ಬ್ಯಾಂಕಿನಿಂದ ಸಾಲ ಪಡೆಯುವಾಗ ಕೆಲವೊಂದು ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಸಾಲದ ಮೇಲೆ ಬ್ಯಾಂಕುಗಳು ಅನೇಕ ವಿಧದ ಶುಲ್ಕಗಳನ್ನು ವಿಧಿಸುತ್ತವೆ. ಅವು ಯಾವುವು? ಇಲ್ಲಿದೆ ಮಾಹಿತಿ.
Business Desk: ಕಾರು, ಮನೆ ಖರೀದಿ ಅಥವಾ ಇನ್ಯಾವುದೋ ಕೆಲಸಕ್ಕೆ ಹಣದ ಅವಶ್ಯಕತೆ ಬಿದ್ದಾಗ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುತ್ತೇವೆ. ಆದರೆ, ಈ ಸಾಲ ತೆಗೆದುಕೊಳ್ಳುವ ಮುನ್ನ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳೋದು ಅಗತ್ಯ. ಸಾಲ ಕೊಳ್ಳುವಾಗ ಅದರ ಮೇಲಿನ ಬಡ್ಡಿದರದ ಬಗ್ಗೆ ಯೋಚಿಸುತ್ತೇವೆ. ಹಾಗೆಯೇ ಈ ಸಾಲಗಳ ಮೇಲೆ ಬ್ಯಾಂಕ್ ಗಳು ವಿಧಿಸುವ ಶುಲ್ಕಗಳ ಬಗ್ಗೆ ಕೂಡ ಮಾಹಿತಿ ಹೊಂದಿರೋದು ಅಗತ್ಯ. ಸಾಲ ತೆಗೆದುಕೊಳ್ಳುವ ಮುನ್ನ ಹಾಗೂ ತೆಗೆದುಕೊಂಡ ಬಳಿಕ ವಿಧಿಸುವ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಸಾಲ ಹಾಗೂ ಸಾಲದಾತರು ಯಾವ ವರ್ಗಕ್ಕೆ ಸೇರಿದ್ದಾರೆ ಎಂಬ ಆಧಾರದಲ್ಲಿ ನಿರ್ದಿಷ್ಟ ಶುಲ್ಕಗಳು ಬದಲಾಗುತ್ತವೆ. ಹಾಗಾದ್ರೆ ಸಾಲದ ಜೊತೆಗೆ ಲಿಂಕ್ ಆಗಿರುವ ಶುಲ್ಕಗಳು ಯಾವುವು? ಬ್ಯಾಂಕ್ ಗಳು ಸಾಲದ ಮೇಲೆ ಯಾವೆಲ್ಲ ಶುಲ್ಕ ವಿಧಿಸುತ್ತವೆ? ಇಲ್ಲಿದೆ ಮಾಹಿತಿ.
*ಪ್ರೊಸೆಸಿಂಗ್ ಶುಲ್ಕ: ನಿಮ್ಮ ಸಾಲದ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಬ್ಯಾಂಕ್ ಗಳು ಪ್ರೊಸೆಸಿಂಗ್ ಶುಲ್ಕ ವಿಧಿಸುತ್ತವೆ. ಇದು ಸಾಮಾನ್ಯವಾಗಿ ಸಾಲದ ಮೊತ್ತದ ನಿರ್ದಿಷ್ಟ ಪ್ರಮಾಣವಾಗಿರುತ್ತದೆ.
*ಪೂರ್ವಪಾವತಿ ಶುಲ್ಕಗಳು: ಒಂದು ವೇಳೆ ನೀವು ನಿರ್ದಿಷ್ಟ ಅವಧಿಗೂ ಮುನ್ನ ಸಾಲವನ್ನು ಮರುಪಾವತಿಸಲು ನಿರ್ಧರಿಸಿದ್ರೆ ಕೆಲವು ಬ್ಯಾಂಕ್ ಗಳು ಪ್ರೀಪೇಮೆಂಟ್ ಶುಲ್ಕಗಳನ್ನು ವಿಧಿಸುತ್ತವೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಫ್ಲೋಟಿಂಗ್ ರೇಟ್ ಸಾಲಗಳ ಮೇಲಿನ ಪೂರ್ವಪಾವತಿ ಶುಲ್ಕಗಳನ್ನು ರದ್ದುಗೊಳಿಸಲಾಗಿದೆ. ಆದರೆ, ಕೆಲವು ಸಾಲಗಾರರು ನಿರ್ದಿಷ್ಟ ಬಡ್ಡಿದರದ ಸಾಲದ ಮೇಲೆ ಈ ಶುಲ್ಕ ವಿಧಿಸುತ್ತಾರೆ.
ಸೇವಾ ಶುಲ್ಕ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಬರೆ, ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಆದಾಯ; ಯಾವ ಸೇವೆಗೆ ಎಷ್ಟು ಶುಲ್ಕ?
*ವಿಳಂಬ ಪಾವತಿ ಶುಲ್ಕಗಳು: ಒಂದು ವೇಳೆ ನೀವು ಇಎಂಐ ಪಾವತಿಯನ್ನು ನಿಗದಿತ ಸಮಯಕ್ಕೆ ಮಾಡಲು ಸಾಧ್ಯವಾಗದಿದ್ರೆ ಆಗ ಸಾಲ ನೀಡಿದ ಸಂಸ್ಥೆ ವಿಳಂಬ ಪಾವತಿ ಶುಲ್ಕ ವಿಧಿಸುತ್ತದೆ.
*ಕಾನೂನು ಹಾಗೂ ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು: ಸಾಲ ಒಪ್ಪಂದದ ಕಾನೂನಾತ್ಮಕ ಅಂಶಗಳಿಗೆ ಈ ಶುಲ್ಕ ಅನ್ವಯಿಸುತ್ತದೆ. ಹಾಗೆಯೇ ಸ್ಟ್ಯಾಂಪ್ ಡ್ಯೂಟಿ ಕೂಡ ಅನ್ವಯಿಸುತ್ತದೆ. ಅದನ್ನು ಎಲ್ಲಿಯೂ ಉಲ್ಲೇಖಿಸದಿದ್ದರೂ ಅದು ಸಮಗ್ರ ವೆಚ್ಚಕ್ಕೆ ಸೇರ್ಪಡೆಗೊಳ್ಳಲಿದೆ.
*ವಿಮಾ ಪ್ರೀಮಿಯಂಗಳು: ನೀವು ಪಡೆದಿರುವ ಸಾಲಕ್ಕೆ ವಿಮೆ ಪಡೆಯೋದು ಕೂಡ ಅಗತ್ಯ. ವಿಮಾ ಪ್ರೀಮಿಯಂ ಹಾಗೂ ಕವರೇಜ್ ನಿರ್ದಿಷ್ಟ ಮಾಹಿತಿಗಳು ಹೆಚ್ಚಾಗಿ ತಿಳಿದಿಲ್ಲ.
*ಕ್ರೆಡಿಟ್ ಸ್ಕೋರ್ ಪರಿಶೀಲನೆ ಶುಲ್ಕ: ಬ್ಯಾಂಕ್ ನಿಮಗೆ ಸಾಲ ನೀಡುವ ಮುನ್ನ ಕ್ರೆಡಿಟ್ ಸ್ಕೋರ್ ಚೆಕ್ ಮಾಡುತ್ತದೆ. ಇದು ಎಲ್ಲ ಬ್ಯಾಂಕುಗಳಲ್ಲಿ ಸಾಮಾನ್ಯ. ಕೆಲವು ಬ್ಯಾಂಕ್ ಗಳು ಮಾತ್ರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ.
*ಡಾಕ್ಯುಮೆಂಟೇಷನ್ ಶುಲ್ಕಗಳು; ಸಾಲವನ್ನು ಪ್ರೊಸೆಸಿಂಗ್ ಮಾಡುವ ಪ್ರಕ್ರಿಯೆಯಲ್ಲಿ ದಾಖಲೀಕರಣಕ್ಕೆ ಬ್ಯಾಂಕ್ ಗಳು ಶುಲ್ಕವನ್ನು ವಿಧಿಸುತ್ತವೆ.
ಯುಪಿಐ ಪಿನ್ ಮರೆತು ಹೋಯ್ತಾ? ಡೋಂಟ್ ವರಿ, ಬದಲಾಯಿಸಲು ಇಲ್ಲಿದೆ ಸರಳ ವಿಧಾನ
*ಪರಿವರ್ತನೆ ಶುಲ್ಕ: ಒಂದು ವೇಳೆ ನೀವು ಸ್ಥಿರ ಬಡ್ಡಿದರದಿಂದ ಫ್ಲೋಟಿಂಗ್ ದರಕ್ಕೆ ಬದಲಾಯಿಸಲು ನಿರ್ಧರಿಸಿದ್ದರೆ ಬ್ಯಾಂಕ್ ಗಳು ಪರಿವರ್ತನ ಶುಲ್ಕ ವಿಧಿಸುತ್ತವೆ.
*ಸಾಲ ರದ್ದತಿ ಶುಲ್ಕಗಳು: ಸಾಲದ ಪ್ರೊಸೆಸಿಂಗ್ ಪ್ರಾರಂಭಿಸಿದ ಬಳಿಕ ನೀವು ಸಾಲದ ಅರ್ಜಿಯನ್ನು ರದ್ದುಗೊಳಿಸಲು ಬಯಸಿದ್ದರೆ, ಅದರೊಂದಿಗೆ ಕೆಲವು ಶುಲ್ಕಗಳು ಕೂಡ ಸೇರಿವೆ. ಹೀಗಾಗಿ ಯಾವುದೇ ಸಾಲ ಪಡೆಯುವ ಮುನ್ನ ಸಾಲದ ಒಪ್ಪಂದ ಪತ್ರದಲ್ಲಿನ ಷರತ್ತುಗಳು ಹಾಗೂ ನಿಬಂಧನೆಗಳನ್ನು ಸರಿಯಾಗಿ ಓದಿ, ಅರ್ಥೈಸಿಕೊಳ್ಳಬೇಕು. ಏನೇ ಅನುಮಾನವಿದ್ದರೆ, ಬ್ಯಾಂಕ್ ಅಧಿಕಾರಿಗಳ ಜೊತೆಗೆ ಮಾತನಾಡಿ ಪರಿಹರಿಸಿಕೊಳ್ಳಬೇಕು. ಹಾಗೆಯೇ ಈ ಎಲ್ಲ ಶುಲ್ಕಗಳ ಬಗ್ಗೆ ಕೂಡ ಮಾತನಾಡಿ, ಯಾವುದೇ ಅನುಮಾನವಿದ್ದರೆ ಮೊದಲೇ ಪರಿಹರಿಸಿಕೊಳ್ಳುವುದು ಉತ್ತಮ.