ಇಂದಿನಿಂದ 2 ರೀತಿಯ ಆದಾಯ ತೆರಿಗೆ, 10 ಬ್ಯಾಂಕ್‌ಗಳು ವಿಲೀನ!

By Kannadaprabha News  |  First Published Apr 1, 2020, 7:05 AM IST

ಇಂದಿನಿಂದ 2 ರೀತಿಯ ಆದಾಯ ತೆರಿಗೆ, 10 ಬ್ಯಾಂಕ್‌ಗಳು ವಿಲೀನ| ಕೇಂದ್ರ ಬಜೆಟ್‌ ಘೋಷಣೆಗಳು ಜಾರಿ| ಭಾರತ್‌-6 ಇಂಧನ ವಿತರಣೆ| ಕೆಲ ವಸ್ತು ಅಗ್ಗ, ಕೆಲವು ದುಬಾರಿ| ಪೆಟ್ರೋಲ್‌, ಡೀಸೆಲ್‌ ದರ 1.6 ರು. ಹೆಚ್ಚಳ


ನವದೆಹಲಿ(ಏ.01): ಇಡೀ ದೇಶ ಕೊರೋನಾದಿಂದ ತತ್ತರಿಸಿರುವ ಹೊತ್ತಿನಲ್ಲೇ, ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಹಲವು ಕ್ರಮಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಈ ವರ್ಷದಿಂದ ಆದಾಯ ತೆರಿಗೆ ಪಾವತಿಸುವ ಪದ್ಧತಿಯೂ ಸೇರಿದಂತೆ ಕೆಲ ಮಹತ್ವದ ಬದಲಾವಣೆಗಳಾಗಿವೆ. ಜನ ಸಾಮಾನ್ಯರ ಮೇಲೆ ಪ್ರತ್ಯಕ್ಷ, ಪರೋಕ್ಷವಾಗಿ ಪರಿಣಾಮ ಬೀರುವ ಹಲವು ಅಂಶಗಳು ಬುಧವಾರದಿಂದ ದೇಶಾದ್ಯಂತ ಜಾರಿಗೆ ಬರಲಿವೆ. ಅವು ಇಂತಿವೆ.

2 ರೀತಿಯ ಆದಾಯ ತೆರಿಗೆ

Latest Videos

undefined

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಹಣಕಾಸು ವರ್ಷದಿಂದ ಎರಡು ರೀತಿಯ ಆದಾಯ ತೆರಿಗೆ ಪದ್ಧತಿ ಜಾರಿಗೆ ಬರುತ್ತಿದೆ. ವಾಣಿಜ್ಯ ಆದಾಯವಿಲ್ಲದ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಎರಡು ಆಯ್ಕೆ ನೀಡಲಾಗಿದ್ದು, ಅವರು ಹಳೆಯ ಆದಾಯ ತೆರಿಗೆ ಪಾವತಿ ಪದ್ಧತಿಯಲ್ಲೇ ಮುಂದುವರೆದು ವಿವಿಧ ತೆರಿಗೆ ವಿನಾಯ್ತಿಗಳನ್ನು ಪಡೆದುಕೊಂಡು ತೆರಿಗೆ ಪಾವತಿಸಬಹುದು ಅಥವಾ ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡು ಯಾವುದೇ ವಿನಾಯ್ತಿ ಪಡೆದುಕೊಳ್ಳದೆ ಕಡಿಮೆ ಆದಾಯ ತೆರಿಗೆ ದರದನ್ವಯ ತೆರಿಗೆ ಪಾವತಿಸಬಹುದು.

ಬ್ಯಾಂಕ್‌ಗಳ ವಿಲೀನ

10 ರಾಷ್ಟ್ರೀಕೃತ ಬ್ಯಾಂಕ್‌ಗಳು ಏ.1ರಿಂದ 4 ಬ್ಯಾಂಕ್‌ಗಳಲ್ಲಿ ವಿಲೀನಗೊಳ್ಳಲಿವೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಹಾಗೂ ಯುನೈಟೆಡ್‌ ಇಂಡಿಯಾ ಬ್ಯಾಂಕ್‌, ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್‌ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌ನಲ್ಲಿ ಅಲಹಾಬಾದ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಆಂಧ್ರ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ಗಳು ವಿಲೀನವಾಗಲಿವೆ.

