* ದೇಶದ ಜಿಡಿಪಿ ಮೈನಸ್‌ಗೆ ಕುಸಿದರೂ 7% ದಾಖಲಿಸಿದ್ದ ಕರ್ನಾಟಕ
* ಆರ್ಥಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖ
* ಮಹಾರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನ ಬೆಳವಣಿಗೆ ದರ ಶೇ.- 5.6ಕ್ಕೆ ಕುಸಿತ
ಬೆಂಗಳೂರು(ಮಾ.06): 2020-21ರ ಕೊರೋನಾ(Coronavirus) ಅವಧಿಯಲ್ಲಿ ದೇಶದಲ್ಲಿ(India) ಒಟ್ಟು ಆಂತರಿಕ ಉತ್ಪನ್ನ ಬೆಳವಣಿಗೆ ದರ (GDP) ತೀವ್ರ ಪ್ರಮಾಣದಲ್ಲಿ ಕುಸಿದಿದ್ದರೂ, ದೇಶದ ಮುಂಚೂಣಿ ರಾಜ್ಯಗಳ ಪೈಕಿಯೇ ಅತಿ ಹೆಚ್ಚು ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಮೂಲಕ ಕರ್ನಾಟಕ(Karnataka) ಪ್ರಥಮ ಸ್ಥಾನದಲ್ಲಿ ನಿಂತಿತ್ತು ಎಂದು ರಾಜ್ಯ ಸರ್ಕಾರದ(Government of Karnataka) ಆರ್ಥಿಕ ಸಮೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ.
ಶುಕ್ರವಾರ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರಕಟಿಸಿರುವ 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯ(Karnataka Economic Survey) ವಿಸ್ತೃತ ವರದಿಯಲ್ಲಿ ರಾಜ್ಯದ ಆರ್ಥಿಕತೆಯ ಬಗ್ಗೆ ವಿವರಿಸಲಾಗಿದೆ.
undefined
2020-21ನೇ ಸಾಲಿನಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ ಬೆಳವಣಿಗೆ ದರ ಶೇ.-3ಕ್ಕೆ ಕುಸಿದಿತ್ತು. ದೇಶದ ಮುಂಚೂಣಿಯಲ್ಲಿರುವ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಪ್ರಸ್ತುತ 16.5 ಲಕ್ಷ ಕೋಟಿ ರು. ಜಿಡಿಪಿಯೊಂದಿಗೆ 4ನೇ ಸ್ಥಾನದಲ್ಲಿದೆ. ದೇಶದ ಜಿಡಿಪಿಗೆ ಶೇ.8.4 ರಷ್ಟು ಕೊಡುಗೆ ನೀಡುತ್ತಿದೆ. ಆದರೆ, 2021ರಲ್ಲಿ ಒಟ್ಟು ಆಂತರಿಕ ಉತ್ಪನ್ನದಲ್ಲಿ ಕರ್ನಾಟಕ ಮೂರನೇ ಸ್ಥಾನ ತಲುಪಿತ್ತು. ಇನ್ನು ಬೆಳವಣಿಗೆ ದರದಲ್ಲಿ ಎಲ್ಲ ರಾಜ್ಯಗಳನ್ನೂ ಹಿಂದಿಕ್ಕಿ ಶೇ.7.2 ರಷ್ಟುಅಭಿವೃದ್ಧಿ ದರದೊಂದಿಗೆ ಮೊದಲ ಸ್ಥಾನ ತಲುಪಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೊರೋನಾ ಅಟ್ಟಹಾಸದಿಂದಾಗಿ ಮಹಾರಾಷ್ಟ್ರದ(Maharashtra) ಒಟ್ಟು ಆಂತರಿಕ ಉತ್ಪನ್ನ ಬೆಳವಣಿಗೆ ದರ ಶೇ. - 5.6ಕ್ಕೆ ಕುಸಿದಿತ್ತು. ಈ ವೇಳೆಯಲ್ಲಿ ಕರ್ನಾಟಕ ಶೇ.7.2 ರಷ್ಟು ಬೆಳವಣಿಗೆ ದರ ಹೊಂದಿತ್ತು. ನಂತರದ ಸ್ಥಾನದಲ್ಲಿ ತಮಿಳುನಾಡು ಶೇ.5.9, ಉತ್ತರ ಪ್ರದೇಶ(Uttar Pradesh) ಶೇ.1.1, ಗುಜರಾತ್(Gujrat) ಶೇ.0.6 ರಷ್ಟುಮಾತ್ರ ಬೆಳವಣಿಗೆ ದರ ಹೊಂದಿದ್ದವು. ರಾಜ್ಯದ ಆಂತರಿಕ ಉತ್ಪನ್ನ ಬೆಳವಣಿಗೆ ದರಕ್ಕೆ ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ ಹೆಚ್ಚು ಕೊಡುಗೆ ನೀಡಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದ್ದು ವಿಶ್ವದಲ್ಲೇ ವೇಗದ ಆರ್ಥಿಕ ಪ್ರಗತಿ!
ನವದೆಹಲಿ: 2021-22ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಸಮಗ್ರ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ.5.4ರಷ್ಟು ದಾಖಲಾಗಿದೆ. ಈ ಮೂಲಕ ದೊಡ್ಡ ಆರ್ಥಿಕತೆಗಳ ಪೈಕಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ದೇಶ ಎಂಬ ಹಿರಿಮೆಯನ್ನು ಉಳಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತ ಶೇ.20.3, ಎರಡನೇ ತ್ರೈಮಾಸಿಕದಲ್ಲಿ ಶೇ.8.5ರಷ್ಟುಪ್ರಗತಿ ಸಾಧಿಸಿತ್ತು.
ಇದೇ ವೇಳೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಪ್ರಸಕ್ತ ಹಣಕಾಸು ವರ್ಷದ ಒಟ್ಟಾರೆ ಜಿಡಿಪಿ ಬೆಳವಣಿಗೆ ದರದ ಕುರಿತು ಎರಡನೇ ಅಂದಾಜು ಮಾಡಿದ್ದು, ಅದರಲ್ಲಿ 2021-22ರಲ್ಲಿ ಭಾರತ ಒಟ್ಟಾರೆ ಶೇ.8.9ರಷ್ಟುಜಿಡಿಪಿ ಬೆಳವಣಿಗೆ ಸಾಧಿಸಬಹುದು ಎಂದು ಹೇಳಿದೆ. ಇದು ಈ ಹಿಂದಿನ ಅಂದಾಜು ಪ್ರಮಾಣವಾದ ಶೇ.9.2ಕ್ಕಿಂತ ಕಡಿಮೆ ಎಂಬುದು ಗಮನಾರ್ಹ.
ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್ 389 ಅಂಕ, ನಿಫ್ಟಿ135 ಅಂಕ ಏರಿಕೆ:
ಯುದ್ಧದ ಕಾರಣ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆ ಚೇತರಿಕೆ ಕಂಡಿದೆ. ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 388.76 ಅಂಕ ಏರಿಕೆ ಕಾಣುವುದರೊಂದಿಗೆ 56,247.28ರಲ್ಲಿ ಅಂತ್ಯವಾಗಿದೆ. ಭಾರತೀಯ ಸಂವೇದಿ ಸೂಚ್ಯಂಕ ನಿಫ್ಟಿಸಹ 135.5 ಅಂಕ ಏರಿಕೆ ಕಾಣುವುದರೊಂದಿಗೆ 16,793.9 ರಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಇಸ್ಫೋಸಿಸ್‌ನ ಷೇರುಗಳು ಏರಿಕೆ ಕಂಡಿವೆ. ಇನ್ನು ಕಚ್ಚಾ ತೈಲದ ಬೆಲೆ ಹೆಚ್ಚಾದ ಕಾರಣ ಡಾಲರ್ ಎದುರು ರುಪಾಯಿ ಮೌಲ್ಯ 2 ಪೈಸೆ ಕುಸಿತ ಕಾಣುವ ಮೂಲಕ 75.35ಕ್ಕೆ ಇಳಿಕೆ ಕಂಡಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 103.28 ಡಾಲರ್‌ಗೆ ತಲುಪಿದೆ.
ಉದ್ಯಮ ವಲಯಕ್ಕೆ ಆಘಾತ: ರಷ್ಯಾ (Russia) - ಉಕ್ರೇನ್ (Ukraine) ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ (India) ಶಿಪ್ಪಿಂಗ್ (Shipping) ಕಂಪೆನಿಗಳು ಉಭಯ ರಾಷ್ಟ್ರಗಳ ಬಂದರುಗಳಿಗೆ ಸರಕು ರಫ್ತಿಗೆ (Export) ಕಾರ್ಗೋ (Cargo) ಕಾಯ್ದಿರಿಸೋದನ್ನು ನಿಲ್ಲಿಸಿವೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.