* ಹುಬ್ಬಳ್ಳಿಯಲ್ಲಿ ಜಯದೇವ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರ
* ಟೆಲಿಮೆಡಿಸಿನ್, ಏರ್ ಆ್ಯಂಬುಲೆನ್ಸ್‌ಗೆ ಒಲವು, 3 ಕಡೆ ಸಂಚಾರಿ ಕ್ಲಿನಿಕ್
* ಚಿತ್ರದುರ್ಗದಲ್ಲಿ ವೈದ್ಯ ಕಾಲೇಜು ಸ್ಥಾಪನೆ, ಕೊಪ್ಪಳದ ‘ಸ್ಪೂರ್ತಿ’ ಎಲ್ಲೆಡೆ ವಿಸ್ತರಣೆ
ಬೆಂಗಳೂರು(ಮಾ.05): ಪ್ರಾಥಮಿಕ ಆರೋಗ್ಯ ಸೌಕರ್ಯ ನೀಡುವ ಕ್ಲಿನಿಕ್‌ನಿಂದ ಹಿಡಿದು ಅತ್ಯಾಧುನಿಕ ಚಿಕಿತ್ಸೆಯ ಆಸ್ಪತ್ರೆಗಳ ನಿರ್ಮಾಣಕ್ಕೆ ಒತ್ತು, ಆರೋಗ್ಯ ಮೂಲಸೌಕರ್ಯದ ವಿಸ್ತರಣೆಗೆ ಆದ್ಯತೆ, ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿರುವ ‘ಮೊಹಲ್ಲಾ ಕ್ಲಿನಿಕ್’(Mohalla Clinic) ಮಾದರಿಯಲ್ಲಿ ಬೆಂಗಳೂರಿನ ಎಲ್ಲ ವಾರ್ಡ್ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗೆ 438 ‘ನಮ್ಮ ಕ್ಲಿನಿಕ್’ಗಳ ಸ್ಥಾಪನೆ, ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಯೋಜನೆಯಡಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್ ಪ್ರಾರಂಭ. ಇವು ಈ ಬಾರಿ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಚೊಚ್ಚಲ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕ ಪ್ರಮುಖ ಕೊಡುಗೆಗಳು.
ಹುಬ್ಬಳ್ಳಿಯಲ್ಲೂ ಜಯದೇವ, ಬೆಳಗಾವಿಗೆ ಕಿದ್ವಾಯಿ ಕೇಂದ್ರ
ಹುಬ್ಬಳ್ಳಿಯಲ್ಲಿ(Hubballi) 250 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ(Jayadeva Heart Institute) ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆ, ಬೆಳಗಾವಿಯಲ್ಲಿ(Belagavi) 50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ(Kidwai Regional Cancer Center) ನಿರ್ಮಾಣ, ಆಯ್ದ 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ನೀಡುವ ಇನ್‌ಫಯಶನ್ ಸೆಂಟರ್, ತುಮಕೂರಿನಲ್ಲಿ 20 ಕೋಟಿ ವೆಚ್ಚದಲ್ಲಿ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ.
Karnataka Budget: ಸ್ತ್ರೀಯರು, ಮಕ್ಕಳಿಗೆ ಬಂಪರ್ ಕೊಡುಗೆ ನೀಡಿದ ಬೊಮ್ಮಾಯಿ
300 ಮಹಿಳಾ ಸ್ವಾಸ್ಥ್ಯ ಕೇಂದ್ರ, ರಾಜ್ಯಾದ್ಯಂತ ಸ್ಪೂರ್ತಿ ವಿಸ್ತರಣೆ
ಮಹಿಳೆಯರಿಗೆ(Women) ಆರೋಗ್ಯ ಸಮಸ್ಯೆಗಳಿಗೆ ಸಲಹೆ ನೀಡಲು 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ, ಬಡ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ಸೌಲಭ್ಯ, ಬಾಲ್ಯವಿವಾಹ(Child Marriage), ಹೆಣ್ಣುಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಲು ಹಾಗೂ ಅಪೌಷ್ಟಿಕತೆ ನಿವಾರಿಸಲು ಕೊಪ್ಪಳ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಸ್ಫೂರ್ತಿ ಯೋಜನೆ ರಾಜ್ಯಾದ್ಯಂತ ವಿಸ್ತರಿಸಲು ಬಜೆಟ್‌ನಲ್ಲಿ ಸಂಕಲ್ಪ ಮಾಡಲಾಗಿದೆ.
