ಬಾಕಿ ಉಳಿದಿದ್ದ 514ರೂ. ಗ್ಯಾಸ್ ಬಿಲ್ ಪುಣೆ ಮೂಲದ ವೃದ್ಧರೊಬ್ಬರು 16 ಲಕ್ಷ ರೂ. ಕಳೆದುಕೊಳ್ಳಲು ಕಾರಣವಾಗಿದೆ. ಆನ್ ಲೈನ್ ವಂಚಕರು ಈಗ ಗ್ಯಾಸ್ ಏಜೆನ್ಸಿ ಹೆಸರಿನಲ್ಲಿ ಕೂಡ ವಂಚಿಸಲು ಪ್ರಾರಂಭಿಸಿದ್ದು, ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
ಮುಂಬೈ (ಏ.10): ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ನಾನಾ ರೂಪದಲ್ಲಿ ನಡೆಯುತ್ತಿದೆ. ಆನ್ ಲೈನ್ ವಂಚಕರು ಅಮಾಯಕರ ಖಾತೆಗಳಿಗೆ ಕನ್ನಾ ಹಾಕುತ್ತಿದ್ದಾರೆ. ಭಯಾನಕ ಆನ್ ಲೈನ್ ವಂಚನೆಯಲ್ಲಿಒಬ್ಬ ವ್ಯಕ್ತಿ 514ರೂ. ಅನಿಲ ಬಿಲ್ ಬಾಕಿ ಉಳಿಸಿಕೊಂಡಿದ್ದೇ 16 ಲಕ್ಷ ರೂಪಾಯಿ ಕಳೆದುಕೊಳ್ಳಲು ಕಾರಣವಾಗಿದೆ. ಡಿಜಿಟಲ್ ವಹಿವಾಟು ನಡೆಸುವ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಆನ್ ಲೈನ್ ವಂಚಕರು ಮಾತ್ರ ದಿನೇದಿನೆ ಹೊಸ ವಿಧಾನಗಳ ಮೂಲಕ ಹಣ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಪುಣೆ ಮೂಲದ ಅಮಾಯಕ ಹಿರಿಯ ವ್ಯಕ್ತಿಯೊಬ್ಬರು ಆನ್ ಲೈನ್ ವಂಚಕರ ಬಲೆಗೆ ಬಿದ್ದು, 16 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಪುಣೆ ಮೂಲದ 66 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ತಾನು ಆನ್ ಲೈನ್ ವಂಚನೆಗೊಳಗಾಗುತ್ತಿದ್ದೇನೆ ಎಂಬ ವಿಚಾರದ ಅರಿವೇ ಇಲ್ಲದೆ 16 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ವ್ಯಕ್ತಿ 514 ರೂ. ಗ್ಯಾಸ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಇದನ್ನೇ ದಾಳವಾಗಿಸಿಕೊಂಡು ಆನ್ ಲೈನ್ ವಂಚಕರು ಇವರ ಖಾತೆಗೆ ಕನ್ನಾ ಹಾಕಿದ್ದಾರೆ.
ಆನ್ ಲೈನ್ ನಲ್ಲಿ ಹಾಳಾದ ಹಾಲು ಹಿಂದಿರುಗಿಸಲು ಹೋಗಿ 77,000ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ
514 ರೂ. ಗ್ಯಾಸ್ ಬಿಲ್ ಬಾಕಿ ಉಳಿಸಿಕೊಂಡಿರುವ ವ್ಯಕ್ತಿಗೆ ಮಹಾರಾಷ್ಟ್ರ ನೈಸರ್ಗಿಕ ಅನಿಲ ನಿಗಮದ (MNGL) ಉದ್ಯೋಗಿಗಳ ಸೋಗಿನಲ್ಲಿ ವಂಚಕರು ವಂಚಿಸಿದ್ದಾರೆ. ವೃದ್ಧ ವ್ಯಕ್ತಿಯನ್ನು ಸಂಪರ್ಕಿಸಿದ ವಂಚಕರು ಬಾಕಿ ಬಿಲ್ ಪಾವತಿ ವಿಚಾರವನ್ನು ಪರಿಹರಿಸೋದಾಗಿ ತಿಳಿಸಿದ್ದಾರೆ. ತನ್ನ ಹೆಸರನ್ನು ರಾಹುಲ್ ಶರ್ಮಾ ಎಂದು ಪರಿಚಯಿಸಿಕೊಂಡ ವಂಚಕ, ತಾನು ಎಂಎನ್ ಜಿಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿರೋದಾಗಿ ತಿಳಿಸಿದ್ದಾನೆ. ಬಾಕಿ ಗ್ಯಾಸ್ ಬಿಲ್ ಅನ್ನು ತಕ್ಷಣವೇ ಪಾವತಿ ಮಾಡುವಂತೆ ಒತ್ತಾಯಿಸಿದ್ದಾನೆ. ಈ ವಿಚಾರವನ್ನು ಇಲ್ಲಿಗೆ ಕ್ಲೋಸ್ ಆಗುತ್ತದೆ ಎಂದು ಭಾವಿಸಿದ ವ್ಯಕ್ತಿ ಯಾವುದೇ ಮುಂದಾಲೋಚನೆ ಮಾಡದೆ ಇದಕ್ಕೆ ಒಪ್ಪಿಗೆ ನೀಡಿದ್ದಾರೆ.
