ಇತಿಹಾಸದಲ್ಲಿ ಮೊದಲ ಬಾರಿ ಭಾರತದಲ್ಲಿ ಆರ್ಥಿಕ ಕುಸಿ| ಸತತ 2ನೇ ತ್ರೈಮಾಸಿಕದಲ್ಲೂ ದೇಶದ ಜಿಡಿಪಿ ಮೈನಸ್ ಬೆಳವಣಿಗೆ| ನಾವೀಗ ತಾಂತ್ರಿಕವಾಗಿ ಆರ್ಥಿಕ ಹಿಂಜರಿಕೆಗೆ ತಲುಪಿದ್ದೇವೆ: ಆರ್‌ಬಿಐ
ಮುಂಬೈ(ನ.13): ಕೊರೋನಾ ವೈರಸ್‌ನಿಂದಾಗಿ ದೇಶದ ಆರ್ಥಿಕ ಪ್ರಗತಿಯ ದರ ಸತತ 2ನೇ ತ್ರೈಮಾಸಿಕದಲ್ಲೂ ಋುಣಾತ್ಮಕ ಬೆಳವಣಿಗೆ ದಾಖಲಿಸುವುದು ದಟ್ಟವಾಗಿದ್ದು, ಅದರೊಂದಿಗೆ ಭಾರತವು ತಾಂತ್ರಿಕವಾಗಿ ‘ಆರ್ಥಿಕ ಹಿಂಜರಿಕೆ’ ಎಂದು ಗುರುತಿಸಲಾಗುವ ಘಟ್ಟವನ್ನು ಪ್ರವೇಶಿಸಿದಂತಾಗಿದೆ. ಇದು ದೇಶದ ಇತಿಹಾಸದಲ್ಲೇ ಮೊದಲ ಆರ್ಥಿಕ ಹಿಂಜರಿಕೆಯಾಗಿದೆ.
ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ)ನ ಉಪಗವರ್ನರ್ ಮೈಕಲ್ ಪಾತ್ರ ಅವರ ಆರ್ಥಿಕ ತಜ್ಞರ ತಂಡವು ಗುರುವಾರ ಈ ಕುರಿತು ‘ನೌಕಾಸ್ಟ್’ ಎಂಬ ವರದಿ ಬಿಡುಗಡೆ ಮಾಡಿದೆ. ಇದು ಆರ್‌ಬಿಐ ಬಿಡುಗಡೆ ಮಾಡಿದ ಈ ಮಾದರಿಯ ಮೊದಲ ವರದಿಯಾಗಿದ್ದು, ಇದರಲ್ಲಿ ಸೆಪ್ಟೆಂಬರ್ ತಿಂಗಳಿಗೆ ಅಂತ್ಯಗೊಂಡ 2020-21ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆಯ ದರ ಶೇ.8.6ರಷ್ಟುಋುಣಾತ್ಮಕ ಬೆಳವಣಿಗೆ ದಾಖಲಿಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. 2ನೇ ತ್ರೈಮಾಸಿಕದ ಅಧಿಕೃತ ಹಣಕಾಸು ವರದಿ ನ.27ರಂದು ಬಿಡುಗಡೆಯಾಗಲಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆ ಶೇ.24ರಷ್ಟುಋುಣಾತ್ಮಕ ಬೆಳವಣಿಗೆ ಹೊಂದಿತ್ತು. ಈಗ 2ನೇ ತ್ರೈಮಾಸಿಕದಲ್ಲೂ ಋುಣಾತ್ಮಕ ಬೆಳವಣಿಗೆ ದಾಖಲಿಸುವ ಸಾಧ್ಯತೆಯಿದ್ದು, ಆಗ ಭಾರತ ಅಧಿಕೃತವಾಗಿ ಆರ್ಥಿಕ ಹಿಂಜರಿಕೆ ಅನುಭವಿಸುತ್ತಿರುವ ರಾಷ್ಟ್ರ ಎಂದು ಗುರುತಿಸಲ್ಪಡಲಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಯಾವುದೇ ದೇಶದ ಆರ್ಥಿಕತೆ ಸತತ ಎರಡು ತ್ರೈಮಾಸಿಕಗಳ ಅವಧಿಯಲ್ಲಿ ಋುಣಾತ್ಮಕ ಪ್ರಗತಿ ದಾಖಲಿಸಿದರೆ ಅದನ್ನು ಆರ್ಥಿಕ ಹಿಂಜರಿಕೆ ಎಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಹಿಂದೆಂದೂ ಇದು ಸಂಭವಿಸಿರಲಿಲ್ಲ.