ಭಾರತ್‌ 6 ಗುಣಮಟ್ಟದ ಇಂಧನ

ವಾಯುಮಾಲಿನ್ಯ ಇಳಿಕೆ ಮಾಡಲು ದೇಶವ್ಯಾಪಿ ಯುರೋ 6 ದರ್ಜೆಗೆ ಸಮನಾದ ಭಾರತ್‌ 6 ದರ್ಜೆಯ ಇಂಧನ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಅದು ಏ.1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಇದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಅಲ್ಪ ಏರಿಕೆ ಆಗುವ ಸಾಧ್ಯತೆ ಇದೆ.

ಈ ಬಾರಿ ಬಜೆಟ್‌ನಲ್ಲಿ ಏನೇನಾಯ್ತು? ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಕೈಲಿರುವ ಡಿವಿಡೆಂಡ್‌ಗೆ ತೆರಿಗೆ

ಇಲ್ಲಿಯವರೆಗೆ ಮ್ಯೂಚುವಲ್‌ ಫಂಡ್‌ಗಳು ಹಾಗೂ ದೇಶೀಯ ಕಂಪನಿಗಳು ಜನರಿಗೆ ಪಾವತಿಸುವ ಲಾಭಾಂಶಕ್ಕೆ ಡಿವಿಡೆಂಡ್‌ ಡಿಸ್ಟ್ರಿಬ್ಯೂಷನ್‌ ಟ್ಯಾಕ್ಸ್‌ (ಡಿಡಿಟಿ) ವಿಧಿಸಲಾಗುತ್ತಿತ್ತು. 10 ಲಕ್ಷ ರು. ವರೆಗಿನ ಡಿವಿಡೆಂಡ್‌ಗೆ ತೆರಿಗೆ ವಿನಾಯ್ತಿಯೂ ಇತ್ತು. ಆದರೆ, ಏ.1ರಿಂದ ಮ್ಯೂಚುವಲ್‌ ಫಂಡ್‌ ಹಾಗೂ ದೇಶೀಯ ಕಂಪನಿಗಳಿಂದ ಜನರು ಸ್ವೀಕರಿಸುವ ಲಾಭಾಂಶವನ್ನು ಅವರ ಆದಾಯವೆಂದು ಪರಿಗಣಿಸಿ, ಯಾವ ಆದಾಯ ತೆರಿಗೆ ದರ ಅವರಿಗೆ ಅನ್ವಯಿಸುತ್ತದೆಯೋ ಅದರಂತೆ ತೆರಿಗೆ ವಿಧಿಸಲಾಗುತ್ತದೆ. ಜೊತೆಗೆ, ಒಂದು ವರ್ಷದ ಅವಧಿಯಲ್ಲಿ ನೀವು ಸ್ವೀಕರಿಸುವ ಒಟ್ಟು ಡಿವಿಡೆಂಡ್‌ ಮೊತ್ತ 5000 ರು.ಗಿಂತ ಹೆಚ್ಚಿದ್ದರೆ ಅದಕ್ಕೆ ಶೇ.10ರಷ್ಟುಟಿಡಿಎಸ್‌ ವಿಧಿಸಲಾಗುತ್ತದೆ.

ಎನ್‌ಆರ್‌ಐ ಸ್ಥಾನಮಾನದಲ್ಲಿ ಬದಲಾವಣೆ

ಭಾರತಕ್ಕೆ ಬರುವ ಅನಿವಾಸಿ ಭಾರತೀಯ (ಎನ್‌ಆರ್‌ಐ)ರನ್ನು ಇನ್ನುಮುಂದೆ ‘ನಿವಾಸಿ, ಆದರೆ ಸಾಮಾನ್ಯ ನಿವಾಸಿ ಅಲ್ಲ’ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಅವರ ಆದಾಯ ವಾರ್ಷಿಕ 15 ಲಕ್ಷ ರು. ಮೀರಿದರೆ ಮತ್ತು ಅವರು 120 ದಿನ ಭಾರತದಲ್ಲಿ ನೆಲೆಸಿದ್ದರೆ ಹಾಗೂ ಕಳೆದ ನಾಲ್ಕು ಹಣಕಾಸು ವರ್ಷದಲ್ಲಿ ಒಟ್ಟು 365 ದಿನಕ್ಕಿಂತ ಹೆಚ್ಚು ಕಾಲ ಇಲ್ಲಿ ನೆಲೆಸಿದ್ದರೆ ಹೀಗೆ ಪರಿಗಣಿಸಲಾಗುತ್ತದೆ. ಆಗ ಅವರಿಗೆ ಇಲ್ಲಿನ ಆದಾಯ ತೆರಿಗೆ ಅನ್ವಯವಾಗುತ್ತದೆ. ಅವರ ಆದಾಯ 15 ಲಕ್ಷ ರು. ಮೀರದೆ ಇದ್ದರೆ ಹಾಗೂ ಅವರು 181 ದಿನಕ್ಕಿಂತ ಹೆಚ್ಚು ಕಾಲ ಭಾರತದಲ್ಲಿ ನೆಲೆಸದಿದ್ದರೆ ಅವರನ್ನು ಹಿಂದಿನಂತೆ ಎನ್‌ಆರ್‌ಐ ಎಂದೇ ಪರಿಗಣಿಸಲಾಗುತ್ತದೆ.

ಗೃಹಸಾಲದ ಮೇಲಿನ ವಿನಾಯ್ತಿ ಮುಂದುವರಿಕೆ

45 ಲಕ್ಷ ರು.ಗಿಂತ ಕಡಿಮೆ ಮೌಲ್ಯದ ಮನೆ ಖರೀದಿಸಲು ಗೃಹಸಾಲ ಮಾಡಿದ್ದರೆ ಆ ಸಾಲಕ್ಕೆ ವಿಧಿಸಲಾಗುವ ಬಡ್ಡಿಯಲ್ಲಿ 1.5 ಲಕ್ಷ ರು.ಗೆ ನೀಡಿರುವ ತೆರಿಗೆ ವಿನಾಯ್ತಿಯನ್ನು ಈ ವರ್ಷವೂ ಮುಂದುವರೆಸಲಾಗಿದೆ. ಇದು ಮಾ.31, 2021ರೊಳಗೆ ಖರೀದಿಸುವ ಕೈಗೆಟಕುವ ದರದ ಮನೆಗಳಿಗೆ ಅನ್ವಯಿಸುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಇಇಎ ಅಡಿ ತೆರಿಗೆ ವಿನಾಯ್ತಿ ಲಭಿಸುತ್ತದೆ.

ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ನಗದು ಪಾವತಿ ನಿಷಿದ್ಧ!

ಸ್ಟಾರ್ಟಪ್‌ ಇಸಾಪ್‌ ಷೇರುಗಳಿಗೆ ಟಿಡಿಎಸ್‌ ಇಲ್ಲ

ಸ್ಟಾರ್ಟಪ್‌ ಕಂಪನಿಗಳು ತಮ್ಮ ನೌಕರರಿಗೆ ಎಂಪ್ಲಾಯೀ ಸ್ಟಾಕ್‌ ಓನರ್‌ಶಿಪ್‌ ಪ್ಲಾನ್‌ (ಇಸಾಪ್‌) ಅಡಿ ನೀಡುವ ಷೇರುಗಳಿಗೆ ಈಗಲೇ ಟಿಡಿಎಸ್‌ ಕಡಿತ ಮಾಡಬೇಕಿಲ್ಲ. ನೌಕರರು ಕಂಪನಿ ತೊರೆಯುವಾಗ ಅಥವಾ ಷೇರು ಮಾರಾಟ ಮಾಡಿದಾಗ ಅಥವಾ ಷೇರು ನೀಡಿದ 5ನೇ ವರ್ಷ ಮುಗಿಯುವುದರೊಳಗೆ ಒಟ್ಟಿಗೇ ಟಿಡಿಎಸ್‌ ಕಡಿತ ಮಾಡಬಹುದು.

