ಕೃಷಿ ಕ್ಷೇತ್ರಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ನಿರ್ಧರಿಸಿದ ತುಮಕೂರಿನ ಇಂಜಿನಿಯರ್ ಶ್ರೀವತ್ಸ ನಾಗಭೂಷಣ್ ರೇಷ್ಮೆ ಕೃಷಿಯಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ್ದಾನೆ.
ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಆ.09): ಕೃಷಿ ಕುಟುಂಬದಲ್ಲಿಯೇ ಹುಟ್ಟಿ ಬೆಳೆದು ಇಂಜಿನಿಯರಿಂಗ್ ಮಾಡಿದಾಕ್ಷಣ ಬೆಂಗಳೂರಿಗೆ ಹೋಗಿ ಅಡಿಯಾಳಾಗಿ ದುಡಿಯದೇ, ಕೃಷಿ ಕ್ಷೇತ್ರಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ನಿರ್ಧರಿಸಿದ ತುಮಕೂರಿನ ಶ್ರೀವತ್ಸ ನಾಗಭೂಷಣ್ ರೇಷ್ಮೆ ಕೃಷಿಯಲ್ಲಿ ಡಿಜಿಟಲ್ ಕ್ರಾಂತಿಯನ್ನೇ ಸೃಷ್ಟಿ ಮಾಡಿದ್ದಾನೆ.
ಜೀವನದಲ್ಲಿ ಏನಾದ್ರೂ ಹೊಸತು ಸಾಧಿಸಬೇಕು., ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಬೇಕೆಂಬ ಹಂಬಲ ಹಲವರಲ್ಲಿ ಇರುತ್ತೆ.., ಆದರೆ ಆ ಹಾದಿಯಲ್ಲಿ ಸಾಗುವವರ ಸಂಖ್ಯೆ ಮಾತ್ರ ವಿರಳ. ಈ ರೀತಿ ಹೊಸ ಆಲೋಚನೆಯೊಂದಿಗೆ ಹಠ ಬಿಡದೆ ಸಾಧನೆಯ ಹಾದಿಯಲ್ಲಿ ಯಶಸ್ಸು ಕಂಡವರು ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ನಿವಾಸಿ ಶ್ರೀವತ್ಸ ನಾಗಭೂಷಣ್. ಇಂಜಿನಿಯರ್ ಪಧವಿ ಮುಗಿಸಿದಂತೆ ಎಲ್ಲಾರಂತೆ ಬೆಂಗಳೂರಿನಲ್ಲಿ ಉದ್ಯೋಗ ಅರಿಸಿ ಹೋದ ಶ್ರೀವತ್ಸ ಅವರಿಗೆ ಒಂದೇ ವರ್ಷದಲ್ಲಿ ಬೆಂಗಳೂರಿನ ಜೀವನ ಶೈಲಿ ಬಗ್ಗೆ ಅಷ್ಟೊಂದು ಆಸಕ್ತಿ ಮೂಢಲಿಲ್ಲ, ಮನಸಿಗೆ ಹೊಂದದ್ದ ಕೆಲಸ ಮಾಡಲು ಒಪ್ಪದ ಶ್ರೀವತ್ಸಾ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಉದ್ಯೋಗ ಮಾಡುವ ಕನಸು ಕಂಡರು, ಆಗಲೇ ಶುರುವಾಗಿದ್ದ ರುಹಮ್ ಇನೋವೇಷನ್.
undefined
ಇಂಟರ್ನೆಟ್ ಆಫ್ ಥಿಂಗ್ಸ್ (IOT) ಆಧಾರಿತ ರೇಷ್ಮೆ ಕೃಷಿ ಆಟೋಮೇಷನ್ ವ್ಯವಸ್ಥೆ / ಸಾಧನವನ್ನು ಯಾವ ಕ್ಷೇತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು.., ಆ ಕ್ಷೇತ್ರದಲ್ಲಿ ಇರುವ ತಂತ್ರಜ್ಞಾನ ಬೆಳವಣಿಗೆ ವೇಗ, ತಂತ್ರಜ್ಞಾನ ಬಳಕೆ ಮಟ್ಟದ ಪ್ರಮಾಣ.., ಹೀಗೆ ಹತ್ತಾರು ವಿಚಾರಗಳೊಂದಿಗೆ 2018 ರಿಂದ ಸುಮಾರು ಒಂದು ವರ್ಷಗಳ ಕಾಲ ಸಂಶೋಧನೆ ನಡೆಸಿದ ಶ್ರೀವತ್ಸ ಅವರಿಗೆ ರೇಷ್ಮೆ ಕೃಷಿ ಕಣ್ಣಿಗೆ ಬಿದ್ದಿದೆ.
ರೈತರಿಗೆ ಸಾಕಷ್ಟು ಲಾಭ ದಾಯಕವಾದ ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಪ್ರಮಾಣ ಬಹಳ ಕಡಿಮೆ ಇದ್ದ ಪರಿಣಾಮ, ಈ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಕಂಡು ಹಿಡಿಯಬೇಕೆಂದು ಪ್ರಸ್ತುತ ಉಪ ನಿರ್ದೇಶಕರು ರೇಷ್ಮೆ ಇಲಾಖೆ ತುಮಕೂರು ಡಾ.ವೈ.ಕೆ. ಬಾಲಕೃಷ್ಣಪ್ಪ ರವರ ಮಾರ್ಗದರ್ಶನದ ಮೇರೆಗೆ ಹತ್ತಾರು ರೇಷ್ಮೆ ಬೆಳೆಗಾರರನ್ನು ಭೇಟಿಯಾಗಿದ್ದಾರೆ. ಹಾಗೇ ರೇಷ್ಮೆ ಚಾಕಿ ಸಾಕಾಣಿಕೆ ಕೇಂದ್ರಗಳಿಗೆ ಮತ್ತು ರೇಷ್ಮೆ ಮೊಟ್ಟೆ ತಯಾರಿಕ ಘಟಕಗಳಿಗೆ ಭೇಟಿ ನೀಡಿದ್ದಾರೆ.
ಆಗ ಅವರ ಗಮನಕ್ಕೆ ಬಂದಿದ್ದೇ, ರೈತರು, ಚಾಕಿ ಸಾಕಾಣಿಕದಾರರು, ರೇಷ್ಮೆ ಮೊಟ್ಟೆ ತಯಾರಕರು ಅನುಭವಿಸುತ್ತಿದ್ದ ವಾತವರಣ ಬದಲಾವಣೆ ಸಮಸ್ಯೆ. ದಿಢೀರನೆ ಬದಲಾಗುವ ವಾತವರಣದಿಂದ ರೇಷ್ಮೆ ಸಾಕಾಣಿಕೆಯಲ್ಲಿ ಉಷ್ಣಾಂಶ-ತೇವಾಂಶ- ಶೀತ ಪ್ರಮಾಣದಲ್ಲಿ ಏರುಪೇರಾಗಿ, ರೈತರು ಸವಾಲುಗಳನ್ನು ಎದುರಿಸುತ್ತಿದ್ದರು. ಇದನ್ನು ಗುರುತಿಸಿದ ಶ್ರೀವತ್ಸ.., ಕೂಡಲೇ ರೇಷ್ಮೆ ಸಾಕಾಣಿಕೆಗೆ ವಾತವರಣದ ಮಾಹಿತಿ ರೈತ/ಸಾಕಾಣಿಕೆ ದಾರ ಕುಳಿತಲ್ಲೇ ನೋಡುವ ಹಾಗೂ ಕೃತಕವಾಗಿ ವಾತವರಣವನ್ನು ಸ್ವಯಂಚಾಲಿತ ಸೃಷ್ಟಿಸಲು ಅಗತ್ಯವಿರುವ ಉಪಕರಣಗಳನ್ನು ಕಂಡು ಹಿಡಿದು ರೈತರಿಗೆ ನೀಡಬೇಕೆಂಬ ಕನಸು ಹುಟ್ಟುಕೊಂಡಿತ್ತು. ಇದಕ್ಕೆ ಸಾಕಷ್ಟು ಸಂಶೋಧನೆ ನಡೆಸಿದ ಶ್ರೀವತ್ಸ. SWEBV SENSE ಎಂಬ APP ಅನ್ನು 2019 ರಲ್ಲಿ ಸಿದ್ದಪಡಿಸಿ ರೈತ ಸಮುದಾಯಕ್ಕೆ ನೀಡಿದರು.
ರೈತರು ಕುಳಿತಲ್ಲೇ ಈ ಮೊಬೈಲ್ ಅಪ್ಲಿಕೇಷನ್ ಮೂಲಕ ರೇಷ್ಮೆ ಹುಳು ಮನೆ , ಚಾಕಿ ಕೇಂದ್ರ ಹಾಗು ಮೊಟ್ಟೆ ತಯಾರಿಕೆ ಕೊಠಡಿಯ ವಾತವರಣದ ಪರಿಸ್ಥಿತಿಯನ್ನು ನೋಡಬಹುದಾಗಿತ್ತು. ಜೊತೆಗೆ ಅಲ್ಲಿಂದಲ್ಲೇ ಉಷ್ಣ-ಶೀತ ವಾತವರಣವನ್ನು ಸಮತೋಲನದಲ್ಲಿ ಇಡಬಹುದಾಗಿತ್ತು. ರೇಷ್ಮೆ ಕೃಷಿಯಲ್ಲಿ 30 ದಿನಗಳು ರೈತರ ಪಾಲಿಗೆ ಸಂಕಷ್ಟದ ಸಮಯ. 30 ದಿನದ ರೇಷ್ಮೆ ಗೂಡು ರಕ್ಷಣೆ ವಿಚಾರದಲ್ಲಿ ರೈತರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದ್ರೆ, ರೇಷ್ಮೆ ಮರಿಯಿಂದ ಗೂಡು ಕಟ್ಟುವ ಕೊನೆ ಹಂತದವರೆಗೂ ಹುಳುಗಳು ನಾನಾ ರೂಪಾಂತರ ಪಡೆದುಕೊಳ್ಳುತ್ತದೆ. ರೇಷ್ಮೆ ಹುಳುವಿಗೆ ಪೂರಕ ವಾತವರಣ ಸೃಷ್ಟಿಯಾಗದೆ ಇದ್ದರೆ, ಹಲವಾರು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಇರುತ್ತದೆ. ಹೀಗಾಗಿ ರೇಷ್ಮೆ ಸಾಕಾಣಿಕೆಯಲ್ಲಿ ಮೊಟ್ಟೆ ತಯಾರಿಕಯಿಂದ ರೈತರ ರೇಷ್ಮೆ ಹುಳು ಗೂಡು ಕಟ್ಟುವ ತನಕ ವಾತವರಣ ನಿರ್ವಹಣೆ ಕೆಲಸ SWEBV SENSE ಅಪ್ಲೇಕೇಷನ್ ಯಿಂದಾಗಿ, ಸವಾಲಿನ ಕೆಲಸ ಇದೀಗ ಸುಲಭವಾಗಿದೆ.
ಸದ್ಯ 35ಕ್ಕೂ ಹೆಚ್ಚು ರೇಷ್ಮೆ ಹುಳು ಚಾಕಿ ಸಾಕಾಣಿಕೆ ಕೇಂದ್ರ ,ಮೊಟ್ಟೆ ತಯಾರಕರು ಮತ್ತು ರೈತರು ಇದರ ಅನುಕೂಲ ಪಡೆದಿದ್ದಾರೆ. ಜೊತೆಗೆ ಸರ್ಕಾರದ 55 ತಾಂತ್ರಿಕ ಸೇವಾ ಕೇಂದ್ರಗಳಿಗೆ ಮಾಸಿಕ ವರದಿ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ನೀಡಲಾಗಿದೆ. ಈ ಎಲ್ಲಾ ಉಪಕರಣಗಳನ್ನು ಸಾಕಷ್ಟು ಕಡಿಮೆ ಬೆಲೆಯಲ್ಲಿ ರೈತರಿಗೆ ನೀಡಲಾಗುತ್ತಿದೆ. ಇದೀಗ ರುಹಮ್ ಇನೋವೇಷನ್ ನಲ್ಲಿ ಆರು ಜನರಿಗೆ ನೇರ ಉದ್ಯೋಗ 15 ಜನರಿಗೆ ಪರೋಕ್ಷವಾಗಿ ಉದ್ಯೋಗ ಲಭಿಸಿದೆ. ಇನ್ನು ಇವರು ಈ ಸಾಧನೆಗೆ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇನ್‌ಕ್ಯೂಬೇಷನ್ ಸೆಂಟರ್ ತಾಂತ್ರಿಕ ಸಹಕಾರ ನೀಡಿದೆ.
ಮುಂದುವರೆದ ಕನಸು - ರೇಷ್ಮೆ ಬೆಳೆಗೆ ಸಮಗ್ರ ಮಾಹಿತಿ ನೀಡುವ ಪ್ರಯತ್ನ: ಕೇವಲ ಇಷ್ಟಕ್ಕೆ ಸುಮ್ಮನಾಗದ ಶ್ರೀವತ್ಸ, ರೇಷ್ಮೆ ಬೆಳೆಗಾರರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನೊಳಗೊಂಡ ವೆಬ್ ಪ್ಲಾಟ್ಫಾರ್ಮ್ ಸಿದ್ದಪಡಿಸಿ ಆ ಮೂಲಕ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುವಂತಹ ತಂತ್ರಜ್ಞಾನ ನೀಡುವ ಕನಸು ಹೊತ್ತಿದ್ದು, ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ಕೆಲವೇ ತಿಂಗಳಲ್ಲಿ ಈ ನೂತನ ಡಿಜಿಟಲ್ ಪ್ಲಾಟ್ ಫಾರ್ಮಂ ಕೂಡ ರೈತರಿಗೆ ಸಿಗಲಿದೆ.