬಕಾರಿ ಇಲಾಖೆಯಲ್ಲೂ ನಷ್ಟವಾಗಿದ್ದು, ಕೆಲ ಯೋಜನೆಗಳ ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. 

ಸರ್ಕಾರದ ಬೊಕ್ಕಸಕ್ಕೆ 10 ಸಾವಿರದಿಂದ 12 ಸಾವಿರ ಕೋಟಿ ರೂ. ಹೊರೆ ಸಾಧ್ಯತೆ ಇದ್ದು, ಇದನ್ನು ಸರಿದೂಗಿಸಲು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ ಕಳೆದ ಬಾರಿ ದ.ಕರ್ನಾಟಕ, ಒಕ್ಕಲಿಗ ಸಮುದಾಯಕ್ಕೆ ಮೀಸಲಾದ ಬಜೆಟ್ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಮುಕ್ತರಾಗಲು ಕುಮಾರಸ್ವಾಮಿ ಪ್ರಯತ್ನಿಸಬಹುದು.

ಆರೋಗ್ಯವೇ ಭಾಗ್ಯ:
ಆಯುಷ್ಮಾನ್ ಭಾರತ್ ಯೋಜನೆ ಬದಲಿಗೆ ಯಶಸ್ವಿನಿ ಯೋಜನೆ ಜಾರಿಗೆ ತರಲು ಮೈತ್ರಿ ಸರ್ಕಾರ ನಿರ್ಧರಿಸಿದ್ದು, ಜನಸಾಮಾನ್ಯರ ಬೇಡಿಕೆಯಂತೆ 2ನೇ ಹಂತದ ಚಿಕಿತ್ಸೆಗಾಗಿ ‘ಯಶಸ್ವಿನಿ’ ಯೋಜನೆಯನ್ನು ಮರು ಜಾರಿ ಮಾಡಲಾಗುವುದು. ಯಶಸ್ವಿನಿ ಯೋಜನೆಗಾಗಿ ಸರ್ಕಾರ 800 ಕೋಟಿ ರೂ. ಅನುದಾನ ಮೀಸಲಿಡಲಿದೆ. 

ಅಲ್ಲದೇ ಸಹಕಾರ ಸಂಘಗಳ ಸದಸ್ಯರಿಗೆ ಶಸ್ತ್ರಕ್ರಿಯೆಯೂ ಸೇರಿದಂತೆ ಪ್ರಮುಖ ಚಿಕಿತ್ಸಾ ಸೌಲಭ್ಯ, ಆದಾಯ ಮಿತಿ ಇಲ್ಲದೇ ಇರುವುದು, ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಈ ಯೋಜನೆಯಲ್ಲಿ ಸೇರಿದೆ. ಈಗಾಗಲೇ ರಾಜ್ಯದಲ್ಲಿ 572 ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆ ಜಾರಿಯಲ್ಲಿದೆ.

ಪ್ರಾಥಮಿಕ ಆರೋಗ್ಯ ಸೇವೆಗೆ, ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ನಿರೀಕ್ಷೆ ಇದ್ದು, ರೋಗಿಗಳಿಗೆ ಆಸ್ಪತ್ರೆ ಆಯ್ಕೆಯಲ್ಲಿ ಸ್ವಾತಂತ್ರ್ಯ ನೀಡುವ ಗುರಿ ಹೊಂದಲಾಗಿದೆ. ಅಲ್ಲದೇ ತಂಬಾಕಿಗೆ ತೆರಿಗೆ ವಿಧಿಸಿ ಅದೇ ಹಣ ತಂಬಾಕಿನಿಂದ ಭಾದಿತರಾದವರ ಚಿಕಿತ್ಸೆಗೆ ಮೀಸಲಿಡಲು ಸರ್ಕಾರ ಚಿಂತನೆ ನಡೆಸಿದೆ.

ಕಲೆ ಮತ್ತು ಸಂಸ್ಕೃತಿ:
ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡಲು ಸಾಹಿತ್ಯ ಅಕಾಡೆಮಿ, ಟ್ರಸ್ಟ್​ಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದ್ದು, ಇಡೀ ಕರ್ನಾಟಕಕ್ಕೆ ಮಾದರಿಯಾಗುವ ರೆಫರೆನ್ಸ್ ಲೈಬ್ರರಿ ನಿರ್ಮಾಣಕ್ಕೆ ಮುಂದಾಗಬಹುದು.

ದುಡಿಯುವ ಕೈಗಳಿಗೇನು?:
2006ರ ನಂತರ ನೇಮಕವಾದ ನೌಕರರಿಗೆ ಹಳೆ ಪಿಂಚಣಿ ಯೋಜನೆ ಪುನರ್ ​ಜಾರಿಗೆ ಒತ್ತಾಯ ಕೇಳಿ ಬಂದಿದ್ದು, ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಒಪಿಎಸ್ ಮರುಜಾರಿಗೊಳಿಸುವ ನಿರೀಕ್ಷೆ ಇದೆ. ಈ ಮೂಲಕ ಸಾವಿರಾರು ನೌಕರರ ನಿವೃತ್ತಿ ನಂತರದ ಬದುಕಿಗೆ ಸರ್ಕಾರ ಆಸರೆಯಾಗುವ ಸಾಧ್ಯತೆ ದಟ್ಟವಾಗಿದೆ.

ರಾಜಧಾನಿ ಬೆಂಗಳೂರಿಗೆ ಏನೇನು?:

ಎಲಿವೇಟೆಡ್ ಕಾರಿಡಾರ್, ಉಕ್ಕಿನ ಮೇಲ್ಸೇತುವೆಗೆ ಒತ್ತು ನೀಡದೆ ಸಮೂಹ ಸಾರಿಗೆಗೆ ಆದ್ಯತೆ ನೀಡುವ ನಿರೀಕ್ಷೆ ದಟ್ಟವಾಗಿದೆ. ಪೌರಕಾರ್ವಿುಕರ ಕ್ಷೇಮಾಭಿವೃದ್ಧಿಗೆ ಯೋಜನೆ ಘೋಷಿಸಿ, ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವ ಚಿಂತನೆಯಲ್ಲಿದೆ ಮೈತ್ರಿ ಸರ್ಕಾರ. ಅಲ್ಲದೇ ಸಂಚಾರ ದಟ್ಟಣೆ, ನೀರಿನ ಸಮಸ್ಯೆ ನಿವಾರಣೆ, ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ.

ಜೊತೆಗೆ ಬಿಬಿಎಂಪಿಗೆ ಹೆಚ್ಚಿನ ಅನುದಾನ, ಸ್ಥಳೀಯ ಆಡಳಿತವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿರೀಕ್ಷೆ ಕೂಡ ಇದೆ. ಅಲ್ಲದೇ ಮೆಟ್ರೋಗೆ ನೀಡಿದಷ್ಟೇ ಆದ್ಯತೆ ಬಿಎಂಟಿಸಿಗೂ ನೀಡಬೇಕು ಎಂಬ ಜನರ ಬೇಡಿಕೆ ಈಡೇರುವ ಸಾಧ್ಯತೆ ಇದೆ.

click me!