ಮೋದಿ 20 ಲಕ್ಷ ಕೋಟಿ ಪ್ಯಾಕೇಜ್, ಅಂಗೈಯಲ್ಲಿ ಆಕಾಶ..?

By Suvarna NewsFirst Published May 21, 2020, 1:13 PM IST
Highlights

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ಆತ್ಮ ನಿರ್ಬರ ಭಾರತ ಎಂಬ ಪದ ಬಳಸಿದ್ದರು. ಅದು ಯಾರಿಗೂ ಅರ್ಥವಾಗದೇ ಹೋದರೂ ಜನರಲ್ಲಿ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಆದರೆ, ಯಾವಾಗ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ವಿವರವನ್ನು ದೇಶವಾಸಿಗಳ ಮುಂದಿಟ್ಟರೋ, ಎಲ್ಲವೂ ಠುಸ್ ಎಂಬುವುದು ಅರ್ಥವಾಯಿತು.

- ಶಶಿಶೇಖರ, ಸುವರ್ಣ ನ್ಯೂಸ್

ನವದೆಹಲಿ(ಮೇ.21): ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದಾಗ ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿದ್ದ ಬಡವರು ನಿಟ್ಟುಸಿರು ಬಿಟ್ಟಿದ್ದರು. ಕೆಲಸವಿಲ್ಲದೇ ಬರಿಗೈ ಆಗಿದ್ದವರು ಸರ್ಕಾರದಿಂದ ಧನ ಸಹಾಯ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದರು. ಅವತ್ತು ಪ್ರಧಾನಿ ಮಾತನಾಡಿದ ರೀತಿಯೂ ಈ ನಿರೀಕ್ಷೆ ಹೆಚ್ಚು ಮಾಡೋದಕ್ಕೆ ಕಾರಣವಾಗಿತ್ತು. ಆತ್ಮ ನಿರ್ಬರ ಭಾರತ ಅಂತ ಅರ್ಥವಾಗದ ಭಾಷೆಯಲ್ಲಿ ಹೇಳಿದಾಗಲೂ ಇನ್ನು ಮುಂದೆ ನಮ್ಮ ಹಸಿವು ನೀಗಲಿದೆ ಅಂತಲೇ ಅಂದುಕೊಂಡಿತ್ತು ದೇಶ. ಆದ್ರೆ ಐದು ಹಂತಗಳಲ್ಲಿ ನಿರ್ಮಲಾ ಸೀತಾರಾಮನ್ 20.97 ಲಕ್ಷ ಕೋಟಿ ಪ್ಯಾಕೇಜ್​ನ ವಿವರಗಳನ್ನ ದೇಶದ ಮುಂದಿಟ್ಟಾಗ ಅದು ಜನ ಸಾಮಾನ್ಯರಿಗೆ ಅರ್ಥವಾಗಲೇ ಇಲ್ಲ. ಬಡವರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬರಬಹುದು ಅಂತ ಕಾದಿದ್ದೇ ಆಯ್ತು. ನಿರ್ಮಲಾ ಸೀತಾರಾಮನ್ ಆ ಬಗ್ಗೆ ಮಾತನಾಡಲೇ ಇಲ್ಲ. ಇಂಥಾ ಸಂದರ್ಭದಲ್ಲಿ ಬಡವನ ಬೆನ್ನಿಗೆ ನಿಲ್ಲದೆ ಇನ್ಯಾವ ಸಂದರ್ಭದಲ್ಲಿ ನಿಲ್ಲೋದಕ್ಕೆ ಸಾಧ್ಯ..? ಲಾಕ್​ಡೌನ್ ಮಾಡಿ ಇಡೀ ದೇಶಕ್ಕೆ ದೇಶವನ್ನೇ ಬಂದ್ ಮಾಡಿದಾಗ ಅದನ್ನ ಒಪ್ಪಿಕೊಂಡು ಪಾಲಿಸಿದರಲ್ಲ ಅವರಿಗೆ ಸಹಾಯ ಮಾಡಬೇಕಿದ್ದದ್ದು ಸರ್ಕಾರದ ಕರ್ತವ್ಯ. 

ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು: ಕರಾವಳಿ ರಾಜ್ಯಗಳ ಜನರಿಗೆ ಲಾಭ

ಪ್ಯಾಕೇಜ್​ನ ಅರ್ಧ ಭಾಗ ಸಾಲದ ರೂಪದಲ್ಲಿ..!

ನರೇಂದ್ರ ಮೋದಿ ಸರ್ಕಾರ ಘೋಷಿಸಿದ 20.97 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಶೇ 50% ಗಿಂತಲೂ ಹೆಚ್ಚು ಮೊತ್ತ ಸಾಲ ಮತ್ತು ಸಾಲದ ಗ್ಯಾರಂಟಿ ರೂಪದಲ್ಲೇ ಇದೆ. ಉಳಿದದ್ದು ಹೂಡಿಕೆ ಘೋಷಣೆಗಳು ಮತ್ತೊಂದಿಷ್ಟು ಸುಧಾರಣಾ ಕ್ರಮಗಳು. ನಿರ್ಮಲಾ ಸೀತಾರಾಮನ್ ಐದು ದಿನಗಳ ಕಾಲ ಭೂಮಿಯಾಳದಿಂದ ಹಿಡಿದು ಬಾಹ್ಯಾಕಾಶದವರೆಗೂ ಘೋಷಣೆಗಳನ್ನ ಮಾಡಿಬಿಟ್ಟರು. ಆದ್ರೆ ತುತ್ತು ಅನ್ನಕ್ಕಾಗಿ, ದಿನ ನಿತ್ಯದ ಅಗತ್ಯಗಳಿಗಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದವರಿಗೆ ಏನೆಂದರೆ ಏನೂ ಸಿಗಲೇ ಇಲ್ಲ. ನಿರ್ಮಲಾ ಭಾಷಣ, ಬಜೆಟ್ ಭಾಷಣದ ಮುಂದಿನ ಭಾಗದಂತಿತ್ತೇ ಹೊರತು ಲಾಕ್​ಡೌನ್​ನಿಂದ ಕುಸಿದುಬಿದ್ದವರನ್ನ ಮೇಲೆತ್ತುವ ಘೋಷಣೆಗಳೇ ಬರಲಿಲ್ಲ. 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಆರ್ಥಿಕ ಚೇತರಿಕೆಗಾಗಿ ಹಲವು ಘೋಷಣೆಗಳನ್ನ ಮಾಡಿದ್ದು ಒಳ್ಳೆಯದೇ. ಇದರಿಂದ ಉದ್ಯೋಗ ಸೃಷ್ಟಿ ಗಣನೀಯ ಪ್ರಮಾಣದಲ್ಲಿ ಆಗಲಿದೆ ಅನ್ನೋದು ನಿಜವೇ. ಆದ್ರೆ ಇವತ್ತಿನ ಹಸಿವು ನೀಗಿಸುವ ಕೆಲಸ ಸರ್ಕಾರದ ಮೊದಲ ಆಧ್ಯತೆಯಾಗಬೇಕಿತ್ತು.

ಕೇಂದ್ರದ ಪ್ಯಾಕೇಜ್‌ ಜಿಡಿಪಿಯ ಶೇ.10ರಷ್ಟಲ್ಲ, ಕೇವಲ ಶೇ.1!

20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವನಿಗೆಷ್ಟು..?

