ಭಾರತ ಸಂಬಾರು ಪದಾರ್ಥಗಳು, ಮಸಾಲೆಗಳಿಗೆ ಹೆಸರು ವಾಸಿ, ಬ್ರಿಟಿಷರ ಆಗಮನಕ್ಕಿಂತ ಮೊದಲಿನಿಂದಲೂ ದೇಶದ ಮಸಾಲೆ ಪದಾರ್ಥಗಳು ವಿದೇಶದಲ್ಲಿ ಖ್ಯಾತಿ ಪಡೆದಿದ್ದವು. ಆದರೆ ಭಾರತದ ಅತ್ಯಂತ ದುಬಾರಿ ಮಸಾಲೆ ಪದಾರ್ಥ ಯಾವುದು ಎಂಬುದು ನಿಮಗೆ ಗೊತ್ತಾ.
ಕಾಶ್ಮೀರ: ಭಾರತ ಸಂಬಾರು ಪದಾರ್ಥಗಳು, ಮಸಾಲೆಗಳಿಗೆ ಹೆಸರು ವಾಸಿ, ಬ್ರಿಟಿಷರ ಆಗಮನಕ್ಕಿಂತ ಮೊದಲಿನಿಂದಲೂ ದೇಶದ ಮಸಾಲೆ ಪದಾರ್ಥಗಳು ವಿದೇಶದಲ್ಲಿ ಖ್ಯಾತಿ ಪಡೆದಿದ್ದವು. ಆದರೆ ಭಾರತದ ಅತ್ಯಂತ ದುಬಾರಿ ಮಸಾಲೆ ಪದಾರ್ಥ ಯಾವುದು ಎಂಬುದು ನಿಮಗೆ ಗೊತ್ತಾ. ಕಾಶ್ಮೀರದ ರೆಡ್ ಗೋಲ್ಡ್, ಕೇಸರಿ, ಕೇಸರ್ ಎಂದೆಲ್ಲಾ ಕರೆಯಲ್ಪಡುವ ಕೇಸರಿ ದೇಶದ ಅತ್ಯಂತ ದುಬಾರಿ ಮಸಾಲೆ ಪದಾರ್ಥ. ಒಂದು ಕೇಜಿ ಕಾಶ್ಮೀರ್ ಕೇಸರಿ ದರ 3 ಲಕ್ಷ ರೂಪಾಯಿಯಾಗಿದ್ದು, ಇದು ದೇಶದ ಮಣ್ಣಿನಲ್ಲಿ ಬೆಳೆಯುವ ಅತ್ಯಂತ ದುಬಾರಿ ಮಸಾಲೆ ಪದಾರ್ಥ ಎನಿಸಿದೆ. ಬಹುತೇಕ ಶ್ರೀಮಂತರಷ್ಟೇ ಬಳಸುವ ಈ ದುಬಾರಿ ಮಸಾಲೆಯ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ನೀಡಿದಾಗಿನಿಂದ ಈ ಕಾಶ್ಮೀರಿ ಕೇಸರಿ (ಕೇಸರ್) ಬೆಲೆ ಏರಿಕೆಯಾಗುತ್ತಲೇ ಹೋಗಿದ್ದು, ಈಗ ಭಾರತದಲ್ಲಿ ಬೆಳೆಸುವ ಮತ್ತು ಮಾರಾಟ ಮಾಡುವ ಅತ್ಯಂತ ದುಬಾರಿ ಮಸಾಲೆ ಪದಾರ್ಥ ಎನಿಸಿದೆ. ಕಾಶ್ಮೀರದಲ್ಲಿ ದಶಕಗಳಿಂದ ಇದ್ದ ಅಶಾಂತಿಯ ಪರಿಣಾಮ ಕೇಸರಿಯ ವಿತರಣೆಗೆ ಸರಿಯಾದ ಮಾರುಕಟ್ಟೆ ಇಲ್ಲದೇ ಹಲವು ವರ್ಷಗಳ ಕಾಲ ಬೆಲೆ ಕುಸಿದಿತ್ತು. ಆದರೆ ಆರ್ಟಿಕಲ್ 370 ರದ್ದಾದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದು, ಆರ್ಥಿಕ ಚೇತರಿಕೆಗೆ ಕಾರಣವಾಗಿದೆ. ಪರಿಣಾಮ ಕಣಿವೆ ನಾಡಿನ ಕೆಂಪು ಚಿನ್ನದ (Red Gold) ಬೆಲೆ ದಿನದಿಂದ ದಿನಕ್ಕೆ ತನ್ನ ಬೆಲೆ ಏರಿಸಿಕೊಳ್ಳುತ್ತಿದೆ. ಈ ಮಧ್ಯೆ ಈ ಕಾಶ್ಮೀರ್ ಕೇಸರಿಗೆ ಜಿಐ ಟ್ಯಾಗ್ (GI Tag) ಕೂಡ ಸಿಕ್ಕಿದ್ದು, ಇದರಿಂದ ಬೆಲೆ ಗಗನಕ್ಕೇರಲು ಕಾರಣವಾಗಿದೆ.
ಖಿನ್ನತೆ ನಿವಾರಿಸುವ ಕೇಸರಿ, ದುಬಾರಿ ಮಸಾಲೆಯಿಂದ ಆರೋಗ್ಯಕ್ಕಿದೆ ಹಲವು ಲಾಭ
ಈ ಕೇಸರಿ ಕೃಷಿ ಮಸಾಲೆಯೂ ಕಾಶ್ಮೀರದ ಪರಂಪರೆ (Heritage of Kashmir) ಮತ್ತು ಸಂಸ್ಕೃತಿಯ ಅತ್ಯಂತ ನಿರ್ಣಾಯಕ ಭಾಗ ಎನಿಸಿದ್ದು ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ಆರ್ಥಿಕತೆಗೆ ಸ್ಥಿರತೆ ತರುತ್ತಿದೆ. ಈ ದುಬಾರಿ ಕೇಸರಿಯ (Kashmir kesar) ಬೆಲೆಗಳು ಏರಿಕೆಯಾಗುತ್ತಲೇ ಇದ್ದು, ಕಳೆದೊಂದು ವರ್ಷದಿಂದ ಇತ್ತೀಚಿನವರೆಗೆ ಶೇ. 64 ಪ್ರತಿಶತ ಬೆಲೆ ಏರಿಕೆ ಆಗಿದ್ದು ಹೊಸ ಗರಿಷ್ಠ ದರದ ಮಟ್ಟವನ್ನು ಇದು ತಲುಪಿದೆ. 2023 ರ ಹೊತ್ತಿಗೆ, 10 ಗ್ರಾಂ ಕಾಶ್ಮೀರಿ ಕೇಸರಿ ಬೆಲೆ ರೂ. 3200 ಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುವ ಮೂಲಕ 1 ಕೆಜಿಯ ಬೆಲೆ ರೂ 3 ಲಕ್ಷಕ್ಕಿಂತ ಹೆಚ್ಚಾದಂತಾಗಿದೆ. ಹೀಗಾಗಿ ದೇಶದಲ್ಲಿ ಒಂದು ಕೇಜಿ ಬೆಳ್ಳಿಗಿರುವ ದರಕ್ಕಿಂತ ಮೂರು ಪಾಲು ಹೆಚ್ಚು ಈ ಕೆಂಪು ಚಿನ್ನಕ್ಕಿದೆ.
ಈ ಜಿಐ ಟ್ಯಾಗ್ ಜೊತೆ ಕಾಶ್ಮೀರದ ಕೆಂಪು ಚಿನ್ನದ ಬೆಲೆ ಏರಿಕೆಗೆ ಮತ್ತೊಂದು ಕಾರಣವೆಂದರೆ ಅತ್ಯಂತ ಕಠಿಣವಾದ ಕೃಷಿ ಪ್ರಕ್ರಿಯೆ. ಅದರ ಪ್ರತಿ ನೇರಳೆ ಹೂವುಗಳಲ್ಲಿ ಕೇವಲ 34 ಕೇಸರಿ ಎಳೆಗಳು ಮಾತ್ರ ಇರುತ್ತವೆ. ಹಾಗೂ ಕೇವಲ 1 ಕೆಜಿ ಕೇಸರಿ ಉತ್ಪಾದಿಸಲು 1.5 ಲಕ್ಷಕ್ಕೂ ಹೆಚ್ಚು ಹೂವುಗಳು ಬೇಕಾಗುತ್ತವೆ. ಅದರ ಜೊತೆ ಈ ನೇರಳೆ ಕೇಸರಿ ಹೂವುಗಳು ಇಡೀ ವರ್ಷದಲ್ಲಿ ಆರು ವಾರಗಳವರೆಗೆ ಮಾತ್ರ ಅರಳುತ್ತವೆ ಮತ್ತು ಬದಲಾಗುತ್ತಿರುವ ಹವಾಮಾನ ಮತ್ತು ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳಿಂದಾಗಿ ಕೇಸರಿ ಬೆಳೆಯುವುದು ಮತ್ತು ಬೆಳೆಸುವುದು ಹೆಚ್ಚು ದುಬಾರಿಯಾಗಿದೆ ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಜಿಐ ಟ್ಯಾಗ್ ಮಾನ್ಯತೆ ಪಡೆದ ವಿಶ್ವದ ಏಕೈಕ ಕೇಸರಿ ಕಾಶ್ಮೀರಿ ಕೇಸರಿಯಾಗಿದ್ದು, ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಕೆಲವು ಭಾಗಗಳಿಂದ ಆಮದು ಮಾಡಿಕೊಳ್ಳುವ ವಿಶ್ವದ ಅತ್ಯಂತ ವಿಶೇಷವಾದ ಮಸಾಲೆಯಾಗಿದೆ.