ಹೆಣ್ಣುಮಗುವಿನ ಭವಿಷ್ಯಕ್ಕೆ ಆರ್ಥಿಕ ಸುಭದ್ರತೆ ಒದಗಿಸಲು ಹೆತ್ತವರು ಹೂಡಿಕೆ ಮಾಡೋದು ಅಗತ್ಯ. ಹಾಗಾದ್ರೆ ಹೆಣ್ಣುಮಗುವಿನ ಭವಿಷ್ಯಕ್ಕಾಗಿ ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ.
Business Desk: ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಿಂತ ಅವರ ವಿವಾಹದ ಬಗ್ಗೆ ಯೋಚಿಸುತ್ತಿದ್ದ ಕಾಲವೊಂದಿತ್ತು. ಹೆಣ್ಣು ಮಗು ಹುಟ್ಟಿದ ತಕ್ಷಣ ಹೆತ್ತವರಿಗೆ ಆಕೆಯ ಮದುವೆ ಚಿಂತೆ ಶುರುವಾಗುತ್ತಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಹೆಣ್ಣುಮಗುವಿಗೂ ಗಂಡಿನಷ್ಟೇ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಆಕೆಯೂ ಉನ್ನತ ಹುದ್ದೆಗೇರಬೇಕು ಎಂಬುದು ಹೆತ್ತವರ ಆಸೆಯೂ ಆಗಿದೆ. ಹೀಗಾಗಿ ಹೆಣ್ಣುಮಗುವಿನ ಭವಿಷ್ಯಕ್ಕೆ ಹೆತ್ತವರು ಹೂಡಿಕೆ ಮಾಡಲು ಬಯಸುತ್ತಾರೆ. ಆಕೆಗೆ ಭವಿಷ್ಯದಲ್ಲಿ ಉತ್ತಮ ಶಿಕ್ಷಣ ನೀಡಲು ನಿಯಮಿತ ಹೂಡಿಕೆ ಮಾಡುತ್ತಾರೆ ಕೂಡ. ಇನ್ನು ಹೆಣ್ಣುಮಕ್ಕಳ ಭವಿಷ್ಯದ ಆರ್ಥಿಕ ಸುರಕ್ಷತೆಗಾಗಿಯೇ ಒಂದಿಷ್ಟು ಯೋಜನೆಗಳಿವೆ. ಕೇಂದ್ರ ಸರ್ಕಾರ ಕೂಡ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಯೋಜನೆಯೊಂದನ್ನು ರೂಪಿಸಿದೆ. ಹೆಣ್ಣು ಮಗುವಿನ ಭವಿಷ್ಯವನ್ನು ಸುಭದ್ರಗೊಳಿಸಲು ನೆರವು ನೀಡುವ 5 ಆರ್ಥಿಕ ಯೋಜನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
1.ಸುಕನ್ಯಾ ಸಮೃದ್ಧಿ ಯೋಜನೆ: ಕೇಂದ್ರ ಸರ್ಕಾರ ರೂಪಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ ಹೆತ್ತವರಿಗೆ ತಮ್ಮ ಹೆಣ್ಣುಮಗುವಿನ ಭವಿಷ್ಯಕ್ಕಾಗಿ ಒಂದಿಷ್ಟು ಹಣವನ್ನು ಕೂಡಿಡಲು ನೆರವು ನೀಡುತ್ತದೆ. ಹೆಣ್ಣು ಮಗುವಿಗೆ ಸುರಕ್ಷಿತ ಹಾಗೂ ಸುಭದ್ರ ಆರ್ಥಿಕ ಬುನಾದಿ ಒದಗಿಸುವ ಮೂಲಕ ಆಕೆಯ ಭವಿಷ್ಯವನ್ನು ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆತ್ತವರು ಅಥವಾ ಪಾಲಕರು ಈ ಯೋಜನೆಯಡಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಆಕೆ ಹೆಸರಲ್ಲಿ ಉಳಿತಾಯ ಖಾತೆ ತೆರೆಯಬಹುದು. ಖಾತೆ ಹೊಂದಿರೋ ಹೆಣ್ಣು ಮಗು 21 ವರ್ಷಕ್ಕೆ ಕಾಲಿಟ್ಟ ನಂತರ ಠೇವಣಿ ಹಿಂಪಡೆಯಲು ಅಧಿಕಾರ ಹೊಂದಿರುತ್ತಾಳೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಪ್ರಸ್ತುತ ಶೇ. 8ರಷ್ಟು ಬಡ್ಡಿದರವಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯ್ತಿ ಕೂಡ ಇದೆ. ಎಸ್ ಎಸ್ ವೈಯಲ್ಲಿ ತಿಂಗಳಿಗೆ 250ರೂ. ನಿಂದ 1.5 ಲಕ್ಷ ರೂ. ತನಕ ಠೇವಣಿ ಇಡಬಹುದು.
Money Tips:ಆದಷ್ಟು ಬೇಗ ಹಣ ಮಾಡಿ, ಆರ್ಥಿಕ ಸ್ವಾತಂತ್ರ್ಯ ಗಳಿಸಲು ಬಯಸಿದ್ದೀರಾ? ಈ 7 ಟಿಪ್ಸ್ ಫಾಲೋ ಮಾಡಿ..
2.ಚಿಲ್ಡ್ರನ್ಸ್ ಗಿಫ್ಟ್ ಮ್ಯೂಚುವಲ್ ಫಂಡ್ :ಈ ಮ್ಯೂಚುವಲ್ ಫಂಡ್ ಅನ್ನು ಮಕ್ಕಳ ಉನ್ನತ ಶಿಕ್ಷಣ ಹಾಗೂ ಮದುವೆಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದಲೇ ರೂಪಿಸಲಾಗಿದೆ. ಈ ಮ್ಯೂಚುವಲ್ ಫಂಡ್ ಗಳನ್ನು ಬ್ಯಾಲೆನ್ಡ್ ಅಥವಾ ಹೈ ಬ್ರೀಡ್ ಫಂಡ್ಸ್ ಎಂದು ವಿಭಾಗಿಸಲಾಗಿದೆ. ಚಿಲ್ಡ್ರನ್ಸ್ ಗಿಫ್ಟ್ ಮ್ಯೂಚುವಲ್ ಫಂಡ್ ಗಳು ಸಾಮಾನ್ಯವಾಗಿ 18 ವರ್ಷಗಳ ಲಾಕ್ ಇನ್ ಅವಧಿ ಹೊಂದಿರುತ್ತವೆ. ಇನ್ನು ಈ ಫಂಡ್ ಗಳನ್ನು ಹೈಬ್ರೀಡ್ ಡೆಟ್ ಒರಿಯೆಂಟೆಡ್ ಹಾಗೂ ಹೈಬ್ರೀಡ್ ಈಕ್ವಿಟಿ ಒರಿಯೆಂಟೆಡ್ ಮ್ಯೂಚುವಲ್ ಫಂಡ್ ಗಳು ಎಂದು ವಿಭಾಗಿಸಬಹುದು.
3.ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು (NSC) ಅಪ್ರಾಪ್ತ ಮಗುವಿನ ಹೆಸರಿನಲ್ಲಿ ತೆರೆಯಬಹುದು. ಇದು ಸರ್ಕಾರದ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ನಿಗದಿಪಡಿಸುತ್ತದೆ. ಪ್ರಸ್ತುತ ಎನ್ ಎಸ್ಸಿಯ ಬಡ್ಡಿ ದರವು ಶೇಕಡಾ 7.7ರಷ್ಟಿದೆ. ಇದು ಬದಲಾಗ್ತಿರುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ನೀವು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರವನ್ನು ಖರೀದಿ ಮಾಡಬಹುದು. ಇದ್ರಲ್ಲಿ ನೀವು ಕನಿಷ್ಠ ಸಾವಿರ ರೂಪಾಯಿ ಹೂಡಿಕೆ ಮಾಡಬೇಕು. ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ. ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80C ಅಡಿಯಲ್ಲಿ, ಎನ್ ಎಸ್ಸಿಯಲ್ಲಿ ಹೂಡಿಕೆ ಮಾಡುವ ಮೂಲ ಮೊತ್ತದ ಮೇಲೆ 1.5 ಲಕ್ಷ ರೂಪಾಯಿ ತೆರಿಗೆ ರಿಯಾಯಿತಿ ಸಿಗುತ್ತದೆ.
ಬೇಗ ನಿವೃತ್ತಿಯಾಗಿ ಸುತ್ತಾಟ, ಮೋಜು-ಮಸ್ತಿ ಮಾಡ್ಬೇಕಾ? ಹಾಗಾದ್ರೆ ಈ ಹೂಡಿಕೆ ತಂತ್ರ ಬಳಸಿ
4.ಪಿಪಿಎಫ್ ಹೂಡಿಕೆಗಳು: ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆ ಅವಧಿ 15 ವರ್ಷ. ಅದಾದ ಬಳಿಕ ನೀವು ಬಯಸಿದರೆ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಣೆ ಮಾಡಬಹುದು. ಪಿಪಿಎಫ್ ಖಾತೆಯಲ್ಲಿ ಹೂಡಿಕೆದಾರರು ವಾರ್ಷಿಕ ಗರಿಷ್ಠ 1.5ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಗಳನ್ನು ಕೂಡ ಕ್ಲೇಮ್ ಮಾಡಬಹುದು. ಇನ್ನು ಪಿಪಿಎಫ್ ಠೇವಣಿಗಳ ಮೇಲಿನ ಬಡ್ಡಿ ಗಳಿಕೆ ಹಾಗೂ ಮೆಚ್ಯುರಿಟಿ ಬಳಿಕ ವಿತ್ ಡ್ರಾ ಮಾಡಿರುವ ಮೊತ್ತ ಕೂಡ ತೆರಿಗೆಮುಕ್ತವಾಗಿದೆ. ಪಿಪಿಎಫ್ ಖಾತೆಗೆ ಪ್ರಸ್ತುತ ಶೇ.7.7ರಷ್ಟು ಬಡ್ಡಿದರವಿದೆ.
5.ಚಿನ್ನದ ಮೇಲಿನ ಹೂಡಿಕೆಗಳು: ಚಿನ್ನದ ಮೇಲಿನ ಹೂಡಿಕೆ ಯಾವಾಗಲೂ ಬೇಡಿಕೆಯಲ್ಲಿರುತ್ತದೆ. ಹೀಗಾಗಿ ಹೆಣ್ಣುಮಗುವಿನ ಭವಿಷ್ಯಕ್ಕಾಗಿ ಹೆತ್ತವರು ಚಿನ್ನದ ಮೇಲೆ ಕೂಡ ಹೂಡಿಕೆ ಮಾಡಬಹುದು. ಗೋಲ್ಡ್ ಮ್ಯೂಚುವಲ್ ಫಂಡ್ಸ್, ಇಟಿಎಫ್ ಅಥವಾ ಇ-ಗೋಲ್ಡ್ ರೂಪದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.