ಒಟ್ಟಾರೆ 30 ಸಾವಿರ ಕೋಟಿಯಷ್ಟು ದುಡ್ಡನ್ನ ನೇರ ನಗದು ಪಾವತಿ ಮೂಲಕ ಬಡವರ ಖಾತೆಗೆ ಹಾಕಿದ್ದೇವೆ ಅಂತ ಹೇಳುತ್ತೆ ಸರ್ಕಾರ. 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವರಿಗೆ ಉಚಿತ ಪಡಿತರ ನೀಡುವ ಘೋಷಣೆ ಮಾಡಲಾಯ್ತು. ಲಾಕ್​ಡೌನ್ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸೋ ಕೆಲಸವನ್ನ ಸರ್ಕಾರಕ್ಕಿಂತಲೂ ಈ ದೇಶದ ಜನರೇ ಹೆಚ್ಚು ಮಾಡಿದ್ದಾರೆ. ವಿಧವಾ ವೇತನ, ವೃದ್ಧಾಪ್ಯ ವೇತನವನ್ನೂ ಮೂರು ತಿಂಗಳು ಹೆಚ್ಚುವರಿಯಾಗಿ ನೀಡುವ ಘೋಷಣೆ ಮಾಡಿತು. ಇದಕ್ಕಾಗಿ ಸರ್ಕಾರ 1,400 ಕೋಟಿ ಖರ್ಚು ಮಾಡಿದೆ. 7.47 ಕೋಟಿ ರೈತರ ಖಾತೆಗಳಿಗೆ 14,946 ಕೋಟಿ ಹಣವನ್ನ ಸರ್ಕಾರ ಹಾಕಿದೆ. ಆದ್ರೆ ಈ ಯೋಜನೆ ಮೊದಲೇ ಇತ್ತು, ಈ ಸಂದರ್ಭದಲ್ಲೂ ಮುಂದುವರಿಸಿದೆಯಷ್ಟೆ. 2.17 ಕೋಟಿ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ 3,071 ಕೋಟಿ ಖರ್ಚು ಮಾಡಿದ್ದೇವೆ ಅನ್ನುತ್ತೆ ಸರ್ಕಾರ. ಮಹಿಳೆಯರ ಜನ್ ಧನ್ ಬ್ಯಾಂಕ್ ಖಾತೆಗಳಿಗೆ ಮೂರು ತಿಂಗಳ ಕಾಲ 500 ರೂ ನೀಡುತ್ತೇವೆ ಅಂದಿತು ಸರ್ಕಾರ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 19.86 ಕೋಟಿ ಮಹಿಳೆಯರ ಖಾತೆಗೆ 9,930 ಕೋಟಿಯಷ್ಟು ಹಣ ಹಾಕಲಾಗಿದೆ. ದುಡಿಯುತ್ತಿದ್ದ ಕೈಗಳೆಲ್ಲ ಮನೆಯಲ್ಲೇ ಕುಳಿತಿರುವಾಗ ಮಹಿಳೆಯ ಖಾತೆಗೆ ತಿಂಗಳಿಗೆ 500 ರೂ ಕೊಟ್ಟರೆ ಜೀವನ ನಡೆಸೋದಕ್ಕೆ ಸಾಧ್ಯವಾಗುತ್ತಾ..? ಆದ್ರೆ ಬೇಡಿಕೆ ಇದ್ದದ್ದು ಬಡವರ ಖಾತೆಗೆ ತಿಂಗಳಿಗೆ ಕನಿಷ್ಟ 5 ಸಾವಿರ ಹಣ ಹಾಕಬೇಕು ಅನ್ನೋದು. ಆದ್ರೆ ಸರ್ಕಾರ ಈ ಬಗ್ಗೆ ತುಟಿಬಿಚ್ಚಲೇ ಇಲ್ಲ. ಸರ್ಕಾರ ಬಡವರಿಗಾಗಿ ಅಕ್ಕಿ, ಗೋದಿ, ಬೇಳೆ ಕೊಟ್ಟಿತೇನೋ ನಿಜ. ಇದರಾಚೆಗೂ ಜೀವನ ನಡೆಸಬೇಕಲ್ಲ. ಅವತ್ತಿನ ದುಡಿಮೆಯಿಂದ ಅವತ್ತಿನ ಬದುಕು ದೂಡುವವರ ಸಂಖ್ಯೆಯೇ ದೇಶದಲ್ಲಿ 25 ಕೋಟಿಗೂ ಹೆಚ್ಚಿದೆ. ಅಂಥವರು ಸರ್ಕಾರ ಕೊಟ್ಟ ಪಡಿತರವನ್ನಷ್ಟೇ ತಿಂದು ಜೀವನ ಮಾಡೋದಕ್ಕೆ ಸಾಧ್ಯವಾ..? ಮೋದಿ ಸರ್ಕಾರ ಮಾಡಿದ್ದ ಇಷ್ಟೆಲ್ಲ ಯೋಜನೆಗಳಿಗೆ ಖರ್ಚಾಗಿದ್ದು ಕೇವಲ 1.92 ಲಕ್ಷ ಕೋಟಿಯಷ್ಟೇ.. ಉಳಿದದ್ದು ಈ ದೇಶದ ಬಡವರಿಗೆ ಮುಟ್ಟೋ ಲಕ್ಷಣಗಳೂ ಇಲ್ಲ.

