ITR Filing: 10 ಲಕ್ಷ ರೂ. ಆದಾಯ ಹೊಂದಿದ್ದೀರಾ?ಈ ಲೆಕ್ಕಾಚಾರ ಅನುಸರಿಸಿದ್ರೆ ಯಾವುದೇ ತೆರಿಗೆ ಪಾವತಿಸೋದು ಬೇಡ!

By Suvarna News  |  First Published Jul 18, 2023, 6:03 PM IST

ಆದಾಯ ತೆರಿಗೆ ಹೊರೆಯನ್ನು ತಗ್ಗಿಸಿಕೊಳ್ಳಲು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಅನೇಕ ಕಡಿತ ಹಾಗೂ ವಿನಾಯ್ತಿಗಳ ಪ್ರಯೋಜನಗಳನ್ನು ನೀಡಲಾಗಿದೆ. ಹೀಗಿರುವಾಗ ವಾರ್ಷಿಕ 10ಲಕ್ಷ ರೂ. ಒಟ್ಟು ಆದಾಯ ಹೊಂದಿರುವ ವ್ಯಕ್ತಿ, ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಭಾರವನ್ನು ಶೂನ್ಯಕ್ಕೆ ಇಳಿಸಿಕೊಳ್ಳುವುದು ಹೇಗೆ? 


Business Desk:ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಐಟಿಆರ್ ಸಲ್ಲಿಕೆ ಸಂದರ್ಭದಲ್ಲಿ ತೆರಿಗೆ ಹೊರೆ ತಗ್ಗಿಸಿಕೊಳ್ಳಲು ಅನೇಕರು ಪ್ರಯತ್ನಿಸುತ್ತಾರೆ.  ಹಣಕಾಸಿನ ಸಮರ್ಪಕ ನಿರ್ವಹಣೆ ಹಾಗೂ ತೆರಿಗೆ ಭಾರ ಕಡಿಮೆ ಮಾಡಿಕೊಳ್ಳಲು ವೇತನ ಪಡೆಯುವ ವರ್ಗ ಸೂಕ್ತ ಯೋಜನೆ ರೂಪಿಸೋದು ಅಗತ್ಯ. ಆದಾಯ ತೆರಿಗೆ ಕಾಯ್ದೆ ತೆರಿಗೆ ಭಾರವನ್ನು ತಗ್ಗಿಸಿಕೊಳ್ಳಲು ವಿವಿಧ ಕಡಿತಗಳು ಹಾಗೂ ವಿನಾಯ್ತಿ ಸೌಲಭ್ಯ ನೀಡಿದೆ. ಈ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ತೆರಿಗೆ ವ್ಯಾಪ್ತಿಗೊಳಪಡುವ ಆದಾಯವನ್ನು ತಗ್ಗಿಸಿಕೊಳ್ಳಬಹುದು. ಹಾಗಾದ್ರೆ ವಾರ್ಷಿಕ 10ಲಕ್ಷ ರೂ. ಒಟ್ಟು ಆದಾಯ ಹೊಂದಿರುವ ವ್ಯಕ್ತಿ, ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಭಾರವನ್ನು ಶೂನ್ಯಕ್ಕೆ ಇಳಿಸಿಕೊಳ್ಳುವುದು ಹೇಗೆ? ಯಾವೆಲ್ಲ ತೆರಿಗೆ ಕಡಿತಗಳು, ವಿನಾಯ್ತಿಗಳನ್ನು ಬಳಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ.

ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಅನೇಕ ತೆರಿಗೆ ಕಡಿತಗಳು ಹಾಗೂ ವಿನಾಯ್ತಿಗಳ ಸೌಲಭ್ಯವನ್ನು ಒದಗಿಸಲಾಗಿದೆ. ಇವುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ತೆರಿಗೆ ಭಾರವನ್ನು ತಗ್ಗಿಸಿಕೊಳ್ಳಬಹುದು. 
1.50 ಸಾವಿರ ರೂ. ಕಡಿತ
ಹಳೆಯ ತೆರಿಗೆ ವ್ಯವಸ್ಥೆಯಲ್ಲಿ 50 ಸಾವಿರ ರೂ. ತೆರಿಗೆ ಕಡಿತದ (ಸ್ಟ್ಯಾಂಡರ್ಡ್ ಡಿಡಕ್ಷನ್) ಸೌಲಭ್ಯ ನೀಡಲಾಗಿದೆ. ಇದು ವೇತನ ಪಡೆಯುವ ಎಲ್ಲ ವರ್ಗಕ್ಕೂ ಅನ್ವಯಿಸುತ್ತದೆ. ನಿರ್ದಿಷ್ಟ ವೆಚ್ಚಗಳು ಅಥವಾ ಹೂಡಿಕೆಗಳ ಹೊರತಾಗಿ ಈ ಕಡಿತ ಒಟ್ಟಾರೆ ತೆರಿಗೆಗೊಳಪಡುವ ಆದಾಯವನ್ನು ತಗ್ಗಿಸುತ್ತದೆ.

Tap to resize

Latest Videos

2.ಸೆಕ್ಷನ್ 80 ಸಿ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ 1.5ಲಕ್ಷ ರೂ. ಹೆಚ್ಚುವರಿ ಕಡಿತದ ಪ್ರಯೋಜನ ನೀಡಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಪಿಪಿಎಫ್), ಸಾರ್ವಜನಿಕರ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ), ಮಕ್ಕಳ ಟ್ಯೂಷನ್ ಶುಲ್ಕಗಳು ಹಾಗೂ ಗೃಹ ಸಾಲದ ಮೂಲ ಮೊತ್ತದ ಮರುಪಾವತಿ ಇತ್ಯಾದಿಗಳಿಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಬಹುದು. ಈ ಕಡಿತಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ತೆರಿಗೆಗೊಳಪಡುವ ಆದಾಯವನ್ನು ತಗ್ಗಿಸಿಕೊಳ್ಳಬಹುದು.

ಐಟಿಆರ್ ಸಲ್ಲಿಕೆ ಅಂತಿಮ ಗಡುವು ವಿಸ್ತರಣೆ ಕಷ್ಟ; ಜು.31ರೊಳಗೆ ತಪ್ಪದೇ ರಿಟರ್ನ್ ಫೈಲ್ ಮಾಡಿ

3.ಸೆಕ್ಷನ್ 80ಡಿ
ಆರೋಗ್ಯ ವಿಮಾ ಪ್ರೀಮಿಯಂಗಳ ವೆಚ್ಚವನ್ನು ಸೆಕ್ಷನ್ 80ಡಿ ಅಡಿಯಲ್ಲಿ ಕಡಿತ ಮಾಡಬಹುದು. ವ್ಯಕ್ತಿ, ಆತನ ಸಂಗಾತಿ ಹಾಗೂ ಅವಲಂಬಿತ ಮಕ್ಕಳ ಹೆಸರಿನಲ್ಲಿರುವ ಆರೋಗ್ಯ ವಿಮಾ ಪಾಲಿಸಿಗಳ ಮೇಲೆ ಕೂಡ ತಲಾ 25,000ರೂ. ತನಕ ಕಡಿತ ಪಡೆಯಬಹುದು. ಹಿರಿಯ ನಾಗರಿಕರು ಇದರಡಿಯಲ್ಲಿ 50 ಸಾವಿರ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. 

4.ಸೆಕ್ಷನ್ 80ಸಿಸಿಡಿ (1ಬಿ): ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್ ಪಿಎಸ್) ಕೊಡುಗೆ ನೀಡುವ ಮೂಲಕ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಬಹುದು. ಇದು 50 ಸಾವಿರ ರೂ. ಹೆಚ್ಚುವರಿ ಕಡಿತದ ಪ್ರಯೋಜನಗಳನ್ನು ಒದಗಿಸುತ್ತದೆ.

5.ಸೆಕ್ಷನ್ 24 (ಬಿ): ಇದು ಗೃಹ ಸಾಲದ ಬಡ್ಡಿದರದ ಮೇಲಿನ ಕಡಿತಗಳಿಗೆ ಅವಕಾಶ ನೀಡುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿ ಆಸ್ತಿ ಹೊಂದಿದ್ದರೆ ಆತ ಅದರ ಮೇಲೆ ಸಾಲ ಹೊಂದಿದ್ದರೆ ಬಡ್ಡಿದರದ ಮೇಲೆ 2ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಲು ಅವಕಾಶ ನೀಡಲಾಗಿದೆ. 

Income Tax Return: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೇಳೆ ಈ ವಿಷ್ಯ ಗಮನದಲ್ಲಿರಲಿ!

ಈ ಎಲ್ಲ ಕಡಿತಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ವ್ಯಕ್ತಿಗತ ತೆರಿಗೆ ಹೊರೆಯನ್ನು ತಗ್ಗಿಸಿಕೊಳ್ಳಬಹುದು.  ಈ ಕೆಳಗಿನ ಉದಾಹರಣೆ ಮೂಲಕ ತೆರಿಗೆ ಹೊರೆಯನ್ನು ಹೇಗೆ ತಗ್ಗಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
ಒಬ್ಬ ವ್ಯಕ್ತಿಯ ಒಟ್ಟು ವೇತನ :Rs.10,00,000
ಸ್ಟ್ಯಾಂಡರ್ಡ್ ಕಡಿತ: 50,000ರೂ.
ಗೃಹಸಾಲದ ಮೇಲಿನ ಬಡ್ಡಿ : 2,00,000ರೂ. 
ಒಟ್ಟು ಆದಾಯ: 7,50,000 ರೂ.
ಸೆಕ್ಷನ್ 80ಸಿ ಅಡಿಯಲ್ಲಿ ಕಡಿತ: 1,50,000ರೂ.
ಎನ್ ಪಿಎಸ್ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ಕಡಿತ: 50,000ರೂ.
ಸೆಕ್ಷನ್ 80ಡಿ ಅಡಿಯಲ್ಲಿ ಕಡಿತ: 50,000ರೂ.
ಒಟ್ಟು ತೆರಿಗೆಗೊಳಪಡುವ ಆದಾಯ: 5ಲಕ್ಷ ರೂ. 
ತೆರಿಗೆ ದರ:ಶೇ.5 ಅಂದರೆ 12,500ರೂ.
ಸೆಕ್ಷನ್  87ಎ ಅಡಿಯಲ್ಲಿ ರಿಯಾಯ್ತಿ: 12,500ರೂ. 
ಒಟ್ಟು ತೆರಿಗೆ ಪಾವತಿ: ಶೂನ್ಯ

click me!