ಸ್ವಂತ ಮನೆ ಕಟ್ಟುವ ಕನಸಿಗೆ ನೀರೆರೆಯುತ್ತೆ ಪಿಎಂ ಆವಾಸ್ ಯೋಜನೆ, ಸೌಲಭ್ಯ ಪಡೆಯಲು ಹೀಗೆ ಮಾಡಿ

By Suvarna News  |  First Published Sep 2, 2020, 5:05 PM IST

ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ನಗರಕ್ಕೆ ಬಂದವರಿಗೆ ನೆಲೆ ನಿರ್ಮಿಸಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ನೆರವು ನೀಡುತ್ತಿದೆ. ಬ್ಯಾಂಕ್ ಸಾಲದ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸೋ ಮೂಲಕ ಮಧ್ಯಮ ವರ್ಗದ ಕುಟುಂಬಗಳ ಮನೆ ಕನಸಿಗೆ ನೀರೆರೆಯುತ್ತಿದೆ.


ಸ್ವಂತ ಸೂರು ಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಆದ್ರೆ ಬೆಂಗಳೂರಿನಂತಹ ಮಹಾನಗರದಲ್ಲಿ ಫ್ಲ್ಯಾಟ್ ಖರೀದಿಸೋದು ಅಥವಾ ಮನೆ ಕಟ್ಟಿಕೊಳ್ಳೋದು ಅಷ್ಟು ಸುಲಭದ ಕೆಲಸವಲ್ಲ. ಭೂಮಿ ಬೆಲೆ ಗಗನಕ್ಕೇರಿರೋವಾಗ ಮನೆ ಕೊಂಡುಕೊಳ್ಳೋದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದುಬಾರಿ ಕನಸೇ ಸರಿ. ನಗರದ ಜೀವನಶೈಲಿಯಲ್ಲಿ ತಿಂಗಳ ವೇತನದಲ್ಲಿ ಒಂದಿಷ್ಟು ಉಳಿತಾಯ ಮಾಡೋದೆ ಕಷ್ಟ. ಹೀಗಾಗಿ ಮನೆ ಕೊಂಡುಕೊಳ್ಳೋರು ಬ್ಯಾಂಕ್‍ನಿಂದ ಸಾಲ ಮಾಡೋದು ಅನಿವಾರ್ಯ.

ಇಂಥವರ ಸಾಲದ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಜಾರಿಗೊಳಿಸಿದೆ. 2015ರಲ್ಲಿ ಪ್ರಾರಂಭಗೊಂಡ ಪಿಎಂಎವೈ-ಯು ಅಡಿಯಲ್ಲಿ ಮನೆ ಖರೀದಿಸಲು ಬಯಸೋ ಮಧ್ಯಮ ಆದಾಯ ವರ್ಗ (ಎಂಐಜಿ)ಕ್ಕೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಸೌಲಭ್ಯವನ್ನು 2017ನೇ ಸಾಲಿನ ತನಕ ನೀಡಲು ಸರ್ಕಾರ ಅನುಮೋದನೆ ನೀಡಿತ್ತು. ಆದ್ರೆ ನಂತರ ಈ ಯೋಜನೆಯನ್ನು 2020ರ ಮಾರ್ಚ್ ತನಕ ವಿಸ್ತರಿಸಲಾಯಿತು. ಆದ್ರೆ ಮತ್ತೆ ಪಿಎಂಎವೈ-ಯು ಯೋಜನೆಯನ್ನು 2021ರ ಮಾರ್ಚ್ ತನಕ ವಿಸ್ತರಿಸಿ ಮೇ 14ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 

Tap to resize

Latest Videos

ಜನ್‍ಧನ್: ಯೋಜನೆ ಒಂದು, ಪ್ರಯೋಜನ ಹಲವು

ಯಾರು ಈ ಯೋಜನೆ ಫಲಾನುಭವಿಯಾಗಬಹುದು?

