ಬೆಂಗಳೂರು ಮೂಲದ 'ಗುಡ್ ಗಮ್' ಎಂಬ ಪರಿಸರಸ್ನೇಹಿ ಚ್ಯೂಯಿಂಗ್ ಗಮ್ ಬ್ರ್ಯಾಂಡ್ ಶಾರ್ಕ್ ಟ್ಯಾಂಕ್ ಇಂಡಿಯಾ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ. ಅಲ್ಲದೆ, ತೀರ್ಪುಗಾರರಿಂದ 80 ಲಕ್ಷ ರೂ. ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
Business Desk:ಚ್ಯೂಯಿಂಗ್ ಗಮ್ ಬಾಯಲ್ಲಿಟ್ಟುಕೊಂಡು ಅಗೆಯೋದು ಖುಷಿಯ ಕೆಲಸವೇ. ಆದರೆ, ಹೊರಗೆಸೆದ ಮೇಲೆ ಅದು ಸೃಷ್ಟಿಸೋ ಆವಾಂತರ ಒಂದೆರಡಲ್ಲ. ಅದರಿಂದ ಪರಿಸರಕ್ಕೂ ಹಾನಿ. ಹೀಗಿರುವಾಗ ಬೆಂಗಳೂರು ಮೂಲದ ಗುಡ್ ಗಮ್ ಚ್ಯೂಯಿಂಗ್ ಗಮ್ ನಿಂದ ಸೃಷ್ಟಿಯಾಗುತ್ತಿರುವ ಈ ಸಮಸ್ಯೆ ತಪ್ಪಿಸಲು ಮುಂದಾಗಿದೆ. ಈ ಸಂಸ್ಥೆ ಶೇ.100ರಷ್ಟು ನೈಸರ್ಗಿಕ, ಪ್ಲಾಸ್ಟಿಕ್ ಮುಕ್ತ ಚ್ಯೂಯಿಂಗ್ ಗಮ್ ಉತ್ಪಾದಿಸುತ್ತಿದೆ. ಮಯಾಂಕ್ ಬಿ. ನಗೋರಿ ಹಾಗೂ ಭುವನ್ ನಗೋರಿ 'ಗುಡ್ ಗಮ್' ಸಂಸ್ಥೆ ಸ್ಥಾಪಕರು. ಈ ಸಂಸ್ಥೆಯ ವಿನೂತನ ಆಲೋಚನೆ ಇತ್ತೀಚೆಗೆ ಜನಪ್ರಿಯ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾದ ಮೂರನೇ ಆವೃತ್ತಿಯ ಹೂಡಿಕೆದಾರರ ಗಮನ ಸೆಳೆದಿದೆ. ನಗೋರಿ ಸಹೋದರರು ಆಹಾರ ಕೈಗಾರಿಕೆ ಹಾಗೂ ಪ್ಲಾಸ್ಟಿಕ್ ಜಾಗೃತಿ ಕ್ಷೇತ್ರದಲ್ಲಿ ವಿಶೇಷ ಅನುಭವ ಹೊಂದಿದ್ದು, 2022ರಲ್ಲಿ 'ಗುಡ್ ಗಮ್' ಪ್ರಾರಂಭಿಸಿದರು. ಆಹಾರ ಹಾಗೂ ತಂಪು ಪಾನೀಯಗಳ ಮಾರಾಟದಲ್ಲಿ ಅನುಭವ ಹೊಂದಿದ್ದ ಮಯಾಂಕ್, ಚ್ಯೂಯಿಂಗ್ ಗಮ್ ಮಾರುಕಟ್ಟೆಯಲ್ಲಿ ಸಾಕಷ್ಟು ಅವಕಾಶಗಳಿರೋದನ್ನು ಗಮನಿಸಿದರು. ಹೀಗಾಗಿ ಚ್ಯೂಯಿಂಗ್ ಗಮ್ ಉತ್ಪಾದನಾ ಸಂಸ್ಥೆ 'ಗುಡ್ ಗಮ್' ಪ್ರಾರಂಭಿಸಿದರು.
