*ಕ್ಯಾನ್ಸರ್ ಕಾರಕ ಅಂಶಗಳಿವೆ ಎಂದು ಆರೋಪಿಸಿ ವಿಶ್ವಾದ್ಯಂತ ಕಂಪನಿ ವಿರುದ್ಧ ಸಾವಿರಾರು ಮೊಕದ್ದಮೆಗಳು
*ಅಮೆರಿಕ ಹಾಗೂ ಕೆನಡಾದಲ್ಲಿ ಎರಡು ವರ್ಷಗಳ ಹಿಂದೆಯೇ ಮಾರಾಟ ಸ್ಥಗಿತ
*2023ರಲ್ಲಿ ಜಗತ್ತಿನಾದ್ಯಂತ ಬೇಬಿ ಪೌಡರ್ ಮಾರಾಟ ನಿಲ್ಲಿಸೋದಾಗಿ ಘೋಷಿಸಿದ್ದ ಜಾನ್ಸನ್ ಹಾಗೂ ಜಾನ್ಸನ್
ನವದೆಹಲಿ (ಆ.22): ಟಾಲ್ಕ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಲು ನಿರ್ಧರಿಸಿರುವ ಅಮೆರಿಕ ಮೂಲದ ಜಾನ್ಸನ್ ಹಾಗೂ ಜಾನ್ಸನ್ ಕಂಪನಿ, ಭಾರತದ ಮಾರುಕಟ್ಟೆಗಳಿಂದ ಉತ್ಪನ್ನವನ್ನು ಹಿಂಪಡೆಯುವ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದೆ. ಕ್ಯಾನ್ಸರ್ ಕಾರಕ ಅಂಶಗಳಿವೆ ಎಂದು ಆರೋಪಿಸಿ ವಿಶ್ವಾದ್ಯಂತ ಕಂಪನಿ ವಿರುದ್ಧ ಮೊಕದ್ದಮೆಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಟಾಲ್ಕ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸೋದಾಗಿ ಇತ್ತೀಚೆಗಷ್ಟೇ ಜಾನ್ಸನ್ ಹಾಗೂ ಜಾನ್ಸನ್ ಕಂಪನಿ ನಿರ್ಧಾರ ಪ್ರಕಟಿಸಿತ್ತು. 'ಟಾಲ್ಕ್ ಬೇಬಿ ಪೌಡರ್ ಪೂರೈಕೆ ನಿಲುಗಡೆಯಾಗುವ ತನಕ ಆ ಉತ್ಪನ್ನವನ್ನು ಮಾರಾಟ ಮಾಡಲು ನಾವು ಚಿಲ್ಲರೆ ವ್ಯಾಪಾರಿಗಳ ಜೊತೆ ಕಾರ್ಯನಿರ್ವಹಿಸುತ್ತೇವೆ' ಎಂದು ಜಾನ್ಸನ್ ಹಾಗೂ ಜಾನ್ಸನ್ ಕಂಪನಿ ವಕ್ತಾರರು ಮನಿ ಕಂಟ್ರೋಲ್ ಗೆ ಮಾಹಿತಿ ನೀಡಿದ್ದಾರೆ. 'ನಾವು ಭಾರತದ ಮಾರುಕಟ್ಟೆಯಿಂದ ಉತ್ಪನ್ನವನ್ನು ಹಿಂಪಡೆಯುವುದಿಲ್ಲ. ಉತ್ಪನ್ನದ ಸುರಕ್ಷತೆಗೆ ಒತ್ತು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ತನಕ ಈ ಉತ್ಪನ್ನದ ಉತ್ಪಾದನೆ ಮುಂದುರಿಸುತ್ತೇವೆ. ಆ ಬಳಿಕ ನಾವು ಉತ್ಪಾದನೆ ಸ್ಥಗಿತಗೊಳಿಸುತ್ತೇವೆ' ಎಂದು ಕಂಪನಿಯ ಎಕ್ಸಿಕ್ಯುಟಿವ್ ಒಬ್ಬರು ಮಾಹಿತಿ ನೀಡಿದ್ದಾರೆ. ಆದ್ರೆ, ಈ ವಿಚಾರಕ್ಕೆ ಸಂಬಂಧಿಸಿ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜಾನ್ಸನ್ ಹಾಗೂ ಜಾನ್ಸನ್ ಮಕ್ಕಳ ಟಾಲ್ಕ್ ಪೌಡರ್ ಹಾಗೂ ಬೇಬಿ ಶಾಂಪುವಿನಲ್ಲಿ ಫಾರ್ಮಲ್ ಡಿಹೈಡ್ (formaldehyde) ಹಾಗೂ ಕಲ್ನಾರಿನ (asbestos) ಅಂಶಗಳಿರೋದನ್ನು ಪರೀಕ್ಷಿಸುವ ವಿಧಾನಗಳಲ್ಲಿ ಏಕರೂಪತೆ ಇಲ್ಲ ಎಂದು ಕಳೆದ ವರ್ಷ ಮಕ್ಕಳ ಹಕ್ಕುಗಳ ಸಂರಕ್ಷಣಾ ರಾಷ್ಟ್ರೀಯ ಆಯೋಗ (NCPCR) ಭಾರತದ ಡ್ರಗ್ ಕಂಟ್ರೋಲರ್ ಜನರಲ್ (NCPCR) ಹಾಗೂ ಕೇಂದ್ರೀಯ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಗೆ (CDSCO) ಸಮನ್ಸ್ ಜಾರಿ ಮಾಡಿತ್ತು.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಎರಡನೇ ಸರಣಿ ಆರಂಭ; ಆನ್ ಲೈನ್ ನಲ್ಲಿ ಖರೀದಿಸಿದ್ರೆ 50ರೂ. ಡಿಸ್ಕೌಂಟ್
ಟಾಲ್ಕ್ ಪೌಡರ್ ಗೆ ಬೇಡಿಕೆಯಿಲ್ಲ ಹಾಗೂ ಅದರ ವಿರುದ್ಧ ಆಪಾದನೆಗಳಿವೆ ಎಂದಾದರೆ ಅದನ್ನು ಭಾರತದಲ್ಲಿ ಏಕೆ ಮಾರಾಟ ಮಾಡಬೇಕು? ಎಂದು ತಜ್ಞರು ಜಾನ್ಸನ್ ಹಾಗೂ ಜಾನ್ಸನ್ ಕಂಪನಿಯನ್ನು ಪ್ರಶ್ನಿಸಿದ್ದಾರೆ. ಅಮೆರಿಕದಲ್ಲಿ ಕಂಪನಿ ಈ ಉತ್ಪನ್ನದ ಮಾರಾಟ ಸ್ಥಗಿತಗೊಳಿಸಿ ಎರಡು ವರ್ಷಕ್ಕೂ ಅಧಿಕ ಸಮಯವಾಗಿದೆ. 'ಜಗತ್ತಿನ ಪಾಶ್ಚಿಮಾತ್ಯ ಭಾಗಗಳಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಯನ್ನು ಭಾರತದಲ್ಲಿ ಜಾರಿಗೊಳಿಸಲು ಕಂಪನಿ ತಡಮಾಡುತ್ತಿದೆ. ಒಂದು ವೇಳೆ ಒಂದು ಉತ್ಪನ್ನವನ್ನು ಉತ್ಪಾದನೆ ಮಾಡೋದನ್ನು ನಿಲ್ಲಿಸೋದಾದ್ರೆ ಅದನ್ನು ಏಕೆ ಮಾರಾಟ ಮಾಡಬೇಕು ಹಾಗೂ ಹಿಂದಕ್ಕೆ ಪಡೆಯಲು ಏಕೆ ಸಾಧ್ಯವಿಲ್ಲ' ಎಂದು ಕೆಲವು ಅಧಿಕಾರಿಗಳು ಕೂಡ ಪ್ರಶ್ನಿಸಿದ್ದಾರೆ. ಸಿಡಿಎಸ್ ಸಿಒ (CDSCO) ಮಾರ್ಗಸೂಚಿಗಳ ಪ್ರಕಾರ ಭಾರತದಲ್ಲಿ ಗುಣಮಟ್ಟದ ಮಾನದಂಡಗಳನ್ನು ಮುಟ್ಟದ ಯಾವುದೇ ಬ್ಯಾಚಿನ ಉತ್ಪನ್ನಗಳನ್ನು ಸ್ವಯಂ ನಿರ್ಧಾರದಿಂದ ಅಥವಾ ಕಾನೂನುಬದ್ಧವಾಗಿ ಹಿಂಪಡೆಯಬೇಕು.
ಯುಪಿಐ ವರ್ಗಾವಣೆಗಿಲ್ಲ ಶುಲ್ಕ: ಹಣಕಾಸು ಸಚಿವಾಲಯ ಸ್ಪಷ್ಟನೆ
ಮಾರಾಟ ಸ್ಥಗಿತ ನಿರ್ಧಾರ ಪ್ರಕಟಿಸಿದ್ದ ಕಂಪನಿ
ಜಾನ್ಸನ್ ಮತ್ತು ಜಾನ್ಸನ್ 2023ರಲ್ಲಿ ಜಗತ್ತಿನಾದ್ಯಂತ ಟಾಲ್ಕ್ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಲಿದೆ ಎಂದು ಕಂಪನಿ ಜುಲೈನಲ್ಲಿ ತಿಳಿಸಿತ್ತು. ಅಮೆರಿಕದಲ್ಲಿ ಪೌಡರ್ ಮಾರಾಟವನ್ನು ನಿಲ್ಲಿಸಿದ ಎರಡು ವರ್ಷಕ್ಕೂ ಅಧಿಕ ಸಮಯದ ಬಳಿಕ ಜಾನ್ಸನ್ ಮತ್ತು ಜಾನ್ಸನ್ ಈ ನಿರ್ಧಾರ ಕೈಗೊಂಡಿದೆ. ಈ ಕಂಪನಿಯ ವಿರುದ್ಧ ಸುಮಾರು 38,000 ಪ್ರಕರಣಗಳು ದಾಖಲಾಗಿವೆ. ಇನ್ನು ಮುಂದೆ ಜೋಳದ ಗಂಜಿ ಆಧಾರಿತ ಪೌಡರ್ ಉತ್ಪಾದನೆ ಮಾಡಲಾಗುವುದು ಎಂದು ತಿಳಿಸಿರುವ ಕಂಪನಿ, ಜೋಳದ ಗಂಜಿ ಆಧಾರಿತ ಬೇಬಿ ಪೌಡರ್ ಅನ್ನು ಈಗಾಗಲೇ ಜಗತ್ತಿನಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು ಕಂಡುಬಂದಿವೆ ಎಂದು ಯುಎಸ್ ನಿಯಂತ್ರಕರು ಈ ಹಿಂದೆ ತಿಳಿಸಿದ್ದರು. ಬೇಬಿ ಪೌಡರ್ ಬಳಕೆಯ ಸುರಕ್ಷತೆ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಲಾಗಿದೆ ಎಂಬ ಕಾರಣದಿಂದ ಅಮೆರಿಕ ಹಾಗೂ ಕೆನಡದಲ್ಲಿ ಬೇಡಿಕೆ ತಗ್ಗಿತ್ತು. ಅಲ್ಲದೆ, ಇದೇ ಸಮಯದಲ್ಲಿ ಕಂಪನಿ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ 2020ರಲ್ಲಿ ಜಾನ್ಸನ್ ಮತ್ತು ಜಾನ್ಸನ್ ಅಮೆರಿಕ ಹಾಗೂ ಕೆನಡಾದಲ್ಲಿ ಬೇಬಿ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಿತ್ತು.