7 ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ, ತಾಲೂಕಲ್ಲೂ ಹೃದಯ ಚಿಕಿತ್ಸೆ ಶುರು
ಏಳು ತಾಲೂಕು ಆಸ್ಪತ್ರೆಗಳನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಿದ್ದು, ಶ್ರೀಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 75 ತಾಲೂಕು ಆಸ್ಪತ್ರೆಗಳ ಮ್ಯಾಪಿಂಗ್, ತಾಲೂಕು ಮಟ್ಟದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ನೀಡಲು ಘೋಷಿಸಲಾಗಿದೆ. 100 ಆರೋಗ್ಯ ಕೇಂದ್ರಗಳನ್ನು 25 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.
ಮಾಸಿಕ ಡಯಾಲಿಸಿಸ್ ಸೈಕಲ್ 30ರಿಂದ 60000ಕ್ಕೆ ಹೆಚ್ಚಳ
ಉಚಿತ ಡಯಾಲಿಸಿಸ್ ಸೇವೆಯಡಿ ಪ್ರತಿ ತಿಂಗಳಿಗೆ 30,000 ಡಯಾಲಿಸಿಸ್(Dialysis) ಸೈಕಲ್‌ಗಳನ್ನು 60,000 ಸೈಕಲ್‌ಗಳಿಗೆ ಹೆಚ್ಚಳ, ‘ಶುಚಿ’ ಯೋಜನೆಯಡಿ 19 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಮುಟ್ಟಿನ ಕಪ್ ವಿತರಿಸಲು ನಿರ್ಧರಿಸಲಾಗಿದೆ.
ಏರ್ ಆ್ಯಂಬುಲೆನ್ಸ್‌ಗೆ ಪ್ರೋತ್ಸಾಹ, ತಾಲೂಕಲ್ಲೂ ಟೆಲಿ ಮೆಡಿಸಿನ್ ಸೇವೆ
ನಿಮ್ಹಾನ್ಸ್ ಬೆಂಬಲದೊಂದಿಗೆ ಪ್ರಾಯೋಗಿಕವಾಗಿ ಕೋಲಾರ, ಬೆಂಗಳೂರು(Bengaluru) ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೆದುಳು ಆರೋಗ್ಯ ಕಾರ್ಯಕ್ರಮ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ. ಅಪಘಾತಕ್ಕೊಳಗಾದ ರೋಗಿಗಳಿಗೆ 76 ಅವಶ್ಯ ಜೀವ ರಕ್ಷಕ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ತಾಲೂಕು ಮಟ್ಟದಲ್ಲಿ ತಜ್ಞ ವೈದ್ಯಕೀಯ ಸೇವೆ ನೀಡಲು ಟೆಲಿಮೆಡಿಸಿನ್ ಯೋಜನೆ, ಖಾಸಗಿ ವಲಯದಲ್ಲಿ ಏರ್ ಆ್ಯಂಬುಲೆನ್ಸ್(Air Ambulance) ಸೇವೆ ಪ್ರಾರಂಭಿಸಲು ಪೋ›ತ್ಸಾಹ ನೀಡುವುದಾಗಿ ಹೇಳಲಾಗಿದೆ. ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ ವಿಭಾಗದ ಪ್ರಾರಂಭ, ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಮಾಡ್ಯುಲರ್ ವಿಧಾನದಲ್ಲಿ ನಿರ್ಮಾಣ, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಹೊಸದಾಗಿ ಭ್ರೂಣ ಔಷಧ ಮತ್ತು ನವಜಾತ ಮಕ್ಕಳ ವಿಭಾಗ ಆರಂಭಿಸುವುದಾಗಿ ಘೋಷಿಸಿದೆ.
ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಸೌಕರ್ಯ ಒದಗಿಸಲು ಆಯ್ದ 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಇನ್‌ಫಯಶನ್ ಸೆಂಟರ್ ಸೆಂಟರ್, ನಿಮ್ಹಾನ್ಸ್ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಆರಂಭ, ಶಿಗ್ಗಾಂವಿ ತಾಲೂಕು ಸಾರ್ವಜನಿಕ ಆಸ್ಪತ್ರೆ 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪಿಸಲು ಉದ್ದೇಶಿಸಲಾಗಿದೆ.