‘ಭಾರತವು ಇತಿಹಾಸದಲ್ಲೇ ಮೊದಲ ಬಾರಿ 2020-21ನೇ ಸಾಲಿನ ಮೊದಲರ್ಧದಲ್ಲಿ ತಾಂತ್ರಿಕವಾಗಿ ಆರ್ಥಿಕ ಹಿಂಜರಿಕೆಯ ಘಟ್ಟಪ್ರವೇಶಿಸಿದೆ’ ಎಂದು ನೌಕಾಸ್ಟ್ ವರದಿಯಲ್ಲಿ ಆರ್‌ಬಿಐ ತಜ್ಞರು ಬರೆದಿದ್ದಾರೆ ಎಂದು ಆರ್‌ಬಿಐ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಆದರೆ, ಸದ್ಯ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಇದೇ ಮಾದರಿಯ ಚೇತರಿಕೆ ಮುಂದುವರೆದರೆ ಅಕ್ಟೋಬರ್-ನವೆಂಬರ್ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಧನಾತ್ಮಕ ಪ್ರಗತಿಗೆ ತಿರುಗಲಿದೆ. ಆಗ, ಕಳೆದ ತಿಂಗಳು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ವರದಿ ಬಿಡುಗಡೆಯ ವೇಳೆ ಹೇಳಿದ್ದಕ್ಕಿಂತ ಬೇಗನೆ ದೇಶದ ಆರ್ಥಿಕತೆ ಚೇತರಿಸಿಕೊಂಡಂತಾಗುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಆರ್ಥಿಕ ಹಿಂಜರಿಕೆ ಏಕೆ?
ಲಾಕ್‌ಡೌನ್ ವೇಳೆ ನಷ್ಟದ ಭೀತಿಯಿಂದ ಕಂಪನಿಗಳೆಲ್ಲ ತಮ್ಮ ವೆಚ್ಚ ಕಡಿಮೆ ಮಾಡಿ, ನೌಕರರನ್ನು ವಜಾಗೊಳಿಸಿ, ಕಾರ್ಯನಿರ್ವಹಣಾ ವೆಚ್ಚದಲ್ಲಿ ನಷ್ಟವಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದವು. ಈಗ ಕಂಪನಿಗಳು ಲಾಭಕ್ಕೆ ತಿರುಗಿದ್ದರೂ ಅವು ಮಾಡುತ್ತಿರುವ ವೆಚ್ಚ ಕಡಿಮೆಯಾಗಿರುವುದರಿಂದ ದೇಶದ ಆರ್ಥಿಕತೆಯಲ್ಲಿ ಹಣ ಹರಿಯುತ್ತಿಲ್ಲ. ಇನ್ನು, ಜನಸಾಮಾನ್ಯರು ಭವಿಷ್ಯದ ಬಗೆಗಿನ ಭೀತಿಯಿಂದ ಬ್ಯಾಂಕ್‌ನ ನಿಶ್ಚಿತ ಠೇವಣಿಗಳಲ್ಲಿ ಅತಿಹೆಚ್ಚು ಹಣ ಸಂಗ್ರಹಿಸಿಡುತ್ತಿದ್ದಾರೆ. ದೇಶದ ಜಿಡಿಪಿಯಲ್ಲಿ ಕಳೆದ ವರ್ಷದ ಈ ಅವಧಿಯಲ್ಲಿ ಮನೆವಾರು ಹಣಕಾಸು ಉಳಿತಾಯದ ಪ್ರಮಾಣ ಶೇ.7.9 ಇದ್ದಿದ್ದು ಈಗ ಶೇ.21.4ಕ್ಕೆ ಏರಿಕೆಯಾಗಿದೆ. ಜನರು ಹಣ ಖರ್ಚು ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚು ಹಣ ಚಲಾವಣೆಯಾಗುತ್ತಿಲ್ಲ. ಹೀಗಾಗಿ ಆರ್ಥಿಕತೆ ಹಿಂಜರಿಕೆ ಅನುಭವಿಸುತ್ತಿದೆ.
ಭಾರತದ ಆರ್ಥಿಕತೆ ತನ್ನ ಇತಿಹಾಸದಲ್ಲೇ ಮೊದಲ ಬಾರಿ ಹಿಂಜರಿಕೆಯನ್ನು ಪ್ರವೇಶಿಸಿದೆ. ಪ್ರಧಾನಿ ಮೋದಿ ಕೈಗೊಂಡ ಕ್ರಮಗಳು ಭಾರತದ ಶಕ್ತಿಯನ್ನೇ ಈ ದೇಶದ ದೌರ್ಬಲ್ಯವನ್ನಾಗಿ ಪರಿವರ್ತನೆ ಮಾಡಿವೆ.
- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