'ಶಾಪ್ ಗಳಲ್ಲಿನ ಬಿಲ್ಲಿಂಗ್ ಕೌಂಟರ್ ನಮ್ಮ ಗಮ್ ನತ್ತ ಗ್ರಾಹಕರ ನೋಟ ಸೆಳೆಯಲು ಹಾಗೂ ಮಾರಾಟಕ್ಕೆ ಸೂಕ್ತ ತಾಣವಾಗಿ ಕಾಣಿಸಿತು' ಎನ್ನುತ್ತಾರೆ ಮಯಾಂಕ್. ಸಸ್ಯರಸ ಹಾಗೂ ನೈಸರ್ಗಿಕ ಸಿಹಿಯಂತಹ ನೈಸರ್ಗಿಕ ಸಾಮಗ್ರಿಗಳನ್ನು ಗುಡ್ ಗಮ್ ನಲ್ಲಿ ಬಳಸಲಾಗುತ್ತದೆ. ಈ ಮೂಲಕ ಇದು ಸಾಮಾನ್ಯವಾಗಿ ಸಾಂಪ್ರದಾಯಿಕ ಗಮ್ ಗಳಲ್ಲಿ ಬಳಸುವ ಅಪಾಯಕಾರಿ ವಸ್ತುಗಳಿಂದ ಸಂಪೂರ್ಣ ಮುಕ್ತವಾಗಿದೆ. ಇನ್ನು ಈ ಬ್ರ್ಯಾಂಡ್ ಅನೇಕ ವಿಧದ ಪರಿಮಳಗಳಲ್ಲಿ ಲಭ್ಯವಿದೆ. ಚಾರ್ಕೋಲ್, ಸ್ಟ್ರಾಬೇರಿ, ರಸ್ಪ್ ಬೆರಿ ಹಾಗೂ ಲಿಂಬೆ ಸ್ವಾದಗಳಲ್ಲಿ ಚ್ಯೂಯಿಂಗ್ ಗಮ್ ಲಭ್ಯವಿದೆ. ಇನ್ನು ಇದರ ಎಲ್ಲ ಉತ್ಪನ್ನಗಳು ಸಕ್ಕರೆಮುಕ್ತ, ಪ್ಲಾಸ್ಟಿಕ್ ಮುಕ್ತ ಹಾಗೂ ಜೈವಿಕವಾಗಿ ವಿಘಟನೆಗೊಳ್ಳುತ್ತದೆ ( biodegradable). ಹೀಗಾಗಿ ಈ ಉತ್ಪನ್ನ ಈ ಸಹೋದರರ 'ಮಾನವರಿಗೆ ಹಾಗೂ ಭೂಮಿಗೆ ಒಳಿತು ಮಾಡುವ' ಯೋಚನೆಗೆ ಸಮರ್ಪಕವಾಗಿ ಹೊಂದಾಣಿಕೆಯಾಗುತ್ತದೆ.
ಐಐಟಿ ಪದವಿ ಅರ್ಧಕ್ಕೆ ಬಿಟ್ಟುಉದ್ಯಮ ಪ್ರಾರಂಭಿಸಿ 3600 ಕೋಟಿ ಒಡೆಯನಾದ ಈತ,ಈಗ ಶಾರ್ಕ್ ಟ್ಯಾಂಕ್ ಇಂಡಿಯಾ ತೀರ್ಪುಗಾರ!
ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಈ ಸಹೋದರರು ಮಂಡಿಸಿದ ವಾದ ಈ ಬ್ರ್ಯಾಂಡ್ ನ ಪರಿಸರಸ್ನೇಹಿ ಗುಣಗಳನ್ನು ಎತ್ತಿ ಹಿಡಿದಿದೆ. ಹಾಗೆಯೇ ಶಾರ್ಕ್ ಟ್ಯಾಂಕ್ ಹೂಡಿಕೆದಾರರ ಗಮನ ಕೂಡ ಸೆಳೆದಿದೆ. ಶಾರ್ಕ್ ಟ್ಯಾಂಕ್ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಮಿತಾ ಥಾಪರ್ ರುಚಿ ಹಾಗೂ ಮರುಕಟ್ಟೆ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನದಲ್ಲಿ ಹೂಡಿಕೆ ಮಾಡೋ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆದರೆ, ಇತರ ಶಾರ್ಕ್ ತೀರ್ಪುಗಾರರು ಇದರಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಕೆಲವು ಹಂತದ ಮಾತುಕತೆ ಬಳಿಕ ಶೇ. 10ರಷ್ಟು ಈಕ್ವಿಟಿಗೆ 80 ಲಕ್ಷ ರೂ. ಒಪ್ಪಂದಕ್ಕೆ ಈ ಸಹೋದರರು ಒಪ್ಪಿಕೊಂಡರು. ಹಾಗೆಯೇ ಹೂಡಿಕೆ ಪೂರ್ಣಗೊಳ್ಳುವ ತನಕ ಶೇ. 4ರಷ್ಟು ರಾಯಲ್ಟಿಗೆ ಕೂಡ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಶಾರ್ಕ್ ಟ್ಯಾಂಕ್ ಅನುಭವ ನಗೋರಿ ಸಹೋದರರಿಗೆ ಹೂಡಿಕೆಗೆ ಇರೋ ಅವಕಾಶ ಮಾತ್ರವಲ್ಲ, ಬದಲಿಗೆ ಅದಕ್ಕಿಂತಲೂ ಹೆಚ್ಚಿನದು. 'ಶಾರ್ಕ್ ಟ್ಯಾಂಕ್ ನಮಗೆ ಜನಪ್ರಿಯತೆ ತಂದುಕೊಟ್ಟಿದೆ. ಹಾಗೆಯೇ ಸ್ನೇಹಿತರು ಹಾಗೂ ಗುರುಗಳಿಂದ ಮೆಚ್ಚುಗೆ ಕೂಡ ಸಿಗುವಂತೆ ಮಾಡಿದೆ ಎಂದು ಮಯಾಂಕ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಭಾರತದ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ನೆಟ್‌ವರ್ತ್ ಎಷ್ಟು?
ಇನ್ನು ಶಾರ್ಕ್ ಟ್ಯಾಂಕ್ ನಲ್ಲಿ ಭಾಗವಹಿಸಿದ ಬಳಿಕ 'ಗುಡ್ ಗಮ್' ಬ್ರ್ಯಾಂಡ್ ಆರ್ಡರ್ ಗಳು ಹಾಗೂ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ರಾತ್ರಿ ಬೆಳಗಾಗೋದರಲ್ಲಿ ಇದರ ಮಾರಾಟದಲ್ಲಿ 25ರಿಂದ 30 ಪಟ್ಟು ಏರಿಕೆ ಕಂಡುಬಂದಿದೆ.