ಆವಾಸ್ ಅಂದ್ರೆ ಮನೆ. ಈ ಯೋಜನೆಯ ಮೂಲ ಉದ್ದೇಶ ಎಲ್ಲರಿಗೂ ಸೂರು ಕಲ್ಪಿಸೋದು. ಹೀಗಾಗಿ ಯಾರಿಗೆ ವಾಸಿಸಲು ಸ್ವಂತ ಸೂರಿಲ್ಲವೋ ಅವರು ಈ ಯೋಜನೆಯ ಫಲಾನುಭವಿಯಾಗಬಹುದು. ಈಗಾಗಲೇ ಮನೆ ಹೊಂದಿರೋರು ಅಥವಾ ಅವರ ಕುಟುಂಬದ ಇತರ ಸದಸ್ಯರ ಹೆಸರಲ್ಲಿ ಮನೆಯಿದ್ದರೆ ಅಂಥವರಿಗೆ ಪಿಎಂಎವೈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.‘ಫಲಾನುಭವಿ ಕುಟುಂಬ ಗಟ್ಟಿಮುಟ್ಟಾದ ಮನೆ ಹೊಂದಿರಬಾರದು ಹಾಗೂ ಆ ಕುಟುಂಬ ಈ ತನಕ ಭಾರತ ಸರ್ಕಾರದ ಯಾವುದೇ ವಸತಿ ಯೋಜನೆಯ ಪ್ರಯೋಜನ ಪಡೆದಿರಬಾರದು’ ಎಂಬ ಸ್ಪಷ್ಟ ನಿಯಮವನ್ನು ಈ ಯೋಜನೆ ಹೊಂದಿದೆ.

ಇಲ್ಲಿ ಫಲಾನುಭವಿ ಕುಟುಂಬ ಅಂದ್ರೆ ಪತಿ,ಪತ್ನಿ,ಅವಿವಾಹಿತ ಹೆಣ್ಣು ಹಾಗೂ ಗಂಡು ಮಕ್ಕಳು. ಪಿಎಂಎವೈ ಯೋಜನೆ ದುರುಪಯೋಗ ತಡೆಯಲು ಫಲಾನುಭವಿಯ ಎಲ್ಲ ಕುಟುಂಬ ಸದಸ್ಯರ ಆಧಾರ್ ಸಂಖ್ಯೆಗಳನ್ನು ಬ್ಯಾಂಕ್‍ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸೋವಾಗ ಕಡ್ಡಾಯವಾಗಿ ನೀಡಬೇಕು ಎಂಬ ನಿಯಮ ರೂಪಿಸಲಾಗಿದೆ. ಹಾಗಾದ್ರೆ ತಂದೆ-ತಾಯಿ ಮನೆಯಲ್ಲಿ ವಾಸಿಸೋ ಉದ್ಯೋಗಸ್ಥ ವಿವಾಹಿತ ಮಗ ಅಥವಾ ಮಗಳಿಗೆ ಸ್ವಂತ ಸೂರು ಹೊಂದಲು ಈ ಯೋಜನೆ ಪ್ರಯೋಜನ ಸಿಗೋದಿಲ್ಲವೆ? ಖಂಡಿತಾ ಸಿಗುತ್ತದೆ. ಕುಟುಂಬದಲ್ಲಿ ವಯಸ್ಕ ದುಡಿಯುವ ಸದಸ್ಯ ವಿವಾಹಿತ ಅಥವಾ ಅವಿವಾಹಿತನಾಗಿದ್ದು, ಪೋಷಕರ ಮನೆಯಲ್ಲಿದ್ದು (ಸ್ವಂತ ಅಥವಾ ಬಾಡಿಗೆ), ಆತ ಅಥವಾ ಆಕೆ ಹೆಸರಲ್ಲಿ ಸ್ವಂತ ಮನೆ ಇಲ್ಲದಿದ್ರೆ ಪಿಎಂಎವೈ ಯೋಜನೆ ಪ್ರಯೋಜನ ಪಡೆಯಬಹುದು. ಪೋಷಕರ ಬಳಿ ಸ್ವಂತ ಮನೆಯಿದ್ದರೂ ಮದುವೆಯಾದ ಮಕ್ಕಳು ಈ ಯೋಜನೆಯಡಿಯಲ್ಲಿ ಸ್ವಂತ ಸೂರು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಆದ್ರೆ ಪತಿ, ಪತ್ನಿ ಅಥವಾ ಇಬ್ಬರೂ ಜಂಟಿ ಮಾಲೀಕತ್ವದಲ್ಲಿ ಕೇವಲ ಒಂದು ಮನೆ ಖರೀದಿಸಲಷ್ಟೇ ಪಿಎಂಎವೈ ಪ್ರಯೋಜನ ಪಡೆದುಕೊಳ್ಳಬಹುದು.

ನಿದ್ರಿಸುವವರಿಗಾಗಿ ಹುಡುಕುತ್ತಿದೆ ಬೆಂಗಳೂರಿನ ಕಂಪನಿ

ಮಧ್ಯಮ ವರ್ಗದ ಆದಾಯ ಮಿತಿ ಎಷ್ಟು?