ಇಪಿಎಫ್‌, ಪಿಂಚಣಿ, ಎನ್‌ಪಿಎಸ್‌ಗೆ ತೆರಿಗೆ

ಒಬ್ಬ ನೌಕರನಿಗೆ ಕಂಪನಿಯು ಪಾವತಿಸುವ ಇಪಿಎಫ್‌, ಎನ್‌ಪಿಎಸ್‌ ಹಾಗೂ ಪಿಂಚಣಿ ನಿಧಿಯ ಒಟ್ಟು ಮೊತ್ತ ಒಂದು ವರ್ಷದಲ್ಲಿ 7.5 ಲಕ್ಷ ರು. ಮೀರಿದರೆ ಈ ವರ್ಷದಿಂದ ಅದಕ್ಕೆ ನೌಕರನಿಗೆ ತೆರಿಗೆ ವಿಧಿಸಲಾಗುತ್ತದೆ. ಇಲ್ಲಿಯವರೆಗೆ ಇದಕ್ಕೆ ತೆರಿಗೆ ಇರಲಿಲ್ಲ. ಇದನ್ನು ನೌಕರನ ಆದಾಯವೆಂದು ಪರಿಗಣಿಸಿ, ಅದಕ್ಕೆ ಅನ್ವಯಿಸುವ ತೆರಿಗೆ ದರದಡಿ ತೆರಿಗೆ ವಿಧಿಸಲಾಗುತ್ತದೆ.

ಬಡ್ಡಿದರ ಇಳಿಕೆ

ಕೊರೋನಾ ಪರಿಣಾಮ ಇಳಿಸಲು ಆರ್‌ಬಿಐ ಇತ್ತೀಚೆಗೆ ರೆಪೋ ದರವನ್ನು ಇಳಿಕೆ ಮಾಡಿತ್ತು. ಇದರ ಪರಿಣಾಮ ಸಾಲದ ಮೇಲಿನ ಬಡ್ಡಿ ಮತ್ತು ಠೇವಣಿಗಳ ಮೇಲಿನ ಬಡ್ಡಿದರಗಳು ಶೇ 0.75ರಷ್ಟು ಇಳಿಸಲು ಬ್ಯಾಂಕ್‌ಗಳು ಈಗಾಗಲೇ ನಿರ್ಧರಿಸಿವೆ. ಈ ಇಳಿಕೆ ಏ.1ರ ಬುಧವಾರದಿಂದ ಜಾರಿಗೆ ಬರಲಿದೆ.

ನೋಟ್ ಬ್ಯಾನ್ ವೇಳೆ ಗೋಲ್ಮಾಲ್ ಮಾಡಿದವರಿಗೆ ಕ್ಷಮಾದಾನ: ಕೇಂದ್ರದ ಸ್ಕೀಂ!

ಆಡಿಟ್‌ ಮಾಡಿಸಬೇಕಿಲ್ಲ

ವಾರ್ಷಿಕ 1 ಕೋಟಿ ರು.ಗಿಂತ ಹೆಚ್ಚು ವಹಿವಾಟು ನಡೆಸುವ ಸಣ್ಣ ಕಂಪನಿಗಳು ಹಾಗೂ ವ್ಯಾಪಾರಸ್ಥರು ಪ್ರತಿ ವರ್ಷ ತಮ್ಮ ವ್ಯವಹಾರವನ್ನು ಆಡಿಟ್‌ ಮಾಡಿಸಬೇಕಿತ್ತು. ಈ ಬಾರಿಯ ಬಜೆಟ್‌ನಲ್ಲಿ ಆ ಮಿತಿಯನ್ನು 5 ಕೋಟಿ ರು.ಗೆ ಹೆಚ್ಚಿಸಲಾಗಿದೆ. ಅದು ಏ.1ರಿಂದ ಜಾರಿಗೆ ಬರಲಿದೆ. ಅದರಂತೆ ಸಣ್ಣ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಆಡಿಟ್‌ ತಲೆನೋವಿನಿಂದ ಮುಕ್ತಿ ಸಿಗಲಿದೆ.

