ಬಿಎಸ್‌ವೈ 8ನೇ ಬಜೆಟ್: ಕೊರೋನಾ ಸಂಕಷ್ಟ ಮಧ್ಯೆ ಆಯವ್ಯಯ!

By Suvarna NewsFirst Published Mar 8, 2021, 7:17 AM IST
Highlights

 ಮಧ್ಯಾಹ್ನ 12.05ಕ್ಕೆ ಮಂಡನೆ| ಇಂದು ಬಿಎಸ್‌ವೈ 8ನೇ ಬಜೆಟ್‌| ಕೊರೋನಾ ಸಂಕಷ್ಟ ಮಧ್ಯೆ ಆಯವ್ಯಯ| ಆರ್ಥಿಕತೆ ಚೇತರಿಕೆಗೆ ಟಾನಿಕ್‌ ಸಿಗುತ್ತಾ?

ಬೆಂಗಳೂರು(ಮಾ.08): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ಮಧ್ಯಾಹ್ನ 12.05ಕ್ಕೆ ತಮ್ಮ ಎಂಟನೇ ಹಾಗೂ ಕೊರೋನಾ ಸಂಕಷ್ಟದ ಬಳಿಕ ರಾಜ್ಯದ ಮೊದಲ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಪಾತಾಳ ಮುಟ್ಟಿಮೇಲೇರುತ್ತಿರುವ ಆರ್ಥಿಕತೆಗೆ ಟಾನಿಕ್‌ ನೀಡಲು 2021-22ನೇ ಸಾಲಿನ ಆಯವ್ಯಯದಲ್ಲಿ ಯಾವ್ಯಾವ ಕ್ರಮಗಳನ್ನು ಅನುಸರಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

"

2006-07 ರಿಂದ 2011-12ರ ನಡುವೆ ಉಪಮುಖ್ಯಮಂತ್ರಿಯಾಗಿ ಎರಡು ಬಾರಿ ಹಾಗೂ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಯಡಿಯೂರಪ್ಪ ಮುಂಗಡಪತ್ರ ಮಂಡಿಸಿದ್ದರು. ಇದೀಗ ಮುಖ್ಯಮಂತ್ರಿಯಾಗಿ ಐದನೇ ಹಾಗೂ ಒಟ್ಟಾರೆ ಈವರೆಗೆ ಏಳು ಬಜೆಟ್‌ ಮಂಡಿಸಿರುವ ಅವರು, ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ ತಮ್ಮ 8ನೇ ಬಜೆಟ್‌ ಮಂಡಿಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಘೋಷಿಸುವ ನಿರೀಕ್ಷೆಯಿದೆ. ಜತೆಗೆ, ರೈತರು ಹಾಗೂ ಕೊರೋನಾ ಕಾರಣ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ.

ಕೊರೋನಾ ಬಳಿಕ ಇಡೀ ದೇಶದ ಆರ್ಥಿಕತೆ ಕುಸಿದಿದ್ದು ರಾಜ್ಯದಲ್ಲೂ ಸರ್ಕಾರದ ಖಜಾನೆ ಬರಿದಾಗಿದೆ. ಹೀಗಾಗಿಯೇ 2020-21ನೇ ಸಾಲಿನಲ್ಲಿ ಆಯವ್ಯಯದಲ್ಲಿ ಉಲ್ಲೇಖಿಸಿದ್ದ ಮೊತ್ತಕ್ಕಿಂತ 37,000 ಕೋಟಿ ರು. ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಅನುಮತಿ ನೀಡಿತ್ತು.

ಕಳೆದ ಬಾರಿ 2.37 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಿದ್ದ ಯಡಿಯೂರಪ್ಪ ಕೊರೋನಾ ನಡುವೆಯೂ ಈ ಬಾರಿ ಗಾತ್ರ ಹಿಗ್ಗಿಸುವ ಪ್ರಯತ್ನದಲ್ಲಿದ್ದಾರೆ. ಇದೇ ವೇಳೆ ಈಗಾಗಲೇ ಸ್ಥಗಿತಗೊಳಿಸಿರುವ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ ಯೋಜನೆಗಳಿಗೆ ಅಧಿಕೃತ ಕತ್ತರಿ ಬೀಳುವ ಸಾಧ್ಯತೆ ಇದೆ. ಜೊತೆಗೆ ತಮ್ಮ ಸರ್ಕಾರಕ್ಕೆ ಹೆಸರು ತಂದುಕೊಡುವ ನಿಟ್ಟಿನಲ್ಲಿ ಮಹಿಳೆಯರು ಹಾಗೂ ರೈತರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯಲ್ಲಿ ಪ್ರತಿ ಹೋಬಳಿ ಮಟ್ಟದಲ್ಲೂ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷಿ ಯೋಜನೆ ಸೇರಿದಂತೆ ಹಲವು ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ.

ಇದಕ್ಕೆ ಸಂಪನ್ಮೂಲ ಕ್ರೋಢೀಕರಣವೇ ಸವಾಲಾಗಿ ಪರಿಣಮಿಸಿದ್ದು, ಕೊರೋನಾ ನಡುವೆಯೂ ಯಡಿಯೂರಪ್ಪ ಅಳೆದು ತೂಗಿ ಜನಪ್ರಿಯ ಬಜೆಟ್‌ ಮಂಡಿಸುವ ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಬಕಾರಿ ತೆರಿಗೆ ಹೆಚ್ಚಳ?:

ಜಿಎಸ್‌ಟಿ ಬಳಿಕ ರಾಜ್ಯದ ಬಳಿ ತೆರಿಗೆ ಹೆಚ್ಚಳ ಮಾಡುವ ಅಧಿಕಾರ ಇಲ್ಲ. ಹೀಗಾಗಿ ಈ ಬಾರಿಯೂ ಅಬಕಾರಿ ಹಾಗೂ ಇಂಧನದ ಮೇಲಿನ ತೆರಿಗೆ ಹೆಚ್ಚಳದ ಮೂಲಕವೇ ಸಂಪನ್ಮೂಲ ಕ್ರೋಢೀಕರಿಸಬೇಕಾಗಿದೆ. ಆದರೆ, ಈಗಾಗಲೇ ಪೆಟ್ರೋಲ್‌-ಡೀಸೆಲ್‌ ಬೆಲೆ ಗಗನಕ್ಕೇರಿದ್ದು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ. ಆದರೆ, ಎಂದಿನಂತೆ ಈ ವರ್ಷವೂ ಅಬಕಾರಿ ಇಲಾಖೆಯೇ ತೆರಿಗೆ ಹೆಚ್ಚಳಕ್ಕೆ ಪ್ರಮುಖ ಮೂಲವಾಗಲಿದ್ದು, ಮದ್ಯಪ್ರಿಯರ ಜೇಬಿಗೆ ಕೈ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ ಕಂದಾಯ ಇಲಾಖೆಯಲ್ಲಿನ ಸುಧಾರಣೆಗಳು, ಆಸ್ತಿ ತೆರಿಗೆ ಹೆಚ್ಚಳ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳದಂತಹ ಹಲವು ಪ್ರಸ್ತಾಪಗಳನ್ನು ಮುಂದಿಟ್ಟುಕೊಂಡು ಆಯವ್ಯಯ ಸಿದ್ಧವಾಗಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಈ ವರ್ಷವೂ ಸಾಲದ ಹೊರೆ ಹೆಚ್ಚಳ:

ಕಳೆದ ವರ್ಷ 2.37 ಲಕ್ಷ ಕೋಟಿ ರು. ಗಾತ್ರದ 495.43 ಕೋಟಿ ರು.ಗಳ ಉಳಿತಾಯ ಬಜೆಟ್‌ ಅನ್ನು ಯಡಿಯೂರಪ್ಪ ಮಂಡಿಸಿದ್ದರು. ಈ ವೇಳೆ 53,214 ಕೋಟಿ ರು. ಸಾಲ ಪಡೆಯುವುದಾಗಿ ಪ್ರಸ್ತಾಪಿಸಿದ್ದರು. ಇದರ ಜೊತೆಗೆ ಕೇಂದ್ರದ ಅನುಮತಿ ಮೇರೆಗೆ 37 ಸಾವಿರ ಕೋಟಿ ರು. ಹೆಚ್ಚುವರಿ ಸಾಲ ಪಡೆಯಲು ಅವಕಾಶ ಮಾಡಿಕೊಂಡು ಈವರೆಗೆ 65 ಸಾವಿರ ಕೋಟಿ ರು. ಸಾಲ ಪಡೆದಿದ್ದಾರೆ.

ಇದಲ್ಲದೆ 2018-19ರ 41,914 ಕೋಟಿ ರು., 2019-20ರ 48490 ಕೋಟಿ ರು. ಸಾಲ ಪಡೆದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲೂ ಸಾಲ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಲಿದ್ದು, ರಾಜ್ಯದ ಒಟ್ಟು ಸಾಲ 4 ಲಕ್ಷ ಕೋಟಿ ರು.ಗಳ ಗಡಿ ದಾಟುವ ಅಂದಾಜಿದೆ.

ಯಾವ್ಯಾವ ಕ್ಷೇತ್ರಗಳಿಗೆ ಒತ್ತು?:

ಬಿ.ಎಸ್‌. ಯಡಿಯೂರಪ್ಪ ಅವರೇ ಹೇಳಿರುವಂತೆ, ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ಘೋಷಿಸಲಿದ್ದು ಆರೋಗ್ಯ, ಕೃಷಿ, ಪ್ರವಾಸೋದ್ಯಮ, ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿಗೆ ಒತ್ತು ನೀಡುವ ನಿರೀಕ್ಷೆ ಇದೆ.

ಸಂಭಾವ್ಯ ಘೋಷಣೆಗಳು

- ಹೋಬಳಿ ಮಟ್ಟದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ

- ಮಹಿಳೆಯರು, ರೈತರಿಗೆ ವಿಶೇಷ ಕಾರ್ಯಕ್ರಮ ಘೋಷಣೆ

- ನೋಂದಣಿ- ಮುದ್ರಾಂಕ ಶುಲ್ಕ, ಆಸ್ತಿ ತೆರಿಗೆ ಹೆಚ್ಚಳ

- ಕೃಷಿ, ಪ್ರವಾಸೋದ್ಯಮ, ನೀರಾವರಿಗೆ ಒತ್ತು ಸಂಭವ

- ಸಂಪನ್ಮೂಲ ಕ್ರೋಢೀಕರಣಕ್ಕೆ ಅಬಕಾರಿ ತೆರಿಗೆ ಹೆಚ್ಚಳ

- ಸಿದ್ದು, ಎಚ್‌ಡಿಕೆ ಕಾಲದ ಯೋಜನೆಗಳಿಗೆ ಅಧಿಕೃತ ಕೊಕ್‌

click me!