ಪಿಎಂಎವೈ ಯೋಜನೆಯಲ್ಲಿ ಮಧ್ಯಮ ಆದಾಯ ವರ್ಗವನ್ನು ಎರಡು ಸ್ಲ್ಯಾಬ್‍ಗಳಾಗಿ ವಿಂಗಡಿಸಲಾಗಿದೆ. 6,00,001ರೂ. - 12,00,000ರೂ. ವಾರ್ಷಿಕ ಆದಾಯ ಹೊಂದಿರೋ ಕುಟುಂಬವನ್ನು ಮಧ್ಯಮ ಆದಾಯ ವರ್ಗ (ಎಂಐಜಿ)-1ಕ್ಕೆ ಸೇರಿಸಲಾಗಿದೆ. 12,00,001ರೂ.-18,00,000ರೂ. ವಾರ್ಷಿಕ ಆದಾಯ ಹೊಂದಿರೋ ಕುಟುಂಬವನ್ನು ಮಧ್ಯಮ ಆದಾಯ ವರ್ಗ (ಎಂಐಜಿ)-||ಕ್ಕೆ ಸೇರಿಸಲಾಗಿದೆ. ಅಂದ್ರೆ ಆರು ಲಕ್ಷದಿಂದ 18ಲಕ್ಷದ ತನಕ ವಾರ್ಷಿಕ ಆದಾಯ ಹೊಂದಿರೋರು ಗೃಹ ಸಾಲದ ಮೇಲೆ ಸಬ್ಸಿಡಿ ಪಡೆಯಲು ಅರ್ಹರಾಗಿದ್ದಾರೆ.

ಎಷ್ಟು ಸಬ್ಸಿಡಿ?

ಎಂಐಜಿ-| ವರ್ಗಕ್ಕೆ ಸೇರಿದ ವ್ಯಕ್ತಿಗೆ ಪಿಎಂಎವೈ-ಯು ಅಡಿಯಲ್ಲಿ 9ಲಕ್ಷ ರೂ. ತನಕ ಸಾಲದ ಮೇಲೆ ಶೇ.4ರಷ್ಟು ಹಾಗೂ ಎಂಐಜಿ-|| ವರ್ಗಕ್ಕೆ ಸೇರಿದ ವ್ಯಕ್ತಿಗೆ 12ಲಕ್ಷ ರೂ. ತನಕ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಇನ್ನು ಈ ಮೊತ್ತಕ್ಕಿಂತ ಹೆಚ್ಚಿನ ಸಾಲದ ಅವಶ್ಯಕತೆಯಿದ್ರೆ ಬ್ಯಾಂಕ್‍ಗಳು ನೀಡುತ್ತವೆಯಾದ್ರೂ ಸಬ್ಸಿಡಿಗೆ ನಿಗದಿಪಡಿಸಿರೋ ಸಾಲದ ಮಿತಿಯನ್ನು ಹೊರತುಪಡಿಸಿ ಉಳಿದ ಸಾಲದ ಮೊತ್ತಕ್ಕೆ ಯಾವುದೇ ಸಬ್ಡಿಡಿ ಇರೋದಿಲ್ಲ. ಹೀಗಾಗಿ ಬ್ಯಾಂಕ್ ನಿಗದಿಪಡಿಸಿರೋ ಬಡ್ಡಿದರವನ್ನೇ ಪಾವತಿಸಬೇಕಾಗುತ್ತದೆ.

ಉದಾಹರಣೆಗೆ ನೀವು 60ಲಕ್ಷ ರೂ. ಮೌಲ್ಯದ ಮನೆ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಎಂಐಜಿ-|| ವರ್ಗಕ್ಕೆ ಸೇರಿದ್ರೆ ನಿಮಗೆ 12ಲಕ್ಷ ರೂ. ತನಕದ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತೆ. 60 ಲಕ್ಷದ ಮನೆ ಖರೀದಿಸೋವಾಗ ಶೇ.20ರಷ್ಟು ಅಂದ್ರೆ 12ಲಕ್ಷ ರೂ. ಡೌನ್ ಪೇಮೆಂಟ್ ಮಾಡೋದು ಕಡ್ಡಾಯ. ಅಂದ್ರೆ ನಿಮ್ಗೆ ಬ್ಯಾಂಕ್‍ನಿಂದ 48ಲಕ್ಷ ರೂ. ಸಾಲ ಸಿಗುತ್ತೆ. ಈ 48 ಲಕ್ಷದಲ್ಲಿ 12 ಲಕ್ಷ ರೂ. ಸಾಲಕ್ಕೆ ಪಿಎಂಎವೈ ಅಡಿಯಲ್ಲಿ ಶೇ.3 ಸಬ್ಸಿಡಿ ಸಿಗುತ್ತೆ. ಹೀಗಾಗಿ ಬ್ಯಾಂಕ್ ನಿಗದಿಪಡಿಸಿರೋ ಗೃಹಸಾಲದ ಮೇಲಿನ ಬಡ್ಡಿದರ 36ಲಕ್ಷ ರೂ.ಗೆ ಮಾತ್ರ ಅನ್ವಯಿಸುತ್ತದೆ.