ಅಗತ್ಯವಾದ ಎಲ್ಲ ವೈಯಕ್ತಿಕ ದಾಖಲೆಗಳನ್ನು ವಂಚಕನಿಗೆ ಈ ವ್ಯಕ್ತಿ ನೀಡಿದ್ದಾರೆ. ಆದರೆ, ಕೆಲವೇ ಸಮಯದಲ್ಲಿ ಅವರಿಗೆ ತಾನು ವಂಚನೆಗೊಳಗಾಗಿರೋದು ತಿಳಿದು ಬಂದಿದೆ. ವೃದ್ಧ ವ್ಯಕ್ತಿಯ ಹೆಸರಿನಲ್ಲಿ 16,22,310 ರೂ. ವೈಯಕ್ತಿಕ ಸಾಲಕ್ಕೆ ಬ್ಯಾಂಕ್ ಅನುಮೋದನೆ ನೀಡಿತ್ತು. ಆದರೆ, ಈ ವಿಚಾರ ಮಾತ್ರ ಅವರ ಗಮನಕ್ಕೆ ಬಂದಿರಲಿಲ್ಲ. ಈ ಸಾಲದಲ್ಲಿ 7,21,845ರೂ. ಅನ್ನು ವಂಚಕರು ಈಗಾಗಲೇ ವಿತ್ ಡ್ರಾ ಮಾಡಿದ್ದರು ಕೂಡ,
ವಂಚನೆಗೊಳಗಾಗಿರೋದು ತಿಳಿಯುತ್ತಿದ್ದಂತೆ ಆ ವ್ಯಕ್ತಿ ಸಮೀಪದ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ವಂಚಕರ ವಿರುದ್ಧ ಕಾನೂನು ಕ್ರಮವನ್ನು ಮುಂದುವರಿಸಲಾಗೋದು ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಆನ್ ಲೈನ್ ವಂಚನೆಗಳ ವಿರುದ್ಧ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದೆ. ಅಲ್ಲದೆ, ಇಂಥ ಪ್ರಕರಣಗಳ ವಿರುದ್ಧ ಜನರು ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಬೇಕಾದ ಅಗತ್ಯವನ್ನು ಕೂಡ ತಿಳಿಸಿದೆ. ಇನ್ನು ಅಪರಿಚಿತ ವ್ಯಕ್ತಿಗಳ ಜೊತೆಗೆ ಮೊಬೈಲ್ ನಲ್ಲಿ ಸಂವಹನ ನಡೆಸುವಾಗ ಹೆಚ್ಚಿನ ಎಚ್ಚರ ವಹಿಸೋದು ಅಗತ್ಯ.
ಸುಲಭವಾಗಿ ವರ್ಕ್ ಫ್ರಂ ಹೋಂ ಮಾಡಿ ಹಣ ಗಳಿಸ್ಬೋದೆಂದು ನಂಬ್ಕೊಂಡು 14 ಲಕ್ಷ ಕಳ್ಕೊಂಡ ಭೂಪ!
ಅಪರಿಚಿತರಿಗೆ ಹೆಸರು, ವಿಳಾಸ, ಆಧಾರ್ ಅಥವಾ ಪ್ಯಾನ್ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. ಇಂಥ ಯಾವುದೇ ಮಾಹಿತಿಗಳನ್ನು ಕೇಳಿದ್ರೆ ಸಂಬಂಧಪಟ್ಟ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಇನ್ನು ಯಾವುದೇ ಬ್ಯಾಂಕ್ ಗ್ರಾಹಕರ ಬಳಿ ಒಟಿಪಿ ಸೇರಿದಂತೆ ಗೌಪ್ಯ ಮಾಹಿತಿಗಳನ್ನು ಕೇಳೋದಿಲ್ಲ. ಯಾವುದೇ ಸಂಸ್ಥೆ ಅಥವಾ ಬ್ಯಾಂಕ್ ಹೆಸರಿನಲ್ಲಿ ಕರೆ ಬಂದ ತಕ್ಷಣ ಅದನ್ನು ನಂಬಿ ಅಗತ್ಯ ಮಾಹಿತಿಗಳನ್ನು ನೀಡಬೇಡಿ. ಇತ್ತೀಚಿನ ದಿನಗಳಲ್ಲಿ ಇಂಥ ವಿಧಾನಗಳನ್ನು ಬಳಸಿ ವಂಚಿಸೋರ ಸಂಖ್ಯೆ ಹೆಚ್ಚಿದೆ.