ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ!

By Kannadaprabha NewsFirst Published Jul 23, 2020, 8:05 AM IST
Highlights

ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ ಸ್ವಾಗತ| ಭಾರತದಲ್ಲಿ ಬಂಡವಾಳ ಹೂಡಲು ಆಹ್ವಾನ| ಭಾರತದಲ್ಲಿ ಹೂಡಿಕೆಗೆ ಇದು ಸರಿಯಾದ ಸಮಯ

ನವದೆಹಲಿ(ಜು.23): ಭಾರತಕ್ಕೆ ಜಾಗತಿಕ ಉದ್ಯಮಿಗಳನ್ನು ಆಹ್ವಾನಿಸುವ ಪರಿಪಾಠ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ಅಮೆರಿಕ ಉದ್ಯಮಿಗಳಿಗೆ ಭಾರತದಲ್ಲಿ ಬಂಡವಾಳ ಹೂಡಲು ರತ್ನಗಂಬಳಿ ಹಾಸಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡಿಕೆ ಈಗ ಪ್ರಶಸ್ತ ಸಮಯ. ಭಾರತ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಂಡಿದೆ. ಇಂತಹ ಅವಕಾಶ ಇನ್ನೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಬುಧವಾರ ರಾತ್ರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎರಡು ದಿನಗಳ ಅಮೆರಿಕ- ಭಾರತ ಉದ್ಯಮ ಮಂಡಳಿಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ರಕ್ಷಣೆ, ಬಾಹ್ಯಾಕಾಶ, ಆರೋಗ್ಯ ಸೇವೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಭಾರತದಲ್ಲಿ ಇರುವ ಅವಕಾಶವನ್ನು ವಿವರಿಸಿದರು. ಭಾರತ ಮತ್ತು ಅಮೆರಿಕ ಸಮಾನ ಮೌಲ್ಯ ಹೊಂದಿರುವ ಪ್ರಜಾಪ್ರಭುತ್ವಗಳಾಗಿವೆ. ಕೊರೋನಾದ ಸಂಕಷ್ಟದಿಂದ ಜಗತ್ತು ಪುಟಿದೇಳಲು ನಮ್ಮ ಬಾಂಧವ್ಯ ಮಹತ್ವದ ಪಾತ್ರ ವಹಿಸುವ ಸಮಯ ಇದು. - ಭಾರತದಲ್ಲಿ ಬಂಡವಾಳ ಹೂಡಿಕೆಗೆ ಈಗಿನದ್ದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ ಎಂದರು.

ಮೋದಿ ಭಾಷಣದ ಮುಖ್ಯಾಂಶ

- ಕೊರೋನಾ ನಡುವೆಯೇ ಏಪ್ರಿಲ್‌- ಜುಲೈ ಅವಧಿಯಲ್ಲಿ ಭಾರತಕ್ಕೆ 1.50 ಲಕ್ಷ ಕೋಟಿ ರು. ಮತ್ತು 2019​-20ರಲ್ಲಿ ಒಟ್ಟಾರೆ 5.55 ಲಕ್ಷ ಕೋಟಿ ವಿದೇಶಿ ಬಂಡವಾಳ ಹರಿದುಬಂದಿದೆ.

- ಭಾರತ ನಿಮ್ಮನ್ನು ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆಗೆ ಆಮಂತ್ರಿಸುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ನಾವು ಎಫ್‌ಡಿಐ ಮಿತಿ ಶೇ.74ಕ್ಕೆ ಏರಿಸಿದ್ದೇವೆ.

- ಮುಂದಿನ 8 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಪ್ರಮಾಣ ದುಪ್ಪಟ್ಟಿಗಿಂತಲೂ ಅಧಿಕವಾಗುವ ನಿರೀಕ್ಷೆ ಇದೆ. ಹೂಡಿಕೆಗೆ ಇದು ಇನ್ನೊಂದು ಆದ್ಯತಾ ಕ್ಷೇತ್ರ.

- ಆರೋಗ್ಯ ಸೇವೆಯಲ್ಲಿ ಬಂಡವಾಳ ಹೂಡಲು ಆಮಂತ್ರಿಸುತ್ತೇವೆ. ಭಾರತದ ಆರೋಗ್ಯ ಸೇವೆ ಪ್ರತಿವರ್ಷ ಶೇ.22ರಷ್ಟುವೇಗದಲ್ಲಿ ವೃದ್ಧಿಯಾಗುತ್ತಿದೆ. ಹಣಕಾಸು ಮತ್ತು ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಶೇ.100ಕ್ಕೆ ಏರಿಕೆ ಮಾಡಲಾಗಿದೆ.

- ನಮ್ಮ ಕಂಪನಿಗಳು ವೈದ್ಯಕೀಯ- ತಂತ್ರಜ್ಞಾನ, ಟೆಲಿ ಮಿಡಿಸಿನ್‌ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿವೆ.

- ಇಂದು ಇಡೀ ವಿಶ್ವವೇ ಭಾರತದ ಬಗ್ಗೆ ಆಶಾಭಾವನೆಯನ್ನು ಇಟ್ಟುಕೊಂಡಿದೆ. ಭಾರತ ಅವಕಾಶಗಳು ಮತ್ತು ತಂತ್ರಜ್ಞಾನಗಳಿಗೆ ಮುಕ್ತವಾಗಿ ತೆರೆದುಕೊಂಡಿದೆ. ನಗರಕ್ಕಿಂತಲೂ ಹಳ್ಳಿಗಳಲ್ಲೇ ಇಂಟರ್ನೆಟ್‌ ಬಳಕೆದಾರ ಸಂಖ್ಯೆ ಹೆಚ್ಚಿದೆ. 50 ಕೋಟಿಗೂ ಹೆಚ್ಚಿನ ಜನರು ಇಂಟರ್ನೆಟ್‌ ಬಳಸುತ್ತಿದ್ದಾರೆ.

- ಕೊರೋನಾ ವೈರಸ್‌ ಆರ್ಥಿಕ ಸ್ವಾವಲಂಬನೆಯ ಮಹತ್ವವನ್ನು ತಿಳಿಸಿಕೊಟ್ಟಿದೆ. ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆಯ ಮೂಲಕ ಜಾಗತಿಕ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸಲು ಸಾಧ್ಯ.

- ಭವಿಷ್ಯದಲ್ಲಿ ನಮ್ಮ ಕಾರ್ಯವಿಧಾನ ಮಾನವ ಕೇಂದ್ರಿತವಾಗಿರಬೇಕು. ಬಡವರು ಮತ್ತು ದುರ್ಬಲರನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು.

- ವಿಶ್ವಕ್ಕೆ ಉತ್ತಮ ಭವಿಷ್ಯದ ಅಗತ್ಯವಿದೆ. ನಾವೆಲ್ಲರೂ ಸೇರಿ ಅದಕ್ಕೆ ಒಂದು ರೂಪ ನೀಡಬೇಕಿದೆ.

click me!