ಸಂಗಾತಿಯೊಂದಿಗೆ ಸರಿದೂಗಿಸು ಆರ್ಥಿಕ ಸಂಬಂಧ ಹೀಗಿರಲಿ

ಸಬ್ಸಿಡಿಯನ್ನು ಸಾಲಕ್ಕೆ ಹೊಂದಾಣಿಕೆ ಮಾಡೋದು ಹೇಗೆ?

ಬಡ್ಡಿ ಸಬ್ಸಿಡಿಯ ಪ್ರಸಕ್ತ ನಿವ್ವಳ ಮೌಲ್ಯ (ಎನ್‍ಪಿವಿ)ವನ್ನು ಲೆಕ್ಕಹಾಕಿ ಸಬ್ಸಿಡಿ ಮೊತ್ತ ನೀಡಲಾಗುತ್ತದೆ. ಸಬ್ಸಿಡಿಯ ಎನ್‍ಪಿವಿ ಲೆಕ್ಕಾಚಾರಕ್ಕೆ ಮಾಸಿಕ ಇಎಂಐಯ ಬಡ್ಡಿಯ ಭಾಗವನ್ನು ಪರಿಗಣಿಸಬೇಕಾಗುತ್ತದೆ. ಸಬ್ಸಿಡಿ ಹಣದಿಂದಾಗಿ ನಿಮ್ಮ ಒಟ್ಟು ಸಾಲದ ಮೊತ್ತದಲ್ಲಿ ಕಡಿತವಾಗುತ್ತದೆ. ಇದ್ರಿಂದ ಬಡ್ಡಿ ಹೊರೆಯೂ ತಗ್ಗುತ್ತದೆ. ಉದಾಹರಣೆಗೆ 12ಲಕ್ಷ ರೂ. ಗೃಹ ಸಾಲ ತೆಗೆದುಕೊಂಡಿದ್ರೆ ಶೇ.3 ಬಡ್ಡಿ ಸಬ್ಸಿಡಿಯ ಎನ್‍ಪಿವಿ 2.30ಲಕ್ಷ ರೂ. ಹೀಗಾಗಿ 12ಲಕ್ಷದಿಂದ 2.30ಲಕ್ಷ ರೂ. ಕಳೆದು 9.7ಲಕ್ಷ ರೂ.ಗೆ ಸಾಲಗಾರ ಇಎಂಐ ಪಾವತಿ ಮಾಡಬೇಕು. ಇದಕ್ಕೆ ಬ್ಯಾಂಕ್ ನಿಗದಿಪಡಿಸಿರೋ ಎಂಸಿಎಲ್‍ಆರ್ ಆಧಾರಿತ ಗೃಹಸಾಲದ ಬಡ್ಡಿದರ ಪಾವತಿಸಬೇಕಾಗುತ್ತದೆ. 

ಮಹಿಳೆಯರಿಗೆ ಲಾಭ

ಪಿಎಂಎವೈ ಮಹಿಳೆಗೆ ತನ್ನ ಪತಿ ಖರೀದಿಸೋ ಮನೆಯಲ್ಲಿಯೂ ಸಮಾನ ಹಕ್ಕು ಹೊಂದಿರಲು ಅವಕಾಶ ಕಲ್ಪಿಸಿದೆ. ಅಂದ್ರೆ ಈ ಯೋಜನೆ ಪ್ರಯೋಜನ ಪಡೆಯಬೇಕೆಂದ್ರೆ ಪತಿಯೇ ಆಸ್ತಿ ಖರೀದಿಸೋದಾದ್ರೂ ರಿಜಿಸ್ಟ್ರೇಷನ್ ಮಾಡೋವಾಗ ಪತ್ನಿಯನ್ನು ಕೂಡ ಪಾಲುದಾರಳನ್ನಾಗಿ ಮಾಡಿಕೊಳ್ಳೋದು ಕಡ್ಡಾಯ. ಉದ್ಯೋಗಸ್ಥೆ ಮಹಿಳೆಯರು, ವಿಧವೆಯರು, ವಿಶೇಷಚೇತನರು, ಅಲ್ಪಸಂಖ್ಯಾತರು ಹಾಗೂ ಹಿರಿಯ ನಾಗರಿಕರಿಗೆ ಸ್ವಂತ ಸೂರು ಹೊಂದಲು ಈ ಯೋಜನೆ ವಿಶೇಷ ಅವಕಾಶ ಕಲ್ಪಿಸಿದೆ. 
 

click me!