ಯಾವುದು ದುಬಾರಿ?

ವಿದೇಶದಿಂದ ಆಮದು ಮಾಡಿಕೊಳ್ಳುವ ಕೆಲ ವಸ್ತುಗಳ ಮೇಲಿನ ಸೀಮಾ ಸುಂಕವನ್ನು ಬಜೆಟ್‌ನಲ್ಲಿ ಏರಿಕೆ (ಬೇರೆ ಬೇರೆ ದರ) ಮಾಡಲಾಗಿದೆ. ಅದು ಏ.1ರಿಂದ ಜಾರಿಗೆ ಬರಲಿದ್ದು, ಆ ವಸ್ತುಗಳು ದುಬಾರಿಯಾಗಲಿವೆ.

- ಗೇಮ್ಸ್‌, ಪಜಲ್ಸ್‌, ಗೊಂಬೆ, ಆಟಿಕೆ, ತ್ರಿಚಕ್ರ ಸೈಕಲ್‌

- ವಿದೇಶ ಪಾದರಕ್ಷೆ

- ಪೀಠೋಪಕರಣಗಳು

- ಲೈಟಿಂಗ್ಸ್‌ ಸೆಟ್‌

- ವಿದೇಶಿ ಎಲೆಕ್ಟ್ರಿಕ್‌ ವಾಹನಗಳು

- ವಾಲ್‌ ಫ್ಯಾನ್‌

- ಚೀನಾ ಸೆರಾಮಿಕ್ಸ್‌, ಕಿಚನ್‌ ವೇರ್‌

ಯಾವುದು ಅಗ್ಗ?

- ಬಟ್ಟೆ

- ನ್ಯೂಸ್‌ ಪ್ರಿಂಟ್‌

- ಮೊಬೈಲ್‌ ಬಿಡಿಭಾಗಗಳು

- ದೇಶೀ ಎಲೆಕ್ಟ್ರಿಕ್‌ ವಾಹನಗಳು

- ಕೆಲ ವಿಧದ ಮದ್ಯ

- ಸಕ್ಕರೆ

ಪೆಟ್ರೋಲ್‌, ಡೀಸೆಲ್‌ ದರ 1.6 ರು. ಹೆಚ್ಚಳ

ಕಳೆದ ತಿಂಗಳು ಮುಂಗಡಪತ್ರದಲ್ಲಿ ರಾಜ್ಯ ಸರ್ಕಾರ ಘೋಷಿಸಿದಂತೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಏ.1ರ ಬುಧವಾರದಿಂದ ಜಾರಿಗೆ ಬರುತ್ತಿದೆ. ಪೆಟ್ರೋಲ್‌ ಮೇಲಿನ ತೆರಿಗೆ ಶೇ.32ರಿಂದ ಶೇ.35ಕ್ಕೆ ಹೆಚ್ಚಿದ್ದು, ಇದರಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 1.6 ರು.ನಷ್ಟುಹೆಚ್ಚಳವಾಗಲಿದೆ. ಡೀಸೆಲ್‌ ತೆರಿಗೆ ಶೇ.21ರಿಂದ ಶೇ.24ಕ್ಕೆ ಹೆಚ್ಚಿದ್ದರಿಂದಾಗಿ ಲೀಟರ್‌ ಡೀಸೆಲ್‌ ಬೆಲೆ 1.59 ರು.ನಷ್ಟುಏರಿಕೆ ಆಗಲಿದೆ.

click me!