ಆದಾಯ ತೆರಿಗೆ ಉಳಿಸೋಕೆ ಹೂಡಿಕೆ ಮಾಡೋದು ಅನಿವಾರ್ಯ. ಆದ್ರೆ ಎಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆಯಿಂದ ಬಚಾವಾಗಬಹುದು. ಹಾಗೆಯೇ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ಸ್ ಕೂಡ ಸಿಗಬಹುದು ಎಂಬ ಪ್ರಶ್ನೆ ಅನೇಕರಲ್ಲಿರುತ್ತದೆ. ಇಂಥವರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಗ್ಗೆ ತಿಳಿದುಕೊಳ್ಳೋದು ಅಗತ್ಯ.
Business Desk:ದೀರ್ಘಕಾಲದ ಹೂಡಿಕೆಗೆ ಪ್ಲ್ಯಾನ್ ಮಾಡುತ್ತಿರುವ ಬಹುತೇಕರ ಆಯ್ಕೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕೂಡ ಸೇರಿದೆ. ನಿವೃತ್ತಿ ಸೇರಿದಂತೆ ಸುದೀರ್ಘ ಕಾಲದ ಹೂಡಿಕೆಗೆ ಪಿಪಿಎಫ್ ಉತ್ತಮ ಆಯ್ಕೆಯಾಗಿದ್ದು, ತೆರಿಗೆ ಉಳಿತಾಯದ ಪ್ರಯೋಜನವೂ ಲಭಿಸುತ್ತದೆ. ಪಿಪಿಎಫ್ ಸ್ಥಿರ ಠೇವಣಿಗಿಂತ ಅಧಿಕ ರಿಟರ್ನ್ಸ್ ನೀಡದಿದ್ದರೂ ಸಾಮಾನ್ಯ ವ್ಯಕ್ತಿಗೆ ಇದರಿಂದ ಅನೇಕ ಪ್ರಯೋಜನಗಳು ಲಭಿಸಲಿವೆ. ಯಾರು ಬೇಕಾದರೂ ಅತೀಕಡಿಮೆ ಅಂದ್ರೆ 500ರೂ. ಹೂಡಿಕೆಯೊಂದಿಗೆ ಪಿಪಿಎಫ್ ಖಾತೆ ಪ್ರಾರಂಭಿಸಬಹುದು. ಅಲ್ಲದೆ, ಒಂದು ಹಣಕಾಸಿನ ವರ್ಷದಲ್ಲಿ 1.5ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಮಾಸಿಕ ವೇತನ ಪಡೆಯುವ ಅಥವಾ ಸಣ್ಣ ಅಥವಾ ದೊಡ್ಡ ಉದ್ಯಮ ಹೊಂದಿರುವ ಇಲ್ಲವೆ ಸ್ವ ಉದ್ಯೋಗಿ ಕೂಡ ಪಿಪಿಎಫ್ ನಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ವಾರ್ಷಿಕ ರಿಟರ್ನ್ಸ್ ಕೂಡ ಸಿಗುತ್ತದೆ. ಇನ್ನು ಆದಾಯ ತೆರಿಗೆ ಉಳಿತಾಯದ ಲಾಭವೂ ಇದೆ.
ಟ್ರಿಪಲ್ ತೆರಿಗೆ ವಿನಾಯ್ತಿ
ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದ್ರೆ ಟ್ರಿಪಲ್ ತೆರಿಗೆ ವಿನಾಯ್ತಿ ಸಿಗುತ್ತದೆ. ವಿನಾಯ್ತಿ-ವಿನಾಯ್ತಿ-ವಿನಾಯ್ತಿ(EEE).ಅಂದ್ರೆ ಒಬ್ಬ ವ್ಯಕ್ತಿ ಹೂಡಿಕೆ (investment), ಸಂಚಯ (accrual) ಹಾಗೂ ವಿತ್ ಡ್ರಾ (withdrawal) ಸಮಯದಲ್ಲಿ ತೆರಿಗೆ ಪ್ರಯೋಜನ ಪಡೆಯಬಹುದು.
ಜಾನ್ಸನ್ ಹಾಗೂ ಜಾನ್ಸನ್ ಕಂಪನಿಯ ಹೊಸ ವರಸೆ; ಭಾರತದಲ್ಲಿ ಟಾಲ್ಕ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಲ್ವಂತೆ
ಬಡ್ಡಿ ಎಷ್ಟಿದೆ?
ಉದ್ಯೋಗಿಗಳ ಭವಿಷ್ಯ ನಿಧಿಗೆ (EPF) ಹೋಲಿಸಿದ್ರೆ ಪಿಪಿಎಫ್ ಬಡ್ಡಿ ದರ ಕಡಿಮೇನೆ ಇರಬಹುದು. ಆದ್ರೆ, ಇಪಿಎಫ್ ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದೆ. ಆದ್ರೆ, ಪಿಪಿಎಫ್ ಹಾಗಲ್ಲ, ಯಾರು ಬೇಕಾದ್ರೂ ಹೂಡಿಕೆ ಮಾಡಬಹುದು. ಪ್ರಸ್ತುತ ಪಿಪಿಎಫ್ ಬಡ್ಡಿದರ ಶೇ.7.1ರಷ್ಟಿದೆ. ಇದು ಸರ್ಕಾರ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಾದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಹಾಗೂ ಅಂಚೆ ಕಚೇರಿ ಐದು ವರ್ಷದ ಠೇವಣಿ ಬಡ್ಡಿದರಕ್ಕೆ ಹೋಲಿಸಿದ್ರೆ ಹೆಚ್ಚಿದೆ.
ಫ್ಲೋಟಿಂಗ್ ಬಡ್ಡಿದರ
ಸ್ಥಿರ ಬಡ್ಡಿದರ ಹೊಂದಿರುವ ದೀರ್ಘಕಾಲದ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ, ಬಡ್ಡಿದರ ಹೆಚ್ಚಳವಾದಾಗ ಅದರ ಪ್ರಯೋಜನ ಸಿಗೋದಿಲ್ಲ. ಆದರೆ, ಪಿಪಿಎಫ್ ನಲ್ಲಿ ಅಂಥ ಯಾವುದೇ ಸಮಸ್ಯೆಯಿಲ್ಲ. ಏಕೆಂದ್ರೆ ಪಿಪಿಎಫ್ ಫ್ಲೋಟಿಂಗ್ ಬಡ್ಡಿದರ ಹೊಂದಿರುವ ಕಾರಣ ಬಡ್ಡಿದರದಲ್ಲಿ ಏರಿಕೆಯಾದಾಗ ಸಹಜವಾಗಿ ಅದರ ಪ್ರಯೋಜನ ಹೂಡಿಕೆದಾರರಿಗೆ ಸಿಗುತ್ತದೆ. ಆದರೆ, ಫ್ಲೋಟಿಂಗ್ ಬಡ್ಡಿದರ ಕೂಡ ಕೆಲವೊಮ್ಮೆ ಹೂಡಿಕೆದಾರರಿಗೆ ಕಹಿ ಅನುಭವ ನೀಡಬಲ್ಲದು. ಹೇಗೆಂದ್ರೆ ಬಡ್ಡಿದರ ಕಡಿಮೆಯಾದಾಗ ಅದು ಪಿಪಿಎಫ್ ಖಾತೆಯಲ್ಲಿರುವ ಹಣಕ್ಕೂ ಅನ್ವಯಿಸುತ್ತದೆ. ಆಗ ಹೂಡಿಕೆ ಮಾಡಿರುವ ಹಣಕ್ಕೆ ಕಡಿಮೆ ಬಡ್ಡಿ ಸಿಗುತ್ತದೆ.
ಮೆಚ್ಯುರಿಟಿ ಅವಧಿ ಎಷ್ಟು?
ಪಿಪಿಎಫ್ ಖಾತೆ 15 ವರ್ಷಗಳಲ್ಲಿ ಮೆಚ್ಯುರ್ ಆಗುತ್ತದೆ. ಆ ಬಳಿಕ ಅದರಲ್ಲಿನ ಪೂರ್ಣ ಮೊತ್ತವನ್ನು ವಿತ್ ಡ್ರಾ ಮಾಡಿಕೊಂಡು ಖಾತೆಯನ್ನು ಮುಚ್ಚಬಹುದು. ಇಲ್ಲವೆ ಖಾತೆಯನ್ನು ಮತ್ತೆ 5 ವರ್ಷಗಳ ಕಾಲ ಮುಂದುವರಿಸಬಹುದು. ಇದರಲ್ಲಿ ಕೂಡ ಮುಂದೆ ಕೊಡುಗೆ ನೀಡಬೇಕಾ ಅಥವಾ ಬೇಡವಾ ಎಂಬ ಆಯ್ಕೆ ಕೂಡ ಇದೆ.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಎರಡನೇ ಸರಣಿ ಆರಂಭ; ಆನ್ ಲೈನ್ ನಲ್ಲಿ ಖರೀದಿಸಿದ್ರೆ 50ರೂ. ಡಿಸ್ಕೌಂಟ್
ಪಿಪಿಎಫ್ ನ ಇತರ ಪ್ರಮುಖ ಪ್ರಯೋಜನಗಳು
*ಮೂರನೇ ಹಣಕಾಸು ವರ್ಷದಿಂದ ಆರನೇ ಹಣಕಾಸು ವರ್ಷದ ತನಕ ಸಾಲ ಸೌಲಭ್ಯ ಸಿಗುತ್ತದೆ.
*ಏಳನೇ ಹಣಕಾಸು ಸಾಲಿನಿಂದ ಪ್ರತಿವರ್ಷ ವಿತ್ ಡ್ರಾಗೆ ಅವಕಾಶವಿದೆ.
*ಪಿಪಿಎಫ್ ನಲ್ಲಿನ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಕಡಿತ ಸೌಲಭ್ಯವಿದೆ.
*ಈ ಖಾತೆಯಲ್ಲಿರುವ ಹಣಕ್ಕೆ ಗಳಿಸಿದ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10ರ ಅಡಿಯಲ್ಲಿ ಯಾವುದೇ ಆದಾಯ ತೆರಿಗೆ ಇಲ್ಲ.