20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!

20 ಲಕ್ಷ ಕೋಟಿಯಲ್ಲಿ ಬಡವರಿಗೆ 2 ಲಕ್ಷ ಕೋಟಿ ಸಾಕಿತ್ತು.

ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದವರಿಗೆ ಒಂದು ಬಾರಿಯ ಪರಿಹಾರವಾಗಿ 5 ಸಾವಿರ ರೂಪಾಯಿ ಹಣವನ್ನ ಬಡವರ ಖಾತೆಗೆ ಹಾಕಬೇಕು ಅನ್ನೋ ಸಲಹೆ ಕೊಟ್ಟಿತ್ತು ಭಾರತೀಯ ಕೈಗಾರಿಕಾ ಒಕ್ಕೂಟ. ಈ ಸಲಹೆಯ ಪ್ರಕಾರ ಲಾಕ್​ಡೌನ್ ನಿಂದ ಹಣವಿಲ್ಲದೇ ಬರಿಗೈ ಆಗಿದ್ದ ಬಡವರು, ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ಕೊಡಬೇಕು. 40 ಕೋಟಿ ಬಡ ಜನರ ಬ್ಯಾಂಕ್ ಖಾತೆಗೆ ಒಂದು ಬಾರಿಯ ಪರಿಹಾರವಾಗಿ 5 ಸಾವಿರ ಜಮಾ ಮಾಡಬೇಕು, ಅಥವಾ ಹತ್ತು ಸಾವಿರ ಪರಿಹಾರದಂತೆ 20 ಕೋಟಿ ಬಡವರ ಖಾತೆಗೆ ಹಣ ಹಾಕಬೇಕು ಅಂತ ಸಲಹೆ ನೀಡಿತ್ತು. ಈ ಯೋಜನೆಯನ್ನ ಜಾರಿಗೆ ತರೋದಕ್ಕೆ ಸರ್ಕಾರಕ್ಕೆ ಬೇಕಾಗಿರೋ ಹಣ 2 ಲಕ್ಷ ಕೋಟಿಯಷ್ಟೇ. 20 ಲಕ್ಷ ಕೋಟಿಯ ಪ್ಯಾಕೇಜ್​ ನಲ್ಲಿ 2 ಲಕ್ಷ ಕೋಟಿಯನ್ನ ಬಡವರ ಖಾತೆಗೆ ಹಾಕಿದ್ದರೆ, ಈ ದೇಶದ ಬಡವ ಮೋದಿ ಸರ್ಕಾರವನ್ನ ಅದೆಷ್ಟು ವರ್ಷ ನೆನೆಯುತ್ತಿದ್ದನೋ... 13 ಕೋಟಿ ಬಡವರಿಗೆ ಒಂದು ಬಾರಿಯ ಪರಿಹಾರ ಅಂತ 5 ಸಾವಿರ ಹಣವನ್ನ ಬಡವರ ಖಾತೆಗೆ ಹಾಕಿದ್ದರೂ ಅದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದದ್ದು 65 ಸಾವಿರ ಕೋಟಿ.

ಕೇಂದ್ರದ ಪ್ಯಾಕೇಜ್ 10% ಜಿಡಿಪಿಯಷ್ಟಲ್ಲ ಕೇವಲ 1%..?

ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದಾಗ ಜಿಡಿಪಿಯ ಶೇ.10 ರಷ್ಟು ಪ್ಯಾಕೇಜ್ ಘೋಷಿಸಿದ್ದೇವೆ ಅಂತ ಹೇಳಿತ್ತು. ಜಗತ್ತಿನಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಪ್ಯಾಕೇಜ್ ಅಂದಿತ್ತು ಸರ್ಕಾರ. ದಿನ ಕಳೆದಂತೆ ಪ್ಯಾಕೇಜ್​ನ ಅಸಲಿಯತ್ತು ಬಯಲಾಗುತ್ತಿದೆ. ಪ್ಯಾಕೇಜ್​ನ ಬಹುಪಾಲು ಮೊತ್ತ ಆರ್​ಬಿಐ ನೀತಿ, ಸಾಲ, ಸಾಲದ ಗ್ಯಾರಂಟಿ, ಹೂಡಿಕೆ ರೀತಿಯಲ್ಲೇ ಇದೆ. ಹೀಗಾಗಿ ಪ್ಯಾಕೇಜ್ ಜಿಡಿಪಿಯ ಹತ್ತರಷ್ಟಲ್ಲ, ಕೇವಲ ಒಂದು ಪರ್ಸೆಂಟ್ ಅಷ್ಟೆ ಅನ್ನೋ ಅಭಿಪ್ರಾಯ ರೇಟಿಂಗ್ ಏಜೆನ್ಸಿಗಳು ಮತ್ತು ಆರ್ಥಿಕ ತಜ್ಞರದ್ದು. ಒಂದು ಪರ್ಸೆಂಟ್ ಅಂದ್ರೆ ಕೊರೊನಾ ಪ್ಯಾಕೇಜ್ 2 ಲಕ್ಷ ಕೋಟಿಯಷ್ಟೇ ಆಗಲಿದೆ. ಇದರ ಜತೆಗೆ ಕೊರೊನಾ ಲಾಕ್​ ಡೌನ್​ ನಿಂದ ನಷ್ಟ ಅನುಭವಿಸಿರುವವರಿಗೆ, ತೀವ್ರ ಸಂಕಷ್ಟದಲ್ಲಿದ್ದವರಿಗೆ ಈ ಪ್ಯಾಕೇಜ್​ನಿಂದ ಪರಿಹಾರ ಸಿಕ್ಕಿಲ್ಲ ಅನ್ನೋ ಆತಂಕವನ್ನೂ ರೇಟಿಂಗ್ ಏಜೆನ್ಸಿಗಳು ವ್ಯಕ್ತಪಡಿಸಿವೆ.

ಆರ್ಥಿಕ ಪ್ಯಾಕೇಜ್‌ನ ಕೊನೆಯ ಕಂತಿನಲ್ಲಿ ಏಳು ಪ್ರಮುಖ ಘೋಷಣೆ!

ಬಡವರ ಡೇಟಾ ಮೋದಿ ಸರ್ಕಾರದ ಬಳಿಯಿದೆ..!

ಸ್ವಾತಂತ್ರ್ಯಾ ನಂತರ ದೇಶದ ಯಾವ ಸರ್ಕಾರಗಳೂ ಬಡವರ ಸಂಖ್ಯೆಯನ್ನ ದಾಖಲು ಮಾಡುವ ವ್ಯವಸ್ಥೆಯನ್ನೇ ಮಾಡಲಿಲ್ಲ. ಬಡವರು ಅನ್ನೋ ಸಾಕ್ಷಿಗೆ ರೇಷನ್ ಕಾರ್ಡ್​ ಗಳನ್ನ ಕೊಟ್ಟಿದ್ದು ಬಿಟ್ಟರೆ ಯಾವ ಸರ್ಕಾರಗಳೂ ಬಡವರ ಡೇಟಾ ಸಂಗ್ರಹಿಸಲಿಲ್ಲ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 40 ಕೋಟಿ  ಬಡವರಿಗಾಗಿ ಜನ್​ ಧನ್ ಖಾತೆ ತೆರೆದಿದೆ. ಆಧಾರ್ ಕಾರ್ಡ್​ಗಳನ್ನ ಬ್ಯಾಂಕ್​ಗಳಿಗೆ ಲಿಂಕ್ ಮಾಡಲಾಗಿದೆ. ರೈತರ ಖಾತೆಗಳಿಗೆ ನೇರವಾಗಿ ಸಹಾಯ ಧನ ಹಾಕಿ ಸರ್ಕಾರ ಯಶಸ್ವಿಯೂ ಆಗಿದೆ. ಬಡವರ ಡೇಟಾ ಇಟ್ಟುಕೊಂಡು ಸುಮ್ಮನೆ ಕೂರುವ ಬದಲು 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವರ ಜೇಬಿಗೆ ಹಣ ಹಾಕಬಹುದಿತ್ತಲ್ಲವಾ..? 