ನೀಟ್ ಪರೀಕ್ಷೆಗೆ ಎಲ್ಲ ತಾಲೂಕಲ್ಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳನ್ನು(Postgraduate Medical Courses) ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲು ಅನುವಾಗುವಂತೆ 200 ಹಾಸಿಗೆಗಿಂತ ಹೆಚ್ಚು ಸಾಮರ್ಥ್ಯವಿರುವ ಆಸ್ಪತ್ರೆಗಳನ್ನು ಎನ್‌ಎಂಸಿ ಅನುಮೋದನೆ ಪಡೆದು ಬೋಧನಾ ಆಸ್ಪತ್ರೆಗಳಾಗಿ ಪರಿವರ್ತಿಸುವುದು, ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್, ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವುದು, ರಾಮನಗರದ ಅರ್ಚಕರಹಳ್ಳಿ ಗ್ರಾಮದಲ್ಲಿ .600 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಮಾಡುವುದಾಗಿ ಪ್ರಕಟಿಸಲಾಗಿದೆ.
Karnataka Budget 2022 : ಚಿತ್ರರಂಗಕ್ಕೆ ಬೊಮ್ಮಾಯಿ ಕೊಟ್ಟಿದ್ದೇನು?
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ 2024 ರಲ್ಲಿ ಶತಮಾನೋತ್ಸವ ಆಚರಿಸುವ ಹಿನ್ನಲೆಯಲ್ಲಿ, ಕೆ.ಆರ್. ಆಸ್ಪತ್ರೆಯ ಕಟ್ಟಡಗಳನ್ನು ಮುಂದಿನ 3 ವರ್ಷದಲ್ಲಿ .89 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ನೀಟ್ ಪರೀಕ್ಷೆಗೆ ಉಚಿತ ತರಬೇತಿ ನೀಡಲು ಕ್ರಮ, ಸರ್ಕಾರಿ ಕೋಟಾದಡಿ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ನೆರವು, ಖಾಸಗಿ ವೈದ್ಯಕೀಯ ಕಾಲೇಜುಗಳ ವರ್ಗೀಕರಣ ಶುಲ್ಕ ನಿಯಂತ್ರಣ ಮೂಲಕ ನಿಗದಿಪಡಿಸಲು ಕ್ರಮ ವಹಿಸುವುದಾಗಿ ಘೋಷಿಸಲಾಗಿದೆ.
ಇದು ಆರೋಗ್ಯ ಕ್ಷೇತ್ರದ(Health Sector) ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿರಿಸಿಕೊಂಡಿರುವ ಬಜೆಟ್. ಆರೋಗ್ಯ ಕ್ಷೇತ್ರದ ಅನುದಾನ ಶೇ.5ರಷ್ಟುಹೆಚ್ಚಾಗಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ ಪ್ರಾಥಮಿಕ, ದ್ವಿತೀಯ ಹಾಗು ತೃತೀಯ ಹಂತದ ಆರೋಗ್ಯ ಸೇವೆಗೆ ಸಮಾನ ಒತ್ತು ನೀಡಲಾಗಿದೆ. ‘ನಮ್ಮ ಕ್ಲಿನಿಕ್’ ಯೋಜನೆ ಜೊತೆಗೆ ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಇದರ ಜತೆಗೆ, ವೃದ್ಧಾಪ್ಯ ಸಮಸ್ಯೆ ಮತ್ತು ಚರ್ಮರೋಗಕ್ಕೆ ನಿಗದಿತವಾಗ ಆಸ್ಪತ್ರೆ ಸ್ಥಾಪಿಸಲು ಮುಂದಾಗಿದ್ದರೆ ಚೆನ್ನಾಗಿತ್ತು. ಚರ್ಮರೋಗಕ್ಕೆ ಮೀಸಲಾದ ಆಸ್ಪತ್ರೆ ದೇಶದಲ್ಲಿ ಎಲ್ಲೂ ಇಲ್ಲ ಅಂತ ರಾಜೀವ್ ಗಾಂಧಿ ಆರೋಗ್ಯ ವಿವಿ ನಿವೃತ್ತ ಉಪ ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದ್ದಾರೆ.