ಭಾರತದ ಆರ್ಥಿಕತೆ 2023-24ನೇ ಹಣಕಾಸು ಸಾಲಿನಲ್ಲಿ ಶೇ.6.3ರಷ್ಟು ಬೆಳವಣಿಗೆ ದಾಖಲಿಸುವ ನಿರೀಕ್ಷೆಯಿದೆ ಎಂದು ವಿಶ್ವ ಬ್ಯಾಂಕ್ ವರದಿ ತಿಳಿಸಿದೆ. ಹೂಡಿಕೆ ಹಾಗೂ ದೇಶೀಯ ಬೇಡಿಕೆ ಗಮನಿಸಿ ವಿಶ್ವ ಬ್ಯಾಂಕ್ ಈ ಬೆಳವಣಿಗೆ ದರವನ್ನು ಅಂದಾಜಿಸಿದೆ.
ನವದೆಹಲಿ (ಅ.3): ಪ್ರಸಕ್ತ ಹಣಕಾಸು ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.3ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಹೂಡಿಕೆ ಹಾಗೂ ದೇಶೀಯ ಬೇಡಿಕೆ ಗಮನಿಸಿ ವಿಶ್ವ ಬ್ಯಾಂಕ್ ಈ ಬೆಳವಣಿಗೆ ದರವನ್ನು ಅಂದಾಜಿಸಿದೆ. ವಿಶ್ವ ಬ್ಯಾಂಕ್ ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಜಾಗತಿಕ ವಿದ್ಯಮಾನಗಳಿಗೆ ವ್ಯತಿರಿಕ್ತವಾಗಿ ಭಾರತದ ಅರ್ಥವ್ಯವಸ್ಥೆ ಪೂರಕ ಸನ್ನಿವೇಶಗಳನ್ನು ಸೃಷ್ಟಿಸಿದೆ ಎಂದು ಹೇಳಿದೆ. ದಕ್ಷಿಣ ಏಷ್ಯಾದ ಭಾಗದಲ್ಲಿ ಭಾರತದ ಪಾಲು ಬಹುದೊಡ್ಡದಿದೆ. ಹೀಗಾಗಿ ಭಾರತದ ಬೆಳವಣಿಗೆ ಶೇ.6.3ರಷ್ಟು ಇರಲಿದೆ ಎಂದು ತಿಳಿಸಿದೆ. ಇನ್ನು ಆಹಾರ ಪದಾರ್ಥಗಳ ಬೆಲೆಗಳು ಸಾಮಾನ್ಯ ಸ್ಥಿತಿಗೆ ತಲುಪಿರುವ ಕಾರಣ ಹಣದುಬ್ಬರ ತಗ್ಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಅಲ್ಲದೆ, ಅಗತ್ಯ ವಸ್ತುಗಳ ಪೂರೈಕೆ ಹೆಚ್ಚಿಸಲು ಸರ್ಕಾರದ ಕ್ರಮಗಳು ನೆರವು ನೀಡಲಿವೆ ಎಂದು ಸರ್ಕಾರ ತಿಳಿಸಿದೆ. 2022-23ನೇ ಹಣಕಾಸು ಸಾಲಿನಲ್ಲಿ ಭಾರತದ ಬೆಳವಣಿಗೆ ಶೇ.7.2ರಷ್ಟಿತ್ತು. ಇನ್ನು ಅಧಿಕ ಜಾಗತಿಕ ಬಡ್ಡಿದರಗಳು, ಭೌಗೋಳಿಕ -ರಾಜಕೀಯ ಉದ್ವಿಗ್ನತೆಗಳು ಹಾಗೂ ನಿಧಾನಗತಿಯ ಬೇಡಿಕೆಯಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆಯು ಮಧ್ಯಮ ಅವಧಿಯಲ್ಲಿ ನಿಧಾನಗೊಳ್ಳಲಿವೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
ಭಾರತದ ಬ್ಯಾಂಕ್ ಕ್ರೆಡಿಟ್ ಬೆಳವಣಿಗೆ 2023ರ ಏಪ್ರಿಲ್ - ಜೂನ್ ಮೊದಲ ತ್ರೈಮಾಸಿಕದಲ್ಲಿ ಶೇ.15.8ಕ್ಕೆ ಏರಿಕೆಯಾಗಿತ್ತು. ಅದೇ 2022-23ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಇದು ಶೇ.13.3ರಷ್ಟಿತ್ತು ಎಂದು ವರದಿ ತಿಳಿಸಿತ್ತು. ಇನ್ನು ಭಾರತದ ಸೇವಾ ವಲಯದ ಚಟುವಟಿಕೆಗಳು ಕೂಡ ಶೇ.7.4ರಷ್ಟು ಬೆಳವಣಿಗೆ ದಾಖಲಿಸಿವೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಹೂಡಿಕೆ ಬೆಳವಣಿಗೆ ಶೇ.8.9ರಷ್ಟಿರಲಿದೆ ಎಂದು ಈ ವರದಿ ಹೇಳಿದೆ.
ಅಫ್ಘಾನಿಸ್ತಾನದ ಕರೆನ್ಸಿಗೆ ಶಹಬ್ಬಾಸಗಿರಿ; ಜಗತ್ತಿನಲ್ಲೇ ಉತ್ತಮ ನಿರ್ವಹಣೆ ತೋರುತ್ತಿರುವ ಕರೆನ್ಸಿ ಎಂಬ ಬಿರುದು!
ಜಾಗತಿಕ ಆರ್ಥಿಕ ಹಿಂಜರಿಕೆಯಿಂದ ಹೊರಗುಳಿಯಲು ಭಾರತ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಈ ವರ್ಷದ ಜುಲೈನಲ್ಲಿ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಆರ್ಥಿಕತೆ ಸಾಕಷ್ಟು ಹೊಡೆತಕ್ಕೆ ಸಿಲುಕಿರುವ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಅತ್ಯುತ್ತಮ ನಿರ್ವಹಣೆ ತೋರಿದೆ ಎಂದು ಅನೇಕ ಬಾರಿ ವಿಶ್ವ ಬ್ಯಾಂಕ್ ಮೆಚ್ಚುಗೆ ಸೂಚಿಸಿತ್ತು.
ಇನ್ನು ವಿಶ್ವದ ಅಗ್ರ 10 ಆರ್ಥಿಕತೆಗಳಲ್ಲಿ ಭಾರತದ ಸ್ಥಾನವೇ ಅತ್ಯುತ್ತಮವಾಗಿದೆ ಎಂದು ಕೇಂದ್ರ ಸರ್ಕಾರ ಆಗಸ್ಟ್ ಕೊನೆಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಗ್ರಾಫ್ ಬಿಡುಗಡೆ ಮಾಡಿರುವ ಸರ್ಕಾರ, ಭಾರತದ ಜಿಡಿಪಿ ಬೆಳವಣಿಗೆ ಶೇ.5.9ರಷ್ಟಿದೆ ಎಂದು ಹೇಳಿತ್ತು. ಈ ಗ್ರಾಫಿಕ್ಸ್ ನಲ್ಲಿ ಅಮೆರಿಕ, ಚೀನಾ, ಕೆನಡಾ (Canada) ದೇಶಗಳ ಆರ್ಥಿಕತೆಯನ್ನು ಹೋಲಿಕೆ ಮಾಡಲಾಗಿದೆ. ಭಾರತದ ಆರ್ಥಿಕ (Indian Economy) ಪ್ರಗತಿ ದರ ಶೇ.5.9 ಇದ್ದು ಭಾರತ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಶೇ.5.2ರಷ್ಟುಆರ್ಥಿಕತೆ ಏರಿಕೆಯೊಂದಿಗೆ ಚೀನಾ 2ನೇ ಸ್ಥಾನದಲ್ಲಿ ಶೇ.1.6ರಷ್ಟುಜಿಡಿಪಿ ಪ್ರಗತಿ ದರ ಹೊಂದಿರುವ ಅಮೆರಿಕ 3ನೇ ಸ್ಥಾನದಲ್ಲಿವೆ. ಹಾಗೆಯೇ ಕೆನಡಾ ಶೇ.1.5, ಜಪಾನ್ ಶೇ.1.3, ಬ್ರೆಜಿಲ್ ಶೇ.0.9, ಫ್ರಾನ್ಸ್ ಶೇ.0.7, ಇಟಲಿ ಶೇ.0.7, ಜರ್ಮನಿ ಶೇ.-0.1 ಮತ್ತು ಬ್ರಿಟನ್ ಶೇ.0.3ರಷ್ಟುಆರ್ಥಿಕ ಪ್ರಗತಿ ದರವನ್ನು ಹೊಂದಿವೆ.
ಆರ್‌ಬಿಐ ಗವರ್ನರ್‌ಗೆ ಹಣದ ರಾಶಿ ಮೇಲೆ ಕುಳಿತ ಹಾವು ಎಂದಿದ್ದರಂತೆ ಪ್ರಧಾನಿ ಮೋದಿ!
ಜೈಪುರದಲ್ಲಿ ನಡೆದ ಜಿ20 ವ್ಯಾಪಾರ ಹಾಗೂ ಹೂಡಿಕೆ ಸಚಿವರ ಸಭೆಯಲ್ಲಿ ವಿಡಿಯೋ ಸಂದೇಶವನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ , ಕಳೆದ 9 ವರ್ಷಗಳಲ್ಲಿ ಭಾರತ ಜಗತ್ತಿನ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಮೂಡಿಬಂದಿದೆ. ಅಲ್ಲದೆ, ಇದು ಭಾರತದ ಸ್ಪರ್ಧಾತ್ಮಕತೆ ಹಾಗೂ ಪ್ರಾಮಾಣಿಕತೆಯನ್ನು ಹೆಚ್ಚಿಸಿದೆ ಕೂಡ ಎಂದು ಹೇಳಿದ್ದರು. 'ಮುಂದಿನ ಕೆಲವು ವರ್ಷಗಳಲ್ಲಿ ಭಾರತವನ್ನು ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.ಇನ್ನು ಜಾಗತಿಕ ಅನಿಶ್ಚತೆಗಳು ವಿಶ್ವದ ಆರ್ಥಿಕತೆಯನ್ನು ಅಲ್ಲಾಡಿಸಿವೆ. ಹೀಗಿರುವಾಗ ಜಿ20 ಸದಸ್ಯರಾಗಿ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆಗಳಲ್ಲಿ ಆತ್ಮವಿಶ್ವಾಸ ಮರುನಿರ್ಮಾಣ ಮಾಡುವುದು ರಾಷ್ಟ್ರಗಳ ಜವಾಬ್ದಾರಿಯಾಗಿದೆ ಎಂದು ಕೂಡ ಅವರು ಹೇಳಿದ್ದರು.