ಸಿಎಂ ಕೊಟ್ಟ ಪ್ಯಾಕೇಜ್ ಯಾವಾಗ ಸಿಗುತ್ತೆ..?

ಬಿಎಸ್​ ಯಡಿಯೂರಪ್ಪ ಮೂರು ಹಂತಗಳಲ್ಲಿ 2,272 ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದಾರೆ. ದೇಶದ ಯಾವ ರಾಜ್ಯವೂ ಈ ಬಗ್ಗೆ ಯೋಚನೆ ಮಾಡದೇ ಇರೋ ಸಮಯದಲ್ಲಿ ಬಿಎಸ್​ವೈ ಬಡವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವ ಘೋಷಣೆ ಮಾಡಿದರು. ಹೂ, ಹಣ್ಣು-ತರಕಾರಿ, ಮೆಕ್ಕೆ ಜೋಳ ಬೆಳೆಯುವ ರೈತರಿಗೆ ಬೆಳೆ ನಷ್ಟ ಪರಿಹಾರ, ಕ್ಷೌರಿಕರಿಗೆ, ಡೋಬಿಗಳಿಗೆ. ಆಟೋ-ಕ್ಯಾಬ್ ಚಾಲಕರಿಗೆ ಒಂದು ಬಾರಿಯ 5 ಸಾವಿರ ಪರಿಹಾರ ಘೋಷಿಸಿದ್ದಾರೆ. ರೈತರಿಗೆ ಪರಿಹಾರವನ್ನ ಸರ್ಕಾರ ಹೇಗೋ ಕೊಟ್ಟುಬಿಡುತ್ತೆ. ಆದ್ರೆ ಕ್ಷೌರಿಕರು ಮತ್ತು ಡೋಬಿಗಳು ಪರಿಹಾರ ಹೇಗೆ ಕೊಡುತ್ತೆ. ಜಾತಿಯ ಆಧಾರದ ಮೇಲೆ ಪರಿಹಾರ ಕೊಡುವ ಸರ್ಕಾರದ ಬಳಿ ಜಾತಿಯ ಆಧಾರದಲ್ಲಿ ಬಡವರ ಬ್ಯಾಂಕ್ ಖಾತೆಯ ವಿವರ ಇರಬೇಕಲ್ಲ. ಆಟೋ-ಕ್ಯಾಬ್ ಚಾಲಕರ ಪಟ್ಟಿ ಆರ್ ಟಿ ಓ ಹತ್ತಿರ ಇದೆಯಾದರೂ ಅವರ ಬ್ಯಾಂಕ್ ಖಾತೆಗಳ ವಿವರ ಇಲ್ಲ. ಸಿಎಂ ಬಿಎಸ್​ವೈ ಪ್ಯಾಕೇಜ್​ ಘೋಷಣೆ ಮಾಡಿ ದಿನಗಳು ಕಳೆಯುತ್ತಲೇ ಇವೆ. ಆದ್ರೆ ಪ್ಯಾಕೇಜ್​ನ ಹಣ ಫಲಾನುಭವಿಗಳಿಗೆ ತಲುಪೋದಕ್ಕೆ ಇನ್ನು ಎಷ್ಟು ದಿನ ಬೇಕಾಗುತ್ತೋ..? ಈ ಪ್ರಶ್ನೆಗೆ ಸರ್ಕಾರದ ಬಳಿಯೂ ಉತ್ತರವಿದ್ದಂತಿಲ್ಲ.

ಮೋದಿ ಭಾಷಣ; ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್, ಲಾಕ್‌ಡೌನ್ 4 ಘೋಷಣೆ

ಭಾರತ ಕೊರೊನಾ ಯುದ್ಧ ಗೆದ್ದಿಲ್ಲ..!

ಜಗತ್ತಿನ ಬೇರೆಲ್ಲ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೊನಾ ವೈರಸ್​ನ ಆರ್ಭಟ ಅಷ್ಟಾಗಿಲ್ಲ. ಹಾಗಂತ ನಾವೇನು ಕೊರೊನಾ ವಿರುದ್ಧದ ಯುದ್ಧವನ್ನ ಗೆದ್ದಿಲ್ಲ. ಯೂರೋಪ್, ಅಮೆರಿಕ, ರಷ್ಯಾದಲ್ಲಿ ವ್ಯಾಪಕವಾಗಿ ಹರಡುತ್ತಿರೋ ಕೊರೊನಾ ವೈರಸ್ ನಿಧಾನಗತಿಯಲ್ಲಿದೆ ಅಷ್ಟೆ. ವಿಶ್ವದ ಇತರ ದೇಶಗಳಿಗಿಂತ ನಾವೇ ಬೆಸ್ಟ್ ಅಂತ ಹೆಮ್ಮೆ ಪಟ್ಟುಕೊಳ್ಳುತ್ತಿರುವಾಗಲೇ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿಬಿಟ್ಟಿದೆ. ಸಾವಿನ ಸಂಖ್ಯೆ 3 ಸಾವಿರ ದಾಟಿದೆ. ಇನ್ನೂ ನಾವು ಬೆಸ್ಟ್ ಅಂತ ಸಂಭ್ರಮಿಸೋ ವಾತಾವರಣ ಈಗಿಲ್ಲ. ಮೊದಲ 60 ದಿನದಲ್ಲಿ ದೇಶದಲ್ಲಿ 1635 ಸೋಂಕಿತರಿದ್ದರು. ಆ ನಂತರದ 45 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಕಡಿಮೆ ಇದೆ ನಿಜ. ಹಾಗಂತ ಕೊರೊನಾ ವಿರುದ್ಧ ಗೆದ್ದೇ ಬಿಟ್ಟೆವು ಎಂದು ಸಂಭ್ರಮಿಸೋ ಸ್ಥಿತಿಯಲ್ಲಿಲ್ಲ.

ವಲಸೆ ಕಾರ್ಮಿಕರ ನಿಭಾಯಿಸುವಲ್ಲಿ ಸೋತ ಸರ್ಕಾರ..!

20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ಕೊಡುವ ಘೋಷಣೆಯನ್ನೇನೋ ಸರ್ಕಾರ ಮಾಡಿದೆ. ಆದ್ರೆ ಲಾಕ್ ಡೌನ್ ಘೋಷಣೆಯಾದ ನಂತರ ವಲಸೆ ಕಾರ್ಮಿಕರ ಸಮಸ್ಯೆಯನ್ನ ನಿಭಾಯಿಸೋದ್ರಲ್ಲಿ ಮೋದಿ ಸರ್ಕಾರ ಸೋತಿದೆ ಅನ್ನೋದು ವಾಸ್ತವ. ಲಾಕ್​ಡೌನ್ ಘೋಷಣೆಯಾದ ಕೆಲವೇ ದಿನಕ್ಕೆ ವಲಸೆ ಕಾರ್ಮಿಕರು ದೆಹಲಿಯಲ್ಲಿ ಬೀದಿಗೆ ಬಂದರಲ್ಲ ಆಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಇದ್ದ ಕೆಲಸ ಕಳೆದುಕೊಂಡು ಬರಿಗೈಯಾಗಿದ್ದ ಕಾರ್ಮಿಕರು, ಮಕ್ಕಳು, ಮಹಿಳೆಯರನ್ನ ಕಟ್ಟಿಕೊಂಡು ಸಾವಿರಾರು ಕಿಲೋಮೀಟರ್ ದೂರ ನಡೆಯುವ ಕರುಣಾಜನಕ ದೃಶ್ಯಗಳು ಕಣ್ಣಿಗೆ ರಾಚುವಂತೆ ಓಡಾಡಿದರೂ ಕಾರ್ಮಿಕರಿಗಾಗಿ ಸರ್ಕಾರ ಮಿಡಿಯಲಿಲ್ಲ. ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನ ಓಡಿಸುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. 

click me!