ಈರುಳ್ಳಿ,ಬೆಳ್ಳುಳ್ಳಿಆಯ್ತುಈಗ ತೊಗರಿಬೇಳೆ ಸರದಿ; ಜನಸಾಮಾನ್ಯರ ಜೇಬು ಸುಡುತ್ತಿದೆ ಬೆಲೆಯೇರಿಕೆ ಬಿಸಿ

By Suvarna News  |  First Published Dec 13, 2023, 5:03 PM IST

ಈರುಳ್ಳಿ ಬೆಲೆಯೇರಿಕೆ ಬಳಿಕ ಬೆಳ್ಳುಳ್ಳಿ ದರ ಕೂಡ ಅದೇ ಹಾದಿ ಹಿಡಿಯಿತು.ಈಗ ತೊಗರಿ ಬೇಳೆ ಬೆಲೆಯಲ್ಲಿ ಕೂಡ ಹೆಚ್ಚಳವಾಗಿದೆ. ತರಕಾರಿ ಹಾಗೂ ದವಸಧಾನ್ಯಗಳ ಬೆಲೆ ಹೆಚ್ಚಳ ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. 


Business Desk: ಕಳೆದ ಕೆಲವು ತಿಂಗಳಿಂದ ತರಕಾರಿ ಹಾಗೂ ದಿನಸಿ ವಸ್ತುಗಳ ಬೆಲೆ ಒಂದರ ನಂತರ ಮತ್ತೊಂದರಂತೆ ಏರಿಕೆ ಕಾಣುತ್ತಿವೆ. ನವೆಂಬರ್ ತಿಂಗಳಲ್ಲಿ ಈರುಳ್ಳಿ ಕೆಜಿಗೆ 100ರೂ. ತಲುಪುವ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಈ ತಿಂಗಳು ಬೆಳ್ಳುಳ್ಳಿ ದರದಲ್ಲಿ ಭಾರೀ ಏರಿಕೆಯಾಗಿದ್ದು, ಕೆಜಿಗೆ 300-400ರೂ. ತಲುಪಿದೆ. ಈಗ ಅನೇಕ ರಾಜ್ಯಗಳಲ್ಲಿ ತೊಗರಿ ಬೇಳೆ ಬೆಲೆ ಏರಿಕೆಯಾಗುತ್ತಿದ್ದು, ಕಳೆದೊಂದು ವರ್ಷದಲ್ಲಿ ಕೆಜಿಗೆ ಸುಮಾರು 40ರೂ. ಹೆಚ್ಚಳವಾಗಿದೆ. ಇನ್ನು ಕಡಲೆ ಬೇಳೆ ಬೆಲೆ ಕೂಡ ಏರಿಕೆ ಹಾದಿಯಲ್ಲಿದ್ದು, ಕಳೆದೊಂದು ವರ್ಷದಲ್ಲಿಕೆಜಿಗೆ 10ರೂ. ಹೆಚ್ಚಳವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿರುವ ಅಂಕಿಅಂಶಗಳು ಸ್ಪಷ್ಟಪಡಿಸಿವೆ. ಈರುಳ್ಳಿ ರಫ್ತಿಗೆ ನಿರ್ಬಂಧ ಸೇರಿದಂತೆ ದೇಶೀಯ ಮಾರುಕಟ್ಟೆ ಪೂರೈಕೆಯಲ್ಲಿ ಯಾವುದೇ ತೊಂದೆಯಾಗದಂತೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ತರಕಾರಿಗಳು ಹಾಗೂ ಧಾನ್ಯಗಳ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಹಾಗೆಯೇ ಆಹಾರ ಹಣದುಬ್ಬರ ಏರಿಕೆ ಕೂಡ ಕಳವಳಕ್ಕೆ ಕಾರಣವಾಗಿದೆ.

ತರಕಾರಿಗಳು, ಹಣ್ಣುಗಳು, ಧಾನ್ಯಗಳು ಹಾಗೂ ಸಕ್ಕರೆ ಬೆಲೆಗಳಲ್ಲಿನ ಏರಿಕೆಯಿಂದ ನವೆಂಬರ್ ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕಶೇ.5.55ಕ್ಕೆ ಏರಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರ ನವೆಂಬರ್ ನಲ್ಲಿ ಮೂರು ತಿಂಗಳಲ್ಲೇ ಅಧಿಕ ಮಟ್ಟದಲ್ಲಿದೆ. ಈ ಹಿಂದಿನ  ಮೂರು ತಿಂಗಳಲ್ಲಿ ಸಿಪಿಐ ಹಣದುಬ್ಬರ ಕೆಳ ಮಟ್ಟದಲ್ಲಿತ್ತು. ಅಕ್ಟೋಬರ್ ನಲ್ಲಿ ಗ್ರಾಹಕ ಆಹಾರ ಬೆಲೆ ಹಣದುಬ್ಬರ ಶೇ. 6.61ರಷ್ಟಿತ್ತು. ನವೆಂಬರ್ ನಲ್ಲಿ ಇದು ಶೇ. 8.7ರಷ್ಟಿತ್ತು.

Tap to resize

Latest Videos

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ, ಹಲವೆಡೆ ಕೆಜಿಗೆ 400ರೂ.

ಸರ್ಕಾರದ ವಿವಿಧ ಇಲಾಖೆಗಳು ನೀಡಿರುವ ಮಾಹಿತಿ ಅನ್ವಯ ನವೆಂಬರ್ ನಲ್ಲಿ ಕೈಗಾರಿಕಾ ಚಟುವಟಿಕೆಗಳಲ್ಲಿ ಏರಿಕೆ ಕಂಡುಬಂದಿತ್ತು. ಹಣದುಬ್ಬರದಲ್ಲಿ ಇತ್ತೀಚಿನ ಕೆಲವು ತಿಂಗಳಲ್ಲಿನ ಇಳಿಕೆ ಹಾಗೂ ಜಿಡಿಪಿ ಬೆಳವಣಿಗೆಯಲ್ಲಿನ ಹೆಚ್ಚಳದ ಪ್ರಯೋಜನಗಳು ಎಲ್ಲರನ್ನೂ ತಲುಪಿಲ್ಲ. ಇದಕ್ಕೆ ಕಾರಣ ಖರೀದಿ ಸಾಮರ್ಥ್ಯದಲ್ಲಿ ಇಳಿಕೆಯಾಗಿರೋದು. ನವೆಂಬರ್ ನಲ್ಲಿ ಸಿಪಿಐ ಹಣದುಬ್ಬರ ಮಾತ್ರ ಚಿಂತೆಗೆ ಕಾರಣವಾಗಿಲ್ಲ, ಇದರ ಜೊತೆಗೆ ಗ್ರಾಮೀಣ ಮಾರುಕಟ್ಟೆಗಳಲ್ಲಿ ನಗರ ಪ್ರದೇಶಕ್ಕಿಂತ ಹೆಚ್ಚಿನ ಹಣದುಬ್ಬರ ವರದಿಯಾಗಿರೋದು ಆತಂಕ ಮೂಡಿಸಿದೆ.

ಇನ್ನು ಹಣದುಬ್ಬರ ದೇಶಾದ್ಯಂತ ಒಂದೇ ರೀತಿಯಲ್ಲಿ ಇಲ್ಲ. ದೆಹಲಿಯಲ್ಲಿ ಹಣದುಬ್ಬರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಂದರೆ ಕೇವಲ ಶೇ.3.1ರಷ್ಟಿದೆ. ಅದೇ ಒಡಿಶಾದಲ್ಲಿ ಇದರ ದುಪ್ಪಟ್ಟು ಅಂದ್ರೆ ಶೇ.7.65ರಷ್ಟಿದೆ. ಛತ್ತೀಸ್ ಗಢನಲ್ಲಿ ಶೇ.3,56ರಷ್ಟಿದ್ದರೆ, ರಾಜಸ್ಥಾನದಲ್ಲಿ ಶೇ.7 ಹಾಗೂ ಹರಿಯಾಣದಲ್ಲಿ ಶೇ.6.8ರಷ್ಟಿದೆ. ಇನ್ನು 22 ಪ್ರಮುಖ ರಾಜ್ಯಗಳ ಪೈಕಿ ಗುಜರಾತ್, ಬಿಹಾರ, ಕರ್ನಾಟಕ, ತೆಲಂಗಾಣ, ಹರಿಯಾಣ, ರಾಜಸ್ಥಾನ ಹಾಗೂ ಪಂಜಾಬ್ ನಲ್ಲಿ ಹಣದುಬ್ಬರ ಆರ್ ಬಿಐ ನಿಗದಿತ ಮಿತಿ ಶೇ.6ಕ್ಕಿಂತ ಹೆಚ್ಚಿದೆ. 

ಸೋಡಾ ಕುಡಿಯೋಕೆ ಹೋದವಳು 83 ಲಕ್ಷ ರೂಪಾಯಿ ಗೆದ್ಲು!

ಧಾನ್ಯಗಳ ಹಣದುಬ್ಬರ ಕಳೆದ ಒಂದು ವರ್ಷದಿಂದ ಎರಡಂಕಿಯಲ್ಲೇ ಇದೆ. ತೆರೆದ ಮಾರುಕಟ್ಟೆ ಮಾರಾಟ ಯೋಜನೆ ಮೂಲಕ ಗೋಧಿ ಹಾಗೂ ಅಕ್ಕಿ ಬೆಲೆಯಲ್ಲಿ ಸ್ಥಿರತೆ ತರಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡರೂ ನಿಯಂತ್ರಣ ಸಾಧ್ಯವಾಗಿಲ್ಲ. ಇನ್ನು ಉತ್ತಮ ಫಸಲು ಬಾರದ ಕಾರಣ ಅಕ್ಕಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇದೇ ಕಥೆ ಗೋಧಿ ಬೆಲೆಗೂ ಅನ್ವಯಿಸುತ್ತದೆ. ಇನ್ನು ಹವಾಮಾನ ವೈಪರೀತ್ಯದಿಂದಾಗಿ ಬೆಳ್ಳುಳ್ಳಿ ಫಸಲು ಉತ್ತಮವಾಗಿರದ ಕಾರಣ ಈ ಬಾರಿ ಮಹಾರಾಷ್ಟ್ರದಿಂದ ಇದರ ಪೂರೈಕೆ ತಗ್ಗಿದೆ. ನಾಸಿಕ್ ಹಾಗೂ ಪುಣೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಹವಮಾನ ವೈಪರೀತ್ಯದಿಂದಾಗಿ ಬೆಳೆ ಚೆನ್ನಾಗಿ ಬಂದಿಲ್ಲ. ಇದು ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗುವಂತೆ ಮಾಡಿದೆ